Friday, 10th January 2025

IND vs AUS 4th Test: ಗರಿಷ್ಠ ಪ್ರೇಕ್ಷಕರ ದಾಖಲೆ ಬರೆದ ಬಾಕ್ಸಿಂಗ್ ಡೇ ಟೆಸ್ಟ್

ಮೆಲ್ಬರ್ನ್‌: ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್‌(IND vs AUS 4th Test) ಪಂದ್ಯ 147 ವರ್ಷಗಳ ಟೆಸ್ಟ್​ ಇತಿಹಾಸದಲ್ಲಿ ಗರಿಷ್ಠ ಪ್ರೇಕ್ಷಕರು ವೀಕ್ಷಿಸಿದ ಪಂದ್ಯ ಎನಿಸಿದೆ. ಮೆಲ್ಬೋರ್ನ್‌ನಲ್ಲಿ(Melbourne) ಸೋಮವಾರ ಮುಕ್ತಾಯ ಕಂಡಿದ್ದ ಈ ಟೆಸ್ಟ್​ ಪಂದ್ಯವನ್ನು 5 ದಿನಗಳಲ್ಲಿ ಒಟ್ಟಾರೆ 3,73,691 ಪ್ರೇಕ್ಷಕರು ವೀಕ್ಷಿಸಿದರು. ಇದರೊಂದಿಗೆ 1937ರ ಆಶಸ್​ ಸರಣಿಯಲ್ಲಿ 3,50,535 ಪ್ರೇಕ್ಷಕರು ವೀಕ್ಷಿಸಿದ್ದ ಟೆಸ್ಟ್​ ಪಂದ್ಯದ ದಾಖಲೆ ಪತನಗೊಂಡಿತು.

ನಾಲ್ಕನೇ ಟೆಸ್ಟ್‌ ಪಂದ್ಯ ಸೋತ ಕಾರಣ ಭಾರತದ ವಿಶ್ವ ಚಾಂಪಿಯನ್‌ಶಿಪ್‌ ಟೆಸ್ಟ್‌ ಫೈನಲ್‌ ಪ್ರವೇಶದ ಅವಕಾಶಗಳು ಕ್ಷೀಣಿಸಿದೆ. ಆದರೂ ಸಣ್ಣ ಅವಕಾಶವೊಂದು ಜೀವಂತವಾಗಿದೆ. ಹೌದು ಡಬ್ಲ್ಯೂಟಿಸಿ ಫೈನಲ್‌ ಗೆ ಅರ್ಹತೆ ಪಡೆಯಲು, ಭಾರತವು ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಪಂದ್ಯವನ್ನು ಗೆಲ್ಲಬೇಕು. ಮತ್ತೊಂದೆಡೆ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವಿನ ಎರಡು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 2-0 ಅಂತರದಿಂದ ಸೋಲಬೇಕು ಹಾಗಾದರೆ ಭಾರತ ಫೈನಲ್‌ ಪ್ರವೇಶಿಸುವ ಅವಕಾಶವಿದೆ. ಸದ್ಯ ಭಾರತ 55.89 ಪಿಸಿಟಿಯೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 58.89 ರೊಂದಿಗೆ ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಈಗಾಗಲೇ ಫೈನಲ್‌ ಪ್ರವೇಶಿಸಿದೆ.

ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಗೆಲುವಿಗಾಗಿ ಭಾರಿ ಪೈಪೋಟಿ ನಡೆದಿತ್ತು. ಆದರೆ, ಪ್ಯಾಟ್‌ ಕಮಿನ್ಸ್‌ ನಾಯಕತ್ವದ ಆಸ್ಟ್ರೇಲಿಯಾ ತಂಡ, ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರುವ ಮೂಲಕ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು. ಅದರಲ್ಲಿಯೂ ವಿಶೇಷವಾಗಿ ಆಲ್‌ರೌಂಡರ್‌ ಪ್ರದರ್ಶನ ತೋರಿದ ಪ್ಯಾಟ್‌ ಕಮಿನ್ಸ್‌ ಎರಡೂ ಇನಿಂಗ್ಸ್‌ಗಳಿಂದ 90 ರನ್‌ ಹಾಗೂ 6 ವಿಕೆಟ್‌ಗಳನ್ನು ಕಬಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸ್ಕೋರ್‌ ವಿವರ

ಆಸ್ಟ್ರೇಲಿಯಾ: ಪ್ರಥಮ ಇನಿಂಗ್ಸ್‌ನಲ್ಲಿ 122.4 ಓವರ್‌ಗಳಲ್ಲಿ 474-10 (ಸ್ಟೀವನ್‌ ಸ್ಮಿತ್‌ 140, ಮಾರ್ನಸ್‌ ಲಾಬುಶೇನ್‌ 72, ಉಸ್ಮಾನ್‌ ಖವಾಜ 57, ಸ್ಯಾಮ್‌ ಕೋನ್‌ಸ್ಟಸ್‌ 60; ಜಸ್‌ಪ್ರೀತ್‌ ಬುಮ್ರಾ 99ಕ್ಕೆ 4, ರವೀಂದ್ರ ಜಡೇಜಾ 78ಕ್ಕೆ 3)

ಭಾರತ: ಪ್ರಥಮ ಇನಿಂಗ್ಸ್‌ನಲ್ಲಿ 119.3 ಓವರ್‌ಗಳಿಗೆ 369-10 (ನಿತೀಶ್‌ ರೆಡ್ಡಿ 114, ಯಶಸ್ವಿ ಜೈಸ್ವಾಲ್‌ 82, ವಾಷಿಂಗ್ಟನ್‌ ಸುಂದರ್‌ 50; ಪ್ಯಾಟ್‌ ಕಮಿನ್ಸ್‌ 89ಕ್ಕೆ 3, ಸ್ಕಾಟ್‌ ಬೋಲೆಂಡ್‌ 57ಕ್ಕೆ 3)

ಆಸ್ಟ್ರೇಲಿಯಾ: ದ್ವಿತೀಯ ಇನಿಂಗ್ಸ್‌ನಲ್ಲಿ 84.3 ಓವರ್‌ಗಳಿಗೆ 234-10 (ಮಾರ್ನಸ್‌ ಲಾಬುಶೇನ್‌ 70, ನೇಥನ್‌ ಲಯಾನ್‌ 41, ಪ್ಯಾಟ್‌ ಕಮಿನ್ಸ್‌ 41; ಜಸ್‌ಪ್ರೀತ್‌ ಬುಮ್ರಾ 57ಕ್ಕೆ 5, ಮೊಹಮ್ಮದ್‌ ಸಿರಾಜ್‌ 70ಕ್ಕೆ 3)

ಭಾರತ: ದ್ವಿತೀಯ ಇನಿಂಗ್ಸ್‌ನಲ್ಲಿ 79.1 ಓವರ್‌ಗಳಿಗೆ 155-10 (ಯಶಸ್ವಿ ಜೈಸ್ವಾಲ್‌ 84, ರಿಷಭ್‌ ಪಂತ್‌ 30; ಪ್ಯಾಟ್‌ ಕಮಿನ್ಸ್‌ 28ಕ್ಕೆ 3, ಸ್ಕಾಟ್‌ ಬೋಲೆಂಡ್‌ 39ಕ್ಕೆ 3)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಪ್ಯಾಟ್‌ ಕಮಿನ್ಸ್‌