Wednesday, 1st January 2025

Vinayaka V Bhatta Column: ಹಿಂದೂ ಸಮಾಜಕ್ಕೆ ಮುದ ನೀಡದ ಮೋಹನ ವಾಣಿ

ವಿದ್ಯಮಾನ

ವಿನಾಯಕ ವೆಂ. ಭಟ್ಟ, ಅಂಬ್ಲಿಹೊಂಡ

ಕಾಶಿ, ಮಥುರಾ, ಸಂಭಲ್ ಮತ್ತು ಇತರ ಪ್ರದೇಶಗಳಲ್ಲಿನ ಮಸೀದಿಗಳ ಸರ್ವೆ ನಡೆಸುವ ಕುರಿತು ಚರ್ಚೆಗಳು ನಡೆಯುತ್ತಿರುವಾಗಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಸರಸಂಘಚಾಲಕ ಮೋಹನ್ ಭಾಗವತ್ ಅವರ ಇತ್ತೀಚಿನ ಹೇಳಿಕೆಯೊಂದು ಹಿಂದೂ ಹೋರಾಟಗಾರರ ಮತ್ತು ಸಾಧು-ಸಂತರ ಮುನಿಸಿಗೆ ಕಾರಣವಾಗಿದೆ. “ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕಿತ್ತು, ಈಗ ಆಗಿದೆ. ಇದು ಹಿಂದೂಗಳ ಪ್ರಮುಖ ಶ್ರದ್ಧಾ ಕೇಂದ್ರವಾಗಿದೆ.

ಆದರೆ, ಮಂದಿರಗಳನ್ನು ಕಟ್ಟುವುದರಿಂದಲೇ ಯಾರೂ ಹಿಂದೂ ನಾಯಕನಾಗಲು ಸಾಧ್ಯವಿಲ್ಲ. ರಾಮಮಂದಿ
ರದಂಥ ವಿವಾದಗಳನ್ನು ಮತ್ತೆ ಎಲ್ಲೆಂದರಲ್ಲಿ ಹುಟ್ಟುಹಾಕಬೇಡಿ. ಹೊಸ ವಿವಾದಗಳು ಈ ಕಾಲಕ್ಕೆ ಸ್ವೀಕಾ ರಾರ್ಹವಲ್ಲ. ನಮ್ಮ ದೇಶವಿಂದು ಸೌಹಾರ್ದಯುತವಾಗಿ ಬದುಕಬಲ್ಲದು ಎಂಬುದನ್ನು ಜಗತ್ತಿಗೆ ಸಾರುವ ಅಗತ್ಯವಿದೆ. ರಾಮಮಂದಿರ ನಿರ್ಮಾಣದ ನಂತರ ಕೆಲವರು ಹೊಸ ಹೊಸ ಜಾಗಗಳಲ್ಲಿ ಇಂಥ ವಿಚಾರಗಳನ್ನು ಮುಂದಿಟ್ಟುಕೊಂಡು ಹಿಂದೂಗಳ ನಾಯಕರಾಗಬಹುದೆಂದು ಭಾವಿಸುತ್ತಿದ್ದಾರೆ. ಆದರೆ ಇದನ್ನೊಪ್ಪಲು ಸಾಧ್ಯ ವಿಲ್ಲ” ಎಂದಿದ್ದರು ಮೋಹನ್ ಭಾಗವತ್.

ಭಾರತೀಯ ಸಮಾಜದಲ್ಲಿ ಬಹಳ ಹಿಂದಿನಿಂದಲೂ ಸಾಮರಸ್ಯದಿಂದ ಬದುಕುತ್ತಿರುವ ನಾವು ಈ ಸದ್ಭಾವನೆ
ಯನ್ನು ಜಗತ್ತಿಗೆ ಸಾರಬೇಕೆಂದರೆ, ಅದನ್ನು ಮಾದರಿಯಾಗಿ ಆಚರಿಸಿ ತೋರಿಸಬೇಕು ಎಂಬುದು ಅವರ ಅಭಿಪ್ರಾಯ ವಾಗಿತ್ತು. ಉತ್ತರ ಪ್ರದೇಶದ ಸಂಭಲ್‌ನ ಶಾಹಿ ಜಾಮಾ ಮಸೀದಿ ಮತ್ತು ರಾಜಸ್ಥಾನದ ಅಜ್ಮೀರ್‌ನ ಷರೀಫ್‌ ನಂಥ ಧಾರ್ಮಿಕ ಸ್ಥಳಗಳ ಮೂಲವನ್ನು ಕೆದಕುವ ಇತ್ತೀಚಿನ ವಿವಾದಗಳ ಹಿನ್ನೆಲೆಯಲ್ಲಿ ಅವರು ಹೀಗೆಂದಿದ್ದಾರೆ ಎಂದು ಭಾವಿಸಲಾಗಿದೆ. ಮೋಹನ್ ಅವರು ಹೀಗೆ ಸೌಹಾರ್ದದ ಜಪಮಾಡುತ್ತಿರುವುದು ಇದೇ ಮೊದಲೇನಲ್ಲ; ರಾಮ ಮಂದಿರದ ಭೂಮಿಪೂಜೆ ಮತ್ತು ಮಂದಿರದ ಉದ್ಘಾಟನೆಯ ವೇಳೆಯೂ ಅವರು ಹೀಗೇ ಮಾತನಾಡಿದ್ದನ್ನು ನಾವು ನೆನಪಿಸಿಕೊಳ್ಳಬಹುದು.

