Saturday, 4th January 2025

AUS vs IND: ದಾಖಲೆ ಬರೆದ ಭಾರತ-ಆಸೀಸ್‌ ಬಾಕ್ಸಿಂಗ್ ಡೇ ಟೆಸ್ಟ್‌

ಮೆಲ್ಬರ್ನ್‌: ಭಾರತ ಮತ್ತು ಆಸ್ಟ್ರೇಲಿಯಾ(AUS vs IND) ನಡುವಣ ಬಾಕ್ಸಿಂಗ್‌ ಡೇ ಟೆಸ್ಟ್‌(Boxing Day Test) ಪಂದ್ಯದ ನಾಲ್ಕನೇ ದಿನದಾಟದಲ್ಲಿ ನೂತನ ದಾಖಲೆಯೊಂದು ನಿರ್ಮಾಣವಾಗಿದೆ. ಎಂಸಿಜಿಯಲ್ಲಿ ನಾಲ್ಕನೇ ದಿನವಾದ ಭಾನುವಾರ ಒಟ್ಟು 43,867 ಮಂದಿ ಹಾಜರಿದ್ದರು. ಹಿಂದಿನ ಮೂರು ದಿನಗಳ ಹಾಜರಾತಿಯನ್ನು ಸೇರಿಸಿ, ಒಟ್ಟು 299,329 ಜನರು ಪಂದ್ಯಕ್ಕೆ ಹಾಜಾರಾದದ್ದು ಇದುವರೆಗಿನ ಗರಿಷ್ಠ ದಾಖಲೆ ಎನಿಸಿಕೊಂಡಿದೆ. ಇನ್ನೂ ಒಂದು ದಿನ ಬಾಕಿ ಇರುವ ಕಾರಣ ಈ ಸಂಖ್ಯೆಯಲ್ಲಿ ಹೆಚ್ಚಳ ನಿಶ್ಚಿತ.

ಬಾಕ್ಸಿಂಗ್ ಡೇ ಟೆಸ್ಟ್‌ಗೆ ಹಿಂದಿನ ಅತಿ ಹೆಚ್ಚು ಹಾಜರಾತಿ 2013 ರಲ್ಲಿ ದಾಖಲಾಗಿತ್ತು. ಆಸೀಸ್‌ ಮತ್ತು ಇಂಗ್ಲೆಂಡ್ ವಿರುದ್ಧದ ಆ್ಯಶಸ್‌ ಸರಣಿಯ ಪಂದ್ಯವಾಗಿತ್ತು. ಒಟ್ಟು 271,855 ಮಂದಿ ಹಾಜರಾಗಿದ್ದರು. ಕ್ರಿಸ್ಮಸ್ ನಂತರದ ದಿನ ನಡೆಯುವ ಕ್ರಿಕೆಟ್‌ ಪಂದ್ಯವನ್ನು ಬಾಕ್ಸಿಂಗ್‌ ಡೇ ಪಂದ್ಯ ಎಂದು ಕರೆಯಲಾಗುತ್ತದೆ. ಬಾಕ್ಸಿಂಗ್ ಡೇ ಟೆಸ್ಟ್‌ಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಸಾಂಪ್ರದಾಯಿಕ ಮತ್ತು ಮಹತ್ವದ ಭಾಗವಾಗಿದೆ. ವಿಶೇಷವಾಗಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಂತಹ ದೇಶಗಳಲ್ಲಿ.

ಇದನ್ನೂ ಓದಿ AUS vs IND: ಬುಮ್ರಾ, ಸಿರಾಜ್‌ ಘಾತಕ ದಾಳಿಯ ಮಧ್ಯೆಯೂ ಬೃಹತ್‌ ಮುನ್ನಡೆ ಸಾಧಿಸಿದ ಆಸೀಸ್‌

ನಾಲ್ಕನೇ ದಿನವಾದ ಭಾನುವಾರ ಬೆಳಗ್ಗೆ 9 ವಿಕೆಟ್‌ಗೆ 358 ರನ್ ಗಳಿಂದ ಆಟ ಆರಂಭಿಸಿದ ಭಾರತ ಕೇವಲ 11 ರನ್‌ ಬಾರಿಸಲಷ್ಟೇ ಶಕ್ತವಾಗಿ 369 ರನ್‌ಗಳಿಗೆ ಆಲೌಟ್‌ ಆಯಿತು. 105 ರನ್‌ ಗಳಿಸಿದ್ದ ಶತಕ ವೀರ ನಿತೀಶ್‌ ಕುಮಾರ್‌ ರೆಡ್ಡಿ ಅಂತಿಮವಾಗಿ 114 ರನ್‌ಗೆ ವಿಕೆಟ್‌ ಕಳೆದುಕೊಂಡರು. ಇವರ ವಿಕೆಟ್‌ ಪತನದೊಂದಿಗೆ ಭಾರತದ ಇನಿಂಗ್ಸ್‌ ಕೂಡ ಕೊನೆಗೊಂಡಿತು. ಮೊಹಮ್ಮದ್‌ ಸಿರಾಜ್‌ ಅಜೇಯ 4 ರನ್‌ ಗಳಿಸಿದರು.

ದ್ವಿತೀಯ ಇನಿಂಗ್ಸ್‌ ಬ್ಯಾಟಿಂಗ್‌ ಆರಂಭಿಸಿದ ಆಸ್ಟ್ರೇಲಿಯಾ ಆರಂಭಿಕ ಆಘಾತದ ಹೊರತಾಗಿಯೂ ಕೆಲ ಕ್ರಮಾಂಕದಲ್ಲಿ ಬ್ಯಾಟರ್‌ಗಳು ನಡೆಸಿದ ದಿಟ್ಟ ಹೋರಾಟದ ನೆರವಿನಿಂದ 9 ವಿಕೆಟ್‌ಗೆ 228 ರನ್‌ ಬಾರಿಸಿ ಒಟ್ಟಾರೆ 333 ರನ್‌ ಮುನ್ನಡೆಯೊಂದಿಗೆ ಅಂತಿಮ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದೆ. ಸದ್ಯದ ಸ್ಥಿತಿ ನೋಡುವಾಗ ಪಂದ್ಯ ಡ್ರಾ ಗೊಳ್ಳುವ ಸಾಧ್ಯತೆ ಕಂಡುಬಂದಿದೆ. ಭಾರತ ನಾಳೆ(ಸೋಮವಾರ) ನಿಂತು ಆಡಿದರೆ ಮಾತ್ರ.