Saturday, 4th January 2025

Money tips: 2025ರಲ್ಲಿ ಶ್ರೀಮಂತರಾಗುವುದು ಹೇಗೆ? ಇಲ್ಲಿದೆ ಟಿಪ್ಸ್‌

money tips
  • ಕೇಶವಪ್ರಸಾದ್‌.ಬಿ

ಹೊಸ ವರ್ಷದ ಹೊಸ್ತಿಲಿನಲ್ಲಿ ನಾವಿದ್ದೇವೆ. ಹಾಗಾದ್ರೆ 2025ರಲ್ಲಿ ನಿಮ್ಮ ಸಂಪತ್ತನ್ನು ಹೇಗೆ ಬೆಳೆಸಿ ಸಂರಕ್ಷಿಸಬಹುದು? ಹೇಗೆ ಹಣಕಾಸು ಪರಿಸ್ಥಿತಿಯನ್ನು ಮತ್ತಷ್ಟು ಬಲಪಡಿಸಿಕೊಳ್ಳಬಹುದು. ಸಿರಿವಂತಿಕೆಯ ಸಮೃದ್ಧಿಯನ್ನು ಹೇಗೆ ಬದುಕಿಗೆ ತಂದುಕೊಳ್ಳಬಹುದು? ಎಂಬುದರ ಬಗ್ಗೆ ವಿವರವಾಗಿ ತಿಳಿಯೋಣ.
ನಾವು ಬದುಕಿನಲ್ಲಿ ಯಾವುದೇ ಸಾಧನೆ ಮಾಡಬೇಕಿದ್ರೆ, ಇತಿಹಾಸವನ್ನು ಮರೆಯಬಾರದು. ಅದರಲ್ಲೂ ಹಿಂದಿನ ವರ್ಷ ಏನಾಯಿತು ಎಂಬುದನ್ನು ಗ್ರಹಿಸಿಕೊಂಡು, ಹೊಸ ನಿರ್ಧಾರವನ್ನು ಕೈಗೊಳ್ಳುವುದರಿಂದ ಸರಿಯಾದ ಹೆಜ್ಜೆಗಳನ್ನಿಡಲು ಸಾಧ್ಯವಾಗುತ್ತದೆ(Money tips).

2024 ಅಂದ್ರೆ ಚುನಾವಣೆಯ ವರ್ಷವಾಗಿತ್ತು. ಮೊದಲ ಐದು ತಿಂಗಳು ಸ್ಟಾಕ್‌ ಮಾರ್ಕೆಟ್‌ ಮಂದಗತಿಯಲ್ಲಿತ್ತು. ಆದರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಪುನಾರಾಯ್ಕೆಯಾದ ಬಳಿಕ ಸೆನ್ಸೆಕ್ಸ್‌ ಮತ್ತು ನಿಫ್ಟಿ ಹೈಜಂಪ್‌ ದಾಖಲಿಸಿತ್ತು. ಸೆಪ್ಟೆಂಬರ್‌ನಲ್ಲಿ ನಿಫ್ಟಿ 26,277 ಅಂಕಗಳ ಎತ್ತರಕ್ಕೆ ಏರಿತ್ತು. ಹೀಗಿದ್ದರೂ, ಅಕ್ಟೋಬರ್‌ ಬಳಿಕ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೂಡಿಕೆಗಳನ್ನು ಹಿಂತೆಗೆದುಕೊಂಡಿದ್ದರಿಂದ ಸೂಚ್ಯಂಕಗಳು ಕುಸಿಯಿತು. ಕಳೆದ ಮೂರು ತಿಂಗಳುಗಳಲ್ಲಿ ಫಾರಿನ್‌ ಇನ್‌ಸ್ಟಿಟ್ಯೂಶನಲ್‌ ಇನ್ವೆಸ್ಟರ್ಸ್‌ಗಳು 1 ಲಕ್ಷದ 70 ಸಾವಿರ ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಮತ್ತೊಂದು ಕಡೆ ದೇಶೀಯ ಹೂಡಿಕೆದಾರರು ಗಟ್ಟಿಯಾಗಿ ನಿಂತಿದ್ದಾರೆ. ಅಕ್ಟೋಬರ್‌ನಲ್ಲಿ ಮ್ಯೂಚುವಲ್‌ ಪಂಡ್‌ ಸಿಪ್‌ ಮೂಲಕವೇ ಷೇರುಪೇಟೆಯಲ್ಲಿ ಬರೋಬ್ಬರಿ 25,000 ಕೋಟಿ ರೂ.ಗಳ ದಾಖಲೆಯ ಪ್ರಮಾಣದಲ್ಲಿ ಹೂಡಿಕೆ ನಡೆದಿತ್ತು.

