Sunday, 5th January 2025

Draupadi Pratha: ಈ ರಾಜ್ಯದಲ್ಲಿದ್ದಾರೆ ನೂರಾರು ಆಧುನಿಕ ದ್ರೌಪದಿಯರು – ಹಟ್ಟಿ ಸಮುದಾಯದ ಈ ವಿವಾಹ ಪದ್ಧತಿಯೇ ವಿಚಿತ್ರ!

ಡೆಹ್ರಾಡೂನ್‌: ನಿಮಗೆ ಮಹಾಭಾರತದ (Mahabharat) ದ್ರೌಪದಿಯ (Draupadi) ಕಥೆ ಗೊತ್ತೇ ಇದೆ. ಧರ್ಮರಾಯ, ಭೀಮ, ಅರ್ಜುನ, ನಕುಲ ಹಾಗೂ ಸಹದೇವ ಸೇರಿದಂತೆ ಪಂಚ ಪಾಂಡವರನ್ನು ಪತಿಯಾಗಿ ಸ್ವೀಕರಿಸಿದವಳು ದ್ರೌಪದಿ ಅಥವಾ ಪಾಂಚಾಲಿ. ಆದ್ರೆ ಇದು, ದ್ವಾಪರ ಯುಗದ ಮಹಾಭಾರತ ಕಾಲದ ಮಾತು, ಆದರೆ ಆಧುನಿಕ ಕಾಲದಲ್ಲಿ ಮಹಿಳೆಯೊಬ್ಬರು ಗಂಡನ ಸಹೋದರನ್ನೂ ಮದುವೆಯಾಗಿ ಆಧುನಿಕ ದ್ರೌಪದಿ ಎನಿಸಿಕೊಳ್ಳುತ್ತಾರೆ (Draupadi Pratha) ಅಂದರೆ ನೀವು ನಂಬುತ್ತೀರಾ? ನಮ್ಮ ದೇಶದ ಈ ರಾಜ್ಯದಲ್ಲಿರುವ ಈ ಒಂದು ಗ್ರಾಮದಲ್ಲಿ ಇಂತಹ ನೂರಾರು ಆಧುನಿಕ ದ್ರೌಪದಿಯರಿದ್ದಾರೆ! ಹೌದು, ಇದು ಆಶ್ಚರ್ಯವಾದರೂ ನೀವು ನಂಬಲೇಬೇಕು. ಈ ಗ್ರಾಮದಲ್ಲಿ ಮಹಿಳೆಯರು ತಾನು ಮದುವೆಯಾದ ಗಂಡನ ಜೊತೆಗೆ ಆತನಿಗೆ ಸಹೋದರರಿದ್ದರೆ ಅವರನ್ನೂ ಮದುವೆಯಾಗುತ್ತಾರೆ. ಆ ಸಹೋದರರಿಗೆ ಹೆಂಡತಿಯಾಗಿ, ಅವರ ಮಕ್ಕಳಿಗೆ ತಾಯಿಯೂ ಆಗ್ತಾರೆ.

ಹಿಮಾಚಲ ಪ್ರದೇಶದ (Himachal Pradesh) ಟ್ರಾನ್ಸ್-ಗಿರಿ ಪ್ರದೇಶದಲ್ಲಿ ಎಂಬ ಪ್ರದೇಶದಲ್ಲಿ ಹಟ್ಟಿ ಎನ್ನುವ ಬುಡಕಟ್ಟು ಸಮುದಾಯವಿದೆ. ಈ ಸಮುದಾಯದಲ್ಲಿ ಇಂಥದ್ದೊಂದು ವಿಚಿತ್ರ ಆಚರಣೆ ಈಗಲೂ ಚಾಲ್ತಿಯಲ್ಲಿದೆ. ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆ ಮತ್ತು ನೆರೆಯ ಉತ್ತರಾಖಂಡದ ಕೆಲವು ಪ್ರದೇಶಗಳಲ್ಲಿಯೂ ಈ ವಿಚಿತ್ರ ಪದ್ಧತಿ ಅಸ್ಥಿತ್ವದಲ್ಲಿದೆಯಂತೆ. ಈ ಹಟ್ಟಿ ಸಮುದಾಯದ(Hatti community) ಮಹಿಳೆಯರು ಒಂದು ಕುಟುಂಬದ ಒಬ್ಬ ಪುರುಷನೊಂದಿಗೆ ವಿವಾಹವಾಗುತ್ತಾರೆ. ನಂತರ ಇತರ ಸಹೋದರರಿಗೆ ಹೆಂಡತಿಯ ಪಾತ್ರವನ್ನು ಮತ್ತು ಅವರ ಮಕ್ಕಳಿಗೆ ತಾಯಿಯ ಪಾತ್ರವನ್ನೂ ನಿರ್ವಹಿಸುತ್ತಾರೆ.

ಹಟ್ಟಿ ಸಮುದಾಯವು ಇತ್ತೀಚೆಗೆ ಪರಿಶಿಷ್ಟ ಪಂಗಡದ ಸ್ಥಾನಮಾನವನ್ನು ಪಡೆದಿದೆ. ಈ ಸಮುದಾಯದ ಮುಖಂಡರು ಹೇಳುವ ಪ್ರಕಾರ ಬಹುಪತಿತ್ವ ಪದ್ಧತಿಯು ವಿಶೇಷ ಟ್ಯಾಗ್ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ. 1,300 ಚದರ ಕಿ.ಮೀ ವಿಸ್ತೀರ್ಣದ ಟ್ರಾನ್ಸ್ ಗಿರಿ ಪ್ರದೇಶದಲ್ಲಿ 154 ಪಂಚಾಯಿತಿಗಳಿದ್ದು, ಇದರಲ್ಲಿ 147ರಲ್ಲಿ ಹಟ್ಟಿ ಸಮುದಾಯವಿದೆ.

ಈ ಸುದ್ದಿಯನ್ನೂ ಓದಿ: Manada Kadalu Movie: ಯೋಗರಾಜ್ ಭಟ್ ನಿರ್ದೇಶನದ ʼಮನದ ಕಡಲುʼ ಚಿತ್ರದ ʼಹೂ ದುಂಬಿಯ ಕಥೆಯʼ ಹಾಡು ಕೇಳಿ!

ಹಟ್ಟಿಗಳಿಂದ ‘ಜೋಡಿದಾರಣ’ (Jodidaran) ಪದ್ಧತಿ ಎಂದು ಉಲ್ಲೇಖಿಸಲ್ಪಡುವ ಬಹು ಪತಿತ್ವ ಪದ್ಧತಿ, ಕೆಳಗಿನ ಹಿಮಾಲಯದ ಕೆಲವು ಇತರ ಸಮುದಾಯಗಳಿಂದ ಕೂಡ ಆಚರಣೆಯಲ್ಲಿದೆ. ಮನೆಮಂದಿಯನ್ನು ಒಟ್ಟಿಗೆ ಇಟ್ಟುಕೊಳ್ಳುವುದು ಮತ್ತು ಸಣ್ಣ ಕೃಷಿ ಭೂಮಿಗಳು, ವಿಶೇಷವಾಗಿ ಬಡ ಕುಟುಂಬಗಳಲ್ಲಿ ವಿಘಟನೆಯಾಗುವುದನ್ನು ತಡೆಯುವುದು, ಹಟ್ಟಿ ಸಮುದಾಯದಲ್ಲಿ ಇಂದಿಗೂ ಬಹುಸಂಖ್ಯೆಯ ಆಚರಣೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

ಮಹಿಳೆಯು ಪ್ರತಿಯೊಬ್ಬ ಸಹೋದರನಿಗೆ ಹೆಂಡತಿಯಾಗಲು ಸಂಪನ್ಮೂಲಗಳ ಕೊರತೆಯು ಪ್ರಾಥಮಿಕ ಕಾರಣವೆಂದು ತೋರುತ್ತದೆ. ಹಟ್ಟಿ ಸಮುದಾಯದಲ್ಲಿ ಸಾಮಾಜಿಕ ಸಮಾನತೆ ಇದ್ದರೂ ಜನನದಿಂದಲೇ ಲಿಂಗ ವಿಭಜನೆ ಸ್ಪಷ್ಟವಾಗಿದೆ. ಗಂಡು ಮಗು ಜನಿಸಿದಾಗ ಕುರಿ ಮಾಂಸ ಮಿಶ್ರಿತ ಅನ್ನದ ಸಾಮೂಹಿಕ ವಿಶೇಷ ಭೋಜನವನ್ನು ಏರ್ಪಡಿಸುತ್ತಾರೆ. ಆದರೆ ಹೆಣ್ಣು ಮಗು ಹುಟ್ಟಿದರೆ ಯಾವುದೇ ಸಂಭ್ರಮ ಇರೋದಿಲ್ಲ.

ಈ ಸಮುದಾಯದಲ್ಲಿ ಹಿರಿಯ ಸಹೋದರನನ್ನು ಬಡೆ ಘರ್ವಾಲಾ ಅಥವಾ ಹಿರಿಯ ಪತಿ ಮತ್ತು ಅವರ ಕಿರಿಯ ಸಹೋದರನನ್ನು ಛೋಟೆ ಘರ್ವಾಲಾ ಅಥವಾ ಕಿರಿಯ ಪತಿ ಎಂದು ಕರೆಯುತ್ತಾರೆ. ಈ ರೀತಿಯ ಜಂಟಿ ವಿವಾಹಗಳಿಂದ ಮಕ್ಕಳನ್ನು ದತ್ತು ತೆಗೆದುಕೊಳ್ಳುವುದು ವಾಜಿಬ್-ಉಲ್-ಅರ್ಜ್ ಎಂಬ ಹಳ್ಳಿಯ ದಾಖಲೆಯ ಅಡಿಯಲ್ಲಿ ನಡೆಯುತ್ತದೆ, ಇದು “ಜೋಡಿದಾರಣಾ ಪ್ರತಾ” ಗೆ ಪಾವಿತ್ರ್ಯತೆಯನ್ನು ನೀಡುತ್ತದೆಯಂತೆ.

“ವಾಜಿಬ್-ಉಲ್-ಅರ್ಜ್ ಮೂಲಕ ತಂದೆಯ ಹೆಸರು ಪಂಚಾಯತ್ ದಾಖಲೆಗಳಿಗೆ ಸೇರುತ್ತದೆ ಮತ್ತು ಅದು ಎಲ್ಲಾ ಅಧಿಕೃತ ಉದ್ದೇಶಗಳಿಗಾಗಿ ಕಾರ್ಯನಿರ್ವಹಿಸುತ್ತದೆ” ಎಂದು ಕೇಂದ್ರ ಹಟ್ಟಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಹೇಳುತ್ತಾರೆ. ಇನ್ನು ಹುಟ್ಟಿದ ಮಕ್ಕಳು ದೊಡ್ಡ ಅಣ್ಣನನ್ನು ಬಡೆ ಪಾಪಾ ಎಂದು, ಚಿಕ್ಕ ಸಹೋದರನನ್ನು ಛೋಟೆ ಪಾಪಾ ಎಂದು ಕರೆಯುತ್ತಾರಂತೆ. ಮಹಿಳೆಯು ಮದುವೆಯಾಗುವ ವ್ಯಕ್ತಿಯನ್ನು ಕಾನೂನು ಉದ್ದೇಶಗಳಿಗಾಗಿ ಅವಳ ಪತಿ ಎಂದು ಪರಿಗಣಿಸಲಾಗಿದ್ದರೂ, ಅವಳ ಎಲ್ಲಾ ಗಂಡಂದಿರಿಗೆ ಸಾಮಾಜಿಕ ಮನ್ನಣೆ ಇರುತ್ತದೆ.