Monday, 30th December 2024

Sikandar Teaser Out: ‘ಸಿಕಂದರ್‌’ ಚಿತ್ರದ ಟೀಸರ್‌ ಔಟ್‌; ಸಲ್ಮಾನ್‌ ಲುಕ್‌ಗೆ ಫ್ಯಾನ್ಸ್‌ ಫಿದಾ: ರಶ್ಮಿಕಾ ಅಭಿಮಾನಿಗಳಿಗೆ ನಿರಾಸೆ

Sikandar Teaser Out

ಮುಂಬೈ: ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ (Salman Khan) ಅಭಿಮಾನಿಗಳ ಬಹು ದಿನಗಳ ಕುತೂಹಲಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ಬಹು ನಿರೀಕ್ಷಿತ ಬಾಲಿವುಡ್‌ ಚಿತ್ರ ʼಸಿಕಂದರ್‌ʼನ ಟೀಸರ್‌ ರಿಲೀಸ್‌ ಆಗಿದೆ. ಸಲ್ಮಾನ್‌ ಖಾನ್‌ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಅವರ ಅಭಿಮಾನಿಗಳಿಗೆ ಟೀಸರ್‌ ಮೂಲಕ ಭರ್ಜರಿ ಗಿಫ್ಟ್‌ ನೀಡಿದೆ. ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕ ಎ.ಆರ್‌.ಮುರುಗದಾಸ್‌ (A.R. Murugadoss) ಮೊದಲ ಬಾರಿಗೆ ಸಲ್ಮಾನ್‌ ಖಾನ್‌ಗೆ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಚಿತ್ರ ʼಸಿಕಂದರ್‌ʼ. ಹೀಗಾಗಿ ಆರಂಭದಲ್ಲೇ ಕುತೂಹಲ ಕೆರಳಿಸಿದ ಈ ಚಿತ್ರದ ಟೀಸರ್‌ ಇದೀಗ ಗಮನ ಸೆಳೆಯುತ್ತಿದೆ (Sikandar Teaser Out).

ಪಕ್ಕಾ ಆ್ಯಕ್ಷನ್-ಪ್ಯಾಕ್ಡ್ ಚಿತ್ರ ಇದಾಗಿದ್ದು, ಇದರ ಸೂಚನೆ ಟೀಸರ್‌ನಲ್ಲೇ ಸಿಕ್ಕಿದೆ. ಸಲ್ಮಾನ್‌ ಅವರ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. 1 ನಿಮಿಷ 41 ಸೆಕೆಂಡ್‌ನ ಟೀಸರ್‌ ಇದಾಗಿದ್ದು, ನಾಡಿಯಾಡ್ವಾಲಾ ಗ್ರ್ಯಾಂಡ್‌ಸನ್ ಎಂಟರ್‌ಟೈನ್‌ಮೆಂಟ್ ಅದ್ಧೂರಿಯಾಗಿ ಚಿತ್ರ ನಿರ್ಮಿಸುತ್ತಿದೆ. ʼಸಿಕಂದರ್ʼ ಟೀಸರ್ ಅನ್ನು ಸಲ್ಮಾನ್ ಖಾನ್ ಅವರ 59ನೇ ಹುಟ್ಟುಹಬ್ಬದ ಅಂಗವಾಗಿ ಡಿ. 27ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಮಾಜಿ ಪ್ರಧಾನಿ ಡಾ.ಮನಮೋಹನ್​​ ಸಿಂಗ್ ಅವರ ನಿಧನ ಹಿನ್ನೆಲೆ ರಾಷ್ಟ್ರೀಯ ಶೋಕಾಚರಣೆಯಿಂದಾಗಿ ಬಿಡುಗಡೆಯನ್ನು ಶನಿವಾರ (ಡಿ. 28)ಕ್ಕೆ ಮುಂದೂಡಲಾಗಿತ್ತು.

ಟೀಸರ್‌ನಲ್ಲಿ ಏನಿದೆ?

