Sunday, 29th December 2024

AUS vs IND: ಪುಷ್ಪ ಶೈಲಿಯಲ್ಲಿ ಅರ್ಧಶತಕ ಸಂಭ್ರಮಿಸಿದ ನಿತೀಶ್ ರೆಡ್ಡಿ; ವಿಡಿಯೊ ವೈರಲ್‌

ಮೆಲ್ಬರ್ನ್‌: ಆಸ್ಟ್ರೇಲಿಯಾ(AUS vs IND) ವಿರುದ್ಧದ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ದಿಟ್ಟ ಹೋರಾಟ ನಡೆಸಲಾರಂಭಿಸಿದೆ. ದ್ವಿತೀಯ ದಿನದಾಟದಲ್ಲಿ 64 ರನ್‌ಗೆ 5 ವಿಕೆಟ್‌ ಕಳೆದುಕೊಂಡು ಫಾಲೋಆನ್‌ ಭೀತಿಗೆ ಸಿಲುಕಿತ್ತು. ಆದರೆ, ಮೂರನೇ ದಿನದಾಟದಲ್ಲಿ ನಿತೀಶ್‌ ರೆಡ್ಡಿ(Nitish Kumar Reddy) ಮತ್ತು ವಾಷಿಂಗ್ಟನ್‌ ಸುಂದರ್‌ ದಿಟ್ಟ ಬ್ಯಾಟಿಂಗ್‌ ಪ್ರದರ್ಶನ ತೋರುವ ಮೂಲಕ ಆಸೀಸ್‌ ತಂಡದ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದರು.

8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ನಿತೀಶ್‌ ರೆಡ್ಡಿ ಚೊಚ್ಚಲ ಅರ್ಧಶತಕವನ್ನು ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನೆಮಾದ ಶೈಲಿಯಲ್ಲಿ ಸಂಭ್ರಮಿಸಿದರು. ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸಿನೆಮಾದಲ್ಲಿ ಅಲ್ಲು ಅರ್ಜುನ್‌ ಕೈಗಳಿಂದ ಗಡ್ಡ ಸವರಿ ನನ್ನ ಪ್ರತಾಪ ತಗ್ಗೋದೆ ಇಲ್ಲ ಎಂಬಂತೆ ನಿತೀಶ್‌ ಕುಮಾರ್‌ ಬ್ಯಾಟ್‌ ಮೂಲಕ ಆಸೀಸ್‌ಗೆ ನಿಮ್ಮ ಎಸೆತಗಳಿಗೆ ಹೆದರೋದು ಇಲ್ಲ ಎಂಬತೆ ಸಂಭ್ರಮಿಸಿದರು. ನಿತೀಶ್‌ ರೆಡ್ಡಿ ಕೂಡ ಆಂಧ್ರಪ್ರದೇಶ ಮೂಲದವರೇ ಆಗಿದ್ದಾರೆ.

ವೇಗದ ಬೌಲಿಂಗ್‌ ಆಲ್‌ರೌಂಡರ್‌ ಆಗಿರುವ ನಿತೀಶ್‌ ರೆಡ್ಡಿ ಭಾರತ ಪರ ಮೂರು ಟಿ20 ಮತ್ತು ನಾಲ್ಕು ಟೆಸ್ಟ್‌ ಪಂದ್ಯಗಳನ್ನಾಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 958, ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ 403 ರನ್‌ ಬಾರಿಸಿದ್ದಾರೆ. ಹಾಗೆಯೇ ಬೌಲಿಂಗ್‌ನಲ್ಲಿಯೂ ಅಮೋಘ ಸಾಧನೆ ಮಾಡಿದ್ದಾರೆ. ಅವರ ಪ್ರದರ್ಶನ ನೋಡುವಾಗ ಭಾರತದ ಭವಿಷ್ಯದ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಯಾವುದೇ ಅನುಭವ ಇಲ್ಲದಿದ್ದರೂ ಕೋಚ್‌ ಗೌತಮ್‌ ಗಂಭೀರ್‌ ಅವರು ನಿತೀಶ್‌ ಕುಮಾರ್‌ ಅವರನ್ನು ಆಸೀಸ್‌ ಪ್ರವಾಸದ ತಂಡಕ್ಕೆ ಆಯ್ಕೆ ಮಾಡಿದ್ದರು. ಈ ವೇಳೆ ಗಂಭೀರ್‌ ವಿರುದ್ಧ ಹಲವು ಮಾಜಿ ಆಟಗಾರರು ಭಾರೀ ಟೀಕೆ ವ್ಯಕ್ತಪಡಿಸಿದ್ದರು. ಇದೀಗ ಟೀಕಿಸಿದವರೇ ನಿತೀಶ್‌ ಮತ್ತು ಗಂಭೀರ್‌ಗೆ ಜೈ ಎನ್ನುತ್ತಿದ್ದಾರೆ.

ಕೊಹ್ಲಿಯಿಂದ ಟೆಸ್ಟ್‌ ಕ್ಯಾಪ್‌ ಪಡೆದಿದ್ದ ನಿತೀಶ್‌ ರೆಡ್ಡಿ

ನವೆಂಬರ್‌ 22 ರಂದು ನಿತೀಶ್‌ ಕುಮಾರ್‌ ರೆಡ್ಡಿ ಅವರು ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ತಮ್ಮ ಬಾಲ್ಯದ ಹೀರೋ ವಿರಾಟ್‌ ಕೊಹ್ಲಿ ಅವರಿಂದ ಕ್ಯಾಪ್‌ ಅನ್ನು ನಿತೀಶ್‌ ರೆಡ್ಡಿ ಸ್ವೀಕರಿಸಿದ್ದರು. ಅದರಂತೆ ಪ್ರಥಮ ಇನಿಂಗ್ಸ್‌ನಲ್ಲಿ ಅವರು 41 ರನ್‌ಗಳ ನಿರ್ಣಾಯಕ ಪ್ರದರ್ಶನ ತೋರಿದ್ದರು.