Wednesday, 1st January 2025

Protest: ಆರೋಗ್ಯ ವ್ಯವಸ್ಥೆ ಸರಿಪಡಿಸಿ ಕೊಡಬೇಕೆಂದು ಆಗ್ರಹಿಸಿ ಭಾರತೀಯ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ವತಿಯಿಂದ ಪ್ರತಿಭಟನೆ

ಬಾಗೇಪಲ್ಲಿ: ತಾಲೂಕು ಆಸ್ಪತ್ರೆ ಸೇರಿದಂತೆ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಮತ್ತು ವೈಧ್ಯಕೀಯ ಸಿಬ್ಬಂದಿ ನೇಮಕ ಮಾಡಿ, ಆರೋಗ್ಯ ವ್ಯವಸ್ಥೆ ಸರಿಪಡಿಸಿಕೊಡಬೇಕೆಂದು ಆಗ್ರಹಿಸಿ ಭಾರತೀಯ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ವತಿಯಿಂದ  ಆಗ್ರಹಿಸಲಾಯಿತು.

ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಡಿವೈಎಫ್ ಐ ಸಂಚಾಲಕ ಸೋಮಶೇಖರ್ ಮಾತನಾಡಿ, ತಾಲೂಕು ಆಸ್ಪತ್ರೆಯಲ್ಲಿ ಸಮರ್ಪಕ ಶೌಚಾಲಯ,ಕುಡಿಯುವ ನೀರು ಸೇರಿದಂತೆ ಹಲವಾರು ಸಮಸ್ಯೆಗಳಿವೆ. ಆದರೆ ಈ ಬಗ್ಗೆ ತಾಲೂಕು ಆರೋಗ್ಯ ಇಲಾಖೆಯು ಗಂಭೀರವಾಗಿ ಪರಿಗಣಿಸು ತ್ತಿಲ್ಲ. ವೈಧ್ಯರ ಕೊರತೆ ಗಣನೀಯವಾಗಿ ಕೊರತೆ ಇದ್ದು, ವೈಧ್ಯರ ನೇಮಕಕ್ಕೆ ಸ್ಥಳೀಯ ಶಾಸಕರು ಸರಕಾರದ ಮೇಲೆ ಒತ್ತಡ ಹೇರಬೇಕು. ಈ ಮೂಲಕ ಜನಸಂಖ್ಯಾಧಾರಿತವಾಗಿ ವೈಧ್ಯರನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.

ಹೆಸರಿಗಷ್ಟೇ ಪ್ರಾಥಮಿಕ ಆರೋಗ್ಯ ಕೇಂದ್ರಗಳು

ತಾಲೂಕಿನ ಪಾತಪಾಳ್ಯ,ಬಿಳ್ಳೂರು,ಮಾರಗಾನಕುಂಟೆ, ಮಿಟ್ಟೇಮರಿ ಸೇರಿದಂತೆ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಜನರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಸಂಪೂರ್ಣ ವಿಫಲವಾಗಿದ್ದು, ಬಡವರು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗೂ ತಾಲೂಕು ಕೇಂದ್ರದ ಆಸ್ಪತ್ರೆಗೆ ಓಡಿ ಹೋಗುವ ದುಸ್ಥಿತಿ ಇದೆ. ಗ್ರಾಮೀಣ ಭಾಗದಲ್ಲಿ ಕೆಲ ವೈಧ್ಯಕೀಯ ಸಿಬ್ಬಂದಿಯು ಬಡಜನರೊಂದಿಗೆ ಸೌಜನ್ಯಯುತವಾಗಿಯೂ ಆರೋಗ್ಯ ತಪಾಸಣೆ ಮಾಡದೇ, ದಾಖಲೆ ಗಳ ನಿರ್ವಹಣೆಗೇ ಸೀಮಿತವೆಂಬAತಾಗಿದೆ. ಪ್ರತಿಯೊಂದಕ್ಕೂ ತಾಲೂಕು ಕೇಂದ್ರದ ಆಸ್ಪತ್ರೆಗೆ ಹೋಗಲು ಸೂಚಿಸದೇ ತಮ್ಮ ಮಿತಿಯ ಆರೋಗ್ಯ ತಪಾಸಣೆ ಮಾಡಬೇಕು ಎಂದು ಸೋಮಶೇಖರ್ ಆಗ್ರಹಿಸಿದರು.