ಕತ್ತಲೆಯಿಂದ ಕೂಡಿದ ರೂಮ್‌ನಲ್ಲಿ ಸಲ್ಮಾನ್‌ ಖಾನ್‌ ನಡೆದು ಬರುತ್ತಿರುವುದನ್ನು ತೋರಿಸುವ ಮೂಲಕ ವಿಡಿಯೊ ಆರಂಭವಾಗುತ್ತದೆ. ಆಗ ವಿವಿಧ ಮುಸುಕುಧಾರಿಗಳು ಅವರ ಮೇಲೆ ದಾಳಿ ನಡೆಸುತ್ತಾರೆ. ಆಗ ಗನ್‌ ತೆಗೆದುಕೊಂಡು ಸಲ್ಮಾನ್‌ ಖಾನ್‌ ಶತ್ರು ಸಂಹಾರ ನಡೆಸುತ್ತಾರೆ. ಭರ್ಜರಿ ಸಾಹಸ ದೃಶ್ಯವನ್ನು ಒಳಗೊಂಡ ಈ ಟೀಸರ್‌ ಇದೀಗ ವೈರಲ್‌ ಆಗಿದೆ. ಸಲ್ಮಾನ್‌ ಲುಕ್‌ಗೆ, ಆ್ಯಕ್ಷನ್‌ಗೆ ಅಭಿಮಾನಿಗಳು ಜೈ ಎಂದಿದ್ದಾರೆ. ʼʼಸಲ್ಮಾನ್‌ ಖಾನ್‌ + ಈದ್‌ = ಬಾಕ್ಸ್‌ ಆಫೀಸ್‌ ಸುನಾಮಿʼʼ, ʼʼಮಾಸ್‌ ಕಾ ಬಾಪ್‌ʼʼ ಮುಂತಾಗಿ ಕಾಮೆಂಟ್‌ ಮಾಡುತ್ತಿದ್ದಾರೆ.

ನಾಯಕಿಯಾಗಿ ರಶ್ಮಿಕಾ

ವಿಶೇಷ ಎಂದರೆ ಈ ಚಿತ್ರದಲ್ಲಿ ನಾಯಕಿಯಾಗಿ ಕನ್ನಡತಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ʼಪುಷ್ಪ 2ʼ ಸಿನಿಮಾದ ಭರ್ಜರಿ ಯಶಸ್ಸಿನಲ್ಲಿ ತೇಲುತ್ತಿರುವ ಅವರು ಈ ಚಿತ್ರದ ಮೂಲಕ ಮೊದಲ ಬಾರಿಗೆ ಸಲ್ಮಾನ್‌ಗೆ ಜೋಡಿಯಾಗಿದ್ದಾರೆ. ಆದರೆ ಟೀಸರ್‌ನಲ್ಲಿ ಎಲ್ಲಿಯೂ ಅವರ ದರ್ಶನವಾಗದಿರುವುದು ಅಭಿಮಾನಿಗಳಿಗೆ ನಿರಾಸೆ ತಂದಿದೆ. ಸಿನಿಮಾದಲ್ಲಿ ಅವರ ಲುಕ್‌ ಹೇಗಿರಲಿದೆ ಎನ್ನುವುದು ನೋಡಲು ಕಾದಿದ್ದ ನ್ಯಾಷನಲ್‌ ಕ್ರಶ್‌ ಫ್ಯಾನ್ಸ್‌ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸಲ್ಮಾನ್‌ ಬರ್ತ್‌ಡೇ ಹಿನ್ನೆಲೆಯಲ್ಲಿ ಅವರ ಪಾತ್ರವನ್ನಷ್ಟೇ ಪರಿಚಯಿಸಲಾಗಿದೆ. ಕೆಲವೇ ದಿನಗಳಲ್ಲಿ ರಶ್ಮಿಕಾ ಸೇರಿದಂತೆ ಇತರರ ಲುಕ್‌ ಹೊರ ಬೀಳಲಿದೆ ಎಂದೂ ಕೆಲವು ಫ್ಯಾನ್ಸ್‌ ಸಮರ್ಥಿಸಿಕೊಂಡಿದ್ದಾರೆ.

2025ರ ಈದ್‌ ವೇಳೆಗೆ ಈ ಚಿತ್ರ ತೆರೆ ಕಾಣಲಿದೆ. ಪ್ರಮುಖ ಪಾತ್ರಗಳಲ್ಲಿ ದಕ್ಷಿಣ ಭಾರತದ ಜನಪ್ರಿಯ ನಟಿ, ಬಹುಭಾಷಾ ಕಲಾವಿದೆ ಕಾಜಲ್ ಅಗರ್​ವಾಲ್, ಕನ್ನಡದ ಕಿಶೋರ್‌, ಸುನೀಲ್‌ ಶೆಟ್ಟಿ, ಪ್ರತೀಕ್‌ ಬಬ್ಬರ್‌, ಚೈತನ್ಯ ಚೌಧರಿ, ನವಾಬ್‌ ಶಾ ಮತ್ತಿತರರು ನಟಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Aamir Khan: ದಕ್ಷಿಣ ಭಾರತದ ಚಿತ್ರದಲ್ಲಿ ಆಮೀರ್‌ ಖಾನ್‌; ಸೂಪರ್‌ ಸ್ಟಾರ್‌ನೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಬಾಲಿವುಡ್‌ ಪರ್ಫೆಕ್ಷನಿಸ್ಟ್