Saturday, 4th January 2025

Plane Crash: ಮಾನವ ಇತಿಹಾಸದಲ್ಲಿಯೇ ಅತ್ಯಂತ ಭೀಕರ ವಿಮಾನ ದುರಂತಗಳಿವು

Plane Crash

ನವದೆಹಲಿ: ಕಳೆದ ಒಂದು ವಾರದಲ್ಲಿಯೇ ಎರಡು ಭೀಕರ ವಿಮಾನ ಅಪಘಾತಕ್ಕೆ ಜಗತ್ತು ಸಾಕ್ಷಿಯಾಗಿದೆ. ಕಳೆದ ಕೆಲ ವರ್ಷಗಳಲ್ಲಿ, ಪ್ರಪಂಚವು 720 ವಿಮಾನ ಅಪಘಾತಗಳಾಗಿವೆ ಎಂದು ವರದಿಯಾಗಿದೆ. ಜಗತ್ತಿನಲ್ಲಿ ಯಾವುದು ಅತ್ಯಂತ ಭೀಕರ ವಿಮಾನ ಅಪಘಾತವಾಗಿದೆ ಎಂಬುದರ ಮಾಹಿತಿ ಇಲ್ಲಿದೆ. (Plane Crash)

ಟೆನೆರಿಫ್ ಏರ್‌ಪೋರ್ಟ್ ಡಿಸಾಸ್ಟರ್ (1977)

ಮಾರ್ಚ್ 27, 1977 ರಂದು ಸಂಭವಿಸಿದ ಟೆನೆರಿಫ್ ವಿಮಾನ ನಿಲ್ದಾಣದ ದುರಂತವು ಇತಿಹಾಸದಲ್ಲಿ ಮಾರಣಾಂತಿಕ ಅಪಘಾತವಾಗಿದೆ. ದುರಂತದಲ್ಲಿ ಸುಮಾರು 583 ಪ್ರಯಾಣಿಕರು ಮೃತಪಟ್ಟಿದ್ದರು. ಸಂಪೂರ್ಣ ಲೋಡ್ ಆಗಿದ್ದಎರಡು ಬೋಯಿಂಗ್ 747 ವಿಮಾನಗಳು ರನ್‌ವೇಯಲ್ಲಿ ಡಿಕ್ಕಿ ಹೊಡೆದುಕೊಂಡಿದ್ದವು. ಅಟ್ಲಾಂಟಿಕ್ ದ್ವೀಪವಾದ  ಟೆನೆರಿಫ್‌  ದ್ವೀಪದ ಉತ್ತರದಲ್ಲಿರುವ ಸಣ್ಣ ವಿಮಾನ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿತ್ತು. ರನ್‌ ವೇ ನಲ್ಲಿ ದಟ್ಟ ಮಂಜು ಆವರಿಸಿದ್ದರಿಂದ ಈ ಅವಫಾತ ಸಂಭವಿಸಿದೆ ಎಂದು ಹೇಳಲಾಗಿದೆ.

ಮಲೇಷ್ಯಾ ಏರ್‌ಲೈನ್ಸ್ ಫ್ಲೈಟ್ 17 (2014)

ಜುಲೈ 17, 2014 ರಂದು ಮಲೇಷ್ಯಾ ಏರ್‌ಲೈನ್ಸ್ ಫ್ಲೈಟ್ 17 (MH17/MAS17) ಆಮ್‌ಸ್ಟರ್‌ಡ್ಯಾಮ್‌ನಿಂದ ಕೌಲಾಲಂಪುರ್‌ಗೆ ಪೂರ್ವ ಉಕ್ರೇನ್ ಮೇಲೆ ಹಾರುತ್ತಿದ್ದಾಗ ಈ ವಿಮಾನವನ್ನು ಹೊಡೆದುರುಳಿಸಲಾಗಿತ್ತು. ಘಟನೆಯಲ್ಲಿ ವಿಮಾನದಲ್ಲಿದ್ದ 283 ಪ್ರಯಾಣಿಕರು ಮತ್ತು 15 ಸಿಬ್ಬಂದಿ ಮೃತಪಟ್ಟಿದ್ದರು. ವಿಮಾನ ರಷ್ಯಾ-ಉಕ್ರೇನ್ ಗಡಿಯಿಂದ ಸುಮಾರು 50 ಕಿಮೀ ದೂರದಲ್ಲಿ ಬಿದ್ದಿತ್ತು.