ಭಾರತವನ್ನು ಮತ್ತೆ ಶ್ರೇಷ್ಠವಾಗಿಸುವ ಮಹತ್ವಾಕಾಂಕ್ಷೆಯ ಆರೆಸ್ಸೆಸ್ ತನ್ನ ಪಯಣದಲ್ಲಿ ಇಲ್ಲಿಯವರೆಗೆ 6 ಪೂರ್ಣ ಕಾಲಿಕ ಸರಸಂಘಚಾಲಕರನ್ನು ಕಂಡಿದೆ. ಅವರೆಲ್ಲ ವಿಭಿನ್ನ ಮನೋಧರ್ಮ ಮತ್ತು ವ್ಯಕ್ತಿತ್ವದವರಾಗಿದ್ದರೂ, ಒಂದೇ ಗುರಿಯನ್ನು ಹೊಂದಿದ್ದರು. ಭಾರತವನ್ನು ಹಿಂದೂರಾಷ್ಟ್ರವಾಗಿಸುವುದು ಹೆಡ್ಗೆವಾರ್ ಅವರ ಕಾಲದ ಚಿಂತನೆಯಾಗಿತ್ತು. ಹೆಡ್ಗೆವಾರ್ ಹಿಂದೂ ಏಕತೆಯ ಯೋಜನೆಗೆ ಅಡಿಪಾಯ ಹಾಕಿದರೆ, ಗೋಳ್ವಾಲ್ಕರ್ ಸದೃಢ ಸೈದ್ಧಾಂತಿಕ ಸಿಮೆಂಟ್‌ನಿಂದ ಆ ಸೌಧವನ್ನು ನಿರ್ಮಿಸಿದರು. ಹಾಗೆ ನೋಡಿದರೆ, ಬಾಳಾಸಾಹೇಬ್ ದೇವರಸ್ ಅವರು ರಾಜಕೀಯವಾಗಿ ಹೆಚ್ಚು ಪ್ರಸ್ತುತರಾಗಿದ್ದರು, ಜನಸಂಘ/ಬಿಜೆಪಿ ಒಂದು ,ರಾಜಕೀಯ ಶಕ್ತಿಯಾಗಿ ಬೆಳೆಯಲು ಕಾರಣರಾಗಿದ್ದರು.

ನಂತರ ಬಂದ ರಾಜೇಂದ್ರ ಸಿಂಗ್ ಮತ್ತು ಕರ್ನಾಟಕದವರೇ ಆಗಿದ್ದ ಸುದರ್ಶನ್, ದೇವರಸ್‌ರ ಕಾಲದಲ್ಲಿ ದಕ್ಕಿದ್ದ
ಕೀರ್ತಿಯನ್ನು ಕ್ರೋಡೀಕರಿಸಲು ನೆರವಾದರು. ಕ್ರಾಂತಿಕಾರಕ ಚಿಂತನೆ, ಅಧ್ಯಯನಶೀಲತೆ ಮತ್ತು ವಿದ್ವತ್ಪೂರ್ಣ ಭಾಷಣಗಳಿಗೆ ಹೆಸರಾದ ಮೋಹನ್ ಭಾಗವತ್, ಹಿಂದಿನ ಸರಸಂಘಚಾಲಕರುಗಳಿಗೆ ಹೋಲಿಸಿದರೆ ಹಿಂದುತ್ವದ ವಿಷಯದಲ್ಲಿ ಅತಿರೇಕವಿಲ್ಲದ, ಸ್ವಲ್ಪ ಮೃದು ಎನ್ನಬಹುದಾದ ನಿಲುವನ್ನು ಹೊಂದಿರುವವರು. ಸುಧಾರಣಾವಾದಿ
ಯಾದ ಇವರು ಭೂತಕಾಲಕ್ಕಷ್ಟೇ ಅಂಟಿಕೊಳ್ಳದೆ ಭವಿಷ್ಯವನ್ನು ಕಲ್ಪಿಸಿಕೊಳ್ಳುವ, ಹಿಂದುತ್ವದ ಹರಿವಿಗೆ ದಿಟ್ಟ
ಮತ್ತು ಪರಿವರ್ತನಶೀಲ ಬದಲಾವಣೆಗಳನ್ನು ಪರಿಚಯಿಸುವ ದೂರದೃಷ್ಟಿಯುಳ್ಳವರಾಗಿದ್ದಾರೆ.