ಇದೇ ವೇಳೆ ಡಿವೈಎಫ್‌ಐ ತಾಲೂಕು ಮುಖಂಡ ಮದಕರಿ ಸುರೇಶ್ ಮಾತನಾಡಿ, ಆರೋಗ್ಯ ಮತ್ತು ಶಿಕ್ಷಣಗಳನ್ನು ಸಮರ್ಪಕವಾಗಿ ಬಡವನಿಗೆ ದೊರಕಿಸುವಲ್ಲಿ ಸರಕಾರಗಳು ವಿಫಲವಾಗಿವೆ. ಅದರಲ್ಲೂ ಹಿಂದುಳಿದ ಪ್ರದೇಶವಾದ ಈ ಭಾಗದಲ್ಲಿ ಬಹುತೇಕ ಕೂಲಿಕಾರ್ಮಿಕರು, ಬಡವರೇ ಹೆಚ್ಚಿದ್ದು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಲಕ್ಷಾಂತರ ರೂ. ಗಳನ್ನು ವ್ಯಯಿಸಲು ಸಾಧ್ಯವಾಗದಷ್ಟು ಆರ್ಥಿಕ ಅಶಕ್ತರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುತ್ತಿಲ್ಲ. ಹಾಗಾಗಿ ಈ ಭಾಗದಲ್ಲಿ ಆಸ್ಪತ್ರೆಗಳನ್ನು ಬಲಪಡಿಸಿ, ಬಡವರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸದಿದ್ದರೆ ಡಿವೈಎಫ್‌ಐ ನೇತೃತ್ವದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹೊರಗಡೆಗೆ ಚೀಟಿ ಕೊಡುವುದು ನಿಲ್ಲಿಸಿ

ಇದೇ ವೇಳೆ ಮತ್ತೋರ್ವ ಮುಖಂಡ ಹಾಗೂ ವಕೀಲ ಲಕ್ಷ್ಮಣರೆಡ್ಡಿ ಮಾತನಾಡಿ, ಖಾಸಗಿ ಆಸ್ಪತ್ರೆಗಳಿಗಿಂತಲೂ ಹೆಚ್ಚಿನ ಸೌಲಭ್ಯಗಳು ಸರಕಾರಿ ಆಸ್ಪತ್ರೆಗಳಲ್ಲಿ ದೊರಕಿಸಬೇಕು. ಯಾವುದೇ ಔಷಧಗಳನ್ನು ಖಾಸಗಿ ಮೆಡಿಕಲ್ ಸ್ಟೋರ್ ಗಳಿಗೆ ಚೀಟಿ ಬರೆಯದೇ ಸರಕಾರಿ ಮೆಡಿಕಲ್ ಸ್ಟೋರ್ ಗಳಲ್ಲೆ ದೊರೆಯುವಂತೆ ಮಾಡಬೇಕು. ಬಹಳಷ್ಟು ವೈಧ್ಯರು ಹೊರಗಡೆಗೆ ಚೀಟಿ ಬರೆದುಕೊಡುವುದನ್ನು ನಿಲ್ಲಿಸಬೇಕು ಎಂದು ತಿಳಿಸಿದರು.

ಈ ವೇಳೆ ಡಿವೈಎಫ್‌ಐ ಮುಖಂಡರಾದ ರಾಮಾಂಜಿ, ಅಶೋಕ,ವೆಂಕಟೇಶ್, ಮಾಜಿ ಮುಖಂಡರಾದ ಮುನಿ ವೆಂಕಟಪ್ಪ, ರಘುರಾಮರೆಡ್ಡಿ,ಚನ್ನರಾಯಪ್ಪ,ಬಿಳ್ಳೂರು ನಾಗರಾಜ, ವಾಲ್ಮೀಕಿ ಅಶ್ವತ್ಥಪ್ಪ,ಮುಸ್ತಾಫ, ಆಗಟಿಮಡಗ ಕೃಷ್ಣಪ್ಪ, ಎಸ್‌ಎಫ್‌ಐ ಮುಖಂಡ ಜಿ.ಸೋಮಶೇಖರ್ ಸೇರಿದಂತೆ ಹಲವಾರು ಮಂದಿ ಇದ್ದರು.