Saturday, 4th January 2025

Vishwa Havyaka Sammelana: ಮಕ್ಕಳೇ ನಿಜವಾದ ಸಂಪತ್ತು: ರಾಘವೇಶ್ವರ ಭಾರತೀ ಶ್ರೀ

ಬೆಂಗಳೂರು: ʼʼಉತ್ತರ ಪ್ರದೇಶದ ಅಹಿಚ್ಛತ್ರದಿಂದ ಈ ನಾಡಿಗೆ ಬಂದದ್ದು ದೀಪ ಹೊರತು ಕತ್ತಲಲ್ಲ. ಹಾಗೆ ಅಲ್ಲಿಂದ ಇಲ್ಲಿಗೆ ಆಗಮಿಸಿದ ಹವ್ಯಕರು ದೀಪವಾಗಿ ನಾಡನ್ನು ಬೆಳಗುತ್ತಿದ್ದಾರೆ. ನಾವು ಯಾರು? ನಾವೆಲ್ಲಿಂದ ಬಂದವರು? ನಮ್ಮ ಕರ್ತವ್ಯಗಳೇನು? ಎಂಬುದಾಗಿ ಆತ್ಮಾವಲೋಕನ ಮಾಡಿಕೊಳ್ಳಲು ಸಮ್ಮೇಳನಗಳು ಅವಕಾಶಗಳಾಗಿದ್ದು, ನಾವು ನಮ್ಮೊಳಗೆ ಆಲೋಚಿಸಬೇಕಿದೆʼʼ ಎಂದು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ (Sri Raghaveshwara Bharathi Mahaswamiji) ತಿಳಿಸಿದರು (Vishwa Havyaka Sammelana).

ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ʼʼಸಮಾಜ ಅಳಿವು ಉಳಿವಿನ ಪ್ರಶ್ನೆ ಎದುರಿಸುತ್ತಿದೆ. ಹವ್ಯಕ ಸಮಾಜದ ಜನಸಂಖ್ಯೆ ಕ್ಷಿಪ್ರಗತಿಯಲ್ಲಿ ಇಳಿಯುತ್ತಿದ್ದು, ಇದು ಆಘಾತಕಾರಿಯಾಗಿದೆ. ಮಕ್ಕಳನ್ನು ಮಾಡಿಕೊಳ್ಳದೇ ಇದ್ದರೆ ಆದಾಯ ದ್ವಿಗುಣವಾಗುತ್ತದೆ ಎಂಬ ಸಿದ್ಧಾಂತವನ್ನು ಯುವ ಜನತೆ ಆಲೋಚಿಸುತ್ತಿದೆ. ತಾಯಿಗಿಂತ ದೊಡ್ಡದಾದ ಪದವಿ ಪ್ರಪಂಚದಲ್ಲಿ ಯಾವುದೂ ಇಲ್ಲ ಎಂಬುದನ್ನು ಮಾತೆಯರು ಗಮನಿಸಬೇಕು. ಮೂರು ಮಕ್ಕಳನ್ನು ಪಡೆಯುವುದು ನಾಚಿಕೆ ಸಂಗತಿ ಎಂಬಂತೆ ಭಾವಿಸುತ್ತಾರೆ. ಆದರೆ ಮಕ್ಕಳೆಂದರೆ ನಿಜವಾದ ಸಂಪತ್ತಾಗಿದ್ದು, ನಮ್ಮ ಪರಂಪರೆಯನ್ನು ಮುಂದುವರಿಸುವವರಾಗಿದ್ದಾರೆ. ಮಿತಸಂತಾನವೇ ವಿವಾಹ ವಿಚ್ಛೇದನಕ್ಕೆ ಮೂಲ ಕಾರಣವಾಗಿದ್ದು, ಸಹಬಾಳ್ವೆಯ ಕೊರತೆಯೇ ವಿಚ್ಚೇದನಕ್ಕೆ ನಾಂದಿ ಹಾಡುತ್ತಿದೆʼʼ ಎಂದು ಹೇಳಿದರು.

ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ್ದ ರಾಘವೇಶ್ವರ ಶ್ರೀ, ʼʼಹವ್ಯಕ ಸಮಾಜ ತುಂಬಾ ವೇಗವಾಗಿ ಕ್ಷೀಣಿಸುತ್ತಿದ್ದು, ಹವ್ಯಕ ಸಂಸ್ಕೃತಿಗೆ ಅಪಾಯ ಎದುರಾಗಿದೆ. ನಾವು ಗೋವಂಶವನ್ನು ಉಳಿಸುವ ಅಭಿಯಾನ ಮಾಡುತ್ತಿದ್ದೇವೆ. ಇದೀಗ ಹವ್ಯಕ ಸಮುದಾಯವನ್ನು ಸಂರಕ್ಷಿಸುವ ಆಪತ್ತು ಎದುರಾಗಿದೆʼʼ ಎಂದಿದ್ದರು.

ದಕ್ಷಿಣ ಕೊರಿಯಾದ ಉದಾಹರಣೆಯನ್ನು ನೀಡಿದ ಶ್ರೀಗಳು, ʼʼಜನಸಂಖ್ಯಾ ನಿಯಂತ್ರಣದ ಕಾರಣದಿಂದಾಗಿ ದಕ್ಷಿಣ ಕೊರಿಯಾ ವಿನಾಶದ ಅಂಚಿನಲ್ಲಿದೆ. ಅದೇ ರೀತಿ ಹವ್ಯಕ ಸಮಾಜಕ್ಕೂ ಅಪಾಯ ಎದುರಾಗುವ ಸಂಭವವಿದೆ. ಮಕ್ಕಳೆಂದರೆ ಸಂಪತ್ತಾಗಿದ್ದು, ಸತ್ಪ್ರಜೆಗಳನ್ನು ಪಡೆಯುವ ಮೂಲಕ ಸಮಾಜವನ್ನು ಹಾಗೂ ಸಂಸ್ಕೃತಿಯನ್ನು ಉಳಿಸಬೇಕು. ಮಕ್ಕಳನ್ನು ಸಾಕಲು ನಿಮಗೆ ಕಷ್ಠವಾದರೆ, ಮಠವು ಮಕ್ಕಳನ್ನು ಸಲಹಲು ಸಿದ್ಧವಾಗಿದೆʼʼ ಎಂದು ಭರವಸೆ ನೀಡಿದ್ದರು.

ಈ ಸುದ್ದಿಯನ್ನೂ ಓದಿ:Vishwa Havyaka Sammelana: ಸಂಪ್ರದಾಯ ಉಳಿಯಬೇಕಿದ್ದರೆ ಅದು ಆಚರಣೆಯಲ್ಲಿರಬೇಕು: ಮಾಧವಾನಂದ ಭಾರತೀ ಸ್ವಾಮೀಜಿ