Saturday, 11th January 2025

Magnus Carlsen: ಜೀನ್ಸ್‌ ಧರಿಸಲು ಫಿಡೆ ಅನುಮತಿ: ಮರಳಿ ಸ್ಪರ್ಧೆಗಿಳಿದ ಕಾರ್ಲ್‌ಸೆನ್

ನ್ಯೂಯಾರ್ಕ್‌: ಜೀನ್ಸ್ ಪ್ಯಾಂಟ್ ಧರಿಸಿದ್ದ ಕಾರಣಕ್ಕೆ ವಿಶ್ವ ರ್‍ಯಾಪಿಡ್‌ ಚೆಸ್ ಚಾಂಪಿಯನ್‌ಶಿಪ್‌ನಿಂದ ಅನರ್ಹಗೊಂಡಿದ್ದ ಐದು ಬಾರಿಯ ವಿಶ್ವ ಚಾಂಪಿಯನ್, ವಿಶ್ವ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸೆನ್(Magnus Carlsen), ಇದೀಗ ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ(World Blitz Championship) ಮರಳಿ ಸ್ಪರ್ಧೆಗಿಳಿಯಲಿದ್ದಾರೆ. ಟೂರ್ನಿಯ ನಿಯಮದಲ್ಲಿ ಸ್ಪರ್ಧಿಗಳಿಗೆ ಜೀನ್ಸ್ ಪ್ಯಾಂಟ್ ಧರಿಸಲು ಅವಕಾಶ ನೀಡಿರುವುದಾಗಿ ವಿಶ್ವ ಚೆಸ್ ಆಡಳಿತ ಸಂಸ್ಥೆ ಫಿಡೆ ತಿಳಿಸಿದೆ.

ವಸ್ತ್ರಸಂಹಿತೆಯ ವಿನಾಯಿತಿ ಬಗ್ಗೆ ಸ್ಪಷ್ಟನೆ ನೀಡಿರುವ ಫಿಡೆ ಮುಖ್ಯಸ್ಥ ಅರ್ಕಾಡಿ ಡ್ವೊರ್ಕೊವಿಚ್, ಟೂರ್ನಿಯ ಅಧಿಕೃತ ಡ್ರೆಸ್‌ಕೋಡ್ ಅನ್ನು ಅನುಸರಿಸುವುದು ಕಡ್ಡಾಯ. ಆದರೆ ಟೂರ್ನಿಯ ನಿಯಮದಲ್ಲಿ ಸಣ್ಣ ಬದಲಾವಣೆಯೊಂದಿಗೆ ಸ್ಪರ್ಧಿಗಳಿಗೆ ಕೆಲ ವಿನಾಯಿತಿ ನೀಡಲಾಗಿದೆ. ಸ್ಪರ್ಧಿಗಳು ಧರಿಸುವ ಜಾಕೆಟ್‌ಗೆ ಹೊಂದಿಕೆಯಾಗುವ ಜೀನ್ಸ್ ಧರಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಫಿಡೆ ಉಪಾಧ್ಯಕ್ಷ ಮತ್ತು ದಿಗ್ಗಜ ವಿಶ್ವನಾಥನ್ ಆನಂದ್ ಅವರನ್ನು ಭೇಟಿ ಮಾಡಿದ ಕಾರ್ಲ್‌ಸೆನ್, ಮುಖ್ಯಸ್ಥ ಅರ್ಕಾಡಿ ಡ್ವೊರ್ಕೊವಿಚ್ ಹಾಗೂ ಟೂರ್ನಿಯ ಪ್ರಾಯೋಜಕರ ಜತೆಗೆ ಚರ್ಚೆ ನಡೆಸಿದ ಬಳಿಕ ಈ ವಿನಾಯಿತಿ ನೀಡಲಾಗಿದೆ. ಜೀನ್ಸ್ ಧರಿಸಿದ್ದಕ್ಕಾಗಿ ಕಾರ್ಲ್‌ಸೆನ್‌ಗೆ 17 ಸಾವಿರ ದಂಡ ವಿಧಿಸಲಾಗಿತ್ತು.

ಭಾನುವಾರ ನಡೆದಿದ್ದ ವಿಶ್ವ ರ‍್ಯಾಪಿಡ್‌ ಚೆಸ್‌ ಪಂದ್ಯಾವಳಿಯಲ್ಲಿ ಚಾಂಪಿಯನ್‌ ಆಗಿ ಮೂಡಿಬಂದಿದ್ದರು. ಸೋಲಿನೊಂದಿಗೆ ಈ ಕೂಟವನ್ನು ಆರಂಭಿಸಿದ್ದ ಅವರು 11ನೇ ಮತ್ತು ಕೊನೆಯ ಸುತ್ತಿಲ್ಲಿ ಗರಿಷ್ಠ 8.5 ಅಂಕ ಗಳಿಸಿ ವಿಜೇತರೆನಿಸಿದರು. ಪ್ರಶಸ್ತಿ ಗೆಲ್ಲುವ ಮೂಲಕ 37 ವರ್ಷದ ಕೊನೆರು ಹಂಪಿ, ಚೀನಾದ ಜು ವೆನ್ಜುನ್ ಬಳಿಕ ಮಹಿಳೆಯರ ವಿಭಾಗದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ಎರಡನೇ ಚೆಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಕೊನೆರು ಹಂಪಿ ಅವರು 2022ರ ಮಹಿಳಾ ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು.

ಪುರುಷರ ವಿಭಾಗದಲ್ಲಿ ರಷ್ಯಾದ 18 ವರ್ಷದ ವೊಲೊಡರ್ ಮುರ್ಜಿನ್ ಪ್ರಶಸ್ತಿ ಗೆದ್ದರು. 17ನೇ ವಯಸ್ಸಿಗೆ ಚಾಂಪಿಯನ್​ಶಿಪ್​ ಕಿರೀಟ ತಮ್ಮದಾಗಿಸಿಕೊಂಡಿರುವ ನೋಡರ್ಬೆಕ್ ಅಬ್ದುಸಟ್ಟೊರೊವ್ ನಂತರ ವೊಲೊಡರ್ ಮುರ್ಜಿನ್ ಎರಡನೇ ಕಿರಿಯ FIDE ವಿಶ್ವ ರ‍್ಯಾಪಿಡ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.