Sunday, 5th January 2025

Rangaswamy Mookanahalli Column: ಬದಲಾದ ಮೌಲ್ಯ, ಬದಲಾದ ಶಿಕ್ಷಣ !

ವಿಶ್ವರಂಗ

ರಂಗಸ್ವಾಮಿ ಮೂಕನಹಳ್ಳಿ

ಪ್ರಾಥಮಿಕ ಶಾಲೆಗಳು ಹೈಸ್ಕೂಲುಗಳಿಗೂ, ಹೈಸ್ಕೂಲುಗಳು ಕಾಲೇಜುಗಳಿಗೂ ‘ಫೀಡರ್‌ಕೇಂದ್ರ’ಗಳಾಗಿ ಮಾರ್ಪಟ್ಟಿವೆ. ಇಲ್ಲಿ ವಿದ್ಯಾರ್ಥಿಯನ್ನು ನಪಾಸು ಮಾಡುವಂತಿಲ್ಲ, ಮಾಡಿದರೆ ಮುಂದಿನ ತರಗತಿಗೆ ತಲೆ ಕಡಿಮೆಯಾಯ್ತು. ಆದರೆ ಸಿಬಿಎಸ್‌ಸಿಯವರು, ‘5 ಮತ್ತು 8ನೇ ತರಗತಿಯಲ್ಲಿ ನಪಾಸು ಮಾಡಬಹುದು’ ಎಂದಿರುವುದು ಸ್ವಲ್ಪ ನೆಮ್ಮದಿ ನೀಡಿದೆ.

ನಾನು ಹೈಸ್ಕೂಲ್ ಕಲಿಯುತ್ತಿದ್ದ ಸಮಯವದು. ಅಚ್ಯುತರಾವ್ ಎಂಬ ಮೇಷ್ಟ್ರು ನಮಗೆ ಜೀವಶಾಸ್ತ್ರವನ್ನು ಕಲಿಸುತ್ತಿದ್ದರು. ಅವರು ತುಂಬಾ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದರು, ಎಂದಿಗೂ ವಿದ್ಯಾರ್ಥಿಗಳನ್ನು ಕೋಪದಿಂದ ಬೈದವರಲ್ಲ. ಅಂಕಗಳಿಕೆಯಲ್ಲಿ ಕಡಿಮೆಯಾದಾಗಲೂ, ಹೀಗಾಗಿದ್ದಕ್ಕೆ ಕಾರಣವೇನು? ಮಕ್ಕಳ ಮನಸ್ಸಿನಲ್ಲಿ ಏನಾಗುತ್ತಿದೆ? ಅವರ ಹಿನ್ನೆಲೆಯೇನು? ಎಂಬೆಲ್ಲವನ್ನೂ ಅವರು ತಿಳಿದುಕೊಳ್ಳುತ್ತಿದ್ದರು. ನಮಗೆ ಅಂದು
ಇಷ್ಟೆಲ್ಲಾ ಗೊತ್ತಾಗುತ್ತಿರಲಿಲ್ಲ, ಇಂದು ಅವರ ಎಲ್ಲಾ ನಡೆಗಳು ಅರ್ಥವಾಗುತ್ತಿವೆ.

ಇಷ್ಟೊಂದು ಒಳ್ಳೆಯ, ಮೃದುಭಾಷಿ ಗುರುಗಳು ತಮ್ಮ ಶಾಂತಸ್ವರದಲ್ಲಿ ಯಾರಾದರೊಬ್ಬ ವಿದ್ಯಾರ್ಥಿಯನ್ನು ಕರೆದು, “ಸ್ಟಾಫ್ ರೂಮ್‌ಗೆ ಹೋಗಿ ‘ರುದ್ರ’ನನ್ನು ತೆಗೆದುಕೊಂಡು ಬಾ” ಎಂದರೆ, ಅಲ್ಲಿಗೆ ಆ ಹುಡುಗನಿಗೆ ಪೆಟ್ಟು ಬೀಳುತ್ತದೆ ಎಂದರ್ಥ. ‘ರುದ್ರ’ ಎಂದರೆ ಅದೊಂದು ಬಿದಿರಿನ ಬೆತ್ತ! ಅಚ್ಯುತರಾವ್ ಅವರು, ತಾವು ಯಾರನ್ನು ಶಿಕ್ಷಿಸಬೇಕಿತ್ತೋ ಆ‌ ಹುಡುಗನನ್ನೇ ‘ರುದ್ರ’ನನ್ನು ತರಲು ಕಳಿಸುತ್ತಿದ್ದುದು ವಿಶೇಷ.