 ಏರ್ ಇಂಡಿಯಾ ಫ್ಲೈಟ್ 182 (1985)

23 ಜೂನ್ 1985 ರಂದು, ಕೆನಡಾದಿಂದ ಲಂಡನ್ ಮೂಲಕ ಭಾರತಕ್ಕೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನವು ಐರಿಶ್ ಕರಾವಳಿಯಲ್ಲಿ ಅಪಘಾತ ಹೊಂದಿತ್ತು. ಅದರಲ್ಲಿದ್ದ ಎಲ್ಲಾ 329 ಜನರು ಮೃತಪಟ್ಟಿದ್ದರು. ಸೂಟ್‌ಕೇಸ್‌ನಲ್ಲಿ ಬಾಂಬ್ ಇಟ್ಟು ಸ್ಪೋಟಿಸಲಾಗಿತ್ತು. ಮೃತಪಟ್ಟವರಲ್ಲಿ 268 ಕೆನಡಾದ ನಾಗರಿಕರು ಹಾಗೂ 24 ಭಾರತೀಯರಿದ್ದರು. ಘಟನೆಯಲ್ಲಿ ಸಮುದ್ರದಿಂದ 131 ಶವಗಳನ್ನು ಮಾತ್ರ ಹೊರೆತೆಗೆಯಲಾಗಿದೆ.

ಜಪಾನ್ ಏರ್ಲೈನ್ಸ್ ಫ್ಲೈಟ್ 123 (1985)

ಇದನ್ನು ಮೌಂಟ್ ಒಸುಟಾಕಾ ವಿಮಾನಯಾನ ದುರಂತ ಎಂದೂ ಕರೆಯುತ್ತಾರೆ. 1985 ರಂದು ಜಪಾನ್‌ನಲ್ಲಿ ಟೋಕಿಯೊದ ಹನೆಡಾ ವಿಮಾನ ನಿಲ್ದಾಣದಿಂದ ಹೊರಟ ವಿಮಾನ ಒಸಾಕಾದಲ್ಲಿ ಲ್ಯಾಂಡಿಂಗ್‌ ಮಾಡಬೇಕಿತ್ತು. ವ್ಯತಿರಿಕ್ತವಾದ ಹವಾಮಾನದ ಕಾರಣದಿಂದಾಗಿ ವಿಮಾನವು ಟೋಕಿಯೊದ ವಾಯುಪ್ರದೇಶವನ್ನು ತೊರೆದು 24,000 ಅಡಿ (7,300 ಮೀಟರ್) ಎತ್ತರಕ್ಕೆ ಏರಿತು. ಪೈಲೆಟ್‌ ನಿಯಂತ್ರಣ ಕಳೆದು ಕೊಂಡು ವಾಪಾಸ್‌ ಟೋಕಿಯೋಗೆ ಬರುವಂತೆ ಸೂಚಿಸಲಾಗಿತ್ತು. ಆದರೆ ಟೇಕ್ ಆಫ್ ಆದ ಸುಮಾರು 45 ನಿಮಿಷಗಳ ನಂತರ, ವಿಮಾನವು ಮೌಂಟ್ ಒಸುಟಾಕಾ ಬಳಿಯ ಮೌಂಟ್ ಟಕಮಗಹರಾಕ್ಕೆ ಅಪ್ಪಳಿಸಿತು. ಘಟನೆಯಲ್ಲಿ  520 ಜನರು ಮೃತಪಟ್ಟಿದ್ದರು.

