Wednesday, 1st January 2025

Fitness Tips: ಚಳಿಯಲ್ಲಿ ಹೊರಗೆ ವ್ಯಾಯಾಮವೇ? ಸಿದ್ಧತೆ ಹೀಗಿರಲಿ

Fitness Tips

ಬೆಂಗಳೂರು: ಚಳಿ ನಡುಗುವವರನ್ನು ಮಾತ್ರವೇ ನಡುಗಿಸುತ್ತದೆ ಎನ್ನುವ ಮಾತಿದೆ. ಚಳಿಯೆಂದು ಮನೆಯಲ್ಲಿ ಬೆಚ್ಚಗೆ ಕೂತವರಿಗೆ ನಡುಕ ಹೆಚ್ಚು ಎನ್ನುವುದು ನಮ್ಮ ಅನುಭವವೂ ಆಗಿರಬಹುದು. ಹಾಗಾಗಿ ಚಳಿಯ ನೆವವೊಡ್ಡಿ ದೈಹಿಕ ಚಟುವಟಿಕೆಯನ್ನು ಬಿಡುವಂತಿಲ್ಲ. ಇನ್ನು ಹೊರಾಂಗಣ ಚಟುವಟಿಕೆಯ ಉತ್ಸಾಹಿಗಳು ನೀವಾಗಿದ್ದರೆ, ನಿಮ್ಮಂಥವರಿಗೆ ಚಳಿಯೇನು, ಮಳೆಯೇನು! ಚಳಿಯ ದಿನಗಳಲ್ಲಿ ಹೊರಾಂಗಣದಲ್ಲಿ ಚಟುವಟಿಕೆಯಲ್ಲಿ ತೊಡಗುವಾಗ ಮಾಡಿಕೊಳ್ಳಬೇಕಾದ ಸಿದ್ಧತೆಗಳೇನು? ಚಳಿಯ ಹೊಡೆತಕ್ಕೆ ಮಾನಸಿಕವಾಗಿ ಧೈರ್ಯದಿಂದಿದ್ದಂತೆ ದೈಹಿಕವಾಗಿಯೂ ನಲುಗದೆ ಇರಬೇಕಲ್ಲ. ಇದಕ್ಕಾಗಿ ಕೆಲವು ಸಲಹೆಗಳಿವು (Fitness Tips).

ವಸ್ತ್ರಗಳು: ದಪ್ಪನೆಯ ಒಂದೇ ಜಾಕೆಟ್‌ ಹಾಕುವ ಬದಲು ಹಲವು ಪದರಗಳಲ್ಲಿ ಬಟ್ಟೆ ಧರಿಸಿ. ಆಗ ಹೊರಗಿನ ವಾತಾವರಣಕ್ಕೆ ಸರಿ ಆಗುವಂತೆ ದೇಹದ ಉಷ್ಣತೆಯನ್ನು ಹೊಂದಿಸಿಕೊಳ್ಳುವುದು ಕಷ್ಟವಾಗುವುದಿಲ್ಲ. ಮೊದಲಿಗೆ ಬೆವರು ಹೀರುವಂಥ ವಸ್ತ್ರಗಳು ಮೈಮೇಲಿರಲಿ; ನಂತರ ಬೆಚ್ಚಗಿನ ವಸ್ತ್ರಗಳು ಹಾಗೂ ಕಡೆಯದಾಗಿ ವಾಟರ್‌ಪ್ರೂಫ್‌ ಮಾದರಿಯದ್ದು ಇರಲಿ. ನಸುಕಿಗೆ ಅಥವಾ ಸಂಜೆ ಮೇಲೆ ಹೊರಾಂಗಣಕ್ಕೆ ವ್ಯಾಯಾಮ ಅಥವಾ ಅಭ್ಯಾಸಕ್ಕಾಗಿ ಧುಮುಕುವುದಕ್ಕಿಂತ ಬೆಚ್ಚಗಿನ ಹಗಲು ಹೊತ್ತಿನಲ್ಲಿ ಸಾಧ್ಯವೇ ಎಂದು ನೋಡಿ.

ನೀರು: ಹೊರಗೆ ತಣ್ಣಗಿನ ವಾತಾವರಣದಲ್ಲಿ ವ್ಯಾಯಾಮ ಮಾಡುವಾಗ ದಾಹದ ಅನುಭವ ಕೆಲವೊಮ್ಮೆ ಆಗುವುದೇ ಇಲ್ಲ. ಹಾಗೆಂದು ತಣ್ಣನೆಯ ಗಾಳಿಯನ್ನು ಉಸಿರಾಡುವಾಗ ದೇಹಕ್ಕೆ ಹೆಚ್ಚು ನೀರು ಬೇಕಾಗುತ್ತದೆ. ಹಾಗಾಗಿ ವ್ಯಾಯಾಮ ಮಾಡುವ ಮುನ್ನವೇ ಸಾಕಷ್ಟು ನೀರು ಕುಡಿಯಿರಿ. ನಂತರವೂ ನೀರು ಬೇಕು. ಆಹಾರದಲ್ಲಿ ನೀರು ಮತ್ತು ನಾರು ಸಾಕಷ್ಟಿರಲಿ. ಇದಕ್ಕಾಗಿ ಹೇರಳವಾಗಿ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿ. ಇದರಿಂದ ದೇಹಕ್ಕೆ ನೀರಿನ ಕೊರತೆಯಾಗುವುದನ್ನು ತಪ್ಪಿಸಬಹುದು.