ಜತೆಗೆ, ಕಠಿಣ ಪರಿಸ್ಥಿತಿಯಲ್ಲಿ ಕೆಲಸವನ್ನು ವಹಿಸಿಕೊಂಡವರಾಗಿದ್ದಾರೆ ಎನ್ನಬಹುದು. ಉದಾಹರಣೆಗೆ, ಅವರು ಮೋದಿಯವರನ್ನು ಆಡ್ವಾಣಿಯವರ ಉತ್ತರಾಽಕಾರಿಯಾಗಿ ಅಭಿಷೇಕಿಸುವ, ಅಪಾಯಕಾರಿಯಾಗಬಹುದಾಗಿದ್ದ ನಿರ್ಧಾರವನ್ನು ತೆಗೆದುಕೊಂಡು ಪ್ರಬುದ್ಧತೆಯನ್ನು ಪ್ರದರ್ಶಿಸಿದವರು. ಒಂದೆಡೆ, ಅವರು ಮೋದಿಯವರಂಥ ಪ್ರಬಲ ವ್ಯಕ್ತಿಯೊಂದಿಗಿನ ತಮ್ಮ ಸಂಬಂಧವನ್ನು ಎಚ್ಚರಿಕೆಯಿಂದ ಮುನ್ನಡೆಸಬೇಕಿತ್ತು, ಮತ್ತೊಂದೆಡೆ ಹಿಂದುತ್ವದೊಳಗೆ ಸೈದ್ಧಾಂತಿಕ ಬದಲಾವಣೆಗೂ ತೊಡಗಬೇಕಿತ್ತು. ಈ ಪಯಣದುದ್ದಕ್ಕೂ ಭಾಗವತ್ ಅವರು ಹಿಂದುತ್ವದ ಮೂಲಸಿದ್ಧಾಂತದೊಂದಿಗೆ ರಾಜಿಮಾಡಿಕೊಂಡಿದ್ದಾರೆ ಎಂದು ಭಾವಿಸುವವರಿಂದ ‘ಆರೆಸ್ಸೆಸ್‌ನ ದುರ್ಬಲ ಮುಖ್ಯಸ್ಥ’ ಎಂಬ ಹಣೆಪಟ್ಟಿಯನ್ನೂ ಕಟ್ಟಿಸಿಕೊಳ್ಳಬೇಕಾಯಿತು.

ಸುದರ್ಶನ್‌ರಿಂದ ಭಾಗವತ್ ಅಧಿಕಾರ ವಹಿಸಿಕೊಂಡಾಗ, ಆರೆಸ್ಸೆಸ್ ಸೈದ್ಧಾಂತಿಕವಾಗಿ ಗೊಂದಲದಲ್ಲಿ ಸಿಲುಕಿತ್ತು.
೨೦೦೪ರಲ್ಲಿ ವಾಜಪೇಯಿ ನೇತೃತ್ವದ ಬಿಜೆಪಿಯ ಆಶ್ಚರ್ಯಕರ ಸೋಲಿನ ನಂತರ ಸಂಘ ಆಘಾತಕ್ಕೊಳಗಾಗಿತ್ತು,
ಆಡ್ವಾಣಿಯವರ ‘ಜಿನ್ನಾ ಪ್ರಮಾದ’ದಿಂದ ಇನ್ನೂ ತತ್ತರಿಸುತ್ತಿರುವಾಗ, ಅಟಲ್-ಆಡ್ವಾಣಿ ಜೋಡಿಗಿಂತ ಹೆಚ್ಚು
ಉದಾರವಾದಿಯಾದ ಹೊಸ ಮುಖಕ್ಕಾಗಿ ಹುಡುಕುತ್ತಿತ್ತು. ಆರೆಸ್ಸೆಸ್, ಬಿಜೆಪಿ ಮತ್ತು ಅದರ ಇತರ ಅಂಗಸಂಸ್ಥೆಗಳ
ನಡುವಿನ ಸಾಮರಸ್ಯ ದಿನೇದಿನೆ ಕಮ್ಮಿಯಾಗುತ್ತಿತ್ತು.

