Saturday, 4th January 2025

Allu Arjun: ‘ಪುಷ್ಪ 2’ ಯಶಸ್ಸಿನ ಬೆನ್ನಲ್ಲೇ ಅಲ್ಲು ಅರ್ಜುನ್‌ ಮತ್ತೆ ಬ್ಯುಸಿ; 4ನೇ ಬಾರಿ ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್‌ ಸಿನಿಮಾದಲ್ಲಿ ನಟನೆ

Allu Arjun

ಹೈದರಾಬಾದ್‌: ಟಾಲಿವುಡ್‌ ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌ (Allu Arjun) ಸದ್ಯ ಪ್ಯಾನ್‌ ಇಂಡಿಯಾ ಚಿತ್ರ ʼಪುಷ್ಪ 2ʼ (Pushpa 2) ಗೆಲುವಿನ ಸಂಭ್ರಮದಲ್ಲಿದ್ದಾರೆ. ಡಿ. 5ರಂದು ತೆರೆಕಂಡ ಈ ಚಿತ್ರ ವರ್ಷಾಂತ್ಯದಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸಿದೆ. ವಿವಿಧ ದಾಖಲೆಗಳನ್ನು ಬ್ರೇಕ್‌ ಮಾಡಿ ಮುನ್ನುಗ್ಗುತ್ತಿರುವ ‘ಪುಷ್ಪ 2’ ಈಗಾಗಲೇ ಈ ವರ್ಷ ಅತೀ ಹೆಚ್ಚು ಗಳಿಸಿದ ಭಾರತೀಯ ಚಿತ್ರ ಎನಿಸಿಕೊಂಡಿದೆ. ಅಲ್ಲದೆ ದೇಶೀಯ ಚಿತ್ರರಂಗದ ಇತಿಹಾಸದಲ್ಲೇ 3ನೇ ಅತೀ ಹೆಚ್ಚು ಕಲೆಕ್ಷನ್‌ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ. ಮಾಸ್‌ ನಿರ್ದೇಶಕ ಸುಕುಮಾರ್‌ ಆ್ಯಕ್ಷನ್‌ ಕಟ್‌ ಹೇಳಿರುವ ಇದು 2021ರಲ್ಲಿ ತೆರೆಕಂಡ ʼಪುಷ್ಪʼ ಚಿತ್ರದ ಮುಂದುವರಿದ ಭಾಗ. ಅಲ್ಲು ಅರ್ಜುನ್‌ಗೆ ಜೋಡಿಯಾಗಿ ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತೊಮ್ಮೆ ಮೋಡಿ ಮಾಡಿದ್ದು, ದೇಶಾದ್ಯಂತ ಪ್ರೇಕ್ಷಕರ ಮನ ಗೆದ್ದಿದೆ. ಈ ಮಧ್ಯೆ ಅಲ್ಲು ಅರ್ಜುನ್‌ ಅವರ ಮುಂದಿನ ಚಿತ್ರದ ಬಗ್ಗೆ ಕುತೂಹಲ ಮನೆ ಮಾಡಿದೆ.

2020ರಿಂದ ಅಲ್ಲು ಅರ್ಜುನ್‌ ಅವರು ಸುಕುಮಾರ್‌ ಅವರ ʼಪುಷ್ಪʼ ಸಿನಿಮಾ ಸರಣಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಈ ಅವಧಿಯಲ್ಲಿ ಅವರು ಬೇರೆ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಈ ಮಧ್ಯೆ ʼಪುಷ್ಪ 3ʼ ಬರಲಿದೆ ಎನ್ನುವ ಮಾತೂ ಕೇಳಿದಂದಿದೆ. ಅದಾಗ್ಯೂ ಅವರು ಸದ್ಯ ಆ ಪ್ರಾಜೆಕ್ಟ್‌ ಪಕ್ಕಕ್ಕಿಟ್ಟು ತ್ರಿವಿಕ್ರಂ ಶ್ರೀನಿವಾಸ್‌ (Trivikram Srinivas) ಅವರ ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದಾರೆ.

