Wednesday, 8th January 2025

IND vs AUS: ಸೇನಾ ರಾಷ್ಟ್ರಗಳಲ್ಲಿ ಹೆಚ್ಚು ಟೆಸ್ಟ್‌ ವಿಕೆಟ್‌ ಪಡೆದ ಟಾಪ್‌ 5 ಭಾರತೀಯ ಬೌಲರ್ಸ್‌!

IND vs AUS: Jasprit Bumrah Top The List, Top 5 Indian bowlers with most test wickets in SENA countries

ಮೆಲ್ಬರ್ನ್‌: ಭಾರತ ತಂಡದ ಅನುಭವಿ ವೇಗದ ಬೌಲರ್ ಜಸ್‌ಪ್ರೀತ್‌ ಬುಮ್ರಾ ಪ್ರಸ್ತುತ ವೃತ್ತಿ ಜೀವನದ ಶ್ರೇಷ್ಠ ಲಯದಲ್ಲಿದ್ದಾರೆ. ಸದ್ಯ ಆಸ್ಟ್ರೇಲಿಯಾ ನೆಲದಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್‌ (IND vs AUS) ಸರಣಿಯಲ್ಲಿ ಆಡಿದ 8 ಇನಿಂಗ್ಸ್‌ಗಳಿಂದ ಒಟ್ಟು 30 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರೊಂದಿಗೆ ಜಸ್‌ಪ್ರೀತ್‌ ಬುಮ್ರಾ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ಮೂಲಕ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌ ಹಾಗೂ ಆಸ್ಟ್ರೇಲಿಯಾ (ಸೇನಾ) ರಾಷ್ಟ್ರಗಳಲ್ಲಿ ಅತಿ ಹೆಚ್ಚು ಟೆಸ್ಟ್‌ ವಿಕೆಟ್‌ಗಳನ್ನು ಕಬಳಿಸಿದ ಮೊದಲ ಭಾರತೀಯ ಬೌಲರ್‌ ಎನಿಸಿಕೊಂಡಿದ್ದಾರೆ.

ಫಾಸ್ಟ್‌ ಬೌಲಿಂಗ್‌ ಸ್ನೇಹಿ ಕಂಡೀಷನ್ಸ್‌ ಇರುವ ಈ ಸೇನಾ ರಾಷ್ಟ್ರಗಳಲ್ಲಿ ವೇಗದ ಬೌಲರ್‌ಗಳು ಹಲವು ಪಂದ್ಯಗಳಲ್ಲಿ ಭಾರತ ತಂಡವನ್ನು ಗೆಲ್ಲಿಸಿದ್ದಾರೆ. ಅಂದ ಹಾಗೆ ಈ ನಾಲ್ಕೂ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಟೆಸ್ಟ್‌ ವಿಕೆಟ್‌ಗಳನ್ನು ಕಬಳಿಸಿದ ಅಗ್ರರ ಐವರು ಬೌಲರ್‌ಗಳನ್ನು ಈ ಕೆಳಕಂಡಂತೆ ವಿವರಿಸಲಾಗಿದೆ.

ಸೇನಾ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಟೆಸ್ಟ್‌ ವಿಕೆಟ್‌ ಕಬಳಿಸಿದ ಅಗ್ರ ಐವರು ಭಾರತೀಯ ಬೌಲರ್ಸ್‌

5.ಜಹೀರ್‌ ಖಾನ್‌ (119 ವಿಕೆಟ್‌ಗಳು)

    ಭಾರತ ತಂಡದ ಮಾಜಿ ವೇಗಿ ಜಹೀರ್‌ ಖಾನ್‌ ಅವರು ಕೂಡ ಸೇನಾ ರಾಷ್ಟ್ರಗಳಲ್ಲಿ ಅತ್ಯುತ್ತಮ ದಾಖಲೆಗಳನ್ನು ಹೊಂದಿದ್ದಾರೆ. ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಕಬಳಿಸಿದ ಫಾಸ್ಟ್‌ ಬೌಲರ್‌ಗಳ ಸಾಲಿನಲ್ಲಿ ಜಹೀರ್‌ ಖಾನ್‌ ಜಂಟಿ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಕಪಿಲ್‌ ದೇವ್‌ (311 ವಿಕೆಟ್‌ಗಳು ) ಬಳಿಕ ಜಹೀರ್‌ ಎರಡನೇ ಸ್ಥಾನದಲ್ಲಿದ್ದಾರೆ. ಜಹೀರ್‌ ಖಾನ್‌ ಪಡೆದಿರುವ 311 ವಿಕೆಟ್‌ಗಳ ಪೈಕಿ 119 ವಿಕೆಟ್‌ಗಳನ್ನು ಸೇನಾ ರಾಷ್ಟ್ರಗಳಲ್ಲಿ ಕಬಳಿಸಿದ್ದಾರೆ. ಆ ಮೂಲಕ ಸೇನಾ ರಾಷ್ಟ್ರಗಳಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಜಹೀರ್‌ ಖಾನ್‌ ಐದನೇ ಸ್ಥಾನದಲ್ಲಿದ್ದಾರೆ.

