Thursday, 2nd January 2025

Plane Crash : ದಕ್ಷಿಣ ಕೊರಿಯಾದಲ್ಲಿ ಭೀಕರ ವಿಮಾನ ದುರಂತ; ಬದುಕುಳಿದವರು ಕೇವಲ ಇಬ್ಬರೇ- ಸಾವಿನ ಸಂಖ್ಯೆ 179ಕ್ಕೆ ಏರಿಕೆ

Plane Crash

ಸಿಯೋಲ್‌ : ದಕ್ಷಿಣ ಕೊರಿಯಾದ (South Korea) ಮುವಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದ ವಿಮಾನ ದುರಂತದ ಸಾವಿನ ಸಂಖ್ಯೆ 179ಕ್ಕೆ ಏರಿಕೆ ಆಗಿದೆ. ಭೀಕರ ದುರ್ಘಟನೆಯಲ್ಲಿ ಕೇವಲ ಇಬ್ಬರೇ ಬದುಕುಳಿದಿದ್ದಾರೆ. ವಿಮಾನವು ಥಾಯ್ಲೆಂಡ್‌ನ ಬ್ಯಾಂಕಾಕ್‌ನಿಂದ ಹಿಂತಿರುಗುತ್ತಿದ್ದ ವೇಳೆ ಲ್ಯಾಂಡಿಂಗ್‌ ವೇಳೆ ಬೆಂಕಿ ಹತ್ತಿಕೊಂಡು ಪತನಗೊಂಡಿದೆ ಎಂದು ಹೇಳಲಾಗಿದೆ(Plane Crash).

ಜೆಜು ಏರ್ ವಿಮಾನವು 180 ಕ್ಕೂ ಅಧಿಕ ಪ್ರಯಾಣಿಕರು ಮತ್ತು ಆರು ಪೈಲೆಟ್‌ಗಳನ್ನು ಹೊತ್ತೊಯ್ಯುತ್ತಿತ್ತು. ಲ್ಯಾಂಡಿಂಗ್ ಗೇರ್‌ ಸಮಸ್ಯೆಯಿಂದ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈವರೆಗೆ ಅವಶೇಷಗಳಡಿಯಿಂದ ಕೇವಲ ಇಬ್ಬರನ್ನು ರಕ್ಷಿಸಲಾಗಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಲ್ಯಾಂಡಿಂಗ್‌ ಸಮಯದಲ್ಲಿ ಪಕ್ಷಿಗಳು ಬಂದು ಡಿಕ್ಕಿ ಹೊಡೆದಿದ್ದರಿಂದ ಲ್ಯಾಂಡಿಂಗ್ ಗೇರ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ ಕಾರಣಕ್ಕೆ ಈ ಭೀಕರ ಅಪಘಾತ ಸಂಭವಿಸಿದೆ ಎಂದು ನಂಬಲಾಗಿದೆ. ಸ್ಥಳೀಯ ಸುದ್ದಿ ಸಂಸ್ಥೆಯ ಪ್ರಕಾರ, ಥೈಲ್ಯಾಂಡ್‌ನಿಂದ ಹಿಂದಿರುಗುತ್ತಿದ್ದ ಜೆಜು ಏರ್ ಫ್ಲೈಟ್ 2216 ವಿಮಾನವು, ದಕ್ಷಿಣ ಜಿಯೋಲ್ಲಾ ಪ್ರಾಂತ್ಯದ ಮುವಾನ್ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿದೆ. ಅಪಘಾತ ಸಂಭವಿಸಿದ ಮರುಕ್ಷಣವೇ ರಕ್ಷಣಾ ಕಾರ್ಯಾಚರಣೆ ಕೈಗೊಂಡ ಅಧಿಕಾರಿಗಳು, ವಿಮಾನದ ಹಿಂಬದಿ ಬಾಗಿಲಿನಿಂದ ಪ್ರಯಾಣಿಕರನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ವಿಮಾನ ಅಪಘಾತದ ಕುರಿತು ಮಾತನಾಡಿರುವ ದಕ್ಷಿಣ ಕೊರಿಯಾ ಹಂಗಾಮಿ ಅಧ್ಯಕ್ಷ ಚೋಯ್ ಸಾಂಗ್-ಮೋಕ್, ಪ್ರಯಾಣಿಕರ ಜೀವ ಉಳಿಸುವುದು ತಮ್ಮ ತುರ್ತು ಮತ್ತು ಪ್ರಾಥಮಿಕ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ. “ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದ ಏಜೆನ್ಸಿಗಳು ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಸಜ್ಜುಗೊಳಿಸಬೇಕು..” ಎಂದು ಚೋಯ್ ಸಾಂಗ್-ಮೋಕ್ ಸೂಚನೆ ನೀಡಿದ್ದಾರೆ.

2005 ರಲ್ಲಿ ಸ್ಥಾಪಿಸಲಾದ ದಕ್ಷಿಣ ಕೊರಿಯಾದ ಅತಿದೊಡ್ಡ ಕಡಿಮೆ-ವೆಚ್ಚದ ವಾಹಕಗಳಲ್ಲಿ ಒಂದಾದ ಜೆಜು ಏರ್‌ನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಪಘಾತಕ್ಕೆ ಒಳಗಾಗಿದೆ.

ಕಳೆದ ಬುಧವಾರ (ಡಿ.25) ಅಜೆರ್ಬೈಜಾನ್ ಏರ್‌ಲೈನ್ಸ್‌ಗೆ ಸೇರಿದ ಪ್ರಯಾಣಿಕ ವಿಮಾನವೊಂದು ಕಝಾಕಿಸ್ತಾನದಲ್ಲಿ ಅಪಘಾತಕ್ಕೀಡಾಗಿತ್ತು. ಈ ದುರ್ಘಟನೆಯಲ್ಲಿ 38 ಜನ ಅಸುನೀಗಿದ್ದರು. ಅಕ್ಟೌ ವಿಮಾನ ನಿಲ್ದಾಣದ ಬಳಿ ಬರುತ್ತಿದ್ದಂತೇ ಪೈಲಟ್ ನಿಯಂತ್ರಣ ಕಳೆದುಕೊಂಡ J2-8243 ವಿಮಾನವು, ಕ್ಷಣಾರ್ಧದಲ್ಲಿ ನೆಲಕ್ಕುರುಳಿ ಬೆಂಕಿಗೆ ಆಹುತಿಯಾಗಿತ್ತು. ಅಲ್ಲದೇ ಈ ದಾಳಿಯಲ್ಲಿ ರಷ್ಯಾದ ಕೈವಾಡವಿದೆ ಎಂದು ಉಕ್ರೇನ್‌ ಗಂಭೀರ ಆರೋಪ ಮಾಡಿತ್ತು. ಆದರೆ ಈ ಆರೋಪಗಳನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅಲ್ಲಗಳೆದಿದ್ದರು.

ಈ ಸುದ್ದಿಯನ್ನೂ ಓದಿ : Kazakhstan plane crash: ಕಜಕಿಸ್ತಾನದ ವಿಮಾನ ಪತನಕ್ಕೂ ಮುನ್ನ ಏನಾಗಿತ್ತು? ವಿಡಿಯೋ ವೈರಲ್‌