ಮೆಲ್ಬರ್ನ್: ಬಾಕ್ಸಿಂಗ್ ಡೇ ಟೆಸ್ಟ್ ಗೆಲ್ಲಲು ಆಸ್ಟ್ರೇಲಿಯಾ ಭಾರತ ತಂಡಕ್ಕೆ (IND vs AUS) 340 ರನ್ ಗುರಿ ನೀಡಿದೆ. ಪಂದ್ಯದ 5ನೇ ದಿನ ಆಸ್ಟ್ರೇಲಿಯಾ ತಂಡ ಎರಡನೇ ಇನಿಂಗ್ಸ್ನಲ್ಲಿ 234 ರನ್ ಗಳಿಗೆ ಕುಸಿದಿತ್ತು. ಆ ಮೂಲಕ ಪ್ರಥಮ ಇನಿಂಗ್ಸ್ನಲ್ಲಿನ 105 ರನ್ಗಳ ಮುನ್ನಡೆ ಸಾಧಿಸಿದ್ದರ ಫಲವಾಗಿ ಭಾರತಕ್ಕೆ ಗೆಲ್ಲಲು 91 ಓವರ್ಗಳಲ್ಲಿ 340 ರನ್ಗಳ ಗುರಿ ನೀಡಿತ್ತು. 5ನೇ ದಿನದಾಟದ ವಿಕೆಟ್ ಬ್ಯಾಟಿಂಗ್ಗೆ ಸುಲಭವಾಗಿರಲಿಲ್ಲ ಹೀಗಾಗಿ ಡ್ರಾ ಮಾಡಿಕೊಳ್ಳುವ ಉದ್ದೇಶದಿಂದ ಟೀಂ ಇಂಡಿಯಾ ಮೈದಾನಕ್ಕೆ ಇಳಿದಿತ್ತು.
ಭಾರತ ತಂಡಕ್ಕೆ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ನಿಧಾನಗತಿಯ ಆರಂಭ ನೀಡಿದರು. 16 ಓವರ್ಗಳ ನಂತರ ಭಾರತ ಯಾವುದೇ ವಿಕೆಟ್ ನಷ್ಟವಿಲ್ಲದೆ 25 ರನ್ ಗಳಿಸಿತ್ತು. ಆದರೆ ಪ್ಯಾಟ್ ಕಮಿನ್ಸ್ 17ನೇ ಓವರ್ನಲ್ಲಿ ವಿಭಿನ್ನ ರಣತಂತ್ರಗಳನ್ನು ಹೊಂದಿದ್ದರು. ಅವರು ಓವರ್ನ ಮೊದಲ ಎಸೆತದಲ್ಲಿ ರೋಹಿತ್ ಶರ್ಮಾ ಅವರನ್ನು ಔಟ್ ಮಾಡಿದರು. ಗಲ್ಲಿಯಲ್ಲಿ ಮಿಚೆಲ್ ಮಾರ್ಷ್, ರೋಹಿತ್ ಶರ್ಮಾರ ಕ್ಯಾಚ್ ಪಡೆದರು. ಭಾರತದ ನಾಯಕ ಮತ್ತೊಮ್ಮೆ ವಿಫಲವಾದರು ಮತ್ತು 40 ಎಸೆತಗಳಲ್ಲಿ ಕೇವಲ 9 ರನ್ ಗಳಿಸಿದರು.
ಕೊನೆಯ ಎಸೆತದಲ್ಲಿ ರಾಹುಲ್ ಕೂಡ ಔಟ್
ಈ ಬಾರಿಯ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಕೆಎಲ್ ರಾಹುಲ್ ಟೀಮ್ ಇಂಡಿಯಾದ ಅತ್ಯುತ್ತಮ ಬ್ಯಾಟ್ಸ್ಮನ್ ಆಗಿದ್ದಾರೆ. ಆದರೆ, ಈ ಇನಿಂಗ್ಸ್ನಲ್ಲಿ ಪ್ಯಾಟ್ ಕಮಿನ್ಸ್ ಎದುರು ನಿಲ್ಲಲು ಅವರಿಗೂ ಸಾಧ್ಯವಾಗಲಿಲ್ಲ. 17ನೇ ಓವರ್ ನ ಕೊನೆಯ ಎಸೆತದಲ್ಲಿ ಕಮಿನ್ಸ್, ಕೆಎಲ್ ರಾಹುಲ್ ಅವರನ್ನು ಔಟ್ ಮಾಡಿದರು. ಆಫ್ ಸ್ಟಂಪ್ನ ಹೊರಗೆ ಚೆಂಡನ್ನು ಆಡಬೇಕೆ ಅಥವಾ ಬಿಡಬೇಕೆ ಎಂದು ನಿರ್ಧರಿಸಲು ರಾಹುಲ್ ಕೈಯಲ್ಲಿ ಸಾಧ್ಯವಾಗಲಿಲ್ಲ ಮತ್ತು ಚೆಂಡು ಅಂಚಿಗೆ ಬಡಿಯಿತು. ಮೊದಲ ಸ್ಲಿಪ್ನಲ್ಲಿ ಸುಲಭ ಕ್ಯಾಚ್ ಪಡೆಯುವ ಮೂಲಕ ರಾಹುಲ್ಗೆ ಖಾತೆ ತೆರೆಯಲು ಉಸ್ಮಾನ್ ಖವಾಜಾ ಅವಕಾಶ ನೀಡಲಿಲ್ಲ.