‘ಅಟಲ್-ಆಡ್ವಾಣಿ ಯುಗ ಕೊನೆಗೊಂಡಿದೆ, ಬಿಜೆಪಿಗೆ ಹೊಸರಕ್ತದ ಅಗತ್ಯವಿದೆ’ ಎಂಬುದು ಮನವರಿಕೆಯಾದ
ನಂತರ, “ಪಕ್ಷದ ಹೊಸ ಅಧ್ಯಕ್ಷರು ‘ಗ್ಯಾಂಗ್ ಆಫ್ ಫಾರ್ ’(ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ವೆಂಕಯ್ಯನಾಯ್ಡು
ಮತ್ತು ಅನಂತ್ ಕುಮಾರ್)ನಿಂದ ಬರುವುದಿಲ್ಲ ಎಂದು ಭಾಗವತ್ ಧೈರ್ಯದಿಂದ ಹೇಳಿ, ನಿತಿನ್ ಗಡ್ಕರಿಯಂಥ
ಕಿರಿಯರನ್ನು ಬಿಜೆಪಿಯ ಅಧ್ಯಕ್ಷರಾಗಿ ಆಯ್ಕೆಮಾಡಿದ್ದರು ೨೦೧೪ರ ಚುನಾವಣೆಗೆ ಗಡ್ಕರಿಯವರನ್ನು ಪಕ್ಷದ ಪ್ರಧಾನಿ
ಅಭ್ಯರ್ಥಿಯಾಗಿಸಲೂ ಮೊದಲು ಮನಸ್ಸು ಮಾಡಿದ್ದರು; ಆದರೆ ಗಡ್ಕರಿಯವರ ಅನಾರೋಗ್ಯ, ಅವರ ವಿರುದ್ಧವಿದ್ದ
ಕೆಲ ಆರೋಪಗಳ ಕಾರಣದಿಂದಾಗಿ ಈ ನಿರ್ಧಾರವನ್ನು ತ್ವರಿತವಾಗಿ ಬದಲಿಸಿ, ಮೋದಿಯವರ ಹೆಸರು ಮುನ್ನೆಲೆಗೆ
ಬರುವಂತೆ ನೋಡಿಕೊಂಡರು.

ಅಂದು ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವುದು ಸುಲಭದ ಮಾತಾಗಿರಲಿಲ್ಲ. ೨೦೧೪ರಲ್ಲಿ ಬಿಜೆಪಿಯು ಗೆಲ್ಲಲು ವಿಫಲವಾದಲ್ಲಿ ಹಿಂದುತ್ವ ಚಳವಳಿಯ ಭವಿಷ್ಯವೇ ಅಪಾಯಕ್ಕೀಡಾಗುತ್ತದೆ ಎಂದು ಭಾಗವತ್ ಅರಿತಿದ್ದರು. ಬಿಜೆಪಿಯ ಎಲ್ಲ ಮುಖ್ಯಮಂತ್ರಿಗಳ ಪೈಕಿ ಮೋದಿಯವರ ಬಳಿ ಸಂಪನ್ಮೂಲಗಳು ಮಾತ್ರವಲ್ಲ, ‘ಬಿಜೆಪಿ ತನ್ನ ಮೂಲಸಿದ್ಧಾಂತವಾದ ಹಿಂದುತ್ವದಿಂದ ಚಂಚಲವಾಗಬಾರದು’ ಎಂಬ ಸೈದ್ಧಾಂತಿಕ ಸ್ಪಷ್ಟತೆಯೂ ಇತ್ತು. ಮೋದಿಯವರ ಶುದ್ಧಚಾರಿತ್ರ್ಯ ಮತ್ತು ಸಾಂಸ್ಥಿಕ ಕೌಶಲಗಳು ಭಾಗವತರ ಪ್ರಸ್ತಾಪಕ್ಕೆ ಜಯಸಿಗಲು ಕಾರಣವಾದವು.