ಸೌದಿ ಅರೇಬಿಯನ್ ಫ್ಲೈಟ್ 763 ಮತ್ತು ಕಝಾಕಿಸ್ತಾನ್ ಏರ್ಲೈನ್ಸ್ ಫ್ಲೈಟ್ 1907 (1996)

1996 ರ ನವೆಂಬರ್ 12 ರಂದು ಭಾರತದಲ್ಲಿ ಹೊಸ ದೆಹಲಿಯ ಪಶ್ಚಿಮದಲ್ಲಿರುವ ಚಾರ್ಖಿ ದಾದ್ರಿ ಗ್ರಾಮದ ಬಳಿ ಎರಡು ವಿಮಾನಗಳು ಡಿಕ್ಕಿಯಾಗಿದ್ದವು. ಸೌದಿ ಅರೇಬಿಯನ್ ಏರ್‌ಲೈನ್ಸ್ ಫ್ಲೈಟ್ 763 ದೆಹಲಿಯಿಂದ ಸೌದಿ ಅರೇಬಿಯಾದ ಧಹ್ರಾನ್‌ಗೆ ಹೋಗುತ್ತಿದ್ದರೆ, ಕಝಾಕಿಸ್ತಾನ್ ಏರ್ಲೈನ್ಸ್ ಫ್ಲೈಟ್ 1907  ವಿಮಾನ ಚಿಮ್‌ಕೆಂಟ್‌ನಿಂದ ದೆಹಲಿಗೆ ಬರುತ್ತಿತ್ತು. ಎರಡರ ಮಧ್ಯೆ ಡಿಕ್ಕಿ ಸಂಭವಿಸಿ ಎರಡು ವಿಮಾನದಲ್ಲಿದ್ದ ಒಟ್ಟು 349 ಮೃತಪಟ್ಟಿದ್ದರು.

ನ್ಯೂಯಾರ್ಕ್ ದುರಂತ (1960)

 ಡಿಸೆಂಬರ್ 16, 1960 ರಂದು ಯುನೈಟೆಡ್ ಏರ್‌ಲೈನ್ಸ್ ಡೌಗ್ಲಾಸ್ DC-9 ಮತ್ತು ಟ್ರಾನ್ಸ್ ವರ್ಲ್ಡ್ ಏರ್‌ಲೈನ್ಸ್ ಲಾಕ್‌ಹೀಡ್ L-1049 (TWA) ನಡುವೆ ಘರ್ಷಣೆ ಸಂಭವಿಸಿತು. TWA ವಿಮಾನವು ಲಾ ಗಾರ್ಡಿಯಾ ವಿಮಾನ ನಿಲ್ದಾಣಕ್ಕೆ ಹೋಗುತ್ತಿತ್ತು ಆದರೆ ಯುನೈಟೆಡ್ ಏರ್‌ಲೈನ್ಸ್ ವಿಮಾನವು ಐಡಲ್‌ವೈಲ್ಡ್‌ನಲ್ಲಿ ಇಳಿಯಲು ಹೊರಟಿತ್ತು. ಪೈಲೆಟ್‌ಗಳ ಸೂಕ್ತ ಸಂವಹನ ಕೊರತೆಯಿಂದಾಗಿ ಎರಡು ವಿಮಾನಗಳು ಡಿಕ್ಕಿ ಆದ ಪರಿಣಾಮ 128 ಪ್ರಯಾಣಿಕರು ಮೃತಪಟ್ಟಿದ್ದರು.

ಇರಾನ್ ಏರ್ ಫ್ಲೈಟ್ 655 (1988)

ಜುಲೈ 3, 1988 ರಂದು ಟೆಹ್ರಾನ್‌ನಿಂದ ದುಬೈಗೆ ಹಾರುತ್ತಿದ್ದ ನಾಗರಿಕ ವಿಮಾನಯಾನವನ್ನು ಹೊಡೆದುರುಳಿಸಲಾಯಿತು. ಘಟನೆಯಲ್ಲಿ 290 ಮೃತಪಟ್ಟಿದ್ದಾರೆ. ಅಮೆರಿಕದ ವಿನ್ಸೆನ್ನೆಸ್‌ನಿಂದ ಕ್ಷಿಪಣಿಗಳನ್ನು ಹಾರಿಸಿ ಇದರ ಪತನವಾಗಿತ್ತು. ವಿನ್ಸೆನ್ನೆಸ್ ಇದನ್ನು F-14A ಟಾಮ್‌ಕ್ಯಾಟ್ ಯುದ್ಧ ವಿಮಾನ ಎಂದು ತಪ್ಪಾಗಿ ಗ್ರಹಿಸಿದ್ದರಿಂದ ಈ ದುರ್ಘಟನೆ ಸಂಭವಿಸಿತ್ತು.

