Sunday, 5th January 2025

Premadasa Adyantaya Column: ಖಂಡಿತ ಬೇಸರವಾಗುತ್ತದೆ..

ಪ್ರತಿಸ್ಪಂದನ

ಪ್ರೇಮದಾಸ ಅಡ್ಯಂತಾಯ

ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟರು ಬರೆದ, ‘ಕನ್ನಡಿಗರಾಗಿಯೂ ಕನ್ನಡ ಬರೊಲ್ಲ ಎಂದಾಗ ಬೇಸರವಾಗದೇ?’ ಎಂಬ ಅಂಕಣ ಬರಹ (ವಿಶ್ವವಾಣಿ ಡಿ.29) ಓದಿ ಖುಷಿಯಾಯಿತು. ವಿಚಾರದ ಜತೆಜತೆಗೆ ಅವರ ಬರವಣಿಗೆಯ ಶೈಲಿಯೂ ತುಂಬಾ ಇಷ್ಟವಾಯಿತು. ಈ ಲೇಖನದಲ್ಲಿ ಅವರು ಕನ್ನಡಿಗರಾದ ಐಶ್ವರ್ಯ ರೈ, ಸುನಿಲ್ ಶೆಟ್ಟಿ ಮತ್ತು
ದೀಪಿಕಾ ಪಡುಕೋಣೆಯವರ ಕುರಿತು ಉಲ್ಲೇಖಿಸಿದ್ದಾರೆ.

ಈ ಮೂವರೂ ‘ಕನ್ನಡ ಬರೊಲ್ಲ’ ಎಂದಾಗ ಕನ್ನಡಿಗರಿಗೆ ಬೇಸರವಾಗುವುದು ಸಹಜ. ಆದರೆ ವಾಸ್ತವವೆಂದರೆ, ಈ ಮೂವರಲ್ಲಿ ಐಶ್ವರ್ಯ ರೈ, ಸುನಿಲ್ ಶೆಟ್ಟಿಯವರ ಮನೆಮಾತು ತುಳು ಮತ್ತು ದೀಪಿಕಾ ಪಡುಕೋಣೆಯವರ ಮನೆಮಾತು ಕೊಂಕಣಿ. ಆದರೆ ನಾವು ಕರ್ನಾಟಕದವರಾದುದರಿಂದ, ಕನ್ನಡ ನಮ್ಮ ಮಾತೃಭಾಷೆ ಆದುದರಿಂದ ತುಳು, ಕೊಡವ, ಕೊಂಕಣಿ, ಅರೆಭಾಷೆ, ಬ್ಯಾರಿ, ಹವ್ಯಕ, ಕರಾಡ್, ಕುಂದಗನ್ನಡವನ್ನು ಮಾತನಾಡು ವವರೆಲ್ಲರೂ ಎರಡೂ ಭಾಷೆಗಳನ್ನೂ ಏಕಪ್ರಕಾರವಾಗಿ ಮಾತೃಭಾಷೆಯಾಗಿಯೇ ಪರಿಗಣಿಸುತ್ತಾರೆ ಮತ್ತು ಪರಿಗಣಿಸಲೇಬೇಕು ಎಂಬುದನ್ನು ದೃಢವಾಗಿ ನಂಬಿದ್ದೇನೆ.

ಇಷ್ಟಾಗಿಯೂ ಕೆಲವರು ತಾವು ಕರ್ನಾಟಕದವರಾದರೂ ‘ಕನ್ನಡ ಬರೊಲ್ಲ’ ಅನ್ನುವುದಕ್ಕೆ ಬಲವಾದ ಕಾರಣ
ವಿದೆ. ಅದೆಂದರೆ, ಅವರು ಹುಟ್ಟಿ ಬೆಳೆದಿರುವುದು ಬೇರೆ ರಾಜ್ಯದಲ್ಲಾದರೆ ಆ ರಾಜ್ಯದ ಭಾಷೆಯನ್ನು ಕಲಿಯ ಬೇಕಾಗುತ್ತದೆ ಮತ್ತು ಮನೆಯಲ್ಲಿ ತಮ್ಮ ಮನೆಮಾತನ್ನು ಆಡುತ್ತಾರೆ. ಆದುದರಿಂದ ಅವರಿಗೆ ಕನ್ನಡ ಕಲಿಯುವ ಅವಕಾಶವೇ ಇರುವುದಿಲ್ಲ.