ಗಮನ ಕೊಡಿ: ಮೊದಲಿಗೆ ದೇಹದ ಸೂಚನೆಗಳತ್ತ ಗಮನಕೊಡಿ. ಉದಾ: ನೀವು ಓಡುವವರಾದರೆ, ಚಳಿಗೆ ಮಾಂಸಖಂಡಗಳಲ್ಲಿ ಸಂಕೋಚವಿದ್ದರೆ ಓಡುವುದು ಸಾಧ್ಯವಾಗದು. ಒಂದೊಮ್ಮೆ ಓಡುವಾಗಲೇ ಸ್ನಾಯು ಸೆಳೆತ ಕಾಣಿಸಿಕೊಂಡರೆ ಓಡುವುದನ್ನು ಮುಂದುವರಿಸಲೇಬೇಡಿ. ನೋವು, ಸೆಡೆತ, ಮರಗಟ್ಟಿದಂತಾಗುವುದು ಇಂಥವನ್ನು ಎಂದಿಗೂ ಕಡೆಗಣಿಸಬೇಡಿ. ದೇಹ ಸ್ವಸ್ಥವಾಗಿದ್ದರೆ ಮಾತ್ರವೇ ಚಳಿಯಲ್ಲಿ ಹೊರಾಂಗಣ ವ್ಯಾಯಾಮ ಸೂಕ್ತ.

ಮೈ ಬಿಸಿಯಾಗಲಿ: ಅಂದರೆ ಜ್ವರದ ಬಗ್ಗೆ ಹೇಳುತ್ತಿಲ್ಲ. ಮನೆಯಿಂದ ಹೊರಬೀಳುವ ಮುನ್ನ ಅಥವಾ ವ್ಯಾಯಾಮದಲ್ಲಿ ತೊಡಗುವ ಮೊದಲು ಚೆನ್ನಾಗಿ ವಾರ್ಮ್‌ಅಪ್‌ ಮಾಡಿ, ದೇಹವನ್ನು ಬಿಸಿ ಮಾಡಿಕೊಳ್ಳಿ. ಮೊದಲಿಗೆ ಚೆನ್ನಾಗಿ ಸ್ಟ್ರೆಚ್‌ ಮಾಡಿ. ನಂತರ ಕೀಲುಗಳನ್ನು ಸಡಿಲ ಮಾಡಿಕೊಳ್ಳಿ. ಲಘುವಾದ ಏರೋಬಿಕ್‌ ಮಾದರಿಯ ವ್ಯಾಯಾಮಗಳು ಸೂಕ್ತ. ಕ್ರಮೇಣ ಚಟುವಟಿಕೆಯ ತೀವ್ರತೆಯನ್ನು ಹೆಚ್ಚಿಸಿಕೊಳ್ಳಿ. ಇದರಿಂದ ನೋವು, ಗಾಯಗಳಾಗದಂತೆ ತಪ್ಪಿಸಬಹುದು.

ಪಾದರಕ್ಷೆ: ಪಾದದ ಅಡಿಯಲ್ಲಿ ಒಳ್ಳೆಯ ಘರ್ಷಣೆ ಮತ್ತು ಒಳಗೆಲ್ಲ ಸಾಕಷ್ಟು ಕುಷನ್‌ ಇರುವಂಥ ಶೂಗಳಿಗೆ ಆದ್ಯತೆ ನೀಡಿ. ಇಬ್ಬನಿ ಸುರಿಯುತ್ತಿದ್ದರೆ ರಸ್ತೆ ಕೆಲವೊಮ್ಮೆ ಒದ್ದೆಯಾಗಿರುತ್ತದೆ. ಇಂಥ ದಿನಗಳಲ್ಲಿ ವಾಕಿಂಗ್‌, ಜಾಗಿಂಗ್‌ ಅಥವಾ ಓಡುವಾಗ ಜಾರಬಹುದು, ಜಾಗ್ರತೆ! ಶೂಗಳಿಗೆ ಪೂರಕವಾದಂಥ ಸ್ವಲ್ಪ ದಪ್ಪನೆಯ ಸಾಕ್ಸ್‌, ಅಗತ್ಯವಿದ್ದರೆ ಕೈಗಳಿಗೆ ಗ್ಲೌಸ್‌ ಧರಿಸಿ. ಕಿವಿ ಮತ್ತು ತಲೆಯನ್ನು ಬೆಚ್ಚಗೆ ಮಾಡಿಕೊಳ್ಳುವುದು ಅಗತ್ಯ ಎನಿಸಿದರೆ, ಅದೂ ಸರಿಯೆ.