ತೆಳ್ಳಗೆ ಉದ್ದಕ್ಕಿದ್ದ ‘ರುದ್ರ’ನಿಂದ ಪೆಟ್ಟು ತಿಂದರೆ, ಕೈಯಲ್ಲಿ ಮೂಡಿದ ಬಾಸುಂಡೆ ಮೂರು ದಿನದವರೆಗೆ ಮಾಸು ತ್ತಿರಲಿಲ್ಲ. ಹಾಗೆಂದು ಮೇಷ್ಟ್ರು ಎಲ್ಲರಿಗೂ, ಯಾವಾಗಲೂ ದಂಡಿಸುತ್ತಿದ್ದರು ಎಂದಲ್ಲ; ಲಕ್ಷ್ಮಣರೇಖೆ ದಾಟಿದವರಿಗೆ ಮಾತ್ರ ಪೆಟ್ಟುಬೀಳುತ್ತಿತ್ತು. ಕೈ ಮುಂದೆ ಮಾಡಲು ಹೇಳಿ, ಅಂಗೈ ಮೇಲೆ ಒಂದೆರಡು ಬಾರಿಸಿ, “ಬುದ್ಧಿಮಾತು ನಿನಗೆ ತಾಗಿಲ್ಲ, ಹೀಗಾಗಿ ಈ ಪೆಟ್ಟು. ನೆನಪಿರಲಿ” ಎಂದು ಹೇಳುತ್ತಿದ್ದರು. ಅಚ್ಯುತ ಸರ್ ಹೊಡೆದಿದ್ದಾರೆಂದರೆ, ಆ ವಿದ್ಯಾರ್ಥಿ ಯಿಂದ ಖಂಡಿತ ತಪ್ಪಾಗಿರುತ್ತದೆ ಎನ್ನುವುದು ಶಾಲೆಯಲ್ಲಿ ಜನಜನಿತವಾಗಿತ್ತು. ಅಂದಿನ ಕಾಲಘಟ್ಟದಲ್ಲಿ, ಮಕ್ಕಳನ್ನು ಹೀಗೆ ಶಿಕ್ಷಿಸಿದರೆ ಪೋಷಕರು ಕೋಪಗೊಳ್ಳುತ್ತಿರಲಿಲ್ಲ. ಬದಲಿಗೆ, “ನೀನು ಅದೇನು ತಪ್ಪು ಮಾಡಿದೆ, ಗುರುಗಳಿಂದ ಪೆಟ್ಟು ತಿನ್ನಲು?” ಎಂದು ಮಕ್ಕಳನ್ನು ಪ್ರಶ್ನಿಸುತ್ತಿದ್ದರು.