ಐಶ್ವರ್ಯ ರೈ ಮತ್ತು ಸುನಿಲ್ ಶೆಟ್ಟಿಯವರು ಬೆಳೆದಿದ್ದೆಲ್ಲಾ ಮುಂಬೈಯಲ್ಲಿ, ಹೀಗಾಗಿ ಅವರಿಗೆ ವಿನಾಯಿತಿ ನೀಡಬಹುದು. ಆದರೆ ದೀಪಿಕಾ ಪಡುಕೋಣೆ ತಮಗೆ ಕನ್ನಡ ಬರೊಲ್ಲ ಎಂದರೆ, ಕನ್ನಡಿಗರಿಗೆ ಖಂಡಿತ ಅಸಮಾ ಧಾನವಾಗುವುದು ಸಹಜ. ಇಲ್ಲೊಂದು ವೈಯಕ್ತಿಕ ವಿಚಾರವನ್ನು ಉಲ್ಲೇಖಿಸಲು ಬಯಸುವೆ- ನಾನು
ಕೊಲ್ಕತ್ತದಲ್ಲಿ ಕೇವಲ ಮೂರು ವರ್ಷ ಇದ್ದೆ, ಅಲ್ಲಿ ಬಂಗಾಳಿ ಭಾಷೆ ಕಲಿತೆ. ಆದರೆ ಆರು ದಶಕಗಳಿಂದ ಬೆಂಗಳೂರಿನಲ್ಲಿದ್ದೇನೆ (ಮಧ್ಯದಲ್ಲಿ ಮೂರ‍್ನಾಲ್ಕು ವರ್ಷ ಇತರ ರಾಜ್ಯದಲ್ಲಿದ್ದೆ).

ಇಲ್ಲಿ ನಾನು ತಮಿಳು, ತೆಲುಗು, ಹಿಂದಿ ಕಲಿತಿದ್ದರೂ ಇಲ್ಲಿನ ಕನ್ನಡವನ್ನು ಖಂಡಿತವಾಗಿಯೂ ಕಲಿಯಲಿಲ್ಲ.
ಏಕೆಂದರೆ, ಬೆಂಗಳೂರಿನ ಕನ್ನಡದ ವೈಖರಿ ಹೀಗಿದೆ- “ನಮ್ಮಪ್ಪಂದು ಆನ್ಸಿಸ್ಟರ್ ಪ್ರಾಪರ್ಟಿ ಇದೆ. ಅದನ್ನು ಲುಕ್
ಆ-ರ್ ಮಾಡ್ಲಿಕ್ಕೆ ಯಾರೂ ಇಲ್ಲ. ಸೋ, ನಾನು ನೇಟಿವ್ ಪ್ಲೇಸ್‌ಗೆ ಹೋಗಿ ಅದನ್ನು ಡಿವೈಡ್ ಮಾಡಿ, ಅವರವರ ಶೇರ್ ಕೊಟ್ಟುಬಿಟ್ರೆ, ನನ್ನ ರೆಸ್ಪಾನ್ಸಿಬಿಲಿಟಿ ಮುಗೀತದೆ. ಅದಕ್ಕೇಂತ ಸಿಕ್ಸ್ ಡೇಸ್ ಲೀವ್ ಹಾಕಿ ಹೋಗ್ತಿದ್ದೀನಿ….”.

(ಲೇಖಕರು ಕೆನರಾ ಬ್ಯಾಂಕ್‌ನ ನಿವೃತ್ತ ಪ್ರಬಂಧಕರು)

ಇದನ್ನೂ ಓದಿ: Aneesh B Column; ಕನ್ನಡ ಅಂದರೆ GenZ ಗಳಿಗೇಕೆ ಹಿಂಜರಿಕೆ?