ಹೊಂದಿಸಿಕೊಳ್ಳಿ: ಚಳಿಯಲ್ಲಿ ಓಡಿ ಬೆವರುವುದು ಸುಖ ಎನಿಸಿದರೆ, ಹೊರಗಿನ ವಾತಾವರಣಕ್ಕೆ ಸರಿಯಾಗಿ ಓಡುವ ದೂರವನ್ನು ಹೊಂದಿಸಿಕೊಳ್ಳಿ. ತೀರಾ ಮೋಡ, ಗಾಳಿ, ಚಳಿಯಲ್ಲಿ ಹೆಚ್ಚು ಓಡಲು ಕಷ್ಟವೆನಿಸಿದರೆ ದೂರವನ್ನು ಕಡಿಮೆ ಮಾಡಿ. ಬೆಚ್ಚಗಿನ ವಾತಾವರಣದಲ್ಲಿ ಹೆಚ್ಚಿಗೆ ಓಡಬಹುದು ಎನಿಸಿದ ದಿನಗಳಲ್ಲಿ ದೂರವನ್ನು ಹೆಚ್ಚಿಸಿ. ಹೆಚ್ಚು ವಾಹನಗಳಿರುವ ಮುಖ್ಯರಸ್ತೆಯ ಬದಲಿಗೆ, ಒಳಗಿನ ರಸ್ತೆಗಳಲ್ಲಿ ಓಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ. ಇನ್ನು ಹೈವೇ ಪಕ್ಕದಲ್ಲಿಯೇ ಓಡುವ ಉದ್ದೇಶವಿದ್ದರೆ, ಅಲ್ಲಿ ಚಲಿಸುವ ವಾಹನಗಳಿಗೆ ಎಷ್ಟು ಗೋಚರಿಸುತ್ತಿದೆ ಎಂಬುದನ್ನು ತಿಳಿದುಕೊಳ್ಳಿ. ಮಂಜು ಸುರಿಯುತ್ತಿದ್ದರೆ ಇಬ್ಬರಿಗೂ ಅಪಾಯ.

ನಂತರ: ವ್ಯಾಯಾಮದ ನಂತರ ರಿಕವರಿ ಎನ್ನಲಾಗುವ ಪ್ರಕ್ರಿಯೆಯನ್ನು ಎಂದಿಗೂ ಮರೆಯುವಂತಿಲ್ಲ. ವ್ಯಾಯಾಮದ ನಂತರ ಕಾಡಬಹುದಾದ ನೋವು, ಗಾಯಗಳನ್ನು ತಪ್ಪಿಸುವಲ್ಲಿ ಇದು ಅತ್ಯಂತ ಮಹತ್ವದ್ದು. ಫೋಮ್‌ ರೋಲರ್‌ಗಳು ಸ್ನಾಯುಗಳಲ್ಲಿನ ನೋವು, ಒತ್ತಡ ತೆಗೆಯುವಲ್ಲಿ ಒಳ್ಳೆಯ ಕೆಲಸ ಮಾಡುತ್ತವೆ. ಇದಲ್ಲದೆ ಆಮೂಲಾಗ್ರವಾಗಿ ದೇಹವನ್ನು ಸ್ಟ್ರೆಚ್‌ ಮಾಡಿ, ಹೆಚ್ಚು ಬಳಕೆಯಾದ ಸ್ನಾಯುಗಳಿಗೆ ಹೆಚ್ಚಿನ ಆರೈಕೆ ಬೇಕಾಗುತ್ತದೆ. ಯಾವುದೇ ಶ್ರಮದ ವ್ಯಾಯಾಮ ಮಾಡುವಾಗ ಅಥವಾ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಾಗ ವಾರ್ಮ್‌ಅಪ್‌ ಮತ್ತು ಸ್ಟ್ರೆಚ್‌ಗಳನ್ನು ನೆನಪಿನಿಂದ ಮಾಡುವುದು ದೇಹಾರೋಗ್ಯಕ್ಕೆ ಒಳ್ಳೆಯದು.

ಈ ಸುದ್ದಿಯನ್ನೂ ಓದಿ: Home Workout: 7 ದಿನಗಳ ಹೋಮ್ ವರ್ಕೌಟ್; ದೇಹ ತೂಕ 71ರಿಂದ 52 ಕೆ.ಜಿ.ಗೆ ಇಳಿಸಿಕೊಂಡ ಯುವತಿ!