ಸಮಾಜದಲ್ಲಿ ಎಲ್ಲವೂ ಬದಲಾದಂತೆ ಇದು ಕೂಡ ಬದಲಾಗಿದೆ, ಕೆಲ ಶಿಕ್ಷಕರಲ್ಲಿಯೂ ಆ ಮಟ್ಟದ ‘ಎಥಿಕ್ಸ್’ ಇಲ್ಲವಾ ಗಿದೆ. ಇನ್ನು ಮಕ್ಕಳು ಮತ್ತು ಪೋಷಕರು ಬದಲಾಗಿರುವ ರೀತಿಯಂತೂ ದಿಗಿಲು ಹುಟ್ಟಿಸುತ್ತದೆ. ‘ಎರಡು ಪ್ಲಸ್ ಎರಡು = ನಾಲ್ಕು’ ಎನ್ನುವುದು ಸರಳಗಣಿತ. ಇವತ್ತೇನಾಗಿದೆಯೆಂದರೆ, ವಿದ್ಯಾರ್ಥಿಯೊಬ್ಬ ‘ಇಪ್ಪತ್ತೆರಡು’ ಎಂದು ಬರೆದಿದ್ದರೆ ಮತ್ತು ಅದು ತಪ್ಪು ಎಂದು ಶಿಕ್ಷಕರು ಅಂಕವನ್ನು ನೀಡದಿದ್ದರೆ, ಶಿಕ್ಷಕರನ್ನು ನಿಂದಿಸಲಾಗುತ್ತದೆ. ‘ಮಗುವಿನ ಕ್ರಿಯೇಟಿವಿಟಿಯನ್ನು ಕೊಲ್ಲುವ ಹುನ್ನಾರ’ ಎಂದು ಹುಯಿಲೆಬ್ಬಿಸಲಾಗುತ್ತದೆ. ‘ಎರಡು ಪ್ಲಸ್ ಎರಡು ಯಾವಾಗಲೂ ನಾಲ್ಕೇ ಏಕೆ ಆಗಬೇಕು? ಮಗುವಿನ ಕ್ರಿಯಾಶೀಲತೆಯನ್ನು ಗಮನದಲ್ಲಿರಿಸಿಕೊಂಡು ಅರ್ಧ ಅಂಕ ವನ್ನು ಕೊಡಬೇಕು’ ಎನ್ನುವ ಕೂಗು ಜೋರಾಗುತ್ತದೆ.

ಮಕ್ಕಳು ಕೂಡ, ‘ಹಸುವಿಗೆ ಎಷ್ಟು ಕಾಲು?’ ಎಂದರೆ ‘ಥ್ರೀ ಪ್ಲಸ್ ಒನ್’ ಎನ್ನುತ್ತಾರೆ, ಇನ್ನು ಕೆಲವರು ‘ಎರಡು ಪ್ಲಸ್ ಎರಡು’ ಎನ್ನುತ್ತಾರೆ. ಅದೇನೇ ಇರಲಿ ಅಂಕನೀಡಬೇಕು ಎನ್ನುವ ತಾಕೀತು ಆಡಳಿತ ಮಂಡಳಿಯಿಂದ ಬಂದಿರು ತ್ತದೆ. ಹತ್ತನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ಸರಿಯಾಗಿ ಓದಲು-ಬರೆಯಲು ಬಾರದು ಎನ್ನುವ ಸಂಗತಿಯನ್ನು ಮೊನ್ನೆ ತಾನೇ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಇವತ್ತು ಸಮಾಜ, ಶಿಕ್ಷಣ ಯಾವ ಮಟ್ಟಕ್ಕೆ ಬಂದಿದೆಯೆಂದರೆ, ‘ಹಸುವಿಗೆ ಎಷ್ಟು ಕಾಲು?’ ಎನ್ನುವ ಪ್ರಶ್ನೆಗೆ ಒಂದು ಅಂಕ ಇತ್ತೆಂದುಕೊಳ್ಳಿ, ವಿದ್ಯಾರ್ಥಿಯು ‘ಎರಡು’ ಎನ್ನುವ ಉತ್ತರ ಬರೆದಿದ್ದರೆ, ‘ಕೊನೇಪಕ್ಷ ಅರ್ಧ ಸರಿಯಾಗಿ ಬರೆದಿದ್ದಾನೆ, ಅರ್ಧ ಅಂಕ ನೀಡಿ’ ಎನ್ನುವ ಮಟ್ಟಕ್ಕೆ! ಈ ಮಾತುಗಳು ಉತ್ಪ್ರೇಕ್ಷೆ ಎನಿಸಬಹುದು, ಆದರೆ ಇದು ಇಂದು ಸಮಾಜದಲ್ಲಿ ನಡೆಯುತ್ತಿದೆ. ‘ಬಿ ಲಿಬರಲ್ ಇನ್ ಕರೆಕ್ಷನ್’ ಎನ್ನುವ ಒಂದು ಸಾಲಿನ ಆದೇಶ ಪಡೆಯದಿರುವ ಶಿಕ್ಷಕರು ಇಲ್ಲ ಎನ್ನುವಂತಾಗಿದೆ. ಈ ರೀತಿ ಅಂಕ ಕೊಟ್ಟು ಸಮಾಜದ ಆರೋಗ್ಯವನ್ನು ನಾವು ಕೊಲ್ಲುತ್ತಿದ್ದೇವೆ.

