Saturday, 4th January 2025

India’s WTC Final Scenario: ಬಾಕ್ಸಿಂಗ್‌ ಡೇ ಟೆಸ್ಟ್‌ ಸೋತಿರುವ ಭಾರತ ಫೈನಲ್‌ಗೆ ಅರ್ಹತೆ ಪಡೆಯುತ್ತಾ? ಇಲ್ಲಿದೆ ಲೆಕ್ಕಾಚಾರ!

India's WTC Final Scenario: How India Can Still Qualify For WTC 2025 Final After Defeat In MCG Test VS Australia

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಹಾಗೂ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ 184 ರನ್‌ಗಳಿಂದ ಸೋಲು ಅನುಭವಿಸಿದ ಬಳಿಕ ಭಾರತ ತಂಡದ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಹಾದಿ (India’s WTC Final Scenario) ಅತ್ಯಂತ ಕಠಿಣವಾಗಿದೆ. ಈ ಟೆಸ್ಟ್‌ ಪಂದ್ಯದ ಸೋಲಿನ ಬಳಿಕ ಭಾರತ ತಂಡ ಐದು ಪಂದ್ಯಗಳ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ 1-2 ಹಿನ್ನಡೆಯನ್ನು ಅನುಭವಿಸಿದೆ. ಜನವರಿ 3 ರಂದು ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ಮಲ್ಲಿ ಉಭಯ ತಂಡಗಳ ನಡುವಣ ಐದನೇ ಹಾಗೂ ಕೊನೆಯ ಟೆಸ್ಟ್‌ ಪಂದ್ಯ ಆರಂಭವಾಗಲಿದೆ.

ಸಿಡ್ನಿ ಟೆಸ್ಟ್‌ 2023-25ರ ಸಾಲಿನ ವಿಶ್ವ ಟೆಸ್ಟ್‌ ಚಾಂಪಿಯನ್‌ ಋತುವಿನಲ್ಲಿ ಭಾರತ ತಂಡದ ಕೊನೆಯ ಪಂದ್ಯವಾಗಿದೆ. ದಕ್ಷಿಣ ಆಫ್ರಿಕಾ ತಂಡ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೆ ಅಧಿಕೃತವಾಗಿ ಅರ್ಹತೆ ಪಡೆದಿದೆ. ಈ ಹಿನ್ನೆಲೆಯಲ್ಲಿ ಲಂಡನ್‌ ದಿ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಕಣಕ್ಕೆ ಇಳಿಯಲಿದೆ. ಇನ್ನುಳಿದಿರುವ ಒಂದು ಸ್ಥಾನಕ್ಕೆ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳ ಎದುರು ಭಾರತ ಪೈಪೋಟಿ ನಡೆಸುತ್ತಿದೆ.

ನ್ಯೂಜಿಲೆಂಡ್‌ ವಿರುದ್ಧ ತವರು ಟೆಸ್ಟ್‌ ಸರಣಿಯಲ್ಲಿ 0-3 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಸೋಲು ಹಾಗೂ ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ ಸರಣಿಯಲ್ಲಿ 1-2 ಅಂತರದಲ್ಲಿ ಹಿನ್ನಡೆಯಲ್ಲಿರುವ ಭಾರತ ತಂಡಕ್ಕೆ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೆ ಅರ್ಹತೆ ಪಡೆಯಲು ಇನ್ನೂ ಅವಕಾಶವಿದೆ. ಆದರೆ, ಭಾರತ ತಂಡದ ಫೈನಲ್‌ ಹಾದಿ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳ ಟೆಸ್ಟ ಸರಣಿಯನ್ನು ಅವಲಂಬಿಸಿದೆ. ಸಿಡ್ನಿ ಟೆಸ್ಟ್‌ ಬಳಿಕ ಭಾರ ತಂಡದ ಸಂಪೂರ್ಣ ಪಂದ್ಯಗಳು ಮುಗಿಯಲಿವೆ. ಆದರೆ, ಆಸ್ಟ್ರೇಲಿಯಾ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲಿದೆ.

IND vs AUS: ‘ದಯವಿಟ್ಟು ವಿದಾಯ ಹೇಳಿ’-ರೋಹಿತ್‌ ಶರ್ಮಾಗೆ ಫ್ಯಾನ್ಸ್‌ ಆಗ್ರಹ!

