Friday, 10th January 2025

Travis Head’s celebration: 1.5 ಬಿಲಿಯನ್ ಭಾರತೀಯರಿಗೆ ಟ್ರಾವಿಸ್‌ ಹೆಡ್‌ ಅವಮಾನ; ಸಿಧು ಕಿಡಿ

ನವದೆಹಲಿ: ಬಾಕ್ಸಿಂಗ್ ಡೇ ಟೆಸ್ಟ್‌ನ ಅಂತಿಮ ದಿನದಂದು ಟೀಮ್‌ ಇಂಡಿಯಾದ ಬ್ಯಾಟರ್‌ ರಿಷಭ್‌ ಪಂತ್‌(Rishabh Pant) ಅವರ ವಿಕೆಟ್‌ ಕಿತ್ತ ಬಳಿಕ ಆಸ್ಟ್ರೇಲಿಯಾದ ಟ್ರಾವಿಸ್‌ ಹೆಡ್‌(Travis Head’s celebration) ಅವರು ವಿಚಿತ್ರ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದ ಬಗ್ಗೆ ಭಾರತದ ಮಾಜಿ ಬ್ಯಾಟರ್ ನವಜೋತ್‌ ಸಿಂಗ್‌ ಸಿಧು(Navjot Sidhu) ಟೀಕಿಸಿದ್ದಾರೆ. ಈ ಕೃತ್ಯವನ್ನು ಅಸಹ್ಯಕರ ನಡವಳಿಕೆ ಎಂದು ಸಿಧು ಹೇಳಿದ್ದಾರೆ.

ಟ್ವಿಟರ್‌ ಎಕ್ಸ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ನವಜೋತ್‌ ಸಿಂಗ್‌ ಸಿಧು, ಟ್ರಾವಿಸ್‌ ಹೆಡ್‌ ಅವರು ಕೇವಲ ಪಂತ್‌ಗೆ ಮಾತ್ರವಲ್ಲದೆ 1.5 ಶತಕೋಟಿ ಭಾರತೀಯನ್ನು ಅವಮಾನಿಸಿದ್ದಾರೆ ಎಂದು ಹೇಳಿದರು. ಹೆಡ್‌ ಸಂಭ್ರಮಾಚರಣೆ ಸಂಕೇತವು ಅಶ್ಲೀಲವಾಗಿತ್ತು. ಮಕ್ಕಳು, ಮಹಿಳೆಯರು ಮತ್ತು ಹಿರಿಯರು ಆಟವನ್ನು ವೀಕ್ಷಿಸುತ್ತಿರುವಾಗ ಇದೊಂದು ಅತ್ಯಂತ ಕೆಟ್ಟ ಸಂಭ್ರಮಾಚರಣೆಯಾಗಿತ್ತು ಎಂದು ಸಿಧು ಎಕ್ಸ್ ನಲ್ಲಿ ಬರೆದಿದ್ದಾರೆ.

2022 ರಲ್ಲಿ ಶ್ರೀಲಂಕಾದಲ್ಲಿ 17 ಎಸೆತಗಳಲ್ಲಿ 10 ರನ್‌ ನೀಡಿ 4 ವಿಕೆಟ್ ಗಳಿಸಿದ್ದ ಬಳಿಕ ಮಂಜುಗಡ್ಡೆಯಿದ್ದ ಲೋಟದೊಳಗೆ ಬೆರಳನ್ನು ಅದ್ದಿರುವ ಫೋಟೊವೊಂದನ್ನು ಹೆಡ್ ಪೋಸ್ಟ್‌ ಮಾಡಿದ್ದರು.‌ ಅದರ ಮೇಲೆ (ನಾನು ಬೆರಳನ್ನು ಮಂಜುಗಡ್ಡೆಯಲ್ಲಿ ಇರಿಸಬೇಕಾಗಿತ್ತು) ಎಂದು ಬರೆದುಕೊಂಡಿದ್ದರು. ಅಂದರೆ ಪ್ರಮುಖ ವಿಕೆಟ್‌ ಪಡೆದ ಬಳಿಕ ತನ್ನ ಬೆರಳು ಬಿಸಿ ಏರಿದೆ ಎಂದು ಹೆಡ್‌ ಸೂಚಿಸುತ್ತಿದ್ದಾರೆ. ಇದನ್ನೇ ಹೆಡ್‌ ಇದೀಗ ಸಂಜ್ಞೆಯ ಮೂಲಕ ಮಾಡಿದ್ದಾರೆ ಎಂದು ಕಾಮೆಂಟೇಟರ್‌ ಬ್ರೇಶಾ ಹೇಳಿದ್ದರು.

ಹೆಡ್‌ನ ಸಂಭ್ರಮಾಚರಣೆಗೆ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಸ್ಪಷ್ಟನೆ ನೀಡಿದ್ದು, “ಹೆಡ್‌ ಸಂಭ್ರಮಾಚರಣೆಯನ್ನು ನಾನು ವಿವರಿಸಬಲ್ಲೆ. ಹೆಡ್‌ ವಿಕೆಟ್‌ ಪಡೆದ ಬಳಿಕ ಬೆರಳು ತುಂಬಾ ಬಿಸಿಯಾಗಿದೆ ಎನ್ನುವ ಅರ್ಥದಲ್ಲಿ ಈ ರೋತಿ ಸಂಭ್ರಮಿಸಿದರು. ಇದೊಂದು ತಮಾಷೆಯ ಸಂಭ್ರಮಾಚರಣೆ ಹೊರತು ಯಾರನ್ನು ಅಪಹಾಸ್ಯ ಮಾಡುವ ಉದ್ದೇಶ ಇರಲಿಲ್ಲ ಎಂದು ಕಮಿನ್ಸ್‌ ಪಂದ್ಯದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ನಾಲ್ಕನೇ ಟೆಸ್ಟ್‌ ಪಂದ್ಯ ಸೋತ ಕಾರಣ ಭಾರತದ ವಿಶ