2024ರಲ್ಲಿ ಪ್ರೈಮರಿ ಮಾರುಕಟ್ಟೆಯಲ್ಲಿ ಒಟ್ಟು 317 ಕಂಪನಿಗಳ ಐಪಿಒ ಸುಗ್ಗಿಯೇ ನಡೆದಿತ್ತು. ಕಂಪನಿಗಳು ಐಪಿಒ ಮೂಲಕ 1 ಲಕ್ಷದ 80 ಸಾವಿರ ಕೋಟಿ ರೂ.ಗಳನ್ನು ಸಂಗ್ರಹಿಸಿವೆ. ಹುಂಡೈ ಮೋಟಾರ್‌ ಇಂಡಿಯಾ ಕಂಪನಿಯ 27,800 ಕೋಟಿ ರೂ.ಗಳ ಮೆಗಾ ಐಪಿಒ ಕೂಡ ನಡೆದಿದ್ದು, ಭಾರತೀಯ ಷೇರು ಮಾರುಕಟ್ಟೆಯ ಮಹತ್ವವನ್ನು ಸಾರಿದಂತಾಗಿದೆ. 2025ರಲ್ಲಿಯೂ ಎಲ್‌ಜಿ, ಫ್ಲಿಪ್‌ಕಾರ್ಟ್‌, ರಿಲಯನ್ಸ್‌ ಜಿಯೊ ಕಂಪನಿಗಳ ಮೆಗಾ ಐಪಿಒ ಅನ್ನು ನಿರೀಕ್ಷಿಸಲಾಗಿದೆ. ಅದೇ ರೀತಿ ಭಾರಿ ಸೈಬರ್‌ ಸ್ಕ್ಯಾಮ್‌ಗಳು ಕಳೆದ ವರ್ಷ ನಡೆದಿದ್ದು, ಜನ ಇದರಿಂದಾಗಿ 12,000 ಕೋಟಿ ರೂ.ಗೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾರೆ.

ಹಾಗಾದ್ರೆ 2025ರಲ್ಲಿ ಏನನ್ನು ನಿರೀಕ್ಷಿಸಬಹುದು?

