Saturday, 4th January 2025

New Year Celebration: ಬೆಂಗಳೂರಲ್ಲಿ ಡಿ.31ರ ರಾತ್ರಿ ಎಲ್ಲ ಮೇಲ್ಸೇತುವೆಗಳಲ್ಲಿ ಸಂಚಾರ ನಿರ್ಬಂಧ; ಈ ರಸ್ತೆಗಳಲ್ಲಿ ಸಂಚಾರ, ಪಾರ್ಕಿಂಗ್‌ ನಿಷೇಧ

ಬೆಂಗಳೂರು: ಹೊಸ ವರ್ಷಾಚರಣೆ (New Year Celebration) ನಿಮಿತ್ತ ಬೆಂಗಳೂರು ನಗರದ ಎಲ್ಲ ಮೇಲ್ಲೇತುವೆಗಳಲ್ಲಿ ಡಿ.31ರಂದು ರಾತ್ರಿ 11ರಿಂದ ಜ.1ರ ಬೆಳಗ್ಗೆ 6ಗಂಟೆವರೆಗೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಇನ್ನು ಎಂಜಿ ರಸ್ತೆಯಲ್ಲಿ ಜನ ಸಂದಣಿ ಹೆಚ್ಚಾಗುವ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಅಲ್ಲದೇ ಇಂದಿರಾ ನಗರ, ಫೀನಿಕ್ಸ್‌ ಮಾಲ್‌ ಹಾಗೂ ನೆಕ್ಸಸ್‌ ಶಾಂತಿನಿಕೇತನ್‌ ಮಾಲ್‌ಗೆ ಹೋಗುವವರಿಗೆ ಡ್ರಾಪ್‌ ಆಫ್‌ ಮತ್ತು ಪಿಕ್‌ ಅಪ್‌ ಪಾಯಿಂಟ್‌ಗಳನ್ನು ಟ್ರಾಫಿಕ್‌ ಪೊಲೀಸ್‌ ವಿಭಾಗ ನಿಗದಿ ಮಾಡಿದೆ.

ಈ ಬಗ್ಗೆ ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಎಂ.ಎನ್‌.ಅನುಚೇತ್‌ ಮಾಹಿತಿ ನೀಡಿದ್ದು, ಹೊಸ ವರ್ಷಾಚರಣೆ ವೇಳೆ ಸಾರ್ವಜನಿಕರು ಒಟ್ಟಾಗಿ ಸೇರುವುದರಿಂದ ಅಪಘಾತಗಳು ಸೇರಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಡಿಸೆಂಬರ್‌ 31 ರಂದು ರಾತ್ರಿ 11 ರಿಂದ ಜನವರಿ 1ರ ಬೆಳಗ್ಗೆ 6ರ ವರೆಗೆ ಬೆಂಗಳೂರು ನಗರದ ಎಲ್ಲಾ ಮೇಲ್ಸೇತುವೆಗಳಲ್ಲಿ (ಕೆಐಎ ವಿಮಾನ ನಿಲ್ದಾಣಕ್ಕೆ ಹೋಗುವ ಎಲಿವೇಟೆಡ್‌ ಎಕ್ಸ್‌ಪ್ರೆಸ್‌ವೇ ಹೊರತುಪಡಿಸಿ) ಎಲ್ಲಾ ರೀತಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಆದರೆ, ವಿಮಾನ ನಿಲ್ದಾಣದ ಎಲಿವೇಟೆಡ್‌ ಎಕ್ಸ್‌ಪ್ರೆಸ್‌ವೇಯಲ್ಲಿ ಮಾತ್ರ ದ್ವಿಚಕ್ರ ವಾಹನಗಳ ಸಂಚಾರವನ್ನು ಡಿಸೆಂಬರ್‌ 31ರ ರಾತ್ರಿ 10 ರಿಂದ ಜನವರಿ 1ರ ಬೆಳಗ್ಗೆ 6 ಗಂಟೆಯವರೆಗೂ ನಿರ್ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಹೊಸ ವರ್ಷಾಚರಣೆ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಲಾಗಿದ್ದು, ಡಿಸೆಂಬರ್‌ 31ರ ರಾತ್ರಿ 1ರ ವರೆಗೆ ಸಾರ್ವತ್ರಿಕವಾಗಿ ಹೊಸ ವರ್ಷ ಆಚರಿಸಲು ಅನುಮತಿಯಿದೆ. ಬೆಂಗಳೂರು ನಗರದಲ್ಲಿ ಭದ್ರತೆಗಾಗಿ 11,830 ಪೊಲೀಸ್‌ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಬೆಂಗಳೂರು ಪೊಲೀಸ್‌ ಆಯುಕ್ತರಾದ ಬಿ.ದಯಾನಂದ್‌ ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | New year Celebration: ಬೆಂಗಳೂರಲ್ಲಿ ಹೊಸ ವರ್ಷಾಚರಣೆ ಮತ್ತಷ್ಟು ಬಿಗಿ: ಜಿ.ಪರಮೇಶ್ವರ್