ಮೊನ್ನೆ ಸೋಷಿಯಲ್ ಮೀಡಿಯಾದಲ್ಲಿ, “ಇದು ಪರೀಕ್ಷೆಯ ಸಮಯ. ಮಕ್ಕಳ ತಲೆಯಲ್ಲಿ ಪಠ್ಯ ಇರಬೇಕಾದ ಜಾಗದಲ್ಲಿ ಕ್ರಿಕೆಟ್ ಎನ್ನುವ ಕಸ ತುಂಬಿಕೊಳ್ಳುತ್ತಿದೆ. ಆಟಗಾರರು, ವೀಕ್ಷಕ ವಿವರಣೆಗಾರರು ಎಲ್ಲರ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತದೆ. ಸಮಯ ವ್ಯಯಿಸಿ ಇದನ್ನು ನೋಡಿದ ಮಕ್ಕಳ ಭವಿಷ್ಯದ ಗತಿಯೇನು?” ಎನ್ನುವ ಕಾಳಜಿ ವ್ಯಕ್ತಪಡಿಸಿ ಬರೆದಿದ್ದೆ. ಅದಕ್ಕೆ ಬಂದ ಪ್ರತಿಕ್ರಿಯೆಗಳು ನಮ್ಮ ಸಮಾಜ ಎತ್ತ ಸಾಗುತ್ತಿದೆ ಎನ್ನುವುದರ ದ್ಯೋತಕ ವಾಗಿತ್ತು. ಒಂದು ಪ್ರತಿಕ್ರಿಯೆಯು- “ಸಮಾಜದಲ್ಲಿ ಎಲ್ಲರೂ ಶಿಸ್ತಿನಿಂದ ಓದಿ ಯಶಸ್ಸು ಪಡೆದರೆ, ಕಸ ಗುಡಿಸುವವರು ಯಾರು? ಡ್ರೈವಿಂಗ್ ಮಾಡುವವರು ಯಾರು? ಮುಸುರೆ ತೊಳೆಯುವವರು ಯಾರು? ಎಲ್ಲವೂ ಬ್ಯಾಲೆನ್ಸ್ ಆಗಬೇಕು, ಹೀಗಾಗಿ ಎಲ್ಲವೂ ಸರಿಯಾಗಿದೆ” ಎನ್ನುವ ಅರ್ಥದಲ್ಲಿ ಇತ್ತು.

“ನಾವು ಉನ್ನತ ಯೋಚನೆ ಮಾಡಿ ಉನ್ನತ ಮಟ್ಟವನ್ನು ಮುಟ್ಟಬೇಕು” ಎನ್ನುವುದು ನನ್ನ ಕಾಳಜಿಯಾಗಿತ್ತು. ಅದಕ್ಕೆ ಇಂಥ ವಿತಂಡವಾದದ ಪ್ರತಿಕ್ರಿಯೆ. ಸಮಾಜ ಇಂದು ಒಡೆದಮನೆ; ನೀವು ಏನೇ ಹೇಳಿ, ಅದಕ್ಕೊಂದು ‘ಕೌಂಟರ್ ಸ್ಟೇಟ್‌ಮೆಂಟ್’ ಸಿದ್ಧವಿರುತ್ತದೆ. ‘ಪುರುಷರೇ ಏಕೆ ಸಿಗರೇಟು ಸೇದಬೇಕು?’ ಎನ್ನುವ ವಾದವನ್ನು ಹುಟ್ಟು ಹಾಕಿದ್ದು ಸಿಗರೇಟು ಕಂಪನಿಗಳು. 1960ರ ದಶಕದಲ್ಲಿ ಸಿಗರೇಟು ಮಾರಾಟದಿಂದ ನಿರ್ದಿಷ್ಟ ಮೊತ್ತದ ಲಾಭ ಗಳಿಸುತ್ತಿದ್ದ ಈ ಸಂಸ್ಥೆಗಳು ಇನ್ನಷ್ಟು ಲಾಭ ಮಾಡಿಕೊಳ್ಳಲು ‘ಸ್ತ್ರೀ ವಾದ’ವನ್ನು ಹರಿಯಬಿಟ್ಟವು. ‘ಹೆಣ್ಣಿಗೂ ಸಮಾನ ಹಕ್ಕಿದೆ, ಆಕೆ ಏಕೆ ಸಿಗರೇಟು ಸೇದಬಾರದು?’ ಎನ್ನುವ ನರೇಟಿವ್ ಸೃಷ್ಟಿಮಾಡಲಾಯಿತು.