ಕಮರ್ಷಿಯಲ್‌ ಚಿತ್ರಗಳ ಮೂಲಕ ಟಾಲಿವುಡ್‌ನಲ್ಲಿ ಜನಪ್ರಿಯರಾಗಿರುವ ತ್ರಿವಿಕ್ರಂ ಈಗಾಗಲೇ ಅಲ್ಲು ಅರ್ಜುನ್‌ ಅವರ 3 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಹೊಸ ಪ್ರಾಜೆಕ್ಟ್‌ ಇವರಿಬ್ಬರು ಜತೆಯಾಗುತ್ತಿರುವ 4ನೇ ಚಿತ್ರವಾಗಲಿದೆ. 2025ರ ಬೇಸಗೆ ವೇಳೆಗೆ ಈ ಚಿತ್ರ ಸೆಟ್ಟೇರಲಿದೆ. ಅದಕ್ಕೂ ಮುನ್ನ ಅಲ್ಲು ಅರ್ಜುನ್‌ ಬಾಡಿ ಲಾಂಗ್ವೇಜ್‌ ಬದಲಾಯಿಸಲಿದ್ದಾರೆ. ನಿರ್ಮಾಪಕ ನಾಗ ವಂಶಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ʼʼಸ್ಕ್ರಿಪ್ಕ್‌ ಕೆಲಸ ಬಹುತೇಕ ಪೂರ್ಣಗೊಂಡಿದೆ. ಅಲ್ಲು ಅರ್ಜುನ್‌ ಶೀಘ್ರದಲ್ಲೇ ತ್ರಿವಿಕ್ರಂ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ. ಇದು ಸಂಪೂರ್ಣ ಭಿನ್ನ ಪಾತ್ರವಾಗಿರಲಿದ್ದು, ಇದಕ್ಕಾಗಿ ಅಲ್ಲು ಅರ್ಜುನ್‌ ಕನಿಷ್ಠ 3 ತಿಂಗಳು ತಯಾರಿ ನಡೆಸಲಿದ್ದಾರೆ. ಮುಂದಿನ ವರ್ಷದ ಬೇಸಗೆಯಲ್ಲಿ ಚಿತ್ರ ಸೆಟ್ಟೇರಲಿದೆ. ಈ ಸಿನಿಮಾ ಪೂರ್ತಿಯಾಗಲು ಕನಿಷ್ಠ 2 ವರ್ಷ ಬೇಕಾಗಬಹುದು. ಸಾಕಷ್ಟು ವಿಎಫ್‌ಎಕ್ಸ್‌ ಕೆಲಸ ಅಗತ್ಯವಿದೆ. ಇದಕ್ಕಾಗಿ ವಿಶೇಷ ಸೆಟ್‌ ಹಾಕಲಿದ್ದೇವೆʼʼ ಎಂದು ನಾಗ ವಂಶಿ ವಿವರಿಸಿದ್ದಾರೆ. ಸದ್ಯ ಚಿತ್ರದಲ್ಲಿ ನಾಯಕಿ ಯಾರಾಗಲಿದ್ದಾರೆ, ತಾರಾಗಣದಲ್ಲಿ ಯಾರೆಲ್ಲ ಇದ್ದಾರೆ ಎನ್ನುವ ಗುಟ್ಟು ರಟ್ಟಾಗಿಲ್ಲ. ಜತೆಗೆ ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ.

4ನೇ ಕಾಂಬಿನೇಷನ್‌

ತ್ರಿವಿಕ್ರಂ ಶ್ರೀನಿವಾಸ್‌ ಮತ್ತು ಅಲ್ಲು ಅರ್ಜು ಈ ಹಿಂದೆ ʼಜುಲಾಯಿʼ (2012), ʼS/o ಸತ್ಯಮೂರ್ತಿʼ (2015) ಮತ್ತು ʼಅಲ ವೈಕುಂಠಪುರಮುಲ್ಲೋʼ (2020) ಚಿತ್ರಗಳಲ್ಲಿ ಜತೆಯಾಗಿ ಕೆಲಸ ಮಾಡಿದ್ದರು. ಈ ಮೂರೂ ಚಿತ್ರಗಳೂ ಪ್ರೇಕ್ಷಕರ ಗಮ ಸೆಳೆದಿದ್ದವು. ಹೀಗಾಗಿ ಈ ಹಿಟ್‌ ಕಾಂಬಿನೇಷನ್‌ನ 4ನೇ ಚಿತ್ರ ಈಗಾಗಲೇ ನಿರೀಕ್ಷೆ ಮೂಡಿಸಿದೆ. ಹಿಂದಿಗಿಂತಲೂ ವಿಶೇಷವಾಗಿ, ವಿಭಿನ್ನವಾಗಿ ಚಿತ್ರ ಕಟ್ಟಿಕೊಡುವುದಾಗಿ ತ್ರಿವಿಕ್ರಂ ಶ್ರೀನಿವಾಸ್‌ ಭರವಸೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Pushpa 2 Collection: ರಿಲೀಸ್‌ ಆಗಿ 23 ದಿನ ಕಳೆದರೂ ತಗ್ಗುತ್ತಿಲ್ಲ’ಪುಷ್ಪ 2′ ಹವಾ; ಅಲ್ಲು ಅರ್ಜುನ್‌-ರಶ್ಮಿಕಾ ಚಿತ್ರದ ಗಳಿಕೆ 1,720 ಕೋಟಿ ರೂ.