ವಾಹನ ಸಂಚಾರ ಮತ್ತು ಪಾರ್ಕಿಂಗ್‌ ನಿಷೇಧ ಎಲ್ಲೆಲ್ಲಿ?
ಹೊಸ ವರ್ಷಾಚರಣೆ ನಿಮಿತ್ತ ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಲಾಗಿದ್ದು, ಡಿಸೆಂಬರ್ 31ರ ರಾತ್ರಿ 8 ರಿಂದ ಮಧ್ಯರಾತ್ರಿ 2ರ ವರೆಗೆ ಈ ಕೆಳಕಂಡ ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ಪಾರ್ಕಿಂಗ್ ನಿಷೇಧ ಮಾಡಲಾಗಿದೆ.

  • ಎಂ.ಜಿ. ರಸ್ತೆ : ಅನಿಲ್ ಕುಂಬ್ಳೆ ವೃತ್ತದಿಂದ ಮೆಯೊ ಹಾಲ್ ಬಳಿಯ ರೆಸಿಡೆನ್ಸಿ ರಸ್ತೆ ಜಂಕ್ಷನ್‌ವರೆಗೆ
  • ಬ್ರಿಗೇಡ್ ರಸ್ತೆ : ಕಾವೇರಿ ಎಂಪೋರಿಯಂ ಜಂಕ್ಷನ್‌ನಿಂದ ಅಪೇರಾ ಜಂಕ್ಷನ್‌ವರೆಗೆ
  • ಚರ್ಚ್ ಸ್ಟ್ರೀಟ್ : ಬ್ರಿಗೇಡ್‌ ರಸ್ತೆ ಜಂಕ್ಷನ್‌ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್‌ವರೆಗೆ
  • ಮ್ಯೂಸಿಯಂ ರಸ್ತೆ: ಎಂ.ಜಿ. ರಸ್ತೆ ಜಂಕ್ಷನ್‌ನಿಂದ ಹಳೇ ಮದ್ರಾಸ್ ಬ್ಯಾಂಕ್ ರಸ್ತೆ (ಎಸ್‌ಬಿಐ) ವೃತ್ತದವರೆಗೆ
  • ರೆಸ್ಟ್ ಹೌಸ್ ರಸ್ತೆ : ಮ್ಯೂಸಿಯಂ ರಸ್ತೆ ಜಂಕ್ಷನ್‌ನಿಂದ ಬ್ರಿಗೇಡ್ ರಸ್ತೆ ಜಂಕ್ಷನ್‌ವರೆಗೆ
  • ರೆಸಿಡೆನ್ಸಿ ಕ್ರಾಸ್ ರಸ್ತೆ : ರೆಸಿಡೆನ್ಸಿ ರಸ್ತೆ ಜಂಕ್ಷನ್‌ನಿಂದ ಎಂ.ಜಿ. ರಸ್ತೆ ಜಂಕ್ಷನ್‌ವರೆಗೆ (ಶಂಕರ್‌ನಾಗ್ ಚಿತ್ರಮಂದಿರ)

ಪೂರ್ವ ವಿಭಾಗದ ವ್ಯಾಪ್ತಿಯಲ್ಲಿ ಸಂಚಾರ ಮಾರ್ಪಾಡು

2025ರ ಹೊಸ ವರ್ಷದ ಆಚರಣೆ ಪ್ರಯುಕ್ತ ಡಿ.31ರ ಸಂಜೆ 4ಗಂಟೆಯಿಂದ ಜ.1ರ ಬೆಳಗ್ಗೆ 6ಗಂಟೆಯವರೆಗೆ ಸಂಚಾರ ಪೂರ್ವ ವಿಭಾಗದ ವ್ಯಾಪ್ತಿಯಲ್ಲಿ ಸಾರ್ವಜನಿಕರ ಮತ್ತು ವಾಹನಗಳ ಸುಗಮ ಸಂಚಾರದ ಹಿತದೃಷ್ಟಿಯಿಂದ ಈ ಕೆಳಕಂಡಂತೆ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿದೆ.

ವಾಹನ ನಿಲುಗಡೆ ನಿರ್ಬಂಧಿಸಿರುವ ರಸ್ತೆಗಳು: (ರಸ್ತೆಯ ಎರಡೂ ಬದಿಯಲ್ಲಿ)

  1. ಇಂದಿರಾನಗರ 100 ಅಡಿ ರಸ್ತೆಯ ಹಳೆ ಮದ್ರಾಸ್ ರಸ್ತೆ ಜಂಕ್ಷನ್‌ನಿಂದ ದೊಮ್ಮಲೂರು ಪ್ಲೈ ಓವ‌ರ್ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಯಲ್ಲಿ.
  2. ಇಂದಿರಾನಗರ 12ನೇ ಮುಖ್ಯ ರಸ್ತೆಯ 80 ಅಡಿ ರಸ್ತೆಯಿಂದ ಇಂದಿರಾನಗರ ಡಬಲ್ ರೋಡ್ ಜಂಕ್ಷನ್‌ ವರೆಗೆ ರಸ್ತೆಯ ಎರಡೂ ಬದಿಯಲ್ಲಿ.
  3. ಐ.ಟಿ.ಪಿ.ಎಲ್ ಮುಖ್ಯರಸ್ತೆ ಬಿ ನಾರಾಯಣಪುರ ಶೆಲ್ ಪೆಟ್ರೋಲ್ ಬಂಕ್‌ ನಿಂದ ಗರುಡಚಾರ್‌ಪಾಳ್ಯ ಡೆಕತ್ಲಾನ್‌ವರೆಗೆ ರಸ್ತೆಯ ಎರಡೂ ಬದಿಯಲ್ಲಿ,
  4. ಹೂಡಿ ಮೆಟ್ರೋ ಸ್ಟೇಷನ್ನಿನಿಂದ ಗ್ರಾಫೈಟ್ ಇಂಡಿಯಾ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಯಲ್ಲಿ,
  5. ಐ.ಟಿ.ಪಿ.ಎಲ್ ರಸ್ತೆ ಮೆಡಿಕವರ್ ಆಸ್ಪತ್ರೆಯಿಂದ ಬಿಗ್‌ಬಜಾರ್ ಜಂಕ್ಷನ್ನವರೆಗೂ ಎರಡೂ ಬದಿಯಲ್ಲಿ.

ಓಲಾ ಮತ್ತು ಉಬರ್ ಪಿಕ್‌ ಅಪ್ ಮತ್ತು ಡ್ರಾಪ್ ಆಫ್ ಪಾಯಿಂಟ್‌ಗಳು:

  • ಫಿನಿಕ್ಸ್ ಮಾಲ್‌ಗೆ ಬರುವವರಿಗೆ ಐ.ಟಿ.ಪಿ.ಎಲ್ ಮುಖ್ಯರಸ್ತೆಯ ಬೆಸ್ಕಾಂ ಕಛೇರಿ ಬಳಿ ಡ್ರಾಪ್ ಆಫ್ ಪಾಯಿಂಟ್ ಮತ್ತು ಲೌರಿ ಜಂಕ್ಷನ್ ಬಳಿ ಪಿಕ್ ಅಪ್ ಪಾಯಿಂಟ್.
  • ನೆಕ್ಸಸ್ ಶಾಂತಿನಿಕೇತನ್ ಮಾಲ್‌ಗೆ ಬರುವವರಿಗೆ ರಾಜಪಾಳ್ಯ ಬಳಿ ಡ್ರಾಪ್ ಆಫ್ ಪಾಯಿಂಟ್ ಹಾಗೂ ಆಸ್ಟರ್ ಆಸ್ಪತ್ರೆ ಬಳಿ ಪಿಕ್ ಅಪ್ ಪಾಯಿಂಟ್.
  • ಇಂದಿರಾನಗರಕ್ಕೆ ಬರುವವರಿಗೆ ಇಂದಿರಾನಗರ 100 ಅಡಿ ರಸ್ತೆಯ 17ನೇ ಮುಖ್ಯರಸ್ತೆ ಜಂಕ್ಷನ್ ಬಳಿ ಡ್ರಾಪ್ ಪಾಯಿಂಟ್ ಮತ್ತು ಪಿಕ್‌ಅಪ್ ಪಾಯಿಂಟ್ ಇಂದಿರಾನಗರ 100 ಅಡಿ ರಸ್ತೆಯ ಬಿ.ಎಂ.ಶ್ರೀ ಜಂಕ್ಷನ್ ಬಳಿ.
  • ಪಿಕ್‌ ಅಪ್.

ಮೇಲ್ಸೇತುವೆ (ಪ್ಲೈ ಓವರ್) ಮೇಲೆ ವಾಹನ ಸಂಚಾರ ನಿರ್ಬಂಧ
ಡಿ.31ರಂದು ರಾತ್ರಿ 11 ಗಂಟೆಯಿಂದ ಬೆಳಗ್ಗೆ 6ಗಂಟೆಯವರೆಗೆ ಹೆಣ್ಣೂರು ಪ್ಲೈ ಓವರ್, ಬಾಣಸವಾಡಿ ಮುಖ್ಯರಸ್ತೆ ಪ್ಲೈ ಓವರ್, ಲಿಂಗರಾಜಪುರಂ ಪ್ಲೈ ಓವರ್, ಹೆಣ್ಣೂರು ಮುಖ್ಯರಸ್ತೆ ಪ್ಲೈ ಓವರ್, ಕಲ್ಪಳ್ಳಿ ರೈಲ್ವೆಗೇಟ್ ಪ್ಲೈ ಓವರ್, ದೊಮ್ಮಲೂರು ಪ್ಲೈ ಓವರ್, ನಾಗವಾರ ಪ್ಲೈ ಓವರ್, ಮೇಡಹಳ್ಳಿ ಪ್ಲೈ ಓವರ್, ಓ.ಎಂ.ರೋಡ್ ಪ್ಲೈ ಓವರ್, ದೇವರಬಿಸನಹಳ್ಳಿ ಪ್ಲೈ ಓವರ್, ಮಹದೇವಪುರ ಪ್ಲೈ ಓವರ್, ದೊಡ್ಡನಕ್ಕುಂದಿ ಪ್ಲೈ ಓವರ್.

ಈ ಸುದ್ದಿಯನ್ನೂ ಓದಿ | New Year Celebration: ಸಿಹಿ ಸುದ್ದಿ, ನಾಳೆ ರಾತ್ರಿ 2ರವರೆಗೆ ಬಿಎಂಟಿಸಿ ಬಸ್ ಓಡಾಟ, ಮೆಟ್ರೋ ಕೂಡ ಇದೆ

ವಿಶೇಷ ಕಾರ್ಯಾಚರಣೆ
ಸಂಚಾರ ಪೂರ್ವ ವಿಭಾಗದ ಸರಹದ್ದಿನಲ್ಲಿ ಡಿ.31ರ ರಾತ್ರಿ 10 ಗಂಟೆಯಿಂದ ಜ.1ರ ಬೆಳಗ್ಗೆ 6 ಗಂಟೆಯವರೆಗೆ ಮದ್ಯಪಾನ ಮಾಡಿ ವಾಹನ ಚಾಲನೆ, ಸವಾರಿ ಮಾಡುವ, ವೀಲಿಂಗ್ ಮತ್ತು ಡ್ರಾಗ್ ರೇಸ್ ಮಾಡುವವರ ಪತ್ತೆಗೆ ವಿಶೇಷ ತಂಡವನ್ನು ನಿಯೋಜಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.