ಅಮೇರಿಕನ್ ಏರ್ಲೈನ್ಸ್ ಫ್ಲೈಟ್ 191 (1979)

ಅಕ್ಟೋಬರ್ 31, 1979 ರಂದು, ವೆಸ್ಟರ್ನ್ ಏರ್‌ಲೈನ್ಸ್ ಫ್ಲೈಟ್ 2605 ಆಗಿ ಹಾರುತ್ತಿದ್ದ DC-10 ಮೆಕ್ಸಿಕೊ ನಗರದಲ್ಲಿ ಅಪಘಾತಕ್ಕೀಡಾಯಿತು. ಚಿಕಾಗೋದ ರನ್‌ವೇ 32R ನಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಅದರ ಎಡ ಎಂಜಿನ್ ಬೇರ್ಪಟ್ಟಾಗ ಅಪಘಾತಕ್ಕೀಡಾಯಿತು.  ವಿಮಾನದಲ್ಲಿ 258 ಪ್ರಯಾಣಿಕರು ಮತ್ತು 13 ಸಿಬ್ಬಂದಿಗಳು ಮೃತಪಟ್ಟಿದ್ದರು. ಇದು ಯುನೈಟೆಡ್ ಸ್ಟೇಟ್ಸ್ನಲ್ಲಿ ಸಂಭವಿಸಿದ ಅತ್ಯಂತ ಮಾರಣಾಂತಿಕ ವಾಯುಯಾನ ಅಪಘಾತಗಳಲ್ಲಿ ಒಂದಾಗಿದೆ.

ಮಂಗಳೂರು ವಿಮಾನ ದುರಂತ

ಮೇ 22, 2010ರಂದು ಏರ್‌ ಇಂಡಿಯಾ ವಿಮಾನವು ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಗಿತ್ತು. ಈ ದುರಂತದಲ್ಲಿ 166 ಜನ ಪ್ರಯಾಣಿಕರು ಅಸುನೀಗಿದ್ದರು. ಅಲ್ಲದೇ ಎಂಟು ಪ್ರಯಾಣಿಕರು ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದಿದ್ದರು. ಇದು ಕರ್ನಾಟಕದಲ್ಲಿ ನಡೆದ ಅತೀ ಘೋರ ವಾಯು ದುರಂತ ಎಂಬ ಕುಖ್ಯಾತಿಯನ್ನು ಪಡೆದಿದೆ. ದುರ್ಗಮ ಪ್ರದೇಶದಲ್ಲಿ ಲ್ಯಾಂಡಿಂಗ್‌ ಸಮಯದಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ಪೈಲಟ್‌ ನಿರ್ಲಕ್ಷ್ಯ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂಬುದು ತನಿಖೆಯಿಂದ ತಿಳಿದು ಬಂದಿತ್ತು.

ಒಟ್ಟಿನಲ್ಲಿ ಮಾನವ ನಾಗರಿಕತೆಯ ಇತಿಹಾಸದಲ್ಲಿ ಹಲವು ಘೋರ ವಿಮಾನ ದುರಂತಗಳು ಸಂಭವಿಸಿದ್ದು, ಕಳೆದೊಂದು ವಾರದ ಅವಧಿಯಲ್ಲಿ ಕಝಕಿಸ್ತಾನ ಮತ್ತು ದಕ್ಷಿಣ ಕೊರಿಯಾದಲ್ಲಿ ಸಂಭವಿಸಿದ ವಿಮಾನ ದುರಂತಗಳು, ಈ ವಿಮಾನ ದುರಂತಗಳ ನೋವಿನ ಕಥೆಯನ್ನು ಮತ್ತೆ ನೆನಪಿಗೆ ತಂದಿವೆ.

ಈ ಸುದ್ದಿಯನ್ನೂ ಓದಿ : Kazakhstan plane crash: ಕಜಕಿಸ್ತಾನದ ವಿಮಾನ ಪತನಕ್ಕೂ ಮುನ್ನ ಏನಾಗಿತ್ತು? ವಿಡಿಯೋ ವೈರಲ್‌