Saturday, 4th January 2025

Canadian Plane Fire: ದ.ಕೊರಿಯಾ ಬೆನ್ನಲ್ಲೇ ಕೆನಡಾದಲ್ಲೂ ಭಾರೀ ವಿಮಾನ ದುರಂತ-ಲ್ಯಾಂಡಿಂಗ್‌ ವೇಳೆ ಬೆಂಕಿ!

ಕೆನಡಾ: ದಕ್ಷಿಣ ಕೊರಿಯಾದಲ್ಲಿ ಬರೋಬ್ಬರಿ 178 ಪ್ರಯಾಣಿಕರನ್ನು ಬಲಿಪಡೆದ ವಿಮಾನ ದುರಂತದ ಬೆನ್ನಲ್ಲೇ ಕೆನಡಾದಲ್ಲೂಇಂತಹದ್ದೇ ಒಂದು ಭೀಕರ ಅವಘಡ ಸಂಭವಿಸಿದೆ. ಕೆನಡಾದ ಹ್ಯಾಲಿಫ್ಯಾಕ್ಸ್(Halifax) ವಿಮಾನ ನಿಲ್ದಾಣದಲ್ಲಿ ಏರ್ ಕೆನಡಾ( Air Canada) ವಿಮಾನ ಲ್ಯಾಂಡಿಂಗ್ ವೇಳೆ ರನ್ ವೇಯಿಂದ(Runway) ಜಾರಿ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯ ಭಯಾನಕ ದೃಶ್ಯವು ಈಗ ಸಾಕಷ್ಟು ವೈರಲ್ ಆಗಿದೆ(Viral News). ಸೇಂಟ್ ಜಾನ್ಸ್‌ನಿಂದ ಬರುತ್ತಿದ್ದ ʼಏರ್ ಕೆನಡಾ ವಿಮಾನ 2259ʼ ಲ್ಯಾಂಡಿಂಗ್ ಗೆ ಮೊದಲು ರನ್‌ ವೇಯಿಂದ ಕೆಳಕ್ಕೆ ಜಾರಿದ್ದು, ಬಳಿಕ ಬೆಂಕಿ ಕಾಣಿಸಿಕೊಂಡಿದೆ ಎಂಬ ಮಾಹಿತಿಯಿದೆ. ಅದೃಷ್ಟವಶಾತ್‌ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ(Canadian Plane Fire)

ಕೆನಡಾ ದೇಶದ ಟೈಮ್‌ಲೈನ್‌ ಅನ್ವಯ ರಾತ್ರಿ ಸರಿ ಸುಮಾರು 9.30 ಗಂಟೆಗೆ ಈ ಘಟನೆ ಸಂಭವಿಸಿದೆ. ವಿಮಾನದ ಲ್ಯಾಂಡಿಂಗ್ ವೇಳೆ ಗೇರ್ ವೈಫಲ್ಯದಿಂದಾಗಿ ಘಟನೆ ನಡೆದಿದೆ ಎನ್ನಲಾಗಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ರಕ್ಷಣಾ ಸಿಬ್ಬಂದಿಗಳು ತುರ್ತು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಮುಂಜಾಗೃತಾ ಕ್ರಮವಾಗಿ ಕೆನಡಾದ ಹ್ಯಾಲಿಫ್ಯಾಕ್ಸ್ ವಿಮಾನ ನಿಲ್ದಾಣದಲ್ಲಿನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೋವಾ ಸ್ಕಾಟಿಯಾ RCMP ಸೇರಿದಂತೆ ತುರ್ತು ಸೇವೆಗಳನ್ನು ತಕ್ಷಣದಲ್ಲೇ ಆರಂಭಿಸಲಾಗಿದೆ. ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ವೈದ್ಯಕೀಯ ವರದಿಗಾಗಿ ಹ್ಯಾಂಗರ್‌ಗೆ ಸಾಗಿಸಲಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ವಿವರಿಸಿದ್ದಾರೆ. ಲ್ಯಾಂಡಿಂಗ್ ಗೇರ್ ವೈಫಲ್ಯದ ಕಾರಣ ತನಿಖೆಯಾಗುತ್ತಿದೆ. ವಾಯುಯಾನ ಅಧಿಕಾರಿಗಳು ಮತ್ತು ಏರ್ ಕೆನಡಾ ಪ್ರತಿನಿಧಿಗಳು ಅವಘಡದ ಕಾರಣಗಳನ್ನು ಹುಡುಕುವ ಪ್ರಯತ್ನದಲ್ಲಿದ್ದಾರೆ.

ಸ್ಕಿಡ್‌ ಆದ ವಿಮಾನ

ವಿಮಾನವು ಎಡಕ್ಕೆ ಸುಮಾರು 20-ಡಿಗ್ರಿ ಕೋನದಲ್ಲಿ ವಾಲಿದ್ದು, ವಿಮಾನದ ರೆಕ್ಕೆ ಪಾದಚಾರಿ ಮಾರ್ಗದ ಉದ್ದಕ್ಕೂ ಸ್ಕಿಡ್ ಆಗಿದೆ. ಅಪಘಾತದ ಶಬ್ದವನ್ನು ನಾವು ಕೇಳಿದ್ದೇವೆ” ಎಂದು ಪ್ರಯಾಣಿಕರೊಬ್ಬರು ಕೆನಡಾದ ಸುದ್ದಿ ವಾಹಿನಿಗೆ ಮಾಹಿತಿ ನೀಡಿದ್ದಾರೆ. ವಿಮಾನದ ಸಾಮರ್ಥ್ಯವು ಸುಮಾರು 80 ಪ್ರಯಾಣಿಕರು ಎಂದು ಅಂದಾಜಿಸಲಾಗಿದೆ, ಅವಘಡದ ಸಮಯದಲ್ಲಿ ಎಷ್ಟು ಪ್ರಯಾಣಿಕರು ಇದ್ದರು ಎಂಬ ಸಂಖ್ಯೆಯನ್ನುಈವರೆಗೂ ದೃಢೀಕರಿಸಲಾಗಿಲ್ಲ ಎನ್ನಲಾಗಿದೆ.

ಇತ್ತೀಚೆಗಷ್ಟೇ ಬ್ಯಾಂಕಾಕ್‌ನಿಂದ ದಕ್ಷಿಣ ಕೊರಿಯಾದ ಮುವಾನ್‌ಗೆ 181 ಜನರನ್ನು ಹೊತ್ತೊಯ್ಯುತ್ತಿದ್ದ ಜೆಜು ಏರ್ ವಿಮಾನವು ಲ್ಯಾಂಡಿಂಗ್ ಸಮಯದಲ್ಲಿ ಅಪಘಾತಗೊಂಡಿತ್ತು. ಪರಿಣಾಮವಾಗಿ ವಿಮಾನದಲ್ಲಿದ್ದ 179 ಜನರು ದಾರುಣವಾಗಿ ಮೃತಪಟ್ಟಿದ್ದರು.

ಈ ಸುದ್ದಿಯನ್ನೂ ಓದಿ: Dolly Dhananjay: ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಡಾಲಿ-ಧನ್ಯತಾ!