ಹಾಗಂತ, ಆಕ್ರಮಣಕಾರಿ ಹಿಂದುತ್ವದ ಧೋರಣೆಯನ್ನು ಭಾಗವತ್ ಸಂಪೂರ್ಣ ವಿರೋಧಿಸಿದರು ಎಂದಲ್ಲ. ಆದರೆ,
“ಮುಸ್ಲಿಂ-ವಿರೋಽ ಅಭಿಯಾನವು ಅನಿಯಂತ್ರಿತವಾಗಿ ಮುಂದುವರಿದರೆ, ‘ಹಿಂದುತ್ವ’ ಮತ್ತು ‘ಹಿಂದೂ’ ಎಂಬ
ಪರಿಭಾಷೆಗಳು ಜಾಗತಿಕವಾಗಿ ಅಪಖ್ಯಾತಿಗೆ ಒಳಗಾಗುತ್ತವೆ; ಇದು ಆರೆಸ್ಸೆಸ್‌ನ ಸಂಪೂರ್ಣ ಹಿಂದೂ ಯೋಜನೆ ಯನ್ನು ದಾರಿತಪ್ಪಿಸಲು ಕಾರಣವಾಗುತ್ತದೆ” ಎಂದು ಅವರು ಅರಿತಿದ್ದರು. ದೇಶದ 20 ಕೋಟಿ ಮುಸ್ಲಿಮರನ್ನು ಕಾರಣವಿಲ್ಲದೆ ದೂರತಳ್ಳಲು ಸಾಧ್ಯವಿಲ್ಲ ಎಂಬುದನ್ನು ಅವರು ಅರಿತಿದ್ದರಿಂದಲೇ ‘ಇಸ್ಲಾಮೋ-ಬಿಯಾ’ ಪ್ರಕ್ರಿಯೆಯನ್ನು ಮೊದಲು ನಿಧಾನಗೊಳಿಸಲು ನಿರ್ಧರಿಸಿ, ಬಳಿಕ ಅಶಿಸ್ತಿನ, ಸ್ವಘೋಷಿತ ಹಿಂದುತ್ವ ಯೋಧರನ್ನು ಪಳಗಿಸಲು ಬಯಸಿದರು.

‘ಮುಸ್ಲಿಮರಿಲ್ಲದೆ ಹಿಂದುತ್ವ ಅಪೂರ್ಣ’ ಎಂದು ಧೈರ್ಯದಿಂದ ಹೇಳಿದರು. ಈ ಹೇಳಿಕೆಯು ಆಗ ‘ಹಿಂದುತ್ವ
ಬ್ರಿಗೇಡ್’ ಅನ್ನು ಬೆಚ್ಚಿಬೀಳಿಸಿತ್ತು. ಆದರೆ ಭಾಗವತ್ ಅಲ್ಲಿಗೇ ನಿಲ್ಲಿಸಲಿಲ್ಲ. ರಾಮಮಂದಿರ/ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ತೀರ್ಪಿತ್ತಾಗ, ಅದನ್ನು ಹಿಂದೂಗಳ ಜಯವೆಂದು ಭಾವಿಸಿ ವಿಜಯೋ ತ್ಸವ ಆಚರಿಸಬಾರದು ಎಂದು ಕೇಳಿಕೊಂಡಿದ್ದರು.

ಮುಂದೆ, ವಾರಾಣಸಿಯ ಜ್ಞಾನವಾಪಿ ಮಸೀದಿಯನ್ನು ದೇವಾಲಯದ ಮೇಲೆ ನಿರ್ಮಿಸಲಾಗಿದೆಯೇ ಎಂಬುದನ್ನು ನಿರ್ಧರಿಸಲು ಸಮೀಕ್ಷೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದಾಗ, “ಪ್ರತಿ ಮಸೀದಿಯ ಕೆಳಗೆ ಶಿವಲಿಂಗವನ್ನು ಏಕೆ
ಹುಡುಕಬೇಕು?” ಎಂದು ಅವರು ಕೇಳಿದ್ದನ್ನೂ ಇಲ್ಲಿ ಸ್ಮರಿಸಬಹುದು. “ಭಾರತ ‘ವಿಶ್ವಗುರು’ ಆಗಬೇಕೆಂದು ನಾವು ಮಾತನಾಡುತ್ತೇವೆ, ಆದರೆ ‘ಮಹಾಶಕ್ತಿ’ (ಸೂಪರ್ ಪವರ್) ಆಗಬೇಕೆಂದು ಯೋಚಿಸುವುದೇ ಇಲ್ಲ. ಹಾಗಾಗಿ
ಮಹಾಶಕ್ತಿ ಆಗುವ ನಿಟ್ಟಿನಲ್ಲಿ ಹೆಚ್ಚು ಕೆಲಸ ಮಾಡಬೇಕಿದೆ. ಹಿಂದೂಸ್ತಾನ ಎನ್ನುವುದು ಯಾವಾಗಲೂ ಹಿಂದೂ ರಾಷ್ಟ್ರವೇ ಆಗಿದೆ. ಸೈದ್ಧಾಂತಿಕವಾಗಿ ಎಲ್ಲಾ ಭಾರತೀಯರು ಹಿಂದೂಗಳು ಮತ್ತು ಹಿಂದೂಗಳು ಎಂದರೆ ಎಲ್ಲಾ ಭಾರತೀಯರು. ಹಾಗಾಗಿ, ಪ್ರತ್ಯೇಕ ಹಿಂದೂರಾಷ್ಟ್ರದ ಕೂಗು ಪ್ರಸ್ತುತವಲ್ಲ.

