Sunday, 29th December 2024

Vishwa Havyaka Sammelana: ಆತ್ಮೀಯತೆಗೆ ಮತ್ತೊಂದು ಹೆಸರು ಹವ್ಯಕರು: ಬಸವರಾಜ ಹೊರಟ್ಟಿ

basavaraja horatti

ಬೆಂಗಳೂರು: ಉಪಕಾರ ಮಾಡಿದವರನ್ನು ಮರೆಯಬಾರದು ಎಂದು ಕಲಿಸಿದ ಸಮಾಜ ಅದು ಹವ್ಯಕ ಸಮಾಜ. ಆತ್ಮೀಯತೆಗೆ ಮತ್ತೊಂದು ಹೆಸರು ಹವ್ಯಕರು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ನುಡಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಹವ್ಯಕ ಸಮ್ಮೇಳನದ (Vishwa Havyaka Sammelana) ಎರಡನೇ ದಿನವಾದ ಶನಿವಾರ ನಡೆದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹವ್ಯಕರು ಕೇವಲ ಜಾತಿಯ ಸೂಚಕವಾಗಿ ಇದ್ದವರಲ್ಲ. ಸಂಸ್ಕಾರ, ಸಂಸ್ಕೃತಿಯ ಸೂಚಕವಾಗಿ ಇದ್ದವರು. ಎಲ್ಲ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಒಗ್ಗಟ್ಟಿನ ಸಮಾಜವಾಗಿ ಇದ್ದವರು. ಪ್ರಸ್ತುತ ಸಂಖ್ಯೆಯಲ್ಲಿ ಕಡಿಮೆ ಆಗುತ್ತಿರುವ ಹವ್ಯಕ ಸಮಾಜ ಸಂಘಟನೆಯು ಅತಿ ಮುಖ್ಯ ಎನ್ನುವುದನ್ನು ಅರಿತು ವ್ಯವಹರಿಸಬೇಕಿದೆ. ಸಮಾಜದಲ್ಲಿ ಒಗ್ಗಟ್ಟು ಇದ್ದರೆ ಎಲ್ಲವನ್ನು ಗಳಿಸಬಹುದು. ಹಾಗಾಗಿ ಒಗ್ಗಟ್ಟಿನ ಮೂಲಕ ನಾವು ಒಂದು ಜಾಗೃತ ಸಮಾಜ ಎನ್ನುವುದನ್ನು ಸಾಬೀತುಪಡಿಸಬೇಕಿದೆ ಎಂದವರು ನುಡಿದರು.

ಬ್ರಾಹ್ಮಣ್ಯ ಉಳಿಸಿ ಬೆಳೆಸಿದವರು: ಕೆ. ಎಲ್ ಶ್ರೀನಿವಾಸನ್

ಬ್ರಾಹ್ಮಣ್ಯವನ್ನು ಉಳಿಸಿ ಬೆಳೆಸಿಕೊಳ್ಳುತ್ತಿರುವವರಲ್ಲಿ ಹವ್ಯಕ ಸಮಾಜದ ಪರಿಶ್ರಮ ಅಪೂರ್ವವಾಗಿದೆ. ಶಾಂತ ಸ್ವಭಾವ, ಸರಳತೆ‌ ಹಾಗೂ ಸ್ನೇಹಪರತೆ ಹವ್ಯಕ ಸಮಾಜದ ಆಸ್ತಿಯಾಗಿದೆ ಎಂದು ಧರ್ಮಕರ್ತ ಹಾಗೂ ಚಿಂತಕರಾದ ಕೆ. ಎಲ್ ಶ್ರೀನಿವಾಸನ್ ನುಡಿದರು. ‌