ಭಾರತವನ್ನು ಕಾಡಿದ್ದ ಲಯಾನ್-ಬೋಲೆಂಡ್
ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಕೊನೆಯ ಜೋಡಿ ಭಾರತ ತಂಡವನ್ನು ತುಂಬಾ ಕಾಡಿತ್ತು. 173 ರನ್ಗಳಿಗೆ 9 ವಿಕೆಟ್ ಪತನಗೊಂಡ ಬಳಿಕವೂ ತಂಡ 234 ರನ್ ತಲುಪುವಲ್ಲಿ ಯಶಸ್ವಿಯಾಗಿತ್ತು. ಸ್ಕಾಟ್ ಬೋಲೆಂಡ್ ಮತ್ತು ನೇಥನ್ ಲಯಾನ್ ಕೊನೆಯ ವಿಕೆಟ್ಗೆ 61 ರನ್ಗಳ ಜೊತೆಯಾಟವನ್ನು ಆಡಿತ್ತು. ಇದು ಆಸ್ಟ್ರೇಲಿಯಾದ ಎರಡನೇ ಇನಿಂಗ್ಸ್ನ ಅತಿದೊಡ್ಡ ಜೊತೆಯಾಟವೂ ಆಗಿತ್ತು. ಜಸ್ಪ್ರೀತ್ ಬುಮ್ರಾ, ನೇಥನ್ ಲಯಾನ್ ಅವರನ್ನು ಔಟ್ ಮಾಡುವ ಮೂಲಕ ಇನಿಂಗ್ಸ್ ಅನ್ನು ಕೊನೆಗೊಳಿಸಿದರು. ಅವರು 41 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬೋಲೆಂಡ್ 15 ರನ್ ಗಳಿಸಿ ಅಜೇಯರಾಗಿ ಉಳಿದರು.
ಭಾರತಕ್ಕೆ ಜೈಸ್ವಾಲ್-ಪಂತ್ ಆಸರೆ
ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ವಿಕೆಟ್ ಒಪ್ಪಿಸಿದ ಬಳಿಕ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಅದೇ ರಾಗ ಅದೇ ತಾಳ ಎಂಬಂತೆ ಆಫ್ ಸ್ಟಂಪ್ ಹೊರಗಡೆಯ ಎಸೆತಗಳನ್ನು ಅನಗತ್ಯವಾಗಿ ಆಡಲು ಹೋಗಿ ವಿಕೆಟ್ ಒಪ್ಪಿಸಿದರು. ಆ ಮೂಲಕ ಭಾರತ ತಂಡ 33 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ವೇಳೆ ಜತೆಯಾದ ಯಶಸ್ವಿ ಜೈಸ್ವಾಲ್ ಮತ್ತು ರಿಷಭ್ ಪಂತ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದರು. ಈ ಜೋಡಿ 59 ರನ್ಗಳ ಜೊತೆಯಾಟವನ್ನು ಆಡಿತು. ಆ ಮೂಲಕ ಭಾರತ 42 ಓವರ್ಗಳಿಗೆ ಮೂರು ವಿಕೆಟ್ ನಷ್ಟಕ್ಕೆ 92 ರನ್ಗಳಿಸಿದೆ.
ಈ ಸುದ್ದಿಯನ್ನು ಓದಿ: IND vs AUS: ಅರ್ಧಶತಕ ಸಿಡಿಸಿ ಅಗ್ರ ಐದರೊಳಗೆ ಪ್ರವೇಶಿಸಿದ ಯಶಸ್ವಿ ಜೈಸ್ವಾಲ್!