ಹಿಂದೂ ಸಿದ್ಧಾಂತಕ್ಕೆ ಯಾವುದೇ ಪರ್ಯಾಯವಿಲ್ಲದಿರುವುದರಿಂದ ಅದಕ್ಕೆ ಈಗ ವಿಶ್ವಾದ್ಯಂತ ಹೆಚ್ಚು ಬೇಡಿಕೆ ಯಿದೆ. ಹಾಗಾಗಿ ನಾವು ಹಿಂದೂಗಳು ಬಹಳ ಜವಾಬ್ದಾರಿಯಿಂದ ವರ್ತಿಸಬೇಕು” ಎಂಬುದು ಭಾಗವತ್‌ರ ಅಂಬೋಣವಾಗಿತ್ತು. ಅವರ ಈ ‘ಸೌಹಾರ್ದ ನಿಲುವುಗಳು’, ಸಂಘದ ಹಿಂದಿನ ಸರಸಂಘಚಾಲಕರುಗಳ ಧೋರಣೆಗೆ ವ್ಯತಿರಿಕ್ತವಾದುದಾಗಿವೆ ಎಂದು ತೋರುವುದಂತೂ ಸತ್ಯ. ಭಾಗವತರ ಮಾತುಗಳು ಕೇವಲ ವೈಯಕ್ತಿಕ ಅಭಿಪ್ರಾ
ಯವಾಗಿರದೆ, ಆರೆಸ್ಸೆಸ್‌ನ ಒಟ್ಟಭಿಪ್ರಾಯವೂ ಆಗಿರುತ್ತದೆ ಜತೆಗೆ, ಪರೋಕ್ಷವಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಧೋರಣೆಯೂ ಆಗುತ್ತದೆ ಎಂಬ ಅರಿವು ಹಿಂದೂ ಹೋರಾಟಗಾರರಿಗೆ ಇದೆ. ಅದಕ್ಕಾಗಿಯೇ ಅವರು
ಭಾಗವತರ ಇತ್ತೀಚಿನ ಹೇಳಿಕೆಗಳಿಂದ ಗಾಬರಿಗೊಂಡಿರುವುದು.

