Saturday, 4th January 2025

Viral Video: NCC ಕ್ಯಾಂಪ್‌ ವೇಳೆ ಸೇನಾಧಿಕಾರಿ ಮೇಲೆ ಹಲ್ಲೆ- ಶಾಕಿಂಗ್‌ ವಿಡಿಯೊ ವೈರಲ್‌

Viral Video

ತಿರುವನಂತಪುರಂ : ಕೇರಳದ ತೃಕ್ಕಕ್ಕರದಲ್ಲಿ ಸೇನಾಧಿಕಾರಿಯೊಬ್ಬರ ಮೇಲೆ ದುಷ್ಕರ್ಮಿಗಳ ಗುಂಪೊಂದು ದಾಳಿ ನಡೆಸಿರುವ ಘಟನೆ ವರದಿಯಾಗಿದೆ (Army Officer Attacked In Kerala). ಕೆಎಂಎಂ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಎನ್‌ಸಿಸಿ ತರಬೇತಿ ಶಿಬಿರದ (NCC Camp) ವೇಳೆ ಈ ಘಟನೆ ನಡೆದಿದೆ. ಡಿ.23ರಂದು ಈ ಘಟನೆ ನಡೆದಿದ್ದು, ಸದ್ಯ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ(Viral Video)

ಎನ್‌ಸಿಸಿ ಶಿಬಿರದಲ್ಲಿ 80 ಕ್ಕೂ ಹೆಚ್ಚು ಕೆಡೆಟ್‌ಗಳು  ವಿಷಪೂರಿತ ಆಹಾರ ಸೇವಿಸಿದ ನಂತರ ಅಸ್ವಸ್ಥರಾಗಿದ್ದರು. ಆ ಘಟನೆ ನಡೆದ ನಂತರ ಸೇನಾಧಿಕಾರಿ ಮೇಲೆ ದಾಳಿ ನಡೆದಿದೆ. ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ಜನಸಮೂಹವನ್ನು ಸಿಪಿಐ ಮತ್ತು ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಜಿಲ್ಲಾ ಮುಖ್ಯಸ್ಥೆ ಭಾಗ್ಯ ಲಕ್ಷ್ಮಿ ಮತ್ತು ಬಿಜೆಪಿ ಸ್ಥಳೀಯ ಕೌನ್ಸಿಲರ್ ಪ್ರಮೋದ್ ನೇತೃತ್ವ ವಹಿಸಿದ್ದರು. ಗುಂಪು ಎನ್‌ಸಿಸಿ ಶಿಬಿರಕ್ಕೆ ನುಗ್ಗಿ, ಶಿಬಿರದ ನಿಯಮಿತ ಕಾರ್ಯಚಟುವಟಿಕೆಗೆ ಅಡ್ಡಿಪಡಿಸಿ ಸೇನಾ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಅಧಿಕಾರಿಯ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಕಂಡು ಬಂದಿದೆ. ಆದಾಗ್ಯೂ, ಅವರು ಸಂಯಮವನ್ನು ಕಾಪಾಡಿಕೊಂಡು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಸಿದ್ದಾರೆ. ಏತನ್ಮಧ್ಯೆ, ಕೆಡೆಟ್‌ಗಳು ಏಕಾಏಕಿ ಅಸ್ವಸ್ಥಕ್ಕೊಳಗಾಗಲು ಕಾರಣವನ್ನು ಪತ್ತೆ ಮಾಡಲು ರಾಜ್ಯ ಆರೋಗ್ಯ ಇಲಾಖೆ ಶಿಬಿರದಿಂದ ಆಹಾರ, ನೀರು ಮತ್ತು ಮಲ ಮಾದರಿಗಳನ್ನು ಸಂಗ್ರಹಿಸಿದೆ. ಕ್ಯಾಂಪ್ ಕಮಾಂಡೆಂಟ್ ಲೆಫ್ಟಿನೆಂಟ್ ಕರ್ನಲ್ ಕರ್ನೈಲ್ ಸಿಂಗ್ ಅವರು ತೃಕ್ಕಕ್ಕರ ಪೊಲೀಸ್ ಠಾಣೆಯಲ್ಲಿಈ ಬಗ್ಗೆ ದೂರು ದಾಖಲಿಸಿದ್ದಾರೆ.

ಏನಿದು ಘಟನೆ ?

ತೃಕ್ಕಾಕರದ ಕೆಎಂಎಂ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಎನ್‌ಸಿಸಿ(NCC) ಶಿಬಿರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಸೋಮವಾರ(ಡಿ.23) ಸಂಜೆ ಅತಿಸಾರದ ಲಕ್ಷಣಗಳು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಕಲಮಸ್ಸೆರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಇತರ ಎರಡು ಆಸ್ಪತ್ರೆಗಳಿಗೆ ಅವರನ್ನು ಕರೆದೊಯ್ಯಲಾಗಿದೆ. ಶಿಬಿರದಲ್ಲಿ ಸುಮಾರು 600 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಪೈಕಿ 75 ವಿದ್ಯಾರ್ಥಿಗಳಲ್ಲಿ ವಿಷಾಹಾರ ಸೇವನೆಯಿಂದ ಅಸ್ವಸ್ಥರಾಗಿರುವುದಾಗಿದ್ದಾರೆ ಎನ್ನಲಾಗಿದೆ.

ತೀವ್ರ ಹೊಟ್ಟೆ ನೋವು, ನಿಶ್ಯಕ್ತಿ ಮತ್ತು ಅತಿಸಾರ ಸೇರಿದಂತೆ ಹಲವು ಅನಾರೋಗ್ಯದ ಲಕ್ಷಣಗಳು ಸೋಮವಾರ ಮಧ್ಯಾಹ್ನ ಕಾಣಿಸಿಕೊಳ್ಳಲಾರಂಭಿಸಿತ್ತು. ಸಂಜೆಯ ಹೊತ್ತಿಗೆ ಅನೇಕ ವಿದ್ಯಾರ್ಥಿಗಳು ಕುಸಿದು ಬಿದ್ದಿದ್ದರು. ಅಸ್ವಸ್ಥಗೊಂಡ ಕೆಡೆಟ್‌ಗಳನ್ನು ಎರ್ನಾಕುಲಂ ಸರ್ಕಾರಿ ವೈದ್ಯಕೀಯ ಕಾಲೇಜು, ಕಲಮಸ್ಸೆರಿ ಮತ್ತು ಎರಡು ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ : Unsafe Snacks:‌ ಕೇರಳದಿಂದ ಬರೋ ಚಕ್ಕುಲಿ, ನಿಪ್ಪಟ್ಟು, ಚಿಪ್ಸ್ ಸೇವಿಸ್ತೀರಾ? ಹುಷಾರ್‌, ಅದರಲ್ಲಿದೆ ಕ್ಯಾನ್ಸರ್‌ಕಾರಿ ರಾಸಾಯನಿಕ!