Saturday, 4th January 2025

Actor Yash: ಈ ಹುಟ್ಟುಹಬ್ಬಕ್ಕೆ ಊರಲ್ಲಿ ಇರಲ್ಲ ಯಶ್‌! ಅಭಿಮಾನಿಗಳಿಗೆ ಭಾರಿ ನಿರಾಸೆ; ರಾಕಿ ಭಾಯ್‌ ಬರೆದ ಪತ್ರದಲ್ಲಿ ಏನಿದೆ?

Actor Yash

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ (Actor Yash) ಸದ್ಯ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ʼಕೆಜಿಎಫ್‌ʼ ಸರಣಿ ಚಿತ್ರಗಳ ಮೂಲಕ ಗಮನ ಸೆಳೆದ ಅವರು ಇದೀಗ ʼಟಾಕ್ಸಿಕ್‌ʼ ಚಿತ್ರದಲ್ಲಿ ನಿರತರಾಗಿದ್ದಾರೆ. ಈ ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಚಿತ್ರದ ಶೂಟಿಂಗ್‌ ನಡೆಯುತ್ತಿದೆ. ಈ ಮಧ್ಯೆ ಅವರ ಹುಟ್ಟಿದಹಬ್ಬ ಸಮೀಪಿಸುತ್ತಿದ್ದು, ಅದ್ಧೂರಿಯಾಗಿ ಆಚರಿಸಬೇಕೆಂದು ಪ್ಲ್ಯಾನ್‌ ಮಾಡುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯ ಸುದ್ದಿ ಹೊರ ಬಿದ್ದಿದೆ.

ಜ. 8 ಯಶ್‌ ಅವರ ಹುಟ್ಟುಹಬ್ಬ. ಹೊಸ ವರ್ಷದ ಜತೆಗೆ ಅವರ ಬರ್ತ್‌ಡೇಯನ್ನು ಗ್ರ್ಯಾಂಡ್‌ ಆಗಿಯೇ ಸೆಲೆಬ್ರೇಟ್‌ ಮಾಡಬೇಕೆಂದು ಫ್ಯಾನ್ಸ್‌ ಯೋಜನೆ ರೂಪಿಸಿದ್ದರು. ಆ ಮೂಲಕ ತಮ್ಮ ನೆಚ್ಚಿನ ನಟನಿಗೆ ಭರ್ಜರಿ ಉಡುಗೊರೆ ನೀಡಲು ಸಜ್ಜಾಗಿದ್ದರು. ಆದರೆ ಇದೀಗ ಯಶ್‌ ಅಭಿಮಾನಿಗಳಿಗೆ ಪತ್ರ ಬರೆದು ಜನ್ಮ ದಿನದಂದು ತಾವು ಊರಿನಲ್ಲಿ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಯಶ್‌ ಪತ್ರದಲ್ಲಿ ಏನಿದೆ?

ಯಶ್‌ ಸೋಶಿಯಲ್‌ ಮೀಡಿಯಾದಲ್ಲಿ ಪತ್ರವನ್ನು ಹಂಚಿಕೊಂಡಿದ್ದಾರೆ. ʼʼನಿಮ್ಮ ಅಭಿಮಾನದ ಅಪ್ಪುಗೆ ಮತ್ತೊಂದು ವರ್ಷವನ್ನು ಸಾರ್ಥಕಗೊಳಿಸಿದೆʼʼ ಎಂದು ಅವರು ಪತ್ರವನ್ನು ಆರಂಭಿಸಿದ್ದಾರೆ. ʼʼಹೊಸ ವರ್ಷ ಹೊಸ ಭರವಸೆಗಳೊಂದಿಗೆ ನಗು ನಗುತ್ತಾ ಬದುಕೋಣ. ಬದುಕನ್ನು ಬೆರಗುಗೊಳಿಸುವಂತಹ ಹೊಸ ಯೋಜನೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣʼʼ ಎಂದಿದ್ದಾರೆ.