“ಭಾಗವತ್ ಅವರು ಸಂಘಟನೆಯೊಂದರ ಮುಖ್ಯಸ್ಥರಾಗಿರಬಹುದು; ಆದರೆ ಅವರು ಹೇಳಿದ್ದನ್ನು ಕೇಳಲು ಅವರು ಹಿಂದೂ ಧಾರ್ಮಿಕ ಮುಖಂಡರೇನಲ್ಲ. ಹಿಂದೂಗಳಿಗೆ ಅವರ ಐತಿಹಾಸಿಕ ಆಸ್ತಿ ಸಿಗಲೇಬೇಕು” ಎಂದು ಜಗದ್ಗುರು ರಾಮಭದ್ರಾಚಾರ್ಯರು ಸೇರಿದಂತೆ ಅನೇಕ ಯತಿಗಳು ತಿರುಗೇಟು ನೀಡಿದ್ದಾರೆ. ಶತಮಾನಗಳಿಂದ ಇಸ್ಲಾಮಿಕ್ ದಾಳಿಕೋರರಿಂದ ನಾಶವಾದ 40 ಸಾವಿರಕ್ಕೂ ಹೆಚ್ಚು ದೇಗುಲಗಳನ್ನು ಮರಳಿ ಪಡೆವ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಮರಾಠರ ಆಳ್ವಿಕೆಯಲ್ಲಿ ಮತ್ತು ಮಹಾರಾಣಿ ಅಹಲ್ಯಾಬಾಯಿಯಿಂದಾಗಿ ದೇಗುಲಗಳನ್ನು ಮರಳಿ ಪಡೆದಿ ದ್ದನ್ನು ನಾವು ಮರೆಯುತ್ತಿದ್ದೇವೆಯೇ? ತ್ರಯಂಬಕೇಶ್ವರದಿಂದ ಸೋಮನಾಥ ಮತ್ತು ಜಗನ್ನಾಥ ಪುರಿಯವರೆಗೆ ನೆಲಸಮಗೊಂಡ ಸಾವಿರಾರು ದೇಗುಲಗಳನ್ನು ಮರುನಿರ್ಮಿಸಲಾಗಿರುವುದನ್ನು ನಾವು ನಂಬು ತ್ತಿಲ್ಲವೇ? ಅಫ್ಜಲ್‌ಖಾನ್‌ನನ್ನು ಕೊಂದ ನಂತರ ಶಿವಾಜಿಯು ತುಳಜಾಭವಾನಿ ಕ್ಷೇತ್ರದಲ್ಲಿ ಮಾಡಿದಂತೆ, ದಾಳಿಕೋರರು ನಮ್ಮ ದೇಗುಲಗಳನ್ನು ಕೆಡವಿದ ವಾರಗಳು ಅಥವಾ ತಿಂಗಳುಗಳಲ್ಲಿ ಅವನ್ನು ಪುನರ್‌ನಿರ್ಮಿಸಿದ ಉದಾ ಹರಣೆಗಳೂ ಇವೆ.

ಅಂತೆಯೇ ಅವರಿಂದ ನೆಲಸಮಗೊಂಡ ಎಲ್ಲಾ 40 ಸಾವಿರ ದೇವಾಲಯಗಳ ಮರುನಿರ್ಮಾಣಕ್ಕಾಗಿ ಕಾಯ ಲಾಗುತ್ತಿದೆ. ಈ ಸಂಗತಿಯನ್ನು ನಾವು ಮರೆತರೆ, ಆ ದೇಗುಲಗಳನ್ನು ಉಳಿಸಿಕೊಳ್ಳಲು ಪ್ರಾಣತ್ಯಾಗ ಮಾಡಿದ್ದ
ನಮ್ಮ ಪೂರ್ವಜರನ್ನು ಅವಮಾನಿಸಿದಂತಾಗುತ್ತದೆ. ಹಾಗಾಗಬಾರದು. ಆಕ್ರಮಣಕಾರರು ದೇಗುಲಗಳನ್ನು ನೆಲಸಮಗೊಳಿಸಿದ ಅಥವಾ ತಮ್ಮ ಧಾರ್ಮಿಕ ರಚನೆಯಿಂದ ಅವನ್ನು ಬದಲಿಸಿದ ಕುರಿತಾದ ಸಾಕಷ್ಟು ದಾಖಲೆಗಳು ನಮ್ಮಲ್ಲಿವೆ. ಹಾಗಾಗಿ, ಕಾನೂನು ಹೋರಾಟಗಳನ್ನು ಮುಂದುವರಿಸುವ ಮೂಲಕ, ಅಯೋಧ್ಯೆಯ ರೀತಿಯಲ್ಲಿ ಶಾಂತಿಯುತವಾಗಿ ಮತ್ತು ದೇಶದ ಕಾನೂನಿನಡಿ ಕಾಶಿ ಮತ್ತು ಮಥುರಾ ಜತೆಗೆ, ನಮ್ಮ ಪ್ರಕರಣವನ್ನು/ಸಮರ್ಥನೆಯನ್ನು ಸಾಬೀತುಪಡಿಸಬಲ್ಲ ಉಳಿದ ಅನೇಕ ದೇಗುಲಗಳನ್ನು ಮರಳಿ ಪಡೆಯಲು ನಾವು ಯತ್ನಿಸಲೇ ಬೇಕು.