ಹಣ ತೆತ್ತು ಹತ್ತಾರು ರೂಪದರ್ಶಿಗಳನ್ನು ಕರೆಸಿ, ಕೈಗೆ ಸಿಗರೇಟು ಕೊಟ್ಟು, ಸಮಾಜದ ಮುಂದೆ ಅದನ್ನು ಸೇದುವಂತೆ ಹೇಳಲಾಯಿತು. ಮಿಕ್ಕದ್ದು ಚರಿತ್ರೆ. ಇದರಿಂದ ಲಾಭ ಮಾಡಿಕೊಂಡದ್ದು ಸಿಗರೇಟು ಉತ್ಪಾದಕ ಕಂಪನಿಗಳು! ‘ಸೇದಬೇಡಿ, ಇದು ಆರೋಗ್ಯಕ್ಕೆ ಹಾನಿಕರ’ ಎಂದರೆ, ಅದು ಸ್ತ್ರೀ ಮತ್ತು ಪುರುಷರ ನಡುವಿನ ಮೇಲು-ಕೀಳುಗಳ ಸಂಘರ್ಷವಾಗಿ ಮಾರ್ಪಾಡಾಗುತ್ತಿತ್ತು. ಇವತ್ತಿನ ಶಿಕ್ಷಣ ವ್ಯವಸ್ಥೆಯೂ ಹೀಗೇ ಆಗಿದೆ.

ಗಮನಿಸಿ ನೋಡಿ- ಪ್ರಾಥಮಿಕ ಶಾಲೆಗಳು ಎಂದರೆ ಅವು ಹೈಸ್ಕೂಲ್‌ಗೆ ‘ಫೀಡರ್ ಕೇಂದ್ರ’ಗಳಾಗಿ ಮಾರ್ಪಟ್ಟಿವೆ; ಹೈಸ್ಕೂಲ್ ಗಳು ಕಾಲೇಜುಗಳಿಗೆ ಫೀಡರ್‌ಗಳು, ಅಷ್ಟೇ. ಇಲ್ಲಿ ವಿದ್ಯಾರ್ಥಿಯನ್ನು ನಪಾಸು ಮಾಡುವಂತಿಲ್ಲ, ಮಾಡಿ ದರೆ ಮುಂದಿನ ತರಗತಿಗೆ ತಲೆ ಕಡಿಮೆಯಾಯ್ತು. ಇಲ್ಲ ಅದಾಗುವಂತಿಲ್ಲ, ಓದಲು ಬರೆಯಲು ಬರಲಿ ಬಿಡಲಿ, ಅವರು ಮುಂದಿನ ತರಗತಿಗೆ ಹೋಗಬೇಕು. ಒಟ್ಟಿನಲ್ಲಿ, ಶಾಲೆಗಳು ‘ಕಲಿಕಾ ಕೇಂದ್ರ’ಗಳಾಗದೆ, ಮುಂದಿನ ಹಂತದ ತರಗತಿಗಳಿಗೆ ‘ಫೀಡರ್ ’ಗಳಾಗಿ ಮಾರ್ಪಟ್ಟಿವೆ. ಕಳೆದ ವಾರ ಸಿಬಿಎಸ್‌ಸಿಯವರು, ‘ಐದು ಮತ್ತು ಎಂಟನೇ ತರಗತಿ ಯಲ್ಲಿ ನಪಾಸು ಮಾಡಬಹುದು’ ಎನ್ನುವ ಘೋಷಣೆ ಮಾಡಿದ್ದಾರೆ ಎನ್ನುವುದು ಸ್ವಲ್ಪ ಮಟ್ಟಿನ ನೆಮ್ಮದಿ ನೀಡಿದೆ.