    4.ಮೊಹಮ್ಮದ್‌ ಶಮಿ: 123 ವಿಕೆಟ್‌ಗಳು

      ಪ್ರಸ್ತುತ ತಲೆಮಾರಿನ ಅತ್ಯಂತ ಕೌಶಕಭರಿತ ವೇಗದ ಬೌಲರ್‌ ಆಗಿರುವ ಭಾರತ ತಂಡದ ಹಿರಿಯ ವೇಗಿ ಮೊಹಮ್ಮದ್‌ ಶಮಿ ಅವರು ಸೇನಾ ರಾಷ್ಟ್ರಗಳಲ್ಲಿ ಅತ್ಯುತ್ತಮ ಬೌಲಿಂಗ್‌ ದಾಖಲೆಯನ್ನು ಹೊಂದಿದ್ದಾರೆ. ಅವರು ಈ ರಾಷ್ಟ್ರಗಳಲ್ಲಿ ಇವರು ಆಡಿದ 34 ಟೆಸ್ಟ್‌ ಪಂದ್ಯಗಳಿಂದ 123 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ ಅವರು ನಾಲ್ಕು ಬಾರಿ 5 ವಿಕೆಟ್‌ ಸಾಧನೆ ಮಾಡಿದ್ದಾರೆ.

      3. ಇಶಾಂತ್‌ ಶರ್ಮಾ (130 ವಿಕೆಟ್‌ಗಳು)

        ಭಾರತ ತಂಡದ ಹಿರಿಯ ವೇಗಿ ಇಶಾನ್‌ ಶರ್ಮಾ ಕೂಡ ಸೇನಾ ರಾಷ್ಟ್ರಗಳಲ್ಲಿ ತಮ್ಮ ವೇಗದ ಬೌಲಿಂಗ್‌ ಮೂಲಕ ಸಾಕಷ್ಟು ಗಮನವನ್ನು ಸೆಳೆದಿದ್ದಾರೆ. ಅವರು ಫಾಸ್ಟ್‌ ಬೌಲಿಂಗ್‌ ಸ್ನೇಹಿ ವಿಕೆಟ್‌ನಲ್ಲಿ ಇಶಾಂತ್‌ ಶರ್ಮಾ ಆಡಿದ ಟೆಸ್ಟ್‌ ಪಂದ್ಯಗಳಿಂದ 130 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಈ ಸಾಧನೆ ಮಾಡಿದ ಭಾರತೀಯ ಬೌಲರ್‌ಗಳ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

        2.ಅನಿಲ್‌ ಕುಂಬ್ಳೆ (141 ವಿಕೆಟ್‌ಗಳು)

          ಭಾರತ ಸೇರಿದಂತೆ ಏಷ್ಯಾದ ಸ್ಪಿನ್‌ ಕಂಡೀಷನ್ಸ್‌ನಲ್ಲಿ ತಮ್ಮ ಸ್ಪಿನ್‌ ಮೋಡಿ ಮಾಡಿ ದಾಖಲೆಗಳ ಮೇಲೆ ದಾಖಲೆ ಬರೆದಿರುವ ಸ್ಪಿನ್‌ ದಿಗ್ಗಜ ಅನಿಲ್‌ ಕುಂಬ್ಳೆ ಅವರು ವೇಗದ ಬೌಲಿಂಗ್‌ ಕಂಡೀಷನ್ಸ್‌ ಇರುವ ಸೇನಾ ರಾಷ್ಟ್ರಗಳಲ್ಲಿಯೂ ಸ್ಪಿನ್‌ ಮೂಲಕ ಮೋಡಿ ಮಾಡಿದ್ದಾರೆ. ಕನ್ನಡಿಗ ಅನಿಲ್‌ ಕುಂಬ್ಳೆ ಅವರು ಸೇನಾ ರಾಷ್ಟ್ರಗಳಲ್ಲಿ 141 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

          1. ಜಸ್‌ಪ್ರೀತ್‌ ಬುಮ್ರಾ

            ಸೇನಾ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಟೆಸ್ಟ್‌ ವಿಕೆಟ್‌ಗಳನ್ನು ಕಬಳಿಸಿದ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿ ಜಸ್‌ಪ್ರೀತ್‌ ಬುಮ್ರಾ ಅಗ್ರ ಸ್ಥಾನದಲ್ಲಿದ್ದಾರೆ. ಅವರು ಸೇನಾ ರಾಷ್ಟ್ರಗಳಲ್ಲಿ 142 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ 141 ವಿಕೆಟ್‌ ಕಬಳಿಸಿದ್ದ ಸ್ಪಿನ್‌ ದಂತಕತೆ ಅನಿಲ್‌ ಕುಂಬ್ಳೆ ದಾಖಲೆಯನ್ನು ಮುರಿದಿದ್ದಾರೆ. ಆಸ್ಟ್ರೇಲಿಯಾ ಎದುರು ಮೆಲ್ಬರ್ನ್‌ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ಅವರು ಐದು ವಿಕೆಟ್‌ ಸಾಧನೆ ಮಾಡುವ ಮೂಲಕ ಜಸ್‌ಪ್ರೀತ್‌ ಬುಮ್ರಾ ಈ ದಾಖಲೆ ಬರೆದಿದ್ದಾರೆ.

            ಈ ಸುದ್ದಿಯನ್ನು ಓದಿ: IND vs AUS: ಜಸ್‌ಪ್ರೀತ್‌ ಬುಮ್ರಾ ಅಲ್ಲ, ಭಾರತ ತಂಡಕ್ಕೆ ಕೀ ಬೌಲರ್‌ ಹೆಸರಿಸಿದ ನೇಥನ್‌ ಲಯಾನ್‌!