Sunday, 29th December 2024

Nitish Kumar Reddy: ಚೊಚ್ಚಲ ಶತಕ ಬಾರಿಸಿ ದಾಖಲೆ ಬರೆದ ನಿತೀಶ್​ ​ರೆಡ್ಡಿ

ಮೆಲ್ಬರ್ನ್‌: ಯುವ ವೇಗದ ಬೌಲಿಂಗ್​ ಆಲ್ರೌಂಡರ್​ ನಿತೀಶ್​ ಕುಮಾರ್​ ರೆಡ್ಡಿ(Nitish Kumar Reddy) ಚೊಚ್ಚಲ ಅಂತಾರಾಷ್ಟ್ರೀಯ ಶತಕ ಬಾರಿಸಿ ಸಂಭ್ರಮಿಸಿದ್ದಾರೆ. ಆಸ್ಟ್ರೇಲಿಯಾ(Australia vs India 4th Test) ವಿರುದ್ಧ ಮೆಲ್ಬರ್ನ್‌ ಮೈದಾನದಲ್ಲಿ ಸಾಗುತ್ತಿರುವ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದ ಮೂರನೇ ದಿನದಾಟದಲ್ಲಿ ನಿತೀಶ್ ರೆಡ್ಡಿ ಶತಕ ಬಾರಿಸುವ ಮೂಲಕ ಈ ಸಾಧನೆಗೈದರು. ಅವರ ಈ ಶತಕ ಭಾರತವನ್ನು ಸಂಕಷ್ಟದಿಂದ ಪಾರು ಮಾಡಿದೆ.

21 ವರ್ಷದ ನಿತೀಶ್​ ಕುಮಾರ್​ ರೆಡ್ಡಿ ಶತಕ ಬಾರಿಸುವ ಮೂಲಕ ಆಸ್ಟ್ರೇಲಿಯಾದಲ್ಲಿ ಭಾರತದ ಪರ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ ಮೂರನೇ ಕಿರಿಯ ಬ್ಯಾಟರ್‌ ಎನಿಸಿಕೊಂಡರು. ದಾಖಲೆ ಸಚಿನ್‌ ತೆಂಡೂಲ್ಕರ್‌ ಹೆಸರಿನಲ್ಲಿದೆ. ಸಚಿನ್‌ 1992ರಲ್ಲಿ18 ವರ್ಷ 256ದಿನ ಇರುವಾಗ ಸಿಡ್ನಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಶತಕ ಬಾರಿಸಿದ್ದರು. ರಿಷಭ್‌ ಪಂತ್‌(21 ವರ್ಷ 92ದಿನ) ದ್ವಿತೀಯ ಸ್ಥಾನದಲ್ಲಿದ್ದಾರೆ. ಮಗನ ಶತಕ ಕಂಡು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ನಿತೀಶ್​ ಕುಮಾರ್​ ರೆಡ್ಡಿ ಅವರ ತಂದೆ ಭಾವುಕರಾಗಿ ಆನಂದಭಾಷ್ಪ ಸುರಿಸಿದರು.

ಭಾರತ 191ರನ್‌ಗೆ 6 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ನಿತೀಶ್​ ಕುಮಾರ್​ ರೆಡ್ಡಿ ದಿಟ್ಟ ಬ್ಯಾಟಿಂಗ್‌ ನಡೆಸುವ ಮೂಲಕ ಆಸೀಸ್‌ ಬೌಲರ್‌ಗಳನ್ನು ಕಾಡಿದರು. ಬೌನ್ಸರ್‌, ಯಾರ್ಕರ್‌ ಎಸೆತಗಳಿಗೆ ಧೃತಿಗೆಡದೆ ಬ್ಯಾಟ್‌ ಬೀಸಿದ ನಿತೀಶ್ ಅಮೋಘ ಶತಕ ಬಾರಿಸುವ ಮೂಲಕ ತಂಡವನ್ನು ಪಾರು ಮಾಡಿದರು. ಬೌಂಡರಿ ಮೂಲಕ ಅರ್ಧಶತಕ ಪೂರೈಸಿದ ನಿತೀಶ್‌ ಶತಕವನ್ನು ಕೂಡ ಬೌಂಡರಿ ಮೂಲಕವೇ ಪೂರೈಸಿದ್ದು ವಿಶೇಷ. ಮಂದ ಬೆಳಕಿನ ಕಾರಣ ಮೂರನೇ ದಿನದಾಟವನ್ನು ಅಂತ್ಯಗೊಳಿಸಲಾಗಿದ್ದು ನಿತೀಶ್​ ಕುಮಾರ್105* ಮತ್ತು ಸಿರಾಜ್‌ 2* ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಭಾರತ 9 ವಿಕೆಟ್‌ಗೆ 358 ರನ್‌ ಗಳಿಸಿ ಇನ್ನೂ 116 ರನ್‌ ಹಿನ್ನಡೆಯಲ್ಲಿದೆ.

ತೀಶ್‌ ರೆಡ್ಡಿ ಭಾರತ ಪರ ಮೂರು ಟಿ20 ಮತ್ತು ನಾಲ್ಕು ಟೆಸ್ಟ್‌ ಪಂದ್ಯಗಳನ್ನಾಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 958, ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ 403 ರನ್‌ ಬಾರಿಸಿದ್ದಾರೆ. ಹಾಗೆಯೇ ಬೌಲಿಂಗ್‌ನಲ್ಲಿಯೂ ಅಮೋಘ ಸಾಧನೆ ಮಾಡಿದ್ದಾರೆ. ಅವರ ಪ್ರದರ್ಶನ ನೋಡುವಾಗ ಭಾರತದ ಭವಿಷ್ಯದ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಯಾವುದೇ ಅನುಭವ ಇಲ್ಲದಿದ್ದರೂ ಕೋಚ್‌ ಗೌತಮ್‌ ಗಂಭೀರ್‌ ಅವರು ನಿತೀಶ್‌ ಕುಮಾರ್‌ ಅವರನ್ನು ಆಸೀಸ್‌ ಪ್ರವಾಸದ ತಂಡಕ್ಕೆ ಆಯ್ಕೆ ಮಾಡಿದ್ದರು. ಇದೀಗ ಗಂಭೀರ್‌ ತಮ್ಮ ಮೇಲೆ ಇಟ್ಟ ನಂಬಿಕೆಯನ್ನು ನಿತೀಶ್‌ ಕುಮಾರ್‌ ಉಳಿಸಿಕೊಂಡಿದ್ದಾರೆ. ಶತಕ ಬಾರಿಸುವ ಜತೆಗೆ ಸಂಕಷ್ಟದಲ್ಲಿ ತಂಡಕ್ಕೂ ನೆರವಾಗಿದ್ದಾರೆ.