ಇನ್ನು, ಸಮಾಜದಲ್ಲಿ ಕ್ರೀಡೆಯ ಹೆಸರಿನಲ್ಲಿ ನಡೆಯುವ ವ್ಯಾಪಾರದ ಬಗ್ಗೆ ಕೂಡ ನಮ್ಮದು ಇದೇ ಧೋರಣೆ. ಮಕ್ಕಳ
ಪರೀಕ್ಷೆಯ ಸಮಯ ಎನ್ನುವ ಪರಿಜ್ಞಾನ ಕೂಡ ಯಾರಿಗೂ ಇಲ್ಲ. “ಕ್ರಿಕೆಟ್ ನೋಡುವುದು ಓವರ್‌ಆಲ್ ಡೆವಲಪ್‌ ಮೆಂಟ್ ನ ಭಾಗ; ಕೇವಲ ಓದು ಮತ್ತು ಓದು ಎಂದರೆ ಅವರು ಕೂಚುಭಟ್ಟರಾಗುತ್ತಾರೆ” ಎನ್ನುವ ಫರ್ಮಾನು ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿರುವವರಿಂದ ಬರುತ್ತದೆ. ಕ್ರಿಕೆಟ್ ಆಟವನ್ನು ‘ಆಡಿದ್ದರೆ’ ಅಲ್ಲಿಗೆ ಪರವಾಗಿಲ್ಲ ಎನ್ನಬಹುದು, ದೈಹಿಕ ವ್ಯಾಯಾಮವಾದ ಹಾಗಾಯಿತು, ಓದಿನಿಂದ ಒಂದಷ್ಟು ಬದಲಾವಣೆ ಕೂಡ ಸಿಕ್ಕಿತು ಎನ್ನಬಹುದು. ಆದರೆ ಕ್ರಿಕೆಟ್‌ನ ‘ವೀಕ್ಷಣೆ’ಯಿಂದ ಯಾವ ಲಾಭ? ಅದರಲ್ಲೂ ಕಲಿಯುವ ವಯಸ್ಸಿನಲ್ಲಿ ಮಕ್ಕಳನ್ನು ರಿಲ್ಯಾಕ್ಸ್ ಆಗಲು ಬಿಟ್ಟರೆ ಹೇಗೆ? ಹೀಗೆ ಯಾವುದೇ ಅಂಕೆ-ಶಂಕೆ ಇಲ್ಲದೆ ಬೆಳೆದ ಮಕ್ಕಳು ಸಮಾಜಕ್ಕೆ ಹೊರೆ ಯಾಗುತ್ತಾರೆ.

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಂದು ಇರುವ ಕೆಲಸಗಳಿಗೂ ತತ್ವಾರ ಬರುತ್ತಿರುವ ಈ ಸಮಯದಲ್ಲಿ, ಮಕ್ಕಳು ಇನ್ನಷ್ಟು ಶ್ರದ್ಧೆಯಿಂದ ಕಲಿಯಬೇಕಿದೆ. ಮುಂದೆ ಒದಗುವ ಸನ್ನಿವೇಶಗಳನ್ನು ಗ್ರಹಿಸಬೇಕಿದೆ. ಆದರೆ ಅದ್ಯಾವುದೂ ನಮ್ಮ ಸಮಾಜದಲ್ಲಿ ಆಗುತ್ತಿಲ್ಲ. ಬದಲಿಗೆ, ಒಂದು ಬದಲಾವಣೆ ಮಾತ್ರ ವೇಗವಾಗಿ ಆಗುತ್ತಿದೆ- ಶಾಲಾ ಕಾಲೇಜು ಗಳಲ್ಲಿ ಶ್ರದ್ಧೆಯಿಂದ ಕಲಿತು ಪ್ರಥಮ ಸ್ಥಾನ ಪಡೆಯುವವರನ್ನು ‘ನಿಷ್ಪ್ರಯೋಜಕರು’, ‘ಬದುಕನ್ನು ಆಸ್ವಾದಿಸಲು ಬಾರದವರು’ ಎನ್ನಲಾಗುತ್ತಿದೆ.

