Saturday, 4th January 2025

Rohit Sharma: 3 ಕ್ಯಾಚ್‌ ಕೈಚೆಲ್ಲಿದ ಜೈಸ್ವಾಲ್‌ ವಿರುದ್ಧ ಮೈದಾನದಲ್ಲೇ ಆಕ್ರೋಶ ಹೊರಹಾಕಿದ ರೋಹಿತ್‌

ಮೆಲ್ಬರ್ನ್‌: ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ(Rohit Sharma) ತಂಡದ ಆಟಗಾರರು ಫಿಲ್ಡಿಂಗ್​ ಅಥವಾ ಬೌಲಿಂಗ್​ನಲ್ಲಿ ಏನಾದರು ತಪ್ಪುಗಳನ್ನು ಮಾಡಿದ ತಕ್ಷಣ ಅವರ ವಿರುದ್ಧ ಮುನಿಸಿಕೊಳ್ಳುವುದು ಸರ್ವೆ ಸಾಮಾನ್ಯ. ಈಗಾಗಲೇ ಇಂತಹ ಹಲವು ನಿದರ್ಶನಗಳನ್ನು ನೋಡಿದ್ದೇವೆ. ಇಂತಹದ್ದೇ ಘಟನೆಯೊಂದು ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿಯೂ ಕಂಡುಬಂದಿದೆ.

ನಾಲ್ಕನೇ ದಿನದಾಟದ ವೇಳೆ ಮೂರು ಕ್ಯಾಚ್‌ಗಳನ್ನು ಕೈಚೆಲ್ಲಿದ ಯಶಸ್ವಿ ಜೈಸ್ವಾಲ್ ಅವರ ವಿರುದ್ಧ ಕೋಪಗೊಂಡು ಬೈದಿರುವ ವಿಡಿಯೊವೊಂದು ವೈರಲ್‌ ಆಗಿದೆ. ಅತ್ಯುತ್ತಮ ಫೀಲ್ಡರ್‌ ಆಗಿರುವ ಜೈಸ್ವಾಲ್‌ ಒಟ್ಟು ಮೂರು ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದರು. ಮೂರನೇ ಸ್ಲಿಪ್‌ನಲ್ಲಿ ಉಸ್ಮಾನ್‌ ಖವಾಜ ಅವರ ಕ್ಯಾಚ್‌ ಆ ಬಳಿಕ ಲಬೆಶೇನ್‌ ಮತ್ತು ಪ್ಯಾಟ್‌ ಕಮಿನ್ಸ್‌ ಕ್ಯಾಚ್‌ ಬಿಟ್ಟರು. ಇದನ್ನು ಕಂಡ ರೋಹಿತ್‌ ಸಿಟ್ಟಿನಿಂದ ನೀನು ಗಲ್ಲಿ ಕ್ರಿಕೆಟ್‌ ಆಡುತ್ತಿಲ್ಲ ಎಂದು ಬೈದರು. ಜೈಸ್ವಾಲ್‌ ಬಿಟ್ಟ ಮೂರು ಕ್ಯಾಚ್‌ಗಳು ಭಾರತಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು. ಜೀವದಾನ ಪಡೆದ ಲಬುಶೇನ್‌ 70, ಕಮಿನ್ಸ್‌ 41, ಖವಾಜ 21 ರನ್‌ ಬಾರಿಸಿದರು.

ನಾಲ್ಕನೇ ದಿನವಾದ ಭಾನುವಾರ ಬೆಳಗ್ಗೆ 9 ವಿಕೆಟ್‌ಗೆ 358 ರನ್ ಗಳಿಂದ ಆಟ ಆರಂಭಿಸಿದ ಭಾರತ ಕೇವಲ 11 ರನ್‌ ಬಾರಿಸಲಷ್ಟೇ ಶಕ್ತವಾಗಿ 369 ರನ್‌ಗಳಿಗೆ ಆಲೌಟ್‌ ಆಯಿತು. 105 ರನ್‌ ಗಳಿಸಿದ್ದ ಶತಕ ವೀರ ನಿತೀಶ್‌ ಕುಮಾರ್‌ ರೆಡ್ಡಿ ಅಂತಿಮವಾಗಿ 114 ರನ್‌ಗೆ ವಿಕೆಟ್‌ ಕಳೆದುಕೊಂಡರು. ಇವರ ವಿಕೆಟ್‌ ಪತನದೊಂದಿಗೆ ಭಾರತದ ಇನಿಂಗ್ಸ್‌ ಕೂಡ ಕೊನೆಗೊಂಡಿತು. ಮೊಹಮ್ಮದ್‌ ಸಿರಾಜ್‌ ಅಜೇಯ 4 ರನ್‌ ಗಳಿಸಿದರು.

ದ್ವಿತೀಯ ಇನಿಂಗ್ಸ್‌ ಬ್ಯಾಟಿಂಗ್‌ ಆರಂಭಿಸಿದ ಆಸ್ಟ್ರೇಲಿಯಾ ಆರಂಭಿಕ ಆಘಾತದ ಹೊರತಾಗಿಯೂ ಕೆಲ ಕ್ರಮಾಂಕದಲ್ಲಿ ಬ್ಯಾಟರ್‌ಗಳು ನಡೆಸಿದ ದಿಟ್ಟ ಹೋರಾಟದ ನೆರವಿನಿಂದ 9 ವಿಕೆಟ್‌ಗೆ 228 ರನ್‌ ಬಾರಿಸಿ ಒಟ್ಟಾರೆ 333 ರನ್‌ ಮುನ್ನಡೆಯೊಂದಿಗೆ ಅಂತಿಮ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದೆ. ಸದ್ಯದ ಸ್ಥಿತಿ ನೋಡುವಾಗ ಪಂದ್ಯ ಡ್ರಾ ಗೊಳ್ಳುವ ಸಾಧ್ಯತೆ ಕಂಡುಬಂದಿದೆ. ಭಾರತ ನಾಳೆ(ಸೋಮವಾರ) ನಿಂತು ಆಡಿದರೆ ಮಾತ್ರ.