Saturday, 4th January 2025

Actor Prakash Raj: ರೈತರು ದೇಶದ ಬೆನ್ನೆಲುಬು ಎನ್ನುವುದೆಲ್ಲಾ ಸುಳ್ಳು : ರೈತರ ಋಣ ತೀರಿಸಲು ಬಂದಿದ್ದೇನೆ : ಚಲನಚಿತ್ರ ನಟ ಪ್ರಕಾಶ್ ರೈ

ಚಿಕ್ಕಬಳ್ಳಾಪುರ : ನಾನು ರೈತನಲ್ಲದಿದ್ದರೂ ರೈತರ ಋಣ ನನ್ನ ಮೇಲಿರುವ ಕಾರಣ ಇಲ್ಲಿಗೆ ಬಂದಿದ್ದೇನೆ.ಕೆಲವರು ಬಾಯಿಚಪಲಕ್ಕೆ ರೈತ ದೇಶದ ಬೆನ್ನೆಲುಬು ಎನ್ನುತ್ತಾರೆ.ಅದೆಲ್ಲಾ ಸುಳ್ಳು.ನಿಜವೇ ಆಗಿದ್ದಿದ್ದರೆ ಭೂಸ್ವಾದೀನ ಪ್ರಕ್ರಿಯೆ ಕೈಬಿಡಿ ಎಂದು ನ್ಯಾಯ ಕೇಳಿ ನಡೆಸುತ್ತಿರುವ ಹೋರಾಟಕ್ಕೆ ೧ ಸಾವಿರ ದಿನ ಆಗುತ್ತಿರಲಿಲ್ಲ ಎಂದು ಬೇಸರಿಸಿದರು.

ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದಲ್ಲಿ ೧೩ ಗ್ರಾಮಗಳ ರೈತರು ನಡೆಸುತ್ತಿರುವ ‘ಭೂ ಸ್ವಾಧೀನ ವಿರೋಧಿ ಹೋರಾಟಕ್ಕೆ ಡಿ.೩೦ರ ಸೋಮವಾರಕ್ಕೆ ಒಂದು ಸಾವಿರ ದಿನ ತುಂಬಿದ  ಹಿನ್ನೆಲೆಯಲ್ಲಿ ಚನ್ನರಾಯಪಟ್ಟಣದ ಧರಣ ನಿರತ ಸ್ಥಳದಲ್ಲಿ ನಡೆದ ರೈತರ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

ಋಣಭಾರ ಇಳಿಸಲು ಬಂದಿದ್ದೇನೆ!!

ನಾನು ರೈತ ಅಲ್ಲ, ಆದರೆ ನನ್ನದೇ ಭೂಮಿಯಲ್ಲಿ ಸ್ವಲ್ಪ ಗಿಡಮರ ಬೆಳೆಸಿದ್ದೇನೆ; ರೈತರು ನನಗಿಂತ ದೊಡ್ಡವರು. ಅವರ ಋಣ ನನ್ನ ಮೇಲೆ ಇರುವುದರಿಂದ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಸಾವಿರ ದಿನಗಳ ಹೋರಾಟ ಸಣ್ಣ ದಲ್ಲ. ಈ ದೇಶದ ದೊಡ್ಡ ಕರ್ಮ ಮತ್ತು ಶಾಪವೆಂದರೆ, ಹಲವಾರು ವರ್ಷಗಳಿಂದ ರೈತರು ತಮ್ಮ ನ್ಯಾಯೋಚಿತ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ರೈತರು ಈ ದೇಶದ ಬೆನ್ನಲುಬು ಎಂದು ಮಾತಿಗಷ್ಟೇ ಹೇಳುತ್ತಾರೆ. ಒಂದು ಸಾವಿರ ದಿನಗಳಿಂದ ಇಷ್ಟೆಲ್ಲಾ ಹೇಳಿದರೂ. ಯಾವ ಅಹಂಕಾರದ ಕಾರಣ ಈವರೆಗೆ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಬಿಟ್ಟಿಲ್ಲ? ಎಲ್ಲ ಸರ್ಕಾರಗಳು ಜನ ವಿರೋಧಿ ಹಾಗೂ ರೈತ ವಿರೋಧಿಯೇ ಆಗಿವೆ ಎಂದು ಕುಟುಕಿದರು.

ಓಟಿಗಾಗಿ ಮಾತ್ರ ರೈತಬೇಕಾ?

ಈ ದೇಶದಲ್ಲಿ ನಮಗೆ ಏನು ಬೇಕು ಎಂಬ ಬಗ್ಗೆ  ನಾವೇ ಆರಿಸಿದವರನ್ನು ನಾವು ಕೇಳುವಂತಾಗಬೇಕು. ವಿಪರ್ಯಾಸ ವೆಂದರೆ ಆಡಳಿತ ವ್ಯವಸ್ಥೆ ನಮಗೆ ಏನು ಬೇಡವೋ ಅದನ್ನು ಮಾಡುತ್ತಿದ್ದಾರೆ. ಈಗಿರುವ ಕೇಂದ್ರದ ಒಕ್ಕೂಟ ಸರ್ಕಾರ ಪಂಜಾಬ್ ಮತ್ತು ಹರಿಯಾಣದಲ್ಲಿ ರೈತ ವಿರೋಧಿಯಾಗಿದೆ. ಈ ಹೋರಾಟ ಶುರುವಾದಾಗ ಅಸ್ತಿತ್ವ ದಲ್ಲಿದ್ದ ಸರ್ಕಾರ, ‘ಇವರು ರೈತರೇ ಅಲ್ಲ’ ಎಂದು ಹೇಳಿತ್ತು. ಆಗ ವಿಪಕ್ಷದಲ್ಲಿದ್ದವರು ‘ನಾವು ಅಧಿಕಾರಕ್ಕೆ ಬಂದರೆ ರೈತರ ಪರವಾಗಿರುತ್ತೇವೆ’ ಎಂದು ಹೇಳಿದ್ದರು. ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಆಗಿದೆ. ರೈತರು ಓಟು ಹಾಕುವುದಕ್ಕಷ್ಟೇ ಸೀಮಿತವಾಗಿದ್ದಾರೆಯೇ?ಎಂದು ಸರಕಾರವನ್ನು ಪ್ರಶ್ನಿಸಿದರು.

ಭೂಮಿ ರೈತರ ಸ್ವಾಭಿಮಾನ!!
ಇದು ಕೇವಲ ೨೩ ಹಳ್ಳಿಗಳ ಭೂ ಸ್ವಾಧೀನ ಸಮಸ್ಯೆ ಅಲ್ಲ. ಈ ಹೋರಾಟದ ಗೆಲುವು ಇಡೀ ಸ್ವಾಧೀನ ಪ್ರತಿಕ್ರಿಯೆ ಯನ್ನೇ ಬದಲಿಸಬೇಕು. ಸ್ವಾಧೀನ ಮಾಡಿ ನೀವು ಭೂಮಿ ಕೊಡುತ್ತಿರುವುದು ಭವಿಷ್ಯದ ಬಂಡವಾಳಶಾಹಿಗಳಿಗೆ. ಅವರು ಮರ ನೋಡದೆ ತೆಂಗಿನ ಕಾಯಿ ಕೀಳುತ್ತಾರೆ, ಗಿಡ ನೋಡದೇ ದೇವರಿಗೆ ಹೂ ಮುಡಿಸುತ್ತಾರೆ. ಭತ್ತ ನೋಡದೆ ಅನ್ನ ಉಂಡು, ರಾಗಿ ನೋಡದೆ ಮುದ್ದೆ ಹಿಚುಕುತ್ತಾರೆ. ಆದ್ದರಿಂದ, ಅವರಿಗೆ ಭೂಮಿ ಮತ್ತು ರೈತರ ನಡುವಿನ ಸಂಬಂಧ ಅರ್ಥವಾಗುವುದಿಲ್ಲ. ಭೂಮಿ ಎಂಬುದು ರೈತರ ಸ್ವಾಭಿಮಾನ, ಐಡೆಂಟಿಟಿ, ಅವರ ಹೆಮ್ಮೆ, ನಿರಂತರ ವಾದ ಮಾತು ಮತ್ತು ಸಂಭಾಷಣೆ. ಅದನ್ನೇ ನೀವು ಕಿತ್ತುಕೊಳ್ಳುತ್ತಿರುವುದು ಯಾಕೆ? ಎಂದು ಕುಟುಕಿದರು.

ಕಣ್ಣೀರಿನ ಜತೆಗೆ ನಾನಿರುವೆ.
ಇಲ್ಲಿನ ರೈತರು ತಮ್ಮ ತುಂಡು ಭೂಮಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಸರ್ಕಾರ ಅವರಿಗೆ ಕೆಲಸ ಕೊಟ್ಟಿಲ್ಲ. ತಲೆತಲಾಂತರದಿAದ ಅವರೇ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಪಟ್ಟಣದವರೆಲ್ಲಾ ರೈತರಾಗಬೇಕಿಲ್ಲ; ಆದರೆ ಸಹಮನುಷ್ಯರು ಹಾಗೂ ರೈತರ ಆತಂಕ, ಕಣ್ಣೀರಿನ ಜೊತೆಗೆ ನಿಲ್ಲಬೇಕಾಗಿರುವುದು ನಮ್ಮ ಕರ್ತವ್ಯ. ಮಾಧ್ಯಮಗಳ ಮೂಲಕ ಈ ದೇಶದ ರಾಜಕಾರಣಿಗಳಿಗೆ ಹಾಗೂ ಪಟ್ಟಣ ನಿವಾಸಿಗಳಿಗೆ ಸಂದೇಶ ನೀಡುವುದಕ್ಕೆ ನಾನು ಇಲ್ಲಿಗೆ ಬಂದಿದ್ದೇನೆ. ನಿಮ್ಮ ಜೊತೆಗೆ ನಿಲ್ಲುವುದರಿಂದ ನನಗೆ ಗೌರವ ಸಿಗುತ್ತದೆ; ರೈತರ ಋಣ ನನ್ನ ಮೇಲೆ ಇದೆ.ಫಲವತ್ತಾದ ಭೂಮಿ ಮೇಲೆ ಕೈಗಾರಿಕೆ ಕಟ್ಟುತ್ತಾ ಹೋದರೆ, ನೀವು ಮುಂದೆ ಹೊಟ್ಟೆಗೆ ತಿನ್ನುವುದಾದರೂ ಏನು. ರೈತ ನಶಿಸಿದರೆ ನಾವ್ಯಾರೂ ಇರುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ವ್ಯವಸ್ಥೆಯನ್ನು ತಿವಿದರು.

ಜಸ್ಟೀಸ್ ಗೋಪಾಲಗೌಡ: ೧೪೦ ಕೋಟಿ ಜನಸಂಖ್ಯೆಯಲ್ಲಿ ಶೇ.೫೦ರಷ್ಟ ಮಹಿಳೆಯರಿದ್ದಾರೆ. ಈ ಹೋರಾಟ ಗೆಲ್ಲಲೇಬೇಕಾದರೆ, ಸರ್ಕಾರದ ಗಮನ ಸೆಳೆಯಬೇಕಾದರೆ ಮಹಿಳೆಯರು ಮುಂದಾಳತ್ವ ವಹಿಸಬೇಕು ಎಂದು ಐವತ್ತನೇ ದಿನ ಹೇಳಿದ್ದೆ. ಅದು ಇಂದು ಋಜುವಾತಾಗಿದೆ. ಸರ್ಕಾರ ಪತನವಾಗಬೇಕಾದರೆ ಮಹಿಳೆಯರ ನಾಯಕತ್ವ ಬಹಳ ಮುಖ್ಯ. ನಾನೂ ಕೃಷಿ ಮಾಡುತ್ತಿದ್ದೇನೆ. ನಾನೂ ರೈತನ ಮಗ. ಭೂಮಿ ನಮ್ಮ ತಾಯಿ; ತಾಯಿಯನ್ನೇ ಕಬಳಿಸಲು ಹರಟಿರುವ ಸರ್ಕಾರಗಳು ಉಳಿಯುವುದಿಲ್ಲ. ಒಂದು ಸಾವಿರಕ್ಕೂ ಹೆಚ್ಚು ಎಕರೆ ಭೂಮಿಯನ್ನು ಪಶ್ಚಿಮ ಬಂಗಾಳ ಎಡಪಕ್ಷ ಸರ್ಕಾರ ಭೂಸ್ವಾಧೀನ ಮಾಡಿ, ಟಾಟಾ ಕಂಪನಿಗೆ ಸಣ್ಣ ಕಾರು ತಯಾರಿ ಮಾಡುವುದಕ್ಕೆ ಕೊಡುತ್ತದೆ. ಎಡಪಕ್ಷ, ರೈತಪರ, ಕಾರ್ಮಿಕರ ಪರ ಎಂದು ಹೇಳುತ್ತಾರೆ. ಮಮತಾ ಬ್ಯಾನರ್ಜಿ ಆ ಹೋರಾಟದಲ್ಲಿ ಭಾಗಿಯಾಗಿ, ೩೨ ವರ್ಷಗಳ ಎಡಪಕ್ಷ ಸರ್ಕಾರವನ್ನು ದಮನ ಮಾಡಿದರು. ಇದನ್ನು ಈ ಸರ್ಕಾರ ಜ್ಞಾಪಕ ಮಾಡಿಕೊಳ್ಳಬೇಕು.  ಸರ್ಕಾರ ಹಾಗೂ ಸಚಿವರು ರೈತರ ಪರವಾಗಿದೆ ಎಂದು ಹೇಳುತ್ತಾರೆ. ಹಾಗಾಗಿದ್ದರೆ, ಇಷ್ಟು ಹೊತ್ತಿಗೆ ಹೋರಾಟ ಮುಗಿಯಬೇಕಿತ್ತಲ್ಲವಾ? ನೋಟಿಫಿಕೇಷನ್ ವಾಪಸ್ ಪಡೆಯಬೇಕಿತ್ತಲ್ಲವಾ? ಇಂಥ ಮಾತುಗಳನ್ನು ನಂಬುದು ಕಷ್ಟ.ಜನರು ಮತ ಕೊಟ್ಟಿದ್ದರಿಂದ ಕಾಂಗ್ರೆಸ್ ಸರ್ಕಾರ ಬಂದಿದೆ. ಜನರ ಸಮಸ್ಯೆಗಳಿಗೆ ಸ್ಪಂಧಿಸದಿದ್ದರೆ ಅದು ಜವಾಬ್ದಾರಿಯುತ ಸರ್ಕಾರ ಆಗಿರುವುದಿಲ್ಲ. ಅಂಥ ಸರ್ಕಾರ ನಮಗೆ ಬೇಕಿಲ್ಲ ಎಂದು ಕಿಡಿಕಾರಿದರು.

ಕಾರ್ಯಕ್ರಮದಲ್ಲಿ ಸಾಹಿತಿ ಎಸ್.ಜಿ.ಸಿದ್ಧರಾಮಯ್ಯ, ಚುಕ್ಕಿ ನಂಜುಂಡಸ್ವಾಮಿ, ನೂರ್ ಶ್ರೀಧರ್, ವೀರಸಂಗಯ್ಯ, ಕಾರಳ್ಳಿ ಶ್ರೀನಿವಾಸ್ ಮತ್ತಿತರರ ಮುಖಂಡರು ಇದ್ದರು.

ಇದನ್ನೂ ಓದಿ: chikkaballapur