ಆಗ ಮಾತ್ರವೇ ನಮ್ಮ ಪೂರ್ವಜರಿಗೆ ಮತ್ತು ದೇವತೆಗಳಿಗೆ ಋಣಸಂದಾಯ ಮಾಡಿದಂತಾಗುತ್ತದೆ ಎಂಬುದು ಹಿಂದೂ ಹೋರಾಟಗಾರರ ಸ್ಪಷ್ಟ ಅಭಿಪ್ರಾಯ. ರಾಮಮಂದಿರದ ಹೋರಾಟಕ್ಕೊಂದು ನ್ಯಾಯ, ಮಿಕ್ಕವಕ್ಕೆ ಇನ್ನೊಂದು ನ್ಯಾಯ ಎನ್ನುವುದು ತರವಲ್ಲ. ಪ್ರತಿ ದೇಗುಲದೊಂದಿಗೂ ಅದರದ್ದೇ ಆದ ಇತಿಹಾಸ, ಸಂಸ್ಕೃತಿ ಮತ್ತು ಶ್ರದ್ಧೆಗಳು ಕೂಡಿಕೊಂಡಿರುತ್ತವೆ. ‘ಅದು ಮೇಲು, ಇದು ಕೀಳು’ ಎಂದು ಶ್ರೇಣೀಕರಿಸಿ ನೋಡುವುದು ತಪ್ಪು ಎಂಬುದು ಅವರ ತರ್ಕ. ಜತೆಗೆ, ನೂರಾರು ಜನರ ಬಲಿದಾನಕ್ಕೆ ಕಾರಣವಾದ ಅಯೋಧ್ಯಾ ಹೋರಾಟದ ವೇಳೆಯಲ್ಲೂ ಆರೆಸ್ಸೆಸ್ ಇದೇ ಸೌಹಾರ್ದದ ನಿಲುವನ್ನು ತೆಗೆದುಕೊಳ್ಳಬಹುದಿತ್ತಲ್ಲಾ! ಸೌಹಾರ್ದದ ನಿಲುವು ಈಗ ಮಾತ್ರವೇಕೆ?’ ಎಂಬುದು ಹಿಂದೂ ಹೋರಾಟಗಾರರ ಪ್ರಶ್ನೆ.

ಅಂತೂ, ವೈವಿಧ್ಯಮಯ ಜಾಗತಿಕ ವಿಪ್ಲವಗಳ ಪರಿಸ್ಥಿತಿಯಲ್ಲಿ, ಭವಿಷ್ಯದಲ್ಲಿ ಒಂದು ರಾಷ್ಟ್ರವಾಗಿ ಭಾರತ
ಎಲ್ಲಿ ನಿಲ್ಲಬೇಕು ಎಂದು ಯೋಚಿಸುವಾಗ, ಭಾಗವತ್ ಅವರ ಸೌಹಾರ್ದದ ವಿಚಾರಧಾರೆ ಪ್ರಸ್ತುತ ಎನಿಸುತ್ತದೆ.
ಆದರೆ, ಪರಕೀಯರ ಸತತ ದಾಳಿಯಿಂದ ನೆಲಸಮವಾದ ಅಥವಾ ವಿರೂಪಗೊಂಡು ನಮ್ಮನ್ನು ನಿತ್ಯ ಚುಚ್ಚುತ್ತಿ ರುವ ಹಂಪಿಯಂಥ, ನಮ್ಮ ಸಂಸ್ಕೃತಿಯ ಪ್ರತಿರೂಪವಾಗಿದ್ದ ಸಾವಿರಾರು ದೇಗುಲಗಳನ್ನು ನೆನೆದಾಗ, ಅವುಗಳನ್ನು ಹಿಂಪಡೆಯಬೇಕೆಂಬ ಹಿಂದೂ ಹೋರಾಟಗಾರರ ನಿಲುವೇ ಸರಿಯೆನಿಸುತ್ತದೆ. ಭಾಗವತರ ಧೋರಣೆಯು ಮುಂದಿನ ದಿನಗಳಲ್ಲಿ ಸಮಸ್ತ ಹಿಂದೂ ಸಮಾಜಕ್ಕೆ ಸ್ವೀಕಾರ ಆಗಲಿದೆಯೇ ಅಥವಾ ಉಳಿದ ಮಂದಿರಗಳ ಪುನರುತ್ಥಾನಕ್ಕಾಗಿ ಹೋರಾಡುತ್ತಿರುವ ಹಿಂದೂ ಸಂಘಟನೆಗಳು ತಮ್ಮ ದಾರಿಯಲ್ಲೇ ಮುಂದು ವರಿಯುತ್ತವೆಯೇ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)

ಇದನ್ನೂ ಓದಿ: Vinayaka M Bhatta Column: ತಬಲಾ ಇರುವವರೆಗೂ ಝಾಕಿರ್‌ ಅಮರ