Saturday, 4th January 2025

IND vs AUS: ʻಮಾನಸಿಕ ಆಘಾತʼ-ಬಾಕ್ಸಿಂಗ್‌ ಡೇ ಟೆಸ್ಟ್‌ ಸೋಲಿಗೆ ಕಾರಣ ತಿಳಿಸಿದ ರೋಹಿತ್‌ ಶರ್ಮಾ!

IND vs AUS: 'especially that last-wicket partnership'-Rohit sharma on India's boxing day test against Austalia

ಮೆಲ್ಬರ್ನ್: ಆಸ್ಟ್ರೇಲಿಯಾ ಎದುರು ನಾಲ್ಕನೇ ಹಾಗೂ ಬಾಕ್ಸಿಂಗ್‌ ಡೇ ಟೆಸ್ಟ್‌ (IND vs AUS) ಪಂದ್ಯದ ಸೋಲಿನ ಬಳಿಕ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ ಹಾಗೂ ಈ ಸೋಲಿನಿಂದ ಮಾನಸಿಕವಾಗಿ ತೊಂದರೆಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಇದರ ಇದರ ಜೊತೆಗೆ ನಾಲ್ಕನೇ ಟೆಸ್ಟ್‌ನಲ್ಲಿ ಟೀಮ್‌ ಇಂಡಿಯಾ ಸೋಲಲು ಕಾರಣವೇನೆಂದು ಹಿಟ್‌ಮ್ಯಾನ್‌ ಬಹಿರಂಗಪಡಿಸಿದ್ದಾರೆ.

ಇಲ್ಲಿನ ಮೆಲ್ಬರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಸೋಮವಾರ ಮುಕ್ತಾಯವಾಗಿದ್ದ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡದ ಬ್ಯಾಟಿಂಗ್‌ ವೈಫಲ್ಯದಿಂದ 184 ರನ್‌ಗಳ ಹೀನಾಯ ಸೋಲು ಅನುಭವಿಸಿತು. ಆಸ್ಟ್ರೇಲಿಯಾ ನೀರಿದ್ದ 340 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ ಕೇವಲ 155 ರನ್‌ಗಳಿಗೆ ಆಲ್‌ಔಟ್‌ ಆಯತು.

ಅಂತಿಮ ದಿನದ ಮೊದಲನೇ ಸೆಷನ್‌ನಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಭಾರತ, ಎರಡನೇ ಸೆಷನ್‌ನಲ್ಲಿ ಯಶಸ್ವಿ ಜೈಸ್ವಾಲ್‌ (84 ರನ್‌) ಹಾಗೂ ರಿಷಭ್‌ ಪಂತ್‌ (30 ರನ್‌) ಅವರ 88 ರನ್‌ಗಳ ಜೊತೆಯಾಟದಿಂದ 121 ರನ್‌ಗಳನ್ನು ಕಲೆ ಹಾಕಿತ್ತು. ಆದರೆ, ಒಮ್ಮೆ ರಿಷಭ್‌ ಪಂತ್‌ ಔಟ್‌ ಆದ ಬಳಿಕ ಯಶಸ್ವಿ ಜೈಸ್ವಾಲ್‌ ಕೂಡ ವಿಕೆಟ್‌ ಕೈಚೆಲ್ಲಿದರು. ಅಂತಿಮವಾಗಿ ರವೀಂದ್ರ ಜಡೇಜಾ, ವಾಷಿಂಗ್ಟನ್‌ ಸುಂದರ್‌ ಹಾಗೂ ನಿತೀಶ್‌ ಕುಮಾರ್‌ ರೆಡ್ಡಿ ಕೂಡ ವಿಫಲರಾದರು. ಅಂತಿಮವಾಗಿ ಭಾರತ ಕನಿಷ್ಠ ಡ್ರಾ ಸಾಧಿಸಲು ಸಾಧ್ಯವಾಗದೆ ಭಾರಿ ಅಂತರದಲ್ಲಿ ಪರಾಭವ ಅನುಭವಿಸಿತು.

IND vs AUS: ಬ್ಯಾಟಿಂಗ್‌ ವೈಫಲ್ಯಕ್ಕೆ ಭಾರಿ ಬೆಲೆ ತೆತ್ತ ಭಾರತ, ಆಸ್ಟ್ರೇಲಿಯಾಗೆ ಭರ್ಜರಿ ಜಯ!

