Thursday, 2nd January 2025

FIDE World Rapid Championships: ಕೊನೆರು ಹಂಪಿ ವಿಶ್ವ ರ‍್ಯಾಪಿಡ್‌ ಚಾಂಪಿಯನ್‌

ನ್ಯೂಯಾರ್ಕ್​: ಭಾರತದ ಗ್ರ್ಯಾಂಡ್‌ಮಾಸ್ಟರ್‌ ಕೊನೆರು ಹಂಪಿ(Koneru Humpy) ವಿಶ್ವ ಮಹಿಳಾ ರ‍್ಯಾಪಿಡ್‌ ಚೆಸ್‌ ಚಾಂಪಿಯನ್‌(FIDE World Rapid Championships) ಆಗಿ ಹೊರಹೊಮ್ಮಿದ್ದಾರೆ. ಇಂಡೋನೇಷ್ಯಾದ ಐರಿನ್​ ಸುಕಂದರ್​ ಅವರನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.​ ಈ ಮೂಲಕ 37 ವರ್ಷದ ಕೊನೆರು ಹಂಪಿ ಚೀನಾದ ಜು ವೆನ್ಜುನ್ ಬಳಿಕ ಮಹಿಳೆಯರ ವಿಭಾಗದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ಎರಡನೇ ಚೆಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಭಾನುವಾರ ನಡೆದ ಫೈನಲ್​ನ​ಲ್ಲಿ ಹಂಪಿ ಅವರು 11 ಅಂಕಗಳಲ್ಲಿ 8.5 ಅಂಕಗಳನ್ನು ಕಲೆ ಹಾಕುವ ಮೂಲಕ ಅಗ್ರಸ್ಥಾನ ಗಳಿಸಿದರು. 2019ರಲ್ಲಿ ಜಾರ್ಜಿಯಾದಲ್ಲಿ ನಡೆದ ಟೂರ್ನಿಯಲ್ಲೂ ಕೊನೆರು ಅವರು ಪ್ರಶಸ್ತಿ ಗೆದ್ದಿದ್ದರು. ಇದೀಗ ಮತ್ತೊಂದು ಬಾರಿ ಚಾಂಪಿಯನ್‌ ಆಗುವ ಮೂಲಕ ಈ ಸಾಧನೆಗೈದ ಭಾರತದ ಮೊದಲ ಮಹಿಳೆ ಎನಿಸಿಕೊಂಡರು.

ಪುರುಷರ ವಿಭಾಗದಲ್ಲಿ ರಷ್ಯಾದ 18 ವರ್ಷದ ವೊಲೊಡರ್ ಮುರ್ಜಿನ್ ಪ್ರಶಸ್ತಿ ಗೆದ್ದರು. 17ನೇ ವಯಸ್ಸಿಗೆ ಚಾಂಪಿಯನ್​ಶಿಪ್​ ಕಿರೀಟ ತಮ್ಮದಾಗಿಸಿಕೊಂಡಿರುವ ನೋಡರ್ಬೆಕ್ ಅಬ್ದುಸಟ್ಟೊರೊವ್ ನಂತರ ವೊಲೊಡರ್ ಮುರ್ಜಿನ್ ಎರಡನೇ ಕಿರಿಯ FIDE ವಿಶ್ವ ರ‍್ಯಾಪಿಡ್ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಕೊನೆರು ಹಂಪಿ ಮೊದಲ ಬಾರಿಗೆ ಮಾಸ್ಕೋದಲ್ಲಿ ಕಂಚಿನ ಪದಕವನ್ನು ಗೆಲ್ಲುವ ಮೂಲಕ 2012 ರ ಆವೃತ್ತಿಯಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದರು. ಅದಾದ ಬಳಿಕ 2019ರಲ್ಲಿ ಅವರು ಜಾರ್ಜಿಯಾದ ಬಟುಮಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ಚೀನಾದ ಲೀ ಟಿಂಗ್ಜಿ ಅವರನ್ನು ಸೋಲಿಸುವ ಮೂಲಕ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು. ಭಾರತೀಯ ಗ್ರ್ಯಾಂಡ್‌ಮಾಸ್ಟರ್ 2023ರ ಆವೃತ್ತಿಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಈ ಸಾಧನೆಗಳ ಹೊರತಾಗಿ, ಕೊನೆರು ಹಂಪಿ ಅವರು 2022ರ ಮಹಿಳಾ ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.