ಪೂಜಾಪರಿಕರಗಳು ಮುಂದೆ ಮ್ಯೂಸಿಯಂನಲ್ಲಿ ನೋಡುವಂತಾಗಬಾರದು ಎಂದರೆ ನಾವು ವೇದವಿದ್ವಾಂಸರನ್ನು ಗೌರವಿಸಿ, ಸಂರಕ್ಷಿಸಿಕೊಳ್ಳಬೇಕು.
ಆಸ್ತಿಕತೆ ಉಳಿಯಲು ವೇದವಿದ್ವಾಂಸರೇ ಕಾರಣ. ಸಂಸ್ಕೃತ – ಸಂಸ್ಕೃತಿ – ಸಂಸ್ಕಾರಕ್ಕೆ ಈ ಹವ್ಯಕ ಸಮಾಜ ನೀಡಿದ ಕೊಡುಗೆ ಅನುಪಮವಾಗಿದೆ. ಬೆಂಗಳೂರಿನಲ್ಲಿ ಸುಮಾರು 15 ಸಾವಿರಕ್ಕೂ ಅಧಿಕ ಪುರೋಹಿತರು ಇರಬಹುದು. ಇದರಲ್ಲಿ ಸುಮಾರು 5 ಸಾವಿರ ಪುರೋಹಿತರು ಹವ್ಯಕರು ಎಂದರು.

ಮಹಾಸಭೆಗೆ ಮಹಾದಾನ

ಬೆಂಗಳೂರಿನ ಕಮರ್ಷಿಯಲ್ ರಸ್ತೆಯ ಸಮೀಪದಲ್ಲಿರುವ ಜಾಗವನ್ನು ಕೆ.ಎಲ್ ಶ್ರೀನಿವಾಸನ್ ಅವರು ಹವ್ಯಕ ಮಹಾಸಭೆಗೆ ದಾನವಾಗಿ ನೀಡಿದರು. ಸುಮಾರು 12 ಕೋಟಿ ಬೆಲೆಬಾಳುವ ಈ‌ ಜಾಗವನ್ನು ಮಹಾಸಭೆಗೆ ದಾನವಾಗಿ ನೀಡುತ್ತಿದ್ದು, ಈ ಜಾಗದಲ್ಲಿ ಹವ್ಯಕ ಮಹಾಸಭೆಯು ‘ತರ್ಪಣ ಭವನ’ ನಿರ್ಮಿಸಲು ಉದ್ದೇಶಿಸಿದೆ.

ಕಳೆದ ವರ್ಷ ಭಟ್ಕಳ ಸಮೀಪದ ಸುಮಾರು 3 ಕೋಟಿ ಮೌಲ್ಯದ ಜಾಗವನ್ನು ಮಂಜುನಾಥ ಬಿಲ್ಲವ ಅವರು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಮಾರ್ಗದರ್ಶನದಂತೆ ಹವ್ಯಕ ಮಹಾಸಭೆಗೆ ದಾನವಾಗಿ ನೀಡಿದ್ದರು.

ಇದೀಗ ಆಂಧ್ರ ಮೂಲದ ಮುಲಕನಾಡು ಬ್ರಾಹ್ಮಣರಾದ ಶ್ರೀನಿವಾಸನ್ ಕೆ.ಎಲ್ ಅವರು ಹವ್ಯಕ ಮಹಾಸಭೆಗೆ ದಾನ ನೀಡಿದ್ದು, ಕಳೆದ ವರ್ಷ ಬಿಲ್ಲವ ಸಮಾಜದವರು ಹವ್ಯಕ ಸಮಾಜಕ್ಕೆ ಜಾಗವನ್ನು ನೀಡಿದ್ದಾರೆ. ಹೀಗೆ ಬೇರೆಬೇರೆ ಸಮಾಜದವರು ಹವ್ಯಕ ಸಮಾಜಕ್ಕೆ ದಾನ ನೀಡುತ್ತಿರುವುದು ಜಗತ್ತಿಗೆ ಒಗ್ಗಟ್ಟಿನ ಸಂದೇಶ ನೀಡುತ್ತಿದ್ದು, ಇದು ಸೌಹಾರ್ದತೆಗೆ ಮಾದರಿ ಎಂದು ಹವ್ಯಕ ಮಹಾಸಭೆ ಅಧ್ಯಕ್ಷ ಡಾ.ಗಿರಿಧರ ಕಜೆ ಪ್ರಶಂಸಿಸಿದರು.

ಇದನ್ನೂ ಓದಿ: World Havyaka Sammelana: ಹವ್ಯಕ ಮಹಾಸಭಾ ದಿಂದ ವಿಶ್ವ ಹವ್ಯಕ ಸಮ್ಮೇಳನಕ್ಕೆ ವಿದ್ಯುಕ್ತ ಚಾಲನೆ