ಕೊನೆಯ ವಿಕೆಟ್‌ಗೆ ಜೊತೆಯಾಟ ಪಂದ್ಯದ ದಿಕ್ಕನ್ನು ಬದಲಿಸಿತು: ರೋಹಿತ್‌ ಶರ್ಮಾ

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ಸೋಲು ಸಾಕಷ್ಟು ನಿರಾಸೆ ತಂದಿದೆ. ಪಂದ್ಯಗಳನ್ನು ಗೆಲ್ಲಲು ಮಾರ್ಗಗಳಿವೆ ಮತ್ತು ಇಲ್ಲಿ ಪಂದ್ಯಗಳನ್ನು ಗೆಲ್ಲುವ ಮಾರ್ಗಗಳನ್ನು ಹುಡುಕುವಲ್ಲಿ ನಾವು ವಿಫಲರಾಗಿದ್ದೇವೆ. ನಾವು ಕೊನೆಯವರೆಗೂ ಹೋರಾಡಲು ಬಯಸಿದ್ದೆವು ಆದರೆ ದುರಾದೃಷ್ಟವಶಾತ್ ನಮಗೆ ಹಾಗೆ ಮಾಡಲು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಾ ತನ್ನ ದ್ವಿತೀಯ ಇನಿಂಗ್ಸ್‌ನಲ್ಲಿ 90 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡಿತ್ತು. ಈ ವೇಳೆ ಆಸ್ಟ್ರೇಲಿಯಾದ ಮುನ್ನಡೆ 200 ರನ್‌ ಕೂಡ ಇರಲಿಲ್ಲ. ಆದರೆ, ಆಸ್ಟ್ರೇಲಿಯಾ ಕೊನೆಯಯವರೆಗೂ ಹೋರಾಟ ನಡೆಸಿತ್ತು. ಅದರಲ್ಲಿಯೂ ವಿಶೇಷವಾಗಿ ಕೊನೆಯ ವಿಕೆಟ್‌ ಜೊತೆಯಾಟ ಪಂದ್ಯದ ದಿಕ್ಕನ್ನು ಸಂಪೂರ್ಣ ಬದಲಿಸಿತು. ಇದು ಪಂದ್ಯವನ್ನು ನಮ್ಮಿಂದ ಕಸಿದುಕೊಂಡಿತು,” ಎಂದು ಹೇಳಿದ್ದಾರೆ.

“340 ರನ್‌ಗಳ ಗುರಿಯನ್ನು ತಲುಪುವುದು ಸುಲಭವಲ್ಲ ಎಂದು ನಮಗೆ ಗೊತ್ತಿತ್ತು. ನಾವು ಆರಂಭಿಕ ಎರಡು ಸೆಷನ್‌ಗಳಲ್ಲಿ ಆದಷ್ಟು ವಿಕೆಟ್‌ಗಳನ್ನು ಉಳಿಸಿಕೊಂಡು ಮೂರನೇ ಸೆಷನ್‌ಗೆ ಅತ್ಯುತ್ತಮ ವೇದಿಕೆ ರೂಪಿಸಲು ನಾವು ನಿರ್ಧರಿಸಿದ್ದೆವು. ಆದರೆ, ಎದುರಾಳಿ ತಂಡ ಪರಿಪೂರ್ಣವಾಗಿ ಬೌಲ್‌ ಮಾಡಿದೆ. ಟಾರ್ಗೆಟ್‌ ತಲುಪಬೇಕೆಂದು ನಾವು ಬಯಸಿದ್ದೆವು ಹಾಗೂ ನಮಗೆ ಉತ್ತಮ ವೇದಿಕೆ ಸಿಕ್ಕಿರಲಿಲ್ಲ,” ಎಂದು ರೋಹಿತ್‌ ಶರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ.

ಐದನೇ ಟೆಸ್ಟ್‌ ಯಾವಾಗ?

ನಾಲ್ಕನೇ ಟೆಸ್ಟ್‌ ಸೋಲಿನ ಬಳಿಕ ಭಾರತ ತಂಡದ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಹಾದಿ ಅತ್ಯಂತ ಕಠಿಣವಾಗಿದೆ. ಜನವರಿ 3 ರಂದು ಭಾರತ ತಂಡ ಸಿಡ್ನಿಯಲ್ಲಿ ಆರಂಭವಾಗಲಿರುವ ಐದನೇ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕೆ ಇಳಿಯಲಿದೆ. ಫೈನಲ್‌ ಹಾದಿಯನ್ನು ಜೀವಂತವಾಗಿರಿಸಿಕೊಳ್ಳಬೇಕೆಂದರೆ ಭಾರತ ಸಿಡ್ನಿ ಟೆಸ್ಟ್‌ ಅನ್ನು ಗೆಲ್ಲಬೇಕಾಗುತ್ತದೆ.

ಈ ಸುದ್ದಿಯನ್ನು ಓದಿ: IND vs AUS: ‘ದಯವಿಟ್ಟು ವಿದಾಯ ಹೇಳಿ’-ರೋಹಿತ್‌ ಶರ್ಮಾಗೆ ಫ್ಯಾನ್ಸ್‌ ಆಗ್ರಹ!