Thursday, 31st October 2024

ಫೈಟ್ ಗೆಲ್ಲಲು ಅಭ್ಯರ್ಥಿಗಳ ನಾನಾ ತಂತ್ರ

ವಿಶೇಷ ವರದಿ: ನಾರಾಯಣಸ್ವಾಮಿ ಸಿ.ಎಸ್‌. 

ಮತದಾರನ ಓಲೈಕೆಗೆ ಹಳ್ಳಿಗಳಲ್ಲಿ ಬಾಡೂಟ

ಮದ್ಯದ ಘಾಟು ಜೋರು

ಹೊಸಕೋಟೆ: ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದೆ. ಇದೀಗ ಮತದಾರರ ಓಲೈಕೆಗೆ ಎಲ್ಲೆಡೆ ಬಾಡೂಟ ಘಮಲು, ಮದ್ಯದ ಘಾಟು ಜೋರಾಗಿಯೇ ಮೂಗಿಗೆ ಬಡಿಯುತ್ತಿದೆ.
ಕಾರ್ತಿಕ ಮಾಸ ಮುಗಿಯುವವರೆಗೆ ನಗರ_ ಗ್ರಾಮೀಣ ಭಾಗದ ಬಹುತೇಕರು ಮಾಂಸಹಾರ ಸೇವನೆ ಮಾಡುವುದಿಲ್ಲ. ಕಡೇ ಕಾರ್ತಿಕ ಸೋಮವಾರ ಪೂರೈಸುತ್ತಿದ್ದಂತೆಯೇ ಮಾಂಸದೂಟಕ್ಕೆ ಎಲ್ಲರೂ ಮಾರು ಹೋಗಿದ್ದಾರೆ. ಇದೀಗ ಮೊದಲ ಹಂತದ ಗ್ರಾಪಂ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಅಂತಿಮಗೊಂಡಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವ ಗುರಿಯೊಂದಿಗೆ ಅಭ್ಯರ್ಥಿ ಗಳು ಮತದಾರರಿಗೆ ಮಾಂಸದೂಟವನ್ನೇ ಏರ್ಪಡಿಸುತ್ತಿದ್ದಾರೆ. ಇದರೊಂದಿಗೆ ಮದ್ಯವೂ ಹರಿಯಲಾರಂಭಿಸಿದೆ.

ಎಣ್ಣೆ ಪಾರ್ಟಿ ಜೋರು: ಮದ್ಯ ನಿಷೇಧವಾಗುವ ಭಯದೊಂದಿಗೆ ಚುನಾವಣಾ ಅಖಾಡದಲ್ಲಿರುವ ಅಭ್ಯರ್ಥಿಗಳು ಮುಂಜಾಗ್ರತೆ ಯಾಗಿ ಸಾಕಷ್ಟು ಮದ್ಯವನ್ನು ಶೇಖರಿಸಿಟ್ಟುಕೊಂಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಬಾಡೂಟದ ವ್ಯವಸ್ಥೆಗೆ ಊರ ಹೊರಗಿನ ತೋಟದ ಮನೆಗಳು, ಊರಿನ ಯಜಮಾನರು, ಮುಖಂಡರ ಮನೆಗಳನ್ನು ಆಯ್ಕೆಮಾಡಿಕೊಳ್ಳಲಾಗಿದೆ. ರಾತ್ರಿ ವೇಳೆ ನಡೆಯುವ ಮಾಂಸ- ಮದ್ಯ ಸೇವನೆ ಪಾರ್ಟಿಗಳು ಬೆಳಕಿಗೆ ಬಾರದಂತೆ ಕತ್ತಲೆಲ್ಲೇ ಕಳೆದು ಹೋಗುತ್ತಿವೆ.

ಕರಪತ್ರ ಮುದ್ರಣಕ್ಕೆ ಹೆಚ್ಚಿದ ಬೇಡಿಕೆ: ಕೆಲಸವಿಲ್ಲದೆ ಖಾಲಿ ಕುಳಿತಿದ್ದ ಆಫ್ ಸೆಟ್ ಅಂಗಡಿ ಮಾಲೀಕರು ಇದೀಗ ಬ್ಯುಸಿ
ಯಾಗಿದ್ದಾರೆ. ಮೊದಲ ಹಂತದ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡ ಬೆನ್ನಲ್ಲೇ ಈಗ ಅವರೆಲ್ಲರೂ
ಪ್ರಚಾರದ ಕರಪತ್ರಗಳನ್ನು ಮುದ್ರಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು
ಆಟೊಗಳೊಂದಿಗೆ ಆಫ್‌ಸೆಟ್ ಅಂಗಡಿಗಳಿಗೆ ತೆರಳಿ ಸಾವಿರಾರು ಕರಪತ್ರಗಳನ್ನು ಮುದ್ರಿಸುತ್ತಿದ್ದಾರೆ. ಹೀಗಾಗಿ ಆಫ್‌ಸೆಟ್
ಅಂಗಡಿಗಳ ಯಂತ್ರಗಳಿಗೆ ಈಗ ಬಿಡುವಿಲ್ಲದ ಕಲಸ ಹಗಲು- ರಾತ್ರಿ ಎನ್ನದೆ ಕರಪತ್ರ ಮುದ್ರಣ ಕಾರ್ಯದಲ್ಲಿ ತೊಡಗಿದೆ.
ಚುನಾವಣೆಯಿಂದ ಮಾಲೀಕರಿಗೂ ಸುಗ್ಗಿ ಕಾಲಬಂದಂತಾಗಿದೆ.

ದೇವರ ಫೋಟೊ ಇಟ್ಟು ಪ್ರಮಾಣ
ಮತ ಭಿಕ್ಷೆಗೆ ಮನೆಬಾಗಿಲಿಗೆ ತೆರಳುವ ಕೆಲವು ಅಭ್ಯರ್ಥಿಗಳು ಇದ್ದಕ್ಕಿದ್ದಂತೆ ಕಣ್ಣೀರು ಹಾಕುವ ಕಲೆ ಮೈಗೂಡಿಸಿಕೊಂಡಿದ್ದಾರೆ. ಕಾಲು ಹಿಡಿಯುವವರಿದ್ದಾರೆ, ಹಾಗೆಯೇ ದೇವರ ಪೋಟೊ, ಎಲೆ, ಅಡಕೆ ಇಟ್ಟು ಅದರ ಮೇಲೆ ಐದುನೂರೊ ಅಥವಾ ಸಾವಿರವೋ ಹಣ ಇಟ್ಟು ನಮಗೆ ಮತ ಹಾಕಬೇಕೆಂದು ಪ್ರಮಾಣ ಮಾಡಿಸಿಕೊಳ್ಳುವ ದಾರಿ ಹಿಡಿದಿದ್ದಾರೆ.