ತಜ್ಞರ ಪ್ರಕಾರ, ಹೊಸ ವರ್ಷ ಷೇರುಗಳಲ್ಲಿ ಹೂಡಿಕೆ ಮಾಡುವವರು ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಏಕೆಂದರೆ ಕಾರ್ಪೊರೇಟ್‌ ಕಂಪನಿಗಳ ಆದಾಯದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಲಾರ್ಜ್‌ ಕ್ಯಾಪ್‌ ಕಂಪನಿಗಳಲ್ಲಿ ಹೆಚ್ಚಿನ ಹೂಡಿಕೆಯನ್ನು ಮಾಡಬೇಕು. ಮಿಡ್-ಕ್ಯಾಪ್‌ ಮತ್ತು ಸ್ಮಾಲ್-ಕ್ಯಾಪ್‌ ಕಂಪನಿಗಳ ಷೇರುಗಳಲ್ಲಿ ಹೂಡಿಕೆಯನ್ನು ಸ್ವಲ್ಪ ಕಡಿಮೆ ಮಾಡೋದು ಒಳ್ಳೆಯದು.
2024ರಲ್ಲಿ ಫಿಕ್ಸೆಡ್‌ ಇನ್‌ಕಮ್‌ ಸ್ಪೇಸ್‌ನಲ್ಲಿ ಅನಿಶ್ಚಿತತೆ ಇತ್ತು. ಹೊಸ ವರ್ಷ ಕೂಡ ಅದೇ ಪರಿಸ್ಥಿತಿ ಮುಂದುವರಿಯುವ ನಿರೀಕ್ಷೆ ಇದೆ. ಬಾಂಡ್‌ ಮಾರ್ಕೆಟ್‌ ಆಶಾದಾಯಕವಾಗಿದ್ದರೂ, ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿರಿಸಿದೆ.

2025ರಲ್ಲಿ ಬಡ್ಡಿ ದರ ಕಡಿತವಾಗುವ ನಿರೀಕ್ಷೆ ಇದ್ದರೂ, ಎಷ್ಟರ ಮಟ್ಟಿಗೆ ಇಳಿಕೆಯಾದೀತು ಎಂಬುದು ಖಚಿತವಾಗಿಲ್ಲ. ಇಂಥ ಅನಿಶ್ಚಿತತೆಯ ಸಂದರ್ಭ ಅಲ್ಪಾವಧಿಯ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ಕಳೆದ 9 ವರ್ಷಗಳಿಂದ ಷೇರು ಮಾರುಕಟ್ಟೆ ಲಾಭ ನೀಡಿದ್ದರೂ, ಸದ್ಯಕ್ಕೆ ಜಿಡಿಪಿ ಮಂದಗತಿಯಲ್ಲಿರುವುದರಿಂದ ಎಚ್ಚರ ಅಗತ್ಯ. ಆದ್ದರಿಂದ ಹೂಡಿಕೆಯ ರಿಸ್ಕ್‌ ಅನ್ನು ಡೈವರ್ಸಿಫೈ ಮಾಡುವುದು ಉತ್ತಮ. ಷೇರು, ಮ್ಯೂಚುವಲ್‌ ಫಂಡ್‌, ಬಾಂಡ್‌, ಇಟಿಎಫ್‌, ಚಿನ್ನ, ಬೆಳ್ಳಿಯಲ್ಲಿ ಹೂಡಿಕೆಯನ್ನು ಹಂಚಬೇಕು ಎನ್ನುತ್ತಾರೆ ತಜ್ಞರು.

2025ರಲ್ಲಿ ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವಾಗ ಕನ್ಸರ್ವೇಟಿವ್‌ ಅಥವಾ ಸಂಪ್ರದಾಯದಂತೆ ಇನ್ವೆಸ್ಟ್‌ ಮಾಡಿ ಎನ್ನುತ್ತಾರೆ ತಜ್ಞರು. ಅಂದರೆ ಲಾರ್ಜ್-ಕ್ಯಾಪ್‌ಗಳು ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ಗಿಂತ ಉತ್ತಮ ಲಾಭವನ್ನು ನೀಡುವ ಸಾಧ್ಯತೆ ಇದೆ. ಲಾರ್ಜ್‌ ಕ್ಯಾಪ್‌ ಷೇರು ಎಂದರೆ, 20,000 ಕೋಟಿ ರೂ. ಅಥವಾ ಹೆಚ್ಚು ಮಾರುಕಟ್ಟೆ ಬಂಡವಾಳ ಮೌಲ್ಯವನ್ನು ಹೊಂದಿರುವ ಕಂಪನಿಗಳು. ಉದಾಹರಣೆಗೆ ಟಿಸಿಎಸ್‌, ರಿಲಯನ್ಸ್‌ ಇಂಡಸ್ಟ್ರೀಸ್‌, ಇನ್ಫೋಸಿಸ್‌, ಮಹೀಂದ್ರಾ, ವಿಪ್ರೊ ಎಚ್‌ಎಎಲ್‌ ಇತ್ಯಾದಿ ಕಂಪನಿಗಳು.

