Monday, 30th December 2024

ಜೀನ್ಸ್‌ ಧರಿಸಿದ್ದಕ್ಕೆ ವಿಶ್ವ ರ್‍ಯಾಪಿಡ್‌ ಚೆಸ್‌ ಚಾಂಪಿಯನ್‌ಶಿಪ್‌ನಿಂದ ಕಾರ್ಲಸನ್ ಅನರ್ಹ

ನ್ಯೂಯಾರ್ಕ್: ಜೀನ್ಸ್ ಪ್ಯಾಂಟ್ ಧರಿಸಿದ್ದ ಕಾರಣಕ್ಕೆ ಐದು ಬಾರಿಯ ವಿಶ್ವ ಚಾಂಪಿಯನ್ ನಾರ್ವೆಯ ಮ್ಯಾಗ್ನಸ್ ಕಾರ್ಲಸನ್(Magnus Carlsen) ಅವರನ್ನು ವಿಶ್ವ ರ್‍ಯಾಪಿಡ್‌ ಚೆಸ್‌ ಚಾಂಪಿಯನ್‌ಶಿಪ್‌ನಿಂದ ಅನರ್ಹಗೊಳಿಸಲಾಗಿದೆ. ಜತೆಗೆ ಸುಮಾರು 17000 ($200) ದಂಡ ವಿಧಿಸಲಾಗಿದೆ. ಅಂತಾರಾಷ್ಟ್ರೀಯ ಚೆಸ್‌ ಫೆಡರೇಷನ್‌ನ (ಫಿಡೆ) ವಸ್ತ್ರ ಸಂಹಿತೆ ನಿಯಮ ಉಲ್ಲಂಘನೆಯ ಕಾರಣ ಅವರಿಗೆ ಈ ಶಿಕ್ಷೆ ವಿಧಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಉಡುಪು ಬದಲಿಸುವಂತೆ ಕಾರ್ಲಸನ್‌ಗೆ ವಿನಂತಿಸಿದರೂ ಅದನ್ನು ಅವರು ಪಾಲಿಸಲಿಲ್ಲ. ಹೀಗಾಗಿ ಅವರನ್ನು ಅನರ್ಹಗೊಳಿಸಲಾಯಿತು ಎಂದು ಆಯೋಜಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ವಾಲ್ ಸ್ಟ್ರೀಟ್‌ನಲ್ಲಿ ನಡೆಯುತ್ತಿರುವ ರ್‍ಯಾಪಿಡ್ ಚಾಂಪಿಯನ್‌ಷಿಪ್‌ನ 9ನೇ ಸುತ್ತಿನ ಪಂದ್ಯದಲ್ಲಿ ಕಾರ್ಲಸನ್‌ ಆಡಬೇಕಿತ್ತು.

ಘಟನೆ ಬಗ್ಗೆ ಸ್ಪಷನೆ ನೀಡಿರುವ ಫಿಡೆ, ವಸ್ತ್ರ ಸಂಹಿತೆ ಬಗ್ಗೆ ಸ್ಪರ್ಧಾಳುಗಳಿಗೆ ಮೊದಲೇ ತಿಳಿಸಲಾಗುತ್ತದೆ. ಆಟದಲ್ಲಿ ವೃತ್ತಿಪರತೆ ಪಾಲಿಸುವುದಯ ಅವಶ್ಯಕವಾಗಿದೆ ಎಂದು ಹೇಳಿದೆ. ಫಿಡೆ ನಿರ್ಣಯಕ್ಕೆ ಬೇಸರಗೊಂಡ ಕಾರ್ಲಸನ್ ಅಸಮಾಧಾನ ವ್ಯಕ್ತಪಡಿಸಿ ಕೂಟದಿಂದ ಹೂರನಡೆದಿದ್ದಾರೆ. ಭಾರತದ ಚೆಸ್‌ ದಿಗ್ಗಜ ವಿಶ್ವನಾಥನ್ ಆನಂದ್ ಕೂಡ ಕಾರ್ಲಸನ್‌ಗೆ ಬೆಂಬಲ ಸೂಚಿಸಿದ್ದು ಫಿಡೆ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದದ್ದಾರೆ.

ವಸ್ತ್ರಸಂಹಿತೆಯನ್ನು ಫಿಡೆ ಅಥ್ಲೀಟ್ಸ್‌ ಕಮಿಷನ್ ರೂಪಿಸಿದೆ. ಕೆಲ ವರ್ಷಗಳಿಂದ ಈ ನಿಯಮ ಜಾರಿಯಲ್ಲಿದೆ. ಆಟಗಾರರಿಗೆ ನೀಡಲಾಗಿರುವ ವಾಸ್ತವ್ಯದ ಸ್ಥಳ ನಡೆದುಕೊಂಡು ಹೋಗಬಹುದಾದ ಅಂತರದಲ್ಲಿದೆ. ಕಾರ್ಲ್‌ಸನ್‌ಗೆ ಬಟ್ಟೆ ಬದಲಿಸುವ ಅವಕಾಶವನ್ನು ಕೂಡ ನೀಡಲಾಗಿತ್ತು. ಆದರೆ ಅವರು ಇದಕ್ಕೆ ಒಪ್ಪಲಿಲ್ಲ. ಹೀಗಾಗಿ ನಿಯಮಕ್ಕೆ ಬದ್ಧರಾಗದ ಅವರನ್ನು ಅನರ್ಹಗೊಳಿಸಲಾಯಿತು. ಎಂದು ಹೇಳಿದೆ. ಈ ಕೂಟಕ್ಕೆ ಹಲವು ವರ್ಷಗಳಿಂದ ಮಾಡಿರುವ ನಿಯಮಗಳ ಪ್ರಕಾರ ಜೀನ್ಸ್‌ ಧರಿಸುವಂತಿಲ್ಲ. ಚೀಫ್‌ ಆರ್ಬಿಟರ್ ಅವರು ಕಾರ್ಲ್‌ಸನ್ ಅವರಿಗೆ ಉಲ್ಲಂಘನೆ ಬಗ್ಗೆ ಮಾಹಿತಿ ನೀಡಿ 200 ಡಾಲರ್ ದಂಡ ವಿಧಿಸಿದ್ದಾರೆ.