ಭಾರತ ತಂಡದ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಪೈನಲ್‌ ಲೆಕ್ಕಾಚಾರ

ಮೊದಲನೇ ಲೆಕ್ಕಾಚಾರ: ಭಾರತ ತಂಡ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೆ ಅರ್ಹತೆ ಪಡೆಯಬೇಕೆಂದರೆ ಸಿಡ್ನಿ ಟೆಸ್ಟ್‌ ಅನ್ನು ಕಡ್ಡಾಯವಾಗಿ ಗೆಲ್ಲಬೇಕಾಗುತ್ತದೆ. ಒಂದು ಐದನೇ ಟೆಸ್ಟ್‌ ಪಂದ್ಯ ಡ್ರಾ ಅಥವಾ ಸೋಲು ಅನುಭವಿಸಿದರೆ ಭಾರತ ತಂಡದ ಟೆಸ್ಟ್‌ ಚಾಂಪಿಯನ್‌ಷಿಪ್‌ ಹಾದಿ ಬಹುತೇಕ ಬಂದ್‌ ಆಗಲಿದೆ. ಆಗ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ನಡುವಣ ಟೆಸ್ಟ್‌ ಸರಣಿಯ ಫಲಿತಾಂಶ ಇಲ್ಲಿ ಲೆಕ್ಕಕ್ಕೆ ಬರುವುದಿಲ್ಲ.

ಎರಡನೇ ಲೆಕ್ಕಾಚಾರ: ಆಸ್ಟ್ರೇಲಿಯಾ ವಿರುದ್ದ ಭಾರತ ತಂಡ ಸಿಡ್ನಿ ಟೆಸ್ಟ್‌ ಅನ್ನು ಗೆಲ್ಲಬೇಕು ಹಾಗೂ ಆಸ್ಟ್ರೇಲಿಯಾ ವಿರುದ್ದ ಶ್ರೀಲಂಕಾ ತಂಡ ಟೆಸ್ಟ್‌ ಸರಣಿಯನ್ನು 2-0 ಅಥವಾ 1-0 ಅಂತರದಲ್ಲಿ ಗೆಲ್ಲಬೇಕು. ಒಂದು ವೇಳೆ ಟೆಸ್ಟ್‌ ಸರಣಿ 0-0 ಅಂತರದಲ್ಲಿ ಡ್ರಾನಲ್ಲಿ ಮುಗಿದರೂ ಇಂಥಾ ಸನ್ನಿವೇಶದಲ್ಲಿ ಟೀಮ್‌ ಇಂಡಿಯಾ ಫೈನಲ್‌ಗೆ ಅರ್ಹತೆ ಪಡೆಯಲಿದೆ.

ಮೂರನೇ ಲೆಕ್ಕಾಚಾರ: ಆಸ್ಟ್ರೇಲಿಯಾ ತಂಡ ಶ್ರೀಲಂಕಾ ಎದುರು ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು 2-0 ಅಥವಾ 1-0 ಅಂತರದಲ್ಲಿ ಗೆದ್ದರೆ ಅಥವಾ 1-1 ಅಂತರದಲ್ಲಿ ಡ್ರಾ ಮಾಡಿಕೊಂಡರೆ, ಭಾರತ ತಂಡ ಸಿಡ್ನಿ ಟೆಸ್ಟ್‌ ಗೆಲುವಿನ ಹೊರತಾಗಿಯೂ ಟೆಸ್ಟ್‌ ಚಾಂಪಿಯನ್‌ ಫೈನಲ್‌ ರೇಸ್‌ನಿಂದ ಅಧಿಕೃತವಾಗಿ ಹೊರ ಬೀಳಲಿದೆ.

ಎರಡು ಬಾರಿ ಫೈನಲ್‌ ತಲುಪಿದ್ದ ಭಾರತ ತಂಡ

ಭಾರತ ತಂಡ ವಿಶ್ವ ಟೆಸ್ಟ್‌ ಚಾಂಪಿಯನಹ್‌ಷಿಪ್‌ ಫೈನಲ್‌ಗೆ ಎರಡು ಬಾರಿ ಅರ್ಹತೆ ಪಡೆದಿದೆ. 2019 ಹಾಗೂ 2021ರ ಸಾಲಿನಲ್ಲಿ ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೆ ಅರ್ಹತೆ ಪಡೆದಿತ್ತು. ಆದರೆ, ನ್ಯೂಜಿಲೆಂಡ್‌ ಎದುರು ಸೋತು ರನ್ನರ್‌ ಅಪ್‌ಗೆ ತೃಪ್ತಿಪಟ್ಟಿತ್ತು. ನಂತರ 2021 ಮತ್ತು 2023ರ ಆವೃತ್ತಿಯಲ್ಲಿಯೂ ಭಾರತ ಫೈನಲ್‌ಗೆ ಲಗ್ಗೆ ಇಟ್ಟಿತ್ತು, ಆದರೆ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದ ಸೋತು ರನ್ನರ್‌ ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು.

ಈ ಸುದ್ದಿಯನ್ನು ಓದಿ: IND vs AUS: ಟೆಸ್ಟ್‌ ಕ್ರಿಕೆಟ್‌ನ ವಿಶೇಷ ದಾಖಲೆಯ ಸನಿಹದಲ್ಲಿ ಜಸ್‌ಪ್ರೀತ್‌ ಬುಮ್ರಾ!