ಶಿರಾ ತಾ.ಪಂ. ಸಭಾಂಗಣದಲ್ಲಿ ಕಂಪ್ಯೂಟರ್ ಆಪರೇಟರ್ ದಿನಾಚರಣೆ
ಶಿರಾ: ಪ್ರಸ್ತುತ ಸರ್ಕಾರಿ ವ್ಯವಸ್ಥೆಯಲ್ಲಿ ಸಾರ್ವಜನಿಕರ ಮನೆ ಬಾಗಿಲಿಗೆ ಸೇವೆ ಸಲ್ಲಿಸುತ್ತಿರುವ ಇಲಾಖೆಗಳಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯೇ ಅತ್ಯಂತ ಪ್ರಮಖ ಇಲಾಖೆಯಾಗಿದ್ದು, ಗ್ರಾಮ ಪಂಚಾ ಯಿತಿಯ ಹಂತದಲ್ಲಿ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅನುಷ್ಟಾನದಲ್ಲಿ ಮತ್ತು ಪ್ರಗತಿ ಸಾಧಿಸುವಲ್ಲಿ ಕಂಪ್ಯೂಟರ್ ಆಪರೇಟರ್ ಅವರ ಪಾತ್ರವು ನಿರ್ಣಾಯಕವಾಗಿದೆ ಎಂದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ಆರ್. ಹೇಳಿದರು.
ಅವರು ನಗರದ ತಾ.ಪಂ. ಸಭಾಂಗಣದಲ್ಲಿ ಕಂಪ್ಯೂಟರ್ ಆವಿಷ್ಕಾರ ಮಾಡಿದ ವಿಜ್ಞಾನಿ ಚಾರ್ಲ್ಸ್ ಬ್ಯಾಬೇಜ್ ಹುಟ್ಟಿದ ದಿನವಾದ ಅಂಗವಾಗಿ ಏರ್ಪಡಿಸಿದ್ದ ಕಂಪ್ಯೂಟರ್ ಆಪರೇಟರ್ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಸ್ಥಳೀಯ ಮಟ್ಟದಲ್ಲೇ ಗ್ರಾಮ ಪಂಚಾಯಿತಿ ಕಛೇರಿಗಳಿದ್ದು, ಜನರ ಕಷ್ಟಗಳಿಗೆ ತಕ್ಷಣಕ್ಕೆ ಸ್ಫಂದಿಸುವ ಅವಕಾಶವಿದೆ. ಆದ್ದರಿಂದ ಗ್ರಾ.ಪಂ. ಕರವಸೂಲಿಗಾರರು, ಡಿಇಓ ಅವರು ಸಹ ಉತ್ತಮ ರೀತಿಯಲ್ಲಿ ಕೆಲಸ ಮಾಡಿದರೆ ಆನ್ ಲೈನ್ ಪ್ರಗತಿಗಳು ಸಹ ಉತ್ತಮವಾಗಿರುತ್ತವೆ.
ಗ್ರಾಮೀಣ ಬಡ ಜನರ ಕಣ್ಣೀರನ್ನು ಒರೆಸುವ ಶಕ್ತಿ ನಿಮಗಿದ್ದೂ, ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಕಂಪ್ಯೂಟರ್ ಆಪರೇಟರ್ ಕೆಲಸ ಮಾಡಿ, ಎಂತಹ ಸಂದರ್ಭದಲ್ಲೂ ಸಹ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಿಬ್ಬಂದಿ ಡಾಟಾ ಎಂಟ್ರಿ ಆಪರೇಟರ್ ಜೊತೆಗೆ ನಿಲ್ಲುತ್ತದೆ. ಎಲ್ಲರೂ ಸೇರಿ ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ತಾವರೆಕೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗರಾಜು ಆರ್. ಹಾಗೂ ನಿರ್ದೇಶಕರ ಸ್ಥಾನಕ್ಕೆ ಆಯ್ಕೆಯಾದ ಬರಗೂರು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಸ್.ಶಿವರಾಮಯ್ಯ ಹಾಗೂ ಕಂಪ್ಯೂಟರ್ ಆಪರೇಟರ್ಗಳಾದ ಉಷಾ ಎನ್., ಪಾರ್ವತಮ್ಮ, ಜಗದೀಶ್, ಹಾಗೂ ಕರವಸೂಲಿಗಾರರ ಹುದ್ದೆಯಿಂದ ಕಾರ್ಯದರ್ಶಿ-ಗ್ರೇಡ್ ೨ ಹಾಗೂ ದ್ವೀತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗೆ ಪದೋನ್ನತಿ ಹೊಂದಿದದವರಿಗೆ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಾದ ಕೆ.ಜಿ.ಲೋಕೇಶ್, ಆರ್. ರಂಗನಾಥ, ಕನಕಪ್ಪ ಹನುಮಪ್ಪ ಮೇಲಸಕ್ರಿ, ರಾಮಚಂದ್ರಪ್ಪ, ಆರ್.ಅನಿಲ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷರಾದ ವೆಂಕಟೇಶ್ ಮೂರ್ತಿ, ಡಾಟಾ ಎಂಟ್ರಿ ಆಪರೇಟರ್ ಸಂಘದ ಜಿಲ್ಲಾಧ್ಯಕ್ಷರಾದ ವಿಶ್ವನಾಥ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಸೇರಿದಂತೆ ಡಾಟಾ ಎಂಟ್ರಿ ಆಪರೇಟರ್ ಅವರು ಹಾಜರಿದ್ದರು.