Sunday, 29th December 2024

Viral News: ಬಿಲ್ ಪಾವತಿ ವಿಳಂಬ… ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆ ಸ್ಥಗಿತ! 

BYL Nair Hospital

ಮುಂಬೈ: ಮುಂಬೈನ ನಾಯರ್ (BYL Nair Hospital) ಆಸ್ಪತ್ರೆಯು ಹೃದಯ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಮತ್ತು ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆಗೆ ಹೆಸರುವಾಸಿಯಾಗಿದೆ. ಆದರೆ, ಕಳೆದ ಕೆಲವು  ದಿನಗಳಿಂದ  ಈ ಆಸ್ವತ್ರೆಯಲ್ಲಿ ಶಸ್ತ್ರಚಿಕಿತ್ಸೆ ಸ್ಥಗಿತಗೊಂಡಿವೆ. ವೈದ್ಯಕೀಯ ಸಲಕರಣೆಗಳ ಸರಬರಾಜು ಮಾರಾಟಗಾರರಿಗೆ ಹಣ ಪಾವತಿ ಮಾಡುವಲ್ಲಿ ವಿಳಂಬ ಆದ ಕಾರಣ ಅವರು ಅಗತ್ಯ ವಸ್ತುಗಳನ್ನು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾದ ರೋಗಿಗಳ ಕುಟುಂಬ ಆತಂಕಕ್ಕೆ ಒಳಗಾಗಿವೆ(Viral News).

ಮಾರಾಟಗಾರರು ವೈದ್ಯಕೀಯ  ಸರಬರಾಜು ವಿತರಣೆಯನ್ನು ಸ್ಥಗಿತ ಮಾಡಿದ ಕಾರಣ ನಾಯರ್ ಆಸ್ಪತ್ರೆಯಲ್ಲಿ  ಹೃದಯ ಶಸ್ತ್ರಚಿಕಿತ್ಸೆಗಳನ್ನು ಕಳೆದ ಹತ್ತು ದಿನಗಳಿಂದ ಅಗತ್ಯ ಶಸ್ತ್ರಚಿಕಿತ್ಸಾ ಸಾಮಗ್ರಿಗಳ ಪೂರೈಕೆಯಲ್ಲಿ ಸ್ಥಗಿತ ಮಾಡಲಾಗಿದೆ‌. ಬಾಕಿ ಇರುವ ಹಣವನ್ನು ನೀಡುವವರೆಗೆ ವೈದ್ಯಕೀಯ ಸಾಧನಗಳನ್ನು ಸರಬರಾಜು ಮಾಡುವುದಿಲ್ಲ ಎಂದು ವೈದ್ಯಕೀಯ ಮಾರಾಟಗಾರರು ಒತ್ತಾಯಿಸಿದ್ದಾರೆ.

ಆಸ್ಪತ್ರೆ ಮೂಲಗಳ ಪ್ರಕಾರ, ಸಿವಿಟಿಎಸ್ ವಿಭಾಗವು ಡಿಸೆಂಬರ್ 4 ರಂದು ಆಸ್ಪತ್ರೆಯ ಡೀನ್ ಅವರಿಗೆ ಪತ್ರದಲ್ಲಿ ತಿಳಿಸಿದ್ದು, ಬಿಲ್ ಪಾವತಿಸದ ಕಾರಣ ಮಾರಾಟಗಾರರು ಆಮ್ಲಜನಕದಂತಹ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುವುದನ್ನು ನಿಲ್ಲಿಸಿದ್ದಾರೆ  ಈ ವಸ್ತುಗಳು ಇಲ್ಲದೆ, ಯಾವುದೇ ಹೃದಯ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುವುದಿಲ್ಲ.ಇತರ ಬಿಎಂಸಿ ಆಸ್ಪತ್ರೆಗಳಿಗೆ ರೋಗಿಗಳನ್ನು ರೆಫರ್ ಮಾಡಲು ಇಲಾಖೆ ಅನುಮತಿ ಕೋರಿದೆ ಎಂದು ತಿಳಿಸಿದೆ.

ಕಳೆದ ಬಾರಿಯೂ ಈ ಸಮಸ್ಯೆಯಾಗಿದೆ!:

ಸರ್ಕಾರಿ ಯೋಜನೆಗಳ ಅಡಿಯಲ್ಲಿ ನಡೆಸಲು ನಿರ್ಧರಿಸಿರುವ ವಿವಿಧ ಶಸ್ತ್ರಚಿಕಿತ್ಸೆಗಳಿಗೆ ಬಿಲ್‌ಗಳ ಬಾಕಿಯಿಂದಾಗಿ ಸಂಬಂಧಿಸಿದ ವಸ್ತುಗಳನ್ನು ಸರಬರಾಜು ಮಾಡಲು ಮಾರಾಟಗಾರರು ಹಿಂದೇಟು ಹಾಕಿದ್ದಾರೆ ಎಂದು ಅಲ್ಲಿನ ವೈದ್ಯರೊಬ್ಬರು ಕಳವಳ ವ್ಯಕ್ತ ಪಡಿಸಿದ್ದಾರೆ. ಕಳೆದ ವರ್ಷವೂ ಇಲ್ಲಿ  ಈ ಸಮಸ್ಯೆಯಾಗಿದ್ದು  ಸಿವಿಟಿಎಸ್ ವಿಭಾಗ ಮಾತ್ರವಲ್ಲದೆ ನೇತ್ರವಿಜ್ಞಾನ, ಹೃದ್ರೋಗ ಮತ್ತು ಮೂಳೆಚಿಕಿತ್ಸೆಯಂತಹ ಇತರ ಚಿಕಿತ್ಸೆ ಮೇಲೆಯೂ ಪರಿಣಾಮ ಬೀರಿದೆ. ಇಲ್ಲಿನ ಮಾರಾಟಗಾರರ ಹಣ ಪಾವತಿಯು  ಗಂಭೀರ ಸಮಸ್ಯೆಯಾಗುತ್ತಿದ್ದು, ಉನ್ನತ ಅಧಿಕಾರಿಗಳು ಶೀಘ್ರವಾಗಿ ಪರಿಹರಿಸಬೇಕಾಗಿದೆ  ಎಂದು ಅಲ್ಲಿನ  ವೈದ್ಯರು ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ:Digital Arrest: ದೇಶದಡಲ್ಲೆಡೆ ವರದಿಯಾಗುತ್ತಿದೆ ಡಿಜಿಟಲ್‌ ಫ್ರಾಡ್‌ ಪ್ರಕರಣ; ಗುಜರಾತ್‌ನಲ್ಲಿ ನಕಲಿ ಐಎಎಸ್‌ ಅಧಿಕಾರಿ ಬಂಧನ