Saturday, 4th January 2025

Abhijit Mukherjee: ತಮ್ಮ ತಂದೆ ನಿಧನರಾದಾಗ ಕೋವಿಡ್‌ ನಿರ್ಬಂಧವಿತ್ತು: ಸಹೋದರಿಯ ಟೀಕೆಗೆ ಪ್ರಣಬ್ ಮುಖರ್ಜಿ ಪುತ್ರನ ತಿರುಗೇಟು

Abhijit Mukherjee

ಹೊಸದಿಲ್ಲಿ: ʼʼಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ (Pranab Mukherjee) ಅವರು 2020ರ ಆಗಸ್ಟ್‌ನಲ್ಲಿ ನಿಧನ ಹೊಂದಿದಾಗ ಕೋವಿಡ್‌-19 ಸಾಂಕ್ರಾಮಿಕ ರೋಗದ ನಿರ್ಬಂಧಗಳಿದ್ದ ಕಾರಣ ಕಾಂಗ್ರೆಸ್‌ಗೆ ರ‍್ಯಾಲಿ ನಡೆಸಲು ಸಾಧ್ಯವಾಗಿರಲಿಲ್ಲʼʼ ಎಂದು ಅವರ ಪುತ್ರ ಅಭಿಜಿತ್‌ ಮುಖರ್ಜಿ (Abhijit Mukherjee) ಹೇಳಿದ್ದಾರೆ. ತಮ್ಮ ತಂದೆ ನಿಧನ ಹೊಂದಿದಾಗ ಕಾಂಗ್ರೆಸ್ ನಾಯಕತ್ವವು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (CWC) ಸಂತಾಪ ಸೂಚಕ ಸಭೆಯನ್ನು ಕರೆಯಲು ಸಹ ಯೋಚಿಸಲಿಲ್ಲ ಎಂದು ಇತ್ತೀಚೆಗೆ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ (Sharmistha Mukherjee) ಕೈ ಪಡೆ ವಿರುದ್ಧ ಕಿಡಿ ಕಾರಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಅಭಿಜಿತ್‌ ಮುಖರ್ಜಿ ತಮ್ಮ ಸಹೋದರಿಗೆ ತಿರುಗೇಟು ನೀಡಿದ್ದಾರೆ.

”ತಂದೆ (ಪ್ರಣಬ್ ಮುಖರ್ಜಿ) ನಿಧನ ಹೊಂದಿದ್ದು ಕೋವಿಡ್‌ ಕಾಲಘಟ್ಟದಲ್ಲಿ. ಈ ವೇಳೆ ಸಾರ್ವಜನಿಕರು ಗುಂಪುಗೂಡುವುದಕ್ಕೆ ಸಾಕಷ್ಟು ನಿರ್ಬಂಧವಿತ್ತು. ಅಂದಿನ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಸರ್ಕಾರ ತಂದೆಯ ಅಂತಿಮ ದರ್ಶನಕ್ಕೆ ಕುಟುಂಬದ ಸದಸ್ಯರಿಗೇ ಅವಕಾಶ ನೀಡಲಿಲ್ಲ. ಕುಟುಂಬ ಮತ್ತು ಸ್ನೇಹಿತರು ಸೇರಿ 20 ಜನರು ಮಾತ್ರ ಹಾಜರಿದ್ದರು. ಕಾಂಗ್ರೆಸ್ ರ‍್ಯಾಲಿ ನಡೆಸಲು ಬಯಸಿತ್ತು. ಆದರೆ ಹಾಗೆ ಮಾಡಲು ಸಾಧ್ಯವಾಗಲಿಲ್ಲ. ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅಂತಿಮ ದರ್ಶನಕ್ಕೆ ಆಗಮಿಸಿದ್ದರುʼʼ ಎಂದು ಅಭಿಜಿತ್‌ ಮುಖರ್ಜಿ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಶರ್ಮಿಷ್ಠಾ ಮುಖರ್ಜಿ ಹೇಳಿದ್ದೇನು?

ಡಿ. 26ರಂದು ನಿಧನರಾದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಪ್ರತ್ಯೇಕ ಸ್ಮಾರಕವನ್ನು ಕೋರಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಈ ವಿಚಾರದಲ್ಲಿ ಕಾಂಗ್ರೆಸ್​ ಅನ್ನು ಶರ್ಮಿಷ್ಠಾ ಮುಖರ್ಜಿ ಟೀಕಿಸಿದ್ದರು.

ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದ ಅವರು, ʼʼತಮ್ಮ ತಂದೆ ಮತ್ತು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ 2020ರ ಆಗಸ್ಟ್‌ನಲ್ಲಿ ನಿಧನರಾದಾಗ ಕಾಂಗ್ರೆಸ್ ನಾಯಕತ್ವವು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (CWC) ಸಂತಾಪ ಸೂಚಕ ಸಭೆಯನ್ನು ಕರೆಯಲು ಸಹ ಚಿಂತಿಸಲಿಲ್ಲ. ಈ ಹಿಂದೆ ಮೃತಪಟ್ಟಿದ್ದ ಯಾವ ರಾಷ್ಟ್ರಪತಿಗಳಿಗೂ ಸಭೆ ನಡೆಸಿಲ್ಲ ಎಂದು ಹಿರಿಯ ನಾಯಕರೊಬ್ಬರು ನನಗೆ ತಿಳಿಸಿದ್ದರುʼʼ ಎಂಬುದಾಗಿ ಹೇಳಿದ್ದರು.

ʼʼಇನ್ನೊಬ್ಬ ಮಾಜಿ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರ ನಿಧನದ ನಂತರ, ಸಿಡಬ್ಲ್ಯುಸಿ ಸಭೆಯನ್ನು ಕರೆಯಲಾಯಿತು. ಬೇರೆ ಯಾರೂ ಅಲ್ಲ ಪ್ರಣಬ್ ಮುಖರ್ಜಿ ಅವರಿಂದ ಸಂತಾಪ ಸಂದೇಶವನ್ನು ರಚಿಸಲಾಯಿತು ಎನ್ನುವುದನ್ನು ಅವರ ಡೈರಿಗಳಿಂದ ತಿಳಿದುಕೊಂಡಿದ್ದೇನೆʼʼ ಎಂದು ಬರೆದುಕೊಂಡಿದ್ದರು. ಅಲ್ಲದೆ ಬಿಜೆಪಿಯ ಸಿ.ಆರ್. ಕೇಶವನ್ ಅವರ ಪೋಸ್ಟ್ ಅನ್ನು ಶರ್ಮಿಷ್ಠಾ ಮುಖರ್ಜಿ ಉಲ್ಲೇಖಿಸಿದ್ದರು. ಮುಖರ್ಜಿ ಅವರು ʼಗಾಂಧಿʼ ಕುಟುಂಬದ ಸದಸ್ಯರಲ್ಲ ಎಂಬ ಕಾರಣಕ್ಕಾಗಿ ಕಾಂಗ್ರೆಸ್ ಅವರನ್ನು ಕಡೆಗಣಿಸಿದೆ ಎಂದು ಆರೋಪಿಸಿದ್ದರು. ಇದು ದೇಶಾದ್ಯಂತ ವ್ಯಾಪಕ ಚರ್ಚೆ ಹುಟ್ಟು ಹಾಕಿತ್ತು.

ಈ ಸುದ್ದಿಯನ್ನೂ ಓದಿ: Sharmistha Mukherjee : ಸ್ಮಾರಕ ನಿರ್ಮಾಣ ವಿಚಾರಕ್ಕೆ ಪ್ರಣಬ್ ಮುಖರ್ಜಿ ಪುತ್ರಿಯಿಂದ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