ಮಿಡ್-ಕ್ಯಾಪ್‌ ಷೇರುಗಳೆಂದರೆ 5,000 ಕೋಟಿ ರೂ.ಗೂ ಹೆಚ್ಚು ಮಾರುಕಟ್ಟೆ ಬಂಡವಾಳ ಮೌಲ್ಯವಿರುವ ಕಂಪನಿಗಳು. ಉದಾಹರಣೆಗೆ ಎಲ್‌ಐಸಿ ಹೌಸಿಂಗ್‌ ಫೈನಾನ್ಸ್‌, ಕ್ಯಾಸ್ಟ್ರೋಲ್‌ ಇಂಡಿಯಾ, ಸುಜ್ಲಾನ್‌ ಎನರ್ಜಿ, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಇತ್ಯಾದಿ ಷೇರುಗಳು. ಸ್ಮಾಲ್‌ ಕ್ಯಾಪ್‌ ಷೇರು ಎಂದರೆ, 5,000 ಕೋಟಿ ರೂ.ಗಿಂತಲೂ ಕಡಿಮೆ ಮಾರುಕಟ್ಟೆ ಬಂಡವಾಳ ಮೌಲ್ಯ ಇರುವ ಕಂಪನಿಗಳು. ಉದಾಹರಣೆಗೆ ಬಜಾಜ್‌ ಕನ್‌ಸ್ಯೂಮರ್‌ ಕೇರ್‌, ಶೋಭಾ ಲಿಮಿಟೆಡ್‌, ವಿಎಸ್‌ಟಿ ಇಂಡಸ್ಟ್ರೀಸ್‌ ಇತ್ಯಾದಿ ಕಂಪನಿಗಳ ಷೇರುಗಳಾಗಿವೆ.

ಎರಡನೆಯದಾಗಿ, ಆಪ್ಷನ್‌ ಟ್ರೇಡಿಂಗ್‌ ಮತ್ತು ಕ್ರಿಪ್ಟೊ ಇನ್ವೆಸ್ಟ್‌ಮೆಂಟ್‌ಗಳಿಂದ ದೂರವಿದ್ದು ಬಿಡಿ. 2025ರಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚು ವೊಲಟಾಲಿಟಿಗಳು, ಅಂದ್ರೆ ಏರಿಳಿತಗಳು ಇರಬಹುದು. ಇದರಿಂದ ಹೂಡಿಕೆ ಹೆಚ್ಚು ರಿಸ್ಕಿ ಆಗಬಹುದು. ಆದ್ದರಿಂದ ಆಪ್ಷನ್‌ ಟ್ರೇಡಿಂಗ್‌, ಕ್ರಿಪ್ಟೊ ಕರೆನ್ಸಿಗಳು ಆಕರ್ಷಕವಾಗಿ ಕಂಡರೂ, ಅವುಗಳಲ್ಲಿ ಹೂಡಿಕೆ ಬೇಡ ಎನ್ನುತ್ತಾರೆ ತಜ್ಞರು.

