Friday, 3rd January 2025

Indore Horror: ನೆಗಡಿ, ಕೆಮ್ಮಿಗೆ ಚಿಕಿತ್ಸೆ ಪಡೆಯೋ ನೆಪದಲ್ಲಿ ಬಂದು ಡಾಕ್ಟರ್‌ ಮೇಲೆ ಗುಂಡಿನ ದಾಳಿ

Indore Horror

ಭೋಪಾಲ್‌ : ನೆಗಡಿ ಮತ್ತು ಕೆಮ್ಮಿಗೆ ಚಿಕಿತ್ಸೆ ಪಡೆಯುವ ನೆಪದಲ್ಲಿ ಬಂದ ಮೂವರು ದುಷ್ಕರ್ಮಿಗಳು ವೈದ್ಯರೊಬ್ಬರನ್ನು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಶುಕ್ರವಾರ ತಡರಾತ್ರಿ ಮಧ್ಯಪ್ರದೇಶದ (Madhya Pradesh) ಇಂದೋರ್‌ನ ರಾಜೇಂದ್ರ ನಗರದಲ್ಲಿ ನಡೆದಿದೆ. ಘಟನೆ ನಡೆದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (Indore Horror)

ಮೃತಪಟ್ಟ ವೈದ್ಯರನ್ನು ಡಾ. ಸುನೀಲ್‌ ಸಾಹು (30) ಎಂದು ಗುರುತಿಸಲಾಗಿದ್ದು, ಡಿಸೆಂಬರ್ 27 ರ ರಾತ್ರಿ 11:30 ರ ಸುಮಾರಿಗೆ ರೋಗಿಗಳ ಸೋಗಿನಲ್ಲಿ ಬಂದ ಆರೋಪಿಗಳು ವೈದ್ಯರನ್ನು ಭೇಟಿಯಾಗಿ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ತಕ್ಷಣ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಸಂಕಲ್ಪ್ ಆಸ್ಪತ್ರೆಗೆ ಕರೆದೊಯ್ದಲಾಗಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಅನನ್ಯ ಆಸ್ಪತ್ರೆಗೆ ಕಳುಹಿಸಲಾಯಿತು. ಆದರೆ ಅಲ್ಲಿಗೆ ತಲುಪುವ ಮುನ್ನವೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ಕೊಲೆಯ ಬಗ್ಗೆ ಮಾತನಾಡಿದ ಉಪ ಪೊಲೀಸ್ ಆಯುಕ್ತ ವಿನೋದ್ ಕುಮಾರ್ ಮೀನಾ ಪ್ರಕರಣದ ತನಿಖೆ ನಡೆಯುತ್ತಿದ್ದು, ಆರೋಪಿಗಳ ಪತ್ತೆಗೆ ಹಲವು ತಂಡಗಳನ್ನು ರಚಿಸಿದ್ದೇವೆ. ಪ್ರಕರಣದ ತನಿಖೆ ನಡೆಯುತ್ತಿದೆ, ಶೀಘ್ರದಲ್ಲೇ ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಹೇಳಿದ್ದಾರೆ.

ಪೊಲೀಸರು ಸ್ಥಳದಲ್ಲಿದ್ದ ಆಸ್ಪತ್ರೆಯ ಸಿಬ್ಬಂದಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.  ಮೂವರು ವ್ಯಕ್ತಿಗಳು ವೈದ್ಯರ ಕ್ಯಾಬಿನ್‌ಗೆ ಪ್ರವೇಶಿಸಿದ್ದಾರೆ ಮತ್ತು ತನಗೆ ಶಬ್ಧ ಕೇಳಿದೆ ಎಂದು ಅವರು ಪೊಲೀಸರಿಗೆ ತಿಳಿಸಿದರು. ಆರೋಪಿಗಳು ಕ್ಲಿನಿಕ್‌ನಿಂದ ಓಡಿಹೋಗುವುದನ್ನು ಕಾಂಪೌಂಡರ್ ಕೂಡ ನೋಡಿದ್ದಾನೆ. ಆರೋಪಿಗಳು ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನು ನೀಡುವಂತೆ ಒತ್ತಾಯಿಸಿದ್ದರು. ವೈದ್ಯರು ತನ್ನ ವ್ಯಾಲೆಟ್ ಮತ್ತು ಎಟಿಎಂ ಕಾರ್ಡ್ ಅನ್ನು ಆರೋಪಿಗಳಿಗೆ ನೀಡಿದ್ದರು ಎಂದು ವರದಿ ಮಾಡಿತ್ತು.

ಆರೋಪಿಗಳು ನೆಗಡಿ ಮತ್ತು ಕೆಮ್ಮಿನ ಚಿಕಿತ್ಸೆಗೆಂದು ಬಂದಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಪೊಲೀಸ್ ಗುಪ್ತಚರ ಪ್ರಕಾರ, ಆರೋಪಿಗಳು ಕೃತ್ಯ ಎಸಗುವ ಮುನ್ನ ಸುಮಾರು 3-4 ಗಂಟೆಗಳ ಕಾಲ ಸ್ಥಳದಲ್ಲಿದ್ದರು ಎಂಬುದು ಗಮನಕ್ಕೆ ಬಂದಿದೆ. ಹೀಗಾಗಿ ಇದೊಂದು ಪೂರ್ವಯೋಜಿತ ಕೊಲೆಯಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತ್ಯೇಕ ಘಟನೆಯಲ್ಲಿ ವ್ಯಕ್ತಿಯೊಬ್ಬ ಹೆಂಡತಿ, ಮಗುವನ್ನು ಕೊಂದು ಪೋಷಕರ ಮೇಲೆ ಹಲ್ಲೆ ನಡೆಸಿ ತಾನೂ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ. ಸ್ಮಿತ್ ಜಿಯಾನಿ ಎಂಬ ವ್ಯಕ್ತಿ ತನ್ನ ಕುಟುಂಬಕ್ಕೆ ಚಾಕುವಿನಿಂದ ಹಲ್ಲೆ ನಡೆಸಿ, ಪತ್ನಿ ಮತ್ತು ಮಗುವನ್ನು ಕೊಂದು, ಪೋಷಕರನ್ನು ಗಂಭೀರವಾಗಿ ಗಾಯಗೊಳಿಸಿದ್ದಾನೆ. ನಂತರ ಸ್ಮಿತ್ ತನ್ನ ಕುತ್ತಿಗೆಯನ್ನು ಸೀಳಿಕೊಂಡು ತನ್ನ ಜೀವನವನ್ನು ಅಂತ್ಯಗೊಳಿಸಲು ಪ್ರಯತ್ನಿಸಿದ್ದಾನೆ.

ಸ್ಮಿತ್ ಮತ್ತು ಅವರ ಪೋಷಕರು ತಮ್ಮ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರೆ, ಅವರ ಪತ್ನಿ ಮತ್ತು ಮಗು ಮೃತಪಟ್ಟಿದ್ದಾರೆ. ಘಟನೆಯ ಕುರಿತು ಸಾರ್ಥನಾ ಪೊಲೀಸರು ತನಿಖೆ ಆರಂಭಿಸಿದ್ದು, ಈ ದುರಂತ ಕೃತ್ಯಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ : Lawrence Bishnoi: ಕಾನೂನು ಪದವೀಧರ ಲಾರೆನ್ಸ್ ಬಿಷ್ಣೋಯ್ ಅಂತಾರಾಷ್ಟ್ರೀಯ ಗ್ಯಾಂಗ್‌ಸ್ಟರ್‌ ಆಗಿದ್ದು ಹೇಗೆ?