Saturday, 4th January 2025

IND vs AUS: ʻನಾವು ಹೇಳಬಾರದು, ಅವರೇ ಅರ್ಥ ಮಾಡಿಕೊಳ್ಳಬೇಕುʼ-ರಿಷಭ್‌ ಪಂತ್‌ಗೆ ರೋಹಿತ್‌ ಶರ್ಮಾ ಪಾಠ!

IND vs AUS: 'Rishabh Pant needs to understand what is required of him'says Rohit Sharma

ಮೆಲ್ಬರ್ನ್: ನಾಲ್ಕನೇ ಹಾಗೂ ಬಾಕ್ಸಿಂಗ್‌ ಡೇ ಟೆಸ್ಟ್‌ (IND vs AUS) ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಬಗೇಜವಾಬ್ದಾರಿಯುತ ಶಾಟ್‌ಗೆ ಕೈ ಹಾಕಿ ವಿಕೆಟ್‌ ಒಪ್ಪಿಸಿದ ಭಾರತ ತಂಡದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಮನೋಭಾವದ ಬಗ್ಗೆ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಪ್ರತಿಕ್ರಿಯಿಸಿದ್ದಾರೆ. ಪಂದ್ಯದ ಸನ್ನಿವೇಶವನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕ ಹಾಗೆ ಅವರು ಆಡಬೇಕು ಎಂದು ಹೇಳಿದ್ದಾರೆ.

ಕಳೆದ ಎರಡು ಆಸ್ಟ್ರೇಲಿಯಾ ಪ್ರವಾಸಗಳಲ್ಲಿ ರಿಷಭ್‌ ಪಂತ್‌ ತಮ್ಮ ನೈಜ ಬ್ಯಾಟಿಂಗ್‌ ಬಲದಿಂದ ಭಾರತ ತಂಡಕ್ಕೆ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು. 2018-19ರ ಪ್ರವಾಸ ಹಾಗೂ 2020-21ರ ಪ್ರವಾಸದಲ್ಲಿ ಭಾರತ ತಂಡ ಸತತ ಎರಡು ಬಾರಿ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಗೆಲ್ಲಲು ರಿಷಭ್‌ ಪಂತ್‌ ಪ್ರಮುಯಖ ಪಾತ್ರವನ್ನು ವಹಿಸಿದ್ದರು. ಅದೇ ಹಾದಿಯಲ್ಲಿಯೇ ಪ್ರಸಕ್ತ ಸರಣಿಯಲ್ಲಿ ರಿಷಭ್‌ ಪಂತ್‌ ಬ್ಯಾಟ್‌ ಮಾಡಿದರು. ಆದರೆ, ಅವರು ಯಶಸ್ವಿಯಾಗಲಿಲ್ಲ.

ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ 28 ರನ್‌ ಗಳಿಸಿ ಉತ್ತಮ ಆರಂಭ ಪಡೆದಿದ್ದ ರಿಷಭ್‌ ಪಂತ್‌ ಬೇಜವಾಬ್ದಾರಿಯುತ ಶಾಟ್‌ಗೆ ಕೈ ಹಾಕಿ ಕ್ಯಾಚ್‌ ಕೊಟ್ಟಿದ್ದರು. ಅದೇ ರೀತಿ ದ್ವಿತೀಯ ಇನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್‌ ಜೊತೆ 88 ರನ್‌ಗಳ ಜೊತೆಯಾಟವನ್ನು ಆಡಿದ್ದರು ಹಾಗೂ ವೈಯಕ್ತಿಕವಾಗಿ 30 ರನ್‌ ಗಳಿಸಿ ಉತ್ತಮ ಆರಂಭವನ್ನು ಪಡೆದಿದ್ದರು. ಆದರೆ, ಟ್ರಾವಿಸ್‌ ಹೆಡ್‌ಗೆ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿ ಬೌಂಡರಿ ಲೈನ್‌ ಬಳಿ ಕ್ಯಾಚಿತ್ತರು. ಆದರೆ, ಈ ಸನ್ನಿವೇಶದಲ್ಲಿ ದೊಡ್ಡ ಹೊಡೆತ ಅಗತ್ಯವಿರಲಿಲ್ಲ.

IND vs AUS: ʻಮಾನಸಿಕ ಆಘಾತʼ-ಬಾಕ್ಸಿಂಗ್‌ ಡೇ ಟೆಸ್ಟ್‌ ಸೋಲಿಗೆ ಕಾರಣ ತಿಳಿಸಿದ ರೋಹಿತ್‌ ಶರ್ಮಾ!

ಈ ಎರಡೂ ಇನಿಂಗ್ಸ್‌ಗಳಲ್ಲಿ ರಿಷಭ್‌ ಪಂತ್‌ ಅವರ ಬೇಜವಾಬ್ದಾರಿಯು ಹೊಡೆತಕ್ಕೆ ಕೈ ಹಾಕಿ ತಮ್ಮ ವಿಕೆಟ್‌ ಅನ್ನು ಕೈ ಚೆಲ್ಲಿಕೊಂಡಿದ್ದರು. ಈ ವೇಳೆ ಕಾಮೆಂಟರಿ ಬಾಕ್ಸ್‌ನಲ್ಲಿ ಕುಳಿತಿದ್ದ ಸುನೀಲ್‌ ಗವಾಸ್ಕರ್‌, ರಿಷಭ್‌ ಪಂತ್‌ ಅವರನ್ನು ಮೂರ್ಖ ಎಂದು ಟೀಕಿಸಿದ್ದರು. ಅಲ್ಲದೆ ಅಭಿಮಾನಿಗಳು ಕೂಡ ಪಂತ್‌ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ರಿಷಭ್‌ ಪಂತ್‌ ಬ್ಯಾಟಿಂಗ್‌ ಬಗ್ಗೆ ರೋಹಿತ್‌ ಶರ್ಮಾ ಹೇಳಿದ್ದಿದು

ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ನಾಯಕ ರೋಹಿತ್‌ ಶರ್ಮಾಗೆ ರಿಷಭ್‌ ಪಂತ್‌ ಔಟ್‌ ಆದ ಬಗ್ಗೆ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, “ಪಂದ್ಯ ಈಗಷ್ಟೇ ಮುಗಿದಿದೆ. ಇಂದು (ಸೋಮವಾರ) ಇದರ (ಪಂತ್‌ ವಿಕೆಟ್‌) ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ನಿಸ್ಸಂಶಯವಾಗಿ ನಾವು ಪಂದ್ಯವನ್ನು ಕಳೆದುಕೊಂಡಿದ್ದೇವೆ ಹಾಗೂ ಪಂದ್ಯ ಹೇಗೆ ಸಾಗಿದೆ ಎಂಬುದರ ಬಗ್ಗೆ ಎಲ್ಲರೂ ನಿರಾಶೆಯಾಗಿದ್ದಾರೆ. ಆದರೆ, ಇದರ ಹೊರತಾಗಿಯೂ, ರಿಷಭ್‌ ಪಂತ್ ಅವರಿಗೆ ಏನು ಬೇಕು ಎಂಬುದನ್ನು ಸ್ಪಷ್ಟವಾಗಿ ಅವರೇ ಅರ್ಥಮಾಡಿಕೊಳ್ಳಬೇಕು. ನಮ್ಮಲ್ಲಿ ಯಾರಾದರೂ ಹೇಳುವುದಕ್ಕಿಂತ ಹೆಚ್ಚಾಗಿ ಈ ಬಗ್ಗೆ ಅವರೇ ಸ್ವತಃ ಅರ್ಥಮಾಡಿಕೊಳ್ಳಬೇಕು. ಪಂತ್‌ ಬ್ಯಾಟಿಂಗ್‌ ಬಗ್ಗೆ ನಾವು ಮಿಶ್ರ ಅಭಿಪ್ರಾಯಗಳನ್ನು ಹೊಂದಿದ್ದೇವೆ. ಇದೇ ಆಟದಿಂದ ಅವರು ನಮಗೆ ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಈ ದೃಷ್ಟಿಯಲ್ಲಿ ಅವರ ಪ್ರಯತ್ನ ಸರಿ ಎಂದು ಅನಿಸುತ್ತದೆ, ಆದರೆ, ಸನ್ನಿವೇಶವನ್ನು ನೋಡುವುದಾದರೆ ಅವರ ಆಟ ಬೇಸರವನ್ನು ತರಿಸುತ್ತದೆ,” ಎಂದು ತಿಳಿಸಿದ್ದಾರೆ.

ಭಾರತ ತಂಡಕ್ಕೆ ಹೀನಾಯ ಸೋಲು

ಅಂತಿಮ ದಿನವಾದ ಸೋಮವಾರ ಮೊದಲನೇ ಸೆಷನ್‌ನಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಭಾರತ, ಎರಡನೇ ಸೆಷನ್‌ನಲ್ಲಿ ಯಶಸ್ವಿ ಜೈಸ್ವಾಲ್‌ (84 ರನ್‌) ಹಾಗೂ ರಿಷಭ್‌ ಪಂತ್‌ (30 ರನ್‌) ಅವರ 88 ರನ್‌ಗಳ ಜೊತೆಯಾಟದಿಂದ 121 ರನ್‌ಗಳನ್ನು ಕಲೆ ಹಾಕಿತ್ತು. ಆದರೆ, ಒಮ್ಮೆ ರಿಷಭ್‌ ಪಂತ್‌ ಔಟ್‌ ಆದ ಬಳಿಕ ಯಶಸ್ವಿ ಜೈಸ್ವಾಲ್‌ ಕೂಡ ವಿಕೆಟ್‌ ಕೈಚೆಲ್ಲಿದರು. ಮತ್ತೊಂದು ಕಡೆ ರವೀಂದ್ರ ಜಡೇಜಾ, ವಾಷಿಂಗ್ಟನ್‌ ಸುಂದರ್‌ ಹಾಗೂ ನಿತೀಶ್‌ ಕುಮಾರ್‌ ರೆಡ್ಡಿ ಕೂಡ ವೈಫಲ್ಯ ಅನುಭವಿಸಿದರು. ಅಂತಿಮವಾಗಿ ಭಾರತ ಕನಿಷ್ಠ ಡ್ರಾ ಸಾಧಿಸಲು ಸಾಧ್ಯವಾಗದೆ ಹೀನಾಯ ಸೋಲು ಅನುಭವಿಸಿತು.

ಈ ಸುದ್ದಿಯನ್ನು ಓದಿ: IND vs AUS: ಬ್ಯಾಟಿಂಗ್‌ ವೈಫಲ್ಯಕ್ಕೆ ಭಾರಿ ಬೆಲೆ ತೆತ್ತ ಭಾರತ, ಆಸ್ಟ್ರೇಲಿಯಾಗೆ ಭರ್ಜರಿ ಜಯ!