ಮಾರುಕಟ್ಟೆ ನಿಯಂತ್ರಕ ಸೆಬಿಯ ಪ್ರಕಾರ, 2020ರಿಂದ 2024 ರ ಅವಧಿಯಲ್ಲಿ ವೈಯಕ್ತಿಕ ಫ್ಯೂಚರ್‌ ಆಂಡ್‌ ಆಪ್ಷನ್‌ ಟ್ರೇಡರ್ಸ್‌ಗಳ ಪೈಕಿ ಟಾಪ್‌ನಲ್ಲಿದ್ದ 3.5% ಮಂದಿಯಲ್ಲಿ ಪ್ರತಿಯೊಬ್ಬರೂ ಸರಾಸರಿ 28 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. 92.8% ಮಂದು ಟ್ರೇಡರ್ಸ್‌ ಸರಾಸರಿ 2 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಆಪ್ಷನ್‌ ಟ್ರೇಡಿಂಗ್‌ ಅನ್ನು ಗೊತ್ತಿಲ್ಲದೆ ಮಾಡೋದು ಅತ್ಯಂತ ಅಪಾಯಕಾರಿ.

ಮೂರನೆಯದಾಗಿ, ಅಮೆರಿಕದ ಫೆಡರಲ್‌ ರಿಸರ್ವ್‌ 2025ರಲ್ಲಿ ಕೇವಲ ಎರಡು ಬಾರಿ ಮಾತ್ರ ಬಡ್ಡಿ ದರ ಕಡಿತಗೊಳಿಸುವ ಸುಳಿವನ್ನು ಕೊಟ್ಟಿದೆ. ಆದ್ದರಿಂದ 2025ರ ಮೊದಲಾರ್ಧ ಬಡ್ಡಿ ದರ ಇಳಿಕೆಯಾಗುವ ನಿರೀಕ್ಷೆ ಇದ್ದರೂ, ಎಷ್ಟು ಇಳಿಯಬಹುದು ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಇಲ್ಲ. ನೆನಪಿಡಿ, ಅಮೆರಿಕದಲ್ಲಿ ಫೆಡರಲ್‌ ರಿಸರ್ವ್‌ ತನ್ನ ಬಡ್ಡಿ ದರಗಳನ್ನು ಕಡಿಮೆ ಮಾಡದಿದ್ದರೆ, ಎಮರ್ಜಿಂಗ್‌ ಮಾರ್ಕೆಟ್‌ ಆಗಿರುವ ಭಾರತಕ್ಕೆ ಅನುಕೂಲ ಆಗುವುದಿಲ್ಲ. ಹೀಗಾಗಿ ಬಾಂಡ್‌ಗಳಲ್ಲಿ ಹೂಡಿಕೆ ಮೂಡುವುದಿದ್ದರೆ, ಲಾಂಗ್‌ ಟರ್ಮ್‌ಗಿಂತ ಶಾರ್ಟ್‌ ಟರ್ಮ್‌ ಬಾಂಡ್‌ಗಳು ಒಳ್ಳೆಯದು. ಈಗಾಗಲೇ ಸರ್ಕಾರದ 10 ವರ್ಷ ಅವಧಿಯ ಬಾಂಡ್‌ಗಳು ನೀಡುವ ಬಡ್ಡಿ ದರವು 7.35% ರಿಂದ 6.75%ಕ್ಕೆ ಇಳಿಕೆಯಾಗಿದೆ ಎಂಬುದನ್ನು ಇಲ್ಲಿ ಗಮನಿಸಬಹುದು.

ನಾಲ್ಕನೆಯದಾಗಿ, ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಇದ್ದಾಗ ಡಿಫೆನ್ಸಿವ್‌ ಸೆಕ್ಟರ್‌ಗಳ ಮೇಲಿನ ಅವಲಂಬನೆ ಹೆಚ್ಚುತ್ತದೆ. ಅಂಥ ಡಿಫೆನ್ಸಿವ್‌ ಸೆಕ್ಟರ್‌ಗಳ ಪೈಕಿ ಫಾರ್ಮಾ ಮತ್ತು ಹೆಲ್ತ್‌ ಕೇರ್‌ ಸೆಕ್ಟರ್‌ ಮುಂಚೂಣಿಯಲ್ಲಿದೆ. ಆರೋಗ್ಯ ವೆಚ್ಚಗಳು ಹೆಚ್ಚುತ್ತಿರುವುದರಿಂದ ಭಾರತೀಯ ಔಷಧ ತಯಾರಕ ಕಂಪನಿಗಳಿಗೆ ಹೆಚ್ಚು ಅದಾಯ ಮತ್ತು ಮಾರುಕಟ್ಟೆ ವಿಸ್ತರಣೆಯಾಗಬಹುದು. ಸರ್ಕಾರ ಕೂಡ ಸಂಶೊಧನೆ ಮತ್ತು ಅಭಿವೃದ್ಧಿಗೆ ಬೇಕಾದ ಪಾಲಿಸಿಗಳನ್ನು ತರುತ್ತಿದೆ. ಫಾರ್ಮಾ ಮತ್ತು ಹೆಲ್ತ್‌ ಕೇರ್‌ ಕಳೆದ ಒಂದು ವರ್ಷದಲ್ಲಿ ಹೂಡಿಕೆದಾರರಿಗೆ 39% ಆದಾಯವನ್ನು ಕೊಟ್ಟಿರುವುದನ್ನು ಇಲ್ಲಿ ಗಮನಿಸಬಹುದು.

ಐದನೆಯದಾಗಿ, ಚಿನ್ನ ಮತ್ತು ಬೆಳ್ಳಿಯಲ್ಲೂ ಹೂಡಿಕೆಯನ್ನು ಮುಂದುವರಿಸಿ ಎನ್ನುತ್ತಾರೆ ತಜ್ಞರು.2024ರಲ್ಲಿ ಬಂಗಾರದ ದರದಲ್ಲಿ 18.5% ಏರಿಕೆಯಾಗಿತ್ತು. ನಾನಾ ದೇಶಗಳಲ್ಲಿ ಸೆಂಟ್ರಲ್‌ ಬ್ಯಾಂಕ್‌ಗಳೂ ಟನ್ನುಗಟ್ಟಲೆ ಬಂಗಾರವನ್ನು ಖರೀದಿಸಿದ್ದವು. ಜಿಯೊಪೊಲಿಟಿಕಲ್‌ ಟೆನ್ಷನ್‌ಗಳು ಮತ್ತು ಹಣದುಬ್ಬರದ ಪರಿಸ್ಥಿತಿಯಲ್ಲಿ ಬಂಗಾರವು ಹೂಡಿಕೆಯ ಸುರಕ್ಷಿತ ಸಾಧನವಾಗುತ್ತದೆ. ಮೋತಿಲಾಲ್‌ ಓಸ್ವಾಲ್‌ ಫೈನಾನ್ಷಿಯಲ್‌ ಸರ್ವೀಸ್‌ ಪ್ರಕಾರ ಮುಂದಿನ ಎರಡು ವರ್ಷಗಳಲ್ಲಿ ಬಂಗಾರದ ದರ ಪ್ರತಿ 10 ಗ್ರಾಮ್‌ಗೆ 86,000 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ. ಚಿನ್ನ ಮತ್ತು ಬೆಳ್ಳಿ ಎರಡೂ ಕೇವಲ ಅಲಂಕಾರಿಕ ಆಭರಣಗಳಿಗೆ ಮಾತ್ರವಲ್ಲದೆ, ಉದ್ಯಮ ವಲಯದಲ್ಲೂ ಬಳಕೆಯಾಗುತ್ತಿದೆ. ಹೀಗಾಗಿ ಅವುಗಳಿಗೆ ಬೇಡಿಕೆ ಸದಾ ಇರುತ್ತದೆ. ಆದ್ದರಿಂದ ದರ ಕಡಿಮೆಯಾಗಿದ್ದಾಗ ಖರೀದಿಸುವುದರಿಂದ ಲಾಭದಾಯಕವಾಗುತ್ತದೆ.

ಆರನೆಯದಾಗಿ, ಉನ್ನತ ಶಿಕ್ಷಣ ಪಡೆಯಲು ವಿದೇಶಗಳಿಗೆ ತೆರಳುವ ಮಕ್ಕಳ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಿದೆ. 2024ರಲ್ಲಿ 13 ಲಕ್ಷ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಗಳಿಗೆ ಹೋಗಿದ್ದಾರೆ. ವಿದೇಶದಲ್ಲಿ ಶಿಕ್ಷಣ ಪಡೆಯುವುದು ತಪ್ಪಲ್ಲ. ಆದರೆ ಇದಕ್ಕಾಗಿ ಮಾಡುವ ಖರ್ಚು ವೆಚ್ಚ ಅಥವಾ ಇನ್ವೆಸ್ಟ್‌ಮೆಂಟ್‌ ಬಗ್ಗೆ ಯೋಚಿಸುವುದು ಸೂಕ್ತ. ವಿದೇಶಿ ಶಿಕ್ಷಣ ಪಡೆದ ಬಳಿಕ, ಹತ್ತು ವರ್ಷದೊಳಗೆ ಎಷ್ಟು ರಿಟರ್ನ್‌ ಸಿಗಬಹುದು ಎಂಬ ಲೆಕ್ಕಾಚಾರ ಅವಶ್ಯಕ ಎನ್ನುತ್ತಾರೆ ತಜ್ಞರು. ಆದ್ದರಿಂದ ವೃಥಾ ಇತರರನ್ನು ಅನುಕರಿಸುವುದರ ಬದಲಿಗೆ ರಿಸರ್ಚ್‌ ಮತ್ತು ಕ್ಯಾಲ್ಕುಲೇಶನ್‌ ಮಾಡಿ ನಿರ್ಧಾರ ಕೈಗೊಳ್ಳುವುದು ಸೂಕ್ತ.

ನಾವು ಹೃದಯ ಶ್ರೀಮಂತಿಕೆಯ ಬಗ್ಗೆ ಸಾಕಷ್ಟು ಕೇಳಿದ್ದೇವೆ, ಆದರೆ ಅದರ ಜತೆಗೆ ಬದುಕಿನ ಸಮೃದ್ಧ ನಿರ್ವಹಣೆಗೆ ಶ್ರೀಮಂತಿಕೆಯೂ ಅಗತ್ಯ. ಸಿರಿವಂತಿಕೆಯನ್ನು ಗಳಿಸುವುದೂ ಒಂದು ವಿಜ್ಞಾನ. ಅದಕ್ಕೆ ಅದರದ್ದೇ ಆದ ರೀತಿಗಳಿವೆ. ಪ್ರಕ್ರಿಯೆ ಇದೆ. ಅದನ್ನು ಕಲಿತು, ಅರ್ಥ ಮಾಡಿಕೊಂಡು ಅನುಸರಿಸಿದರೆ, ಸಿರಿವಂತರಾಗಬಹುದು. ಇಲ್ಲದಿದ್ದರೆ, ಎಷ್ಟೇ ಕಷ್ಟಪಟ್ಟರೂ, ಬಡವರಾಗಿಯೇ ಉಳಿದುಕೊಳ್ಳಬೇಕಾಗುತ್ತದೆ. ನಿಮ್ಮ ಸುತ್ತುಮುತ್ತಲಿನ ಪರಿಸರ ಮಾತ್ರ ಸಿರಿವಂತಿಕೆಗೆ ಕಾರಣವಾಗುವುದಿಲ್ಲ. ಉದಾಹರಣೆಗೆ ಮುಕೇಶ್‌ ಅಂಬಾನಿ ಮತ್ತು ಅನಿಲ್‌ ಅಂಬಾನಿ ಇಬ್ಬರೂ ಒಂದೇ ಕುಟುಂಬದಲ್ಲಿ ಅಣ್ಣ ತಮ್ಮ ಆಗಿ ಹುಟ್ಟಿ ಬೆಳೆದರೂ, ಮುಕೇಶ್‌ ಅಂಬಾನಿಯವರಷ್ಟು ಸಿರಿವಂತಿಕೆಯನ್ನು ಗಳಿಸಲು ಅನಿಲ್‌ ಅಂಬಾನಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಸೂಕ್ತವಾದ ಹಣಕಾಸು ಯೋಜನೆ ಅಥವಾ ಫೈನಾನ್ಷಿಯಲ್ ಪ್ಲಾನಿಂಗ್‌ ಮೂಲಕ, ಸ್ಟೆಪ್‌ ಬೈ ಸ್ಟೆಪ್‌ ಪ್ರೊಸೆಸ್‌ ಮೂಲಕ ನಿಮ್ಮ ಹಣವನ್ನು ಹೂಡಿಕೆ ಮಾಡಿ, ನಿಮ್ಮ ಸಮೃದ್ಧಿಯ ಗುರಿಯನ್ನು ಮುಟ್ಟಬಹುದು.

ಕೊನೆಯದಾಗಿ, ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿಯವರು ಕಳೆದ ನಾಲ್ಕು ವರ್ಷಗಳಿಂದ ಸಂಬಳವನ್ನೇ ತೆಗೆದುಕೊಳ್ಳುತ್ತಿಲ್ಲ. ಕೋವಿಡ್‌ ಬರುವುದಕ್ಕಿಂತ ಮೊದಲು ವಾರ್ಷಿಕ 15 ಕೋಟಿ ರೂ. ಸಂಬಳ ಅವರಿಗಿತ್ತು. ಹಾಗಾದ್ರೆ ಅವರಿಗೆ ಭಾರಿ ಆದಾಯ ಹೇಗೆ ಸಿಗುತ್ತದೆ? ಈ ಪ್ರಶ್ನೆಗೆ ಉತ್ತರ, ರಿಲಯನ್ಸ್‌ ಇಂಡಸ್ಟ್ರೀಸ್‌ನಲ್ಲಿರುವ ಷೇರುಗಳು. ರಿಲಯನ್ಸ್‌ ಇಂಡಸ್ಟ್ರೀಸ್‌ನಲ್ಲಿ 42% ಷೇರುಗಳನ್ನು ಮುಕೇಶ್‌ ಅಂಬಾನಿಯವರು ಹೊಂದಿದ್ದಾರೆ. ಜಿಯೊ ಫೈನಾನ್ಷಿಯಲ್‌ ಸರ್ವೀಸ್‌ ನಲ್ಲಿಯೂ 45% ಷೇರುಗಳನ್ನು ಹೊಂದಿದ್ದಾರೆ. ಷೇರುಗಳಿಂದ ಸಿಗುವ ಡಿವಿಡೆಂಡ್‌, ನಾನಾ ಉದ್ದಿಮೆಗಳಲ್ಲಿ ಅವರ ಹೂಡಿಕೆಯಿಂದ ಭಾರಿ ಸಂಪತ್ತನ್ನು ಮುಕೇಶ್‌ ಅಂಬಾನಿ ಗಳಿಸುತ್ತಾರೆ. ಅಂಬಾನಿಯವರು ಬೇರೆ ಕಂಪನಿಗಳ ಷೇರುಗಳನ್ನು ಖರೀದಿಸುತ್ತಾರೆ. ಆದರೆ ತಮ್ಮ ಷೇರುಗಳನ್ನು ಮಾರಾಟ ಮಾಡುವುದಿಲ್ಲ. ಇದು ಅವರ ಸಂಪತ್ತಿನ ಸೀಕ್ರೆಟ್‌ ಕೂಡ ಹೌದು.

ಈ ಸುದ್ದಿಯನ್ನೂ ಓದಿ: Money Tips: Health Insurance ಮಾಡಿಸುವ ತಿಳಿದಿರಲೇ ಬೇಕಾದ ಅಂಶಗಳಿವು