ಮುಂದುವರಿದು, ʼʼಸಿನಿಮಾ ಕೆಲಸದ ನಿಮಿತ್ತ ನಾನು ಹುಟ್ಟುಹಬ್ಬದಂದು ಊರಿನಲ್ಲಿ ಇರುವುದಿಲ್ಲ. ನನ್ನ ಹುಟ್ಟುಹಬ್ಬಕ್ಕೆ ನೀವು ತೋರುವ ಅಭಿಮಾನ ಜವಾಬ್ದಾರಿಯುತವಾಗಿ ಇರಲಿ ಎಂಬುದು ನನ್ನ ಪ್ರೀತಿಯ ಮನವಿ. ಹಾಗಾಗಿ ಫ್ಲೆಕ್ಸ್, ಬ್ಯಾನರ್​ಗಳಂತಹ ಯಾವುದೇ ಆಡಂಬರ ಮಾಡದೇ ನನ್ನ ಮನಸ್ಸಿಗೆ ನೋವಾಗುವ ನಡವಳಿಕೆ ತೋರದೇ ನೀವು ಇದ್ದಲ್ಲಿಂದಲೇ ನಿಮ್ಮ ಕುಟುಂಬದವರು ಹೆಮ್ಮೆಪಡುವ ಕೆಲಸ ನಿಮ್ಮಿಂದ ಆದರೆ ಅದಕ್ಕಿಂತ ದೊಡ್ಡ ಜನ್ಮದಿನದ ಉಡುಗೊರೆ ನನಗೆ ಮತ್ತೊಂದು ಇಲ್ಲ. ಆದಷ್ಟು ಬೇಗ ನಿಮ್ಮನ್ನೆಲ್ಲ ಭೇಟಿ ಆಗುತ್ತೇನೆ. ಎಲ್ಲರಿಗೂ ಹೊಸ ವರ್ಷ ಒಳಿತನ್ನು ತರಲಿʼʼ ಎಂದು ಬರೆದುಕೊಂಡಿದ್ದಾರೆ.

ಕಳೆದ ವರ್ಷ ನಡೆದಿತ್ತು ಭೀಕರ ದುರಂತ

ಕಳೆದ ವರ್ಷ ಯಶ್‌ ಬರ್ತ್‌ಡೇಯಂದೇ ಭೀಕರ ದುರಂತ ನಡೆದಿತ್ತು. ಅವರ ಜನ್ಮದಿನಕ್ಕೆ ಶುಭ ಕೋರಿ ಬ್ಯಾನರ್‌ ಕಟ್ಟುವ ವೇಳೆ ವಿದ್ಯುತ್‌ ಆಘಾತಕ್ಕೆ ಒಳಗಾಗಿ ಮೂವರು ಯುವಕರು ಪ್ರಾಣ ಕಳೆದುಕೊಂಡಿದ್ದರು. ಗದಗ ಜಿಲ್ಲೆಯ ಸೊರಣಗಿ ಗ್ರಾಮದಲ್ಲಿ ಈ ದುರಂತ ನಡೆದಿತ್ತು. ಹೀಗಾಗಿ ಅವರು ಈ ಮನವಿ ಮಾಡಿದ್ದಾರೆ. ವಿದೇಶದಲ್ಲಿ ನಡೆಯುತ್ತಿದ್ದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಅವರು ಬಳಿಕ ಮೃತರ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದರು. ಈ ಘಟನೆಯಿಂದ ತೀವ್ರವಾಗಿ ನೊಂದುಕೊಂಡಿದ್ದ ಅವರು ಇಂತಹ ಸಾಹಸಕ್ಕೆ ಯಾರೂ ಕೈ ಹಾಕದಂತೆ ಮನವಿ ಮಾಡಿದ್ದರು.

ಸದ್ಯ ಗೀತು ಮೋಹನ್‌ದಾಸ್‌ ನಿರ್ದೇಶನದ ʼಟಾಕ್ಸಿಕ್‌ʼ ಸಿನಿಮಾದಲ್ಲಿ ನಟಿಸುತ್ತಿರುವ ಯಶ್‌ ಬಾಲಿವುಡ್‌ನ ʼರಾಮಾಯಣʼ ಚಿತ್ರವನ್ನೂ ಒಪ್ಪಿಕೊಂಡಿದ್ದಾರೆ. ನಿತೇಶ್‌ ತಿವಾರಿ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಈ ಬಹು ನಿರೀಕ್ಷಿತ ಸಿನಿಮಾದಲ್ಲಿ ಅವರು ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Yash-Radhika Pandit: ಯಶ್​ ಮನೆಯಲ್ಲಿ ಕ್ರಿಸ್​ಮಸ್ ಸೆಲೆಬ್ರೇಷನ್​! ಚೆಂದದ ವಿಡಿಯೊ ಶೇರ್ ಮಾಡಿದ​ ರಾಧಿಕಾ ಪಂಡಿತ್