Saturday, 11th January 2025

Chikkaballapur News: ಅಂಕಾಲಮಡಗು ಭಾಸ್ಕರ್ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು: ಗ್ರಾಪಂ ಅಧ್ಯಕ್ಷ ಆಕ್ರೋಶ

ಪಂಚಾಯತಿಯಲ್ಲಿ ಅಕ್ರಮಗಳು ನಡೆದಿದ್ದರೆ ದಾಖಲೆ ಸಮೇತ ಬಿಡುಗಡೆಗೊಳಿಸಲಿ

ಚಿಂತಾಮಣಿ: ಕಡದನಮರಿ ಗ್ರಾಮ ಪಂಚಾಯತಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಅಪಪ್ರಚಾರ ಮಾಡಿ ಪಂಚಾಯತಿ ಹೆಸರು ಕೆಡಿಸಿ ಪ್ರತಿಭಟನೆ ಮಾಡಲು ಮುಂದಾದ ಅಂಕಾಲಮಡಗು ಭಾಸ್ಕರ್ ರೆಡ್ಡಿ ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾದದ್ದು ಎಂದು ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ವಿ.ಬೈರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಚಿಂತಾಮಣಿ ತಾಲ್ಲೂಕಿನ ಮುಂಗನಹಳ್ಳಿ ಹೋಬಳಿಯ ಕಡದನಮರಿ ಗ್ರಾಮ ಪಂಚಾಯಿತಿ ಎದುರು ಮಾಧ್ಯಮ ದವರೊಂದಿಗೆ ಮಾತನಾಡಿದ ಅಧ್ಯಕ್ಷ ಕೆ.ವಿ.ಬೈರೆಡ್ಡಿ,ಉಪಾಧ್ಯಕ್ಷ ಎ.ವಿ.ಬೈರೆಡ್ಡಿ,ವಿ.ಎಸ್.ಎಸ್.ಎನ್ ಅಧ್ಯಕ್ಷ ಎ.ಆರ್ ಚೌಡಪ್ಪ ಅವರು ಮಾತನಾಡಿ ಭಾಸ್ಕರ್ ರೆಡ್ಡಿ ಪಂಚಾಯತಿ ಎದುರುಗಡೆ ಪ್ರತಿಭಟನೆ ಮಾಡುತ್ತೇನೆ ಎಂದು ಸುಳ್ಳು ಪ್ರಚಾರ ಮಾಡಿಕೊಂಡಿದ್ದಾನೆ. ಆದರೆ ಪಂಚಾಯತಿ ಎದುರುಗಡೆ ಯಾವುದೇ ಪ್ರತಿಭಟನೆ ಇಂದು ನಡೆದಿಲ್ಲ ಎಂದು ಹೇಳಿದ ಅವರು ಪಂಚಾಯತಿಯಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳು ಸಾರ್ವಜನಿಕರ ಕೆಲಸಕ್ಕಾಗಿ ಯಾರಿಂದಲೂ ಸಹ ಒಂದು ರೂಪಾಯಿ ಸಹ ಲಂಚ ಪಡೆದಿಲ್ಲ. ಲಂಚ ಪಡೆದಿರುವ ಬಗ್ಗೆ ಅವರ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಿ ಸಾಬೀತು ಪಡಿಸಲಿ.ಪಂಚಾಯಿತಿಯಲ್ಲಿ ದಲ್ಲಾಳಿಗಳು ಇರುವುದನ್ನು  ತೋರಿಸಲಿ ಅವರ ವಿರುದ್ಧ ನಾವೇ ಖುದ್ದು  ಮೇಲಾಧಿಕಾರಿಗಳಿಗೆ ದೂರು  ನೀಡುತ್ತೇವೆ ಎಂದು ಸವಾಲು ಹಾಕಿದರು.

ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದ ಮೇಲೆ ಗಲಾಟೆ ಮಾಡುತ್ತಿದ್ದೇವೆ ಎಂದು ಹೇಳುತ್ತಾ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವಂತಹ ಮಾತುಗಳನ್ನು ಹೇಳಿ ಗ್ರಾಮದಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾನೆ.ಹಾಗೂ ಗ್ರಾಮ ಪಂಚಾಯತಿ ವ್ಯವಸ್ಥೆಯನ್ನು ಹಾಳು ಮಾಡಲು ಭಾಸ್ಕರ್ ರೆಡ್ಡಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೋಗಿ ಪತ್ರಿಕಾಗೋಷ್ಠಿಗಳು ಮಾಡುವುದು ಈ ಕೂಡಲೇ ನಿಲ್ಲಿಸಬೇಕು.ಯಾವುದೇ ಪತ್ರಿಕಾಗೋಷ್ಠಿ ನಡೆಸಬೇಕಾದರೆ ದಾಖಲೆಗಳ ಸಮೇತ ನಡೆಸಲಿ, ಮಾಧ್ಯದವರೂ ಕೂಡ ದಾಖಲೆ ಪಡೆದು ಸತ್ಯಾಸತ್ಯತೆ ಬರೆಯಲಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಅನಿಲ್,ಕೆ ಸಿ ರೆಡ್ಡಪ್ಪ,ಶಿವ ಮಂಜುನಾಥ್ ರೆಡ್ಡಿ,ಭರತ್ ಕುಮಾರ್, ಶಿವಣ್ಣ,ಸೇರಿದಂತೆ ಮತ್ತಿತರರು ಇದ್ದರು.