ಟಿವಿ ಟಾಕ್ ಷೋಗಳಲ್ಲಿ, ಸೆಲೆಬ್ರಿಟಿಗಳ ಬಾಯಲ್ಲಿ “ನಾವು ಹೆಚ್ಚು ಓದಿಲ್ಲ, ಬಟ್ ಯಶಸ್ವಿಯಾಗಿದ್ದೇವೆ” ಎನ್ನುವ ಹೇಳಿಕೆ ಹೆಚ್ಚಾಗುತ್ತಿದೆ. ಇನ್ನು ಬಾಲಿವುಡ್ ಮಂದಿಯಂತೂ ಟಾಕ್ ಷೋಗಳಲ್ಲಿ, “ಹೆಚ್ಚು ಓದುತ್ತಿರುವವರ ಸಂಪಾದನೆ ಎಷ್ಟು?” ಎಂದು ಕಿಚಾಯಿಸುತ್ತಾರೆ. ‘ಪುರುಷರೇ ಏಕೆ ಸಿಗರೇಟು ಸೇದಬೇಕು?’ ಎನ್ನುವ ಕ್ಯಾಂಪೇನ್
ಜ್ಞಾಪಿಸಿಕೊಳ್ಳಿ. ಇದರಿಂದ ಲಾಭವಾದದ್ದು ಯಾರಿಗೆ ಎನ್ನುವುದು ನೆನಪಿರಲಿ. ಇಂದಿನ ಸಮಾಜದಲ್ಲಿ ಹರಿ ಬಿಡಲಾಗುತ್ತಿರುವ ಅಂಶಗಳು ಕೂಡ ಇದೇ ತರಹದವು. ಅವರಿಗೆ ಬೇಕಿರುವುದು ಹೆಚ್ಚು ಚಿಂತಿಸದೆ, ಯೋಚಿಸದೆ ಅವರ ಪದಾರ್ಥಗಳನ್ನು ಮತ್ತು ಚಿಂತನೆಗಳನ್ನು ‘ಕನ್ಸ್ಯೂಮ್’ ಮಾಡುವ ಅಗಾಧ ಜನರ ಗುಂಪು, ಅಷ್ಟೇ!

ಗಮನಿಸಿ- ಬೀದಿಯಲ್ಲಿ ತಳ್ಳುಗಾಡಿಯಲ್ಲಿ ಬರುವ, ವಾರದಲ್ಲಿ 2-3 ಬಾರಿ ಖರೀದಿಸಬೇಕಾಗುವ ಟೊಮೆಟೋವನ್ನು
ಕೊಳ್ಳುವ ಮುನ್ನ ಅದನ್ನು ಪರೀಕ್ಷಿಸಿ, ಸರಿಯಾಗಿದೆಯೇ ಇಲ್ಲವೇ ಎಂದು ನೋಡುವ ಮಧ್ಯಮ ವರ್ಗದ ಜನರು ಈ ವಿಷಯದಲ್ಲಿ ಮಾತ್ರ ಪೂರ್ಣನಿದ್ರೆಯಲ್ಲಿದ್ದಾರೆ. ‘ಇವತ್ತು ಎಲ್‌ಕೆಜಿಗೆ ಸೇರಿಸಲು ಲಕ್ಷ ರುಪಾಯಿ ಬೇಕು’ ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ಅಲ್ಲಿಂದ ಪದವಿ ತರಗತಿಯವರೆಗೆ ಮಾಡಿದ ಖರ್ಚಿನ ಲೆಕ್ಕ ಹಾಕಿದರೆ ಅದೊಂದು ದೊಡ್ಡ ಮೊತ್ತವಾಗುತ್ತದೆ. ಇಷ್ಟೊಂದು ಹಣವನ್ನು ವ್ಯಯಿಸಿ ಕೂಡ ಕಲಿಕೆಯಲ್ಲಿ ಹಿಂದೆ ಬಿದ್ದು, ಅದರಿಂದ ಬದುಕು ಕಟ್ಟಿಕೊಳ್ಳಲಾಗಲಿಲ್ಲ ಎಂದರೆ ಅದಕ್ಕೇನು ಅರ್ಥ? “ಹೇಗೆ ಜೀವಸ್ತರದಲ್ಲಿ ‘ಇಕೊ-ಬ್ಯಾಲೆನ್ಸ್’ ಆಗಬೇಕೋ, ಹಾಗೆ ಇಲ್ಲೂ ಎಲ್ಲಾ ತರಹದ ಕೆಲಸ ಮಾಡುವವರು ಬೇಕು” ಎನ್ನುವ ವಾದ ಕೇಳಲು ಬಹಳ ಚೆನ್ನಾಗಿರುತ್ತದೆ. ಹತ್ತಾರು ವರ್ಷ ಆಟೋ ಓಡಿಸುತ್ತಾ, ಬದುಕಿನ ಕಷ್ಟಗಳನ್ನು ನುಂಗಿಕೊಂಡು, “ನನ್ನ ಬದುಕಿನಂತೆ ನನ್ನ ಮಕ್ಕಳ
ಬದುಕು ಆಗಬಾರದು” ಎಂದು ಬಯಸುವ ತಂದೆ-ತಾಯಿಯನ್ನು ಒಮ್ಮೆ ಮಾತಾಡಿಸಿ ನೋಡಿ ಸಾಕು, ನೋವು-ಕಷ್ಟದ ಅರಿವಾಗುತ್ತದೆ.

“ಈಗ ನಮ್ಮ ಕೈಲಿರುವ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು, ಇಲ್ಲವಾದಲ್ಲಿ ಜೀವನಪೂರ್ತಿ
ಹಣವಿಲ್ಲ, ಸಮಯವಿಲ್ಲ” ಎನ್ನುತ್ತಾ, ಇಷ್ಟವಿರಲಿ ಬಿಡಲಿ ಬದುಕಿನ ಬಂಡಿ ಎಳೆಯಲು ಬೇಕಾಗುವ ಕೆಲಸವನ್ನು
ಮಾಡಬೇಕಾಗುತ್ತದೆ. ಟಿವಿ ಪರದೆಯ ಮೇಲೆ ಕುಣಿದಾಡಿದ್ದ ನೀವು ನೋಡಿ, ಆರಾಧಿಸಿ, ಮೆಚ್ಚಿದ್ದ ಸಿನಿಮಾ ನಟರು ಅಥವಾ ಆಟಗಾರರು ಮಾತ್ರ ಜಗತ್ತಿನ ಎಲ್ಲಾ ಸುಖಭೋಗಗಳನ್ನು ಅನುಭವಿಸುತ್ತಾ ಜೀವನವನ್ನು ಕಳೆಯುತ್ತಾರೆ. ಇದರರ್ಥ ಆಟವನ್ನು, ಸಿನಿಮಾವನ್ನು ಯಾರೂ ವೀಕ್ಷಿಸಬಾರದು ಅಂತಲ್ಲ; ಮಾಡುವ ಕೆಲಸ ಮುಖ್ಯವಾಗಿರಲಿ, ನಮ್ಮ ಗುರಿಗೆ ಆದ್ಯತೆಯಿರಲಿ, ಆ ಸಾಧನೆಯ ಹಾದಿಯಲ್ಲಿ ಬೇರಾವುದೂ ಅಡ್ಡಿಯಾಗದಿರಲಿ ಎನ್ನುವುದಷ್ಟೇ ಆಶಯ. ಉಳಿದಂತೆ, ಅವರವರ ತಲೆಗೆ ಅವರವರ ಕೈ. ಇಲ್ಲಿ ಎಲ್ಲರೂ ಅವರವರ ಮನಸ್ಸಿಗೆ ಬಂದದ್ದು ಮಾಡಲು ಸ್ವತಂತ್ರರು.

ಇದನ್ನೂ ಓದಿ: Rangaswamy Mookanahally Column: ನಮ್ಮ ಕಥೆ ಬರೆವವರಾರು ಗೊತ್ತೇ ?