Saturday, 4th January 2025

DK Shivakumar: ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ; ಡಿ.ಕೆ. ಶಿವಕುಮಾರ್ ಹೇಳಿದ್ದೇನು?

DK Shivakumar

ಬೆಂಗಳೂರು: ನಮ್ಮದು ಸ್ವಚ್ಛ ಆಡಳಿತದ ಸರ್ಕಾರ. ಗುತ್ತಿಗೆದಾರನ ಸಾವಿಗೂ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ಸದಾಶಿವ ನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದ ಅವರು, ಈ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಅವರ ಪಾತ್ರವಿಲ್ಲ. ಆತ್ಮಹತ್ಯೆ ಪತ್ರದಲ್ಲಿಅವರ ವಿರುದ್ಧ ನೇರ ಆರೋಪವಿಲ್ಲ. ಬೇರೆಯವರ ಮೇಲೆ ಆರೋಪ ಮಾಡಿದಾಕ್ಷಣ ಇವರು ರಾಜೀನಾಮೆ ನೀಡಲು ಸಾಧ್ಯವಿಲ್ಲ. ಪ್ರಿಯಾಂಕ್ ಖರ್ಗೆ ಅವರ ಪ್ರಾಮಾಣಿಕತೆ ಬಗ್ಗೆ ನಮಗೆ ಗೊತ್ತಿದೆ. ಗುತ್ತಿಗೆದಾರನ ಸಾವಿನ ಬಗ್ಗೆ ಕಾನೂನು ಪ್ರಕಾರ ತನಿಖೆ ನಡೆಯುತ್ತದೆ ಎಂದರು.

ವಿಜಯೇಂದ್ರ, ಯಡಿಯೂರಪ್ಪ ಅವರ ಫೋಟೋ ಬಿಡುಗಡೆ ಮಾಡಲೇ?

ಸಾವಿಗೆ ಕಾರಣವಾಗಿರುವ ಆರೋಪ ಹೊತ್ತಿರುವ ರಾಜು ಎಂಬುವವರು ನಿಮ್ಮ ಜತೆ, ಸಿಎಂ, ಪ್ರಿಯಾಂಕ ಖರ್ಗೆ ಅವರ ಜತೆ ಇರುವ ಫೋಟೋಗಳನ್ನು ವಿಜಯೇಂದ್ರ ಅವರು ಬಿಡುಗಡೆ ಮಾಡಿದ್ದಾರೆ ಎಂದು ಕೇಳಿದಾಗ, ನನ್ನ ಜತೆ ವಿಜಯೇಂದ್ರ, ಯಡಿಯೂರಪ್ಪ ಅವರು ಇರುವ ಫೋಟೋಗಳಿವೆ. ನಮ್ಮ ಮನೆಗೆ ಬಂದವರು, ಮದುವೆ ಕಾರ್ಯಕ್ರಮಕ್ಕೆ ಹೋದಾಗ ಅನೇಕರು ನಮ್ಮ ಜತೆ ಫೋಟೋ ತೆಗೆಸಿಕೊಳ್ಳುತ್ತಾರೆ. ವಿಜಯೇಂದ್ರ, ಯಡಿಯೂರಪ್ಪ ಅವರು ಕ್ರಿಮಿನಲ್, ರೌಡಿಗಳು ಸೇರಿದಂತೆ ಯಾರೆಲ್ಲರ ಜತೆ ಫೋಟೋ ತೆಗೆಸಿಕೊಂಡಿದ್ದಾರೆ ಎಂದು ನಾನು ಬಿಡುಗಡೆ ಮಾಡಲೇ? ಅವರಿಗೆ ಬೇಕು ಎಂದರೆ ಬಿಡುಗಡೆ ಮಾಡುತ್ತೇನೆ. ಆರೋಪಿಗಳು ಹಾಗೂ ನಮ್ಮ ಜತೆ ಮಾತುಕತೆ, ವ್ಯವಹಾರ ನಡೆದಿರುವುದಕ್ಕೆ ದಾಖಲೆ ಇದ್ದರೆ ಆರೋಪ ಮಾಡಲಿ. ನಾವು ಉತ್ತಮವಾಗಿ ಸರ್ಕಾರ ನಡೆಸುತ್ತಿದ್ದು, ವಿರೋಧ ಪಕ್ಷದವರು ಸುಮ್ಮನೆ ಮಾತಾಡಬೇಕು ಎಂಬ ಕಾರಣಕ್ಕೆ ಮಾತನಾಡುತ್ತಾರೆ. ಮಾತಾಡಲಿ ಬಿಡಿ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Contractor death: ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ ಸಿಐಡಿಗೆ: ಗೃಹ ಸಚಿವ ಪರಮೇಶ್ವರ್‌

ಬಿಜೆಪಿ ಅವಧಿಯಲ್ಲಿ ಯಾಕೆ ಸಿಬಿಐ ತನಿಖೆಗೆ ನೀಡಲಿಲ್ಲ?

ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಒತ್ತಾಯಿಸಿ ಮುತ್ತಿಗೆ ಹಾಕುತ್ತೇವೆ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, ಮುತ್ತಿಗೆ ಹಾಕಲಿ. ನನ್ನ ಸಹೋದರ ಸುರೇಶ್, ರಾಜರಾಜೇಶ್ವರಿ ನಗರದ ಕೆಲವು ಪ್ರಕರಣಗಳನ್ನು ಪ್ರಸ್ತಾಪಿಸಿದ್ದಾರೆ. ಅವೆಲ್ಲವನ್ನು ಸೇರಿಸಿ ಸಿಬಿಐಗೆ ವಹಿಸೋಣ. ಬಿಜೆಪಿ ಸರ್ಕಾರ ಇದ್ದಾಗ ನನ್ನ ಪ್ರಕರಣವನ್ನು ಮಾತ್ರ ಸಿಬಿಐಗೆ ನೀಡಿದ್ದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಡಿ.ಕೆ. ರವಿ ಸಾವು, ಸೌಜನ್ಯ ಸಾವು, ಪರೇಶ್ ಮೆಸ್ತಾ ಪ್ರಕರಣ ಸೇರಿದಂತೆ ಸುಮಾರು 12 ಪ್ರಕರಣಗಳನ್ನು ಸಿಬಿಐ ತನಿಖೆಗೆ ನೀಡಿದ್ದೆವು. ಬಿಜೆಪಿಯವರು ನನ್ನ ಪ್ರಕರಣದ ಜತೆ ಬಿಜೆಪಿ ಸಚಿವರ ಪ್ರಕರಣಗಳನ್ನು ಸಿಬಿಐಗೆ ನೀಡಬೇಕಿತ್ತು. ಯಾಕೆ ನೀಡಲಿಲ್ಲ ಎಂದು ಪ್ರಶ್ನಿಸಿದರು.

ಪ್ರಿಯಾಂಕ್ ಖರ್ಗೆ ಬಗ್ಗೆ ಬಿಜೆಪಿಗೆ ಅಸೂಯೆ

ಬಿಜೆಪಿಯವರು ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೇಳುತ್ತಿರುವ ಬಗ್ಗೆ ಕೇಳಿದಾಗ, ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಅವರು ಯಾವ ತಪ್ಪು ಮಾಡಿದ್ದಾರೆ ಎಂದು ರಾಜೀನಾಮೆ ನೀಡಬೇಕು? ಪ್ರಿಯಾಂಕ್ ಖರ್ಗೆ ನಮ್ಮ ಪಕ್ಷದ ಧ್ವನಿ. ಅವರ ಮೇಲಿನ ಅಸೂಯೆಗೆ ವಿರೋಧ ಪಕ್ಷಗಳು ಈ ರೀತಿ ನಡೆದುಕೊಳ್ಳುತ್ತಿವೆ. ದಲಿತ ಸಮುದಾಯದ ನಾಯಕ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುತ್ತಿರುವುದನ್ನು ಸಹಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದ ಅವರು, ಐಟಿ-ಬಿಟಿ ಇಲಾಖೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಕೃಷ್ಣ ಅವರ ಸರ್ಕಾರದ ನಂತರ ಐಟಿ-ಬಿಟಿ ಕ್ಷೇತ್ರದಲ್ಲಿ ರಾಜ್ಯವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವುದು ಪ್ರಿಯಾಂಕ್ ಖರ್ಗೆ. ಹೀಗಾಗಿ ಅವರನ್ನು ಕೆಳಗಿಳಿಸುವ ಸಂಚು ಮಾಡುತ್ತಿದ್ದಾರೆ ಎಂದು ದೂರಿದರು.

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಗೊಂದಲದ ಬಗ್ಗೆ ಕೇಳಿದಾಗ, ಈ ವಿಚಾರವಾಗಿ ಗಮನ ಹರಿಸುತ್ತೇವೆ. ಅನ್ಯಾಯ ಆಗಿರುವರಿಗೆ ನ್ಯಾಯ ಒದಗಿಸಲಾಗುವುದು ಎಂದು ತಿಳಿಸಿದರು. ರಾಜ್ಯಪಾಲರನ್ನು ಭೇಟಿ ಮಾಡಿ ಬಿಜೆಪಿ ನಾಯಕರು ದೂರು ನೀಡಿದ ಬಗ್ಗೆ ಕೇಳಿದಾಗ, ಅವರು ನಿತ್ಯ ನಮ್ಮನ್ನು ನೆನೆಯಬೇಕು. ನೆನೆಯಲಿ ಬಹಳ ಸಂತೋಷ ಎಂದು ಅವರು ಹೇಳಿದರು.

ಪ್ರಿಯಾಂಕ್ ಖರ್ಗೆ ಅವರ ವಿರುದ್ಧದ ಪ್ರಕರಣ ಸಿಬಿಐಗೆ ಯಾಕೆ ಕೊಡಬಾರದು ಎಂದು ಕೇಳಿದಾಗ, ಇದು ಸಿಬಿಐಗೆ ನೀಡಬೇಕಾದ ಪ್ರಕರಣವಲ್ಲ. ನಮ್ಮ ತನಿಖಾ ಸಂಸ್ಥೆಗಳು ಈ ಪ್ರಕರಣಗಳ ತನಿಖೆ ಮಾಡಲು ಸಮರ್ಥವಾಗಿವೆ. ಅಧಿಕಾರಿಗಳು ಸಮರ್ಥರಾಗಿದ್ದಾರೆ. ಸಿಬಿಐ ತನಿಖೆ ವೈಖರಿ ನಮಗೂ ಗೊತ್ತಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Jog Falls: ಹೊಸ ವರ್ಷಕ್ಕೆ ಜೋಗ ಜಲಪಾತ ಓಪನ್‌, ನಂದಿ ಬೆಟ್ಟ ಬಂದ್‌

ಹೊಸವರ್ಷದ ಶುಭಾಶಯಗಳು

ರಾಜ್ಯದ ಜನತೆಗೆ ಹೊಸವರ್ಷದ ಹಾರ್ದಿಕ ಶುಭಾಶಯಗಳು. 2025 ರ ವರ್ಷ ಎಲ್ಲರ ಪಾಲಿಗೂ ಉತ್ತಮವಾಗಿರಲಿ. ಹೊಸವರ್ಷಾಚರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಸಾವಿರಕ್ಕೂ ಹೆಚ್ಚು ಕ್ಯಾಮೆರಾ ಅಳವಡಿಸಲಾಗಿದೆ. ಯಾವುದೇ ದುರ್ವರ್ತನೆ, ಅಹಿತಕರ ಘಟನೆಗೆ ಅವಕಾಶ ಇಲ್ಲ. ನಮಗೆ ಬೆಂಗಳೂರಿನ ಘನತೆ ಬಹಳ ಮುಖ್ಯ. ಯಾರೇ ಕಾನೂನು ಉಲ್ಲಂಘನೆ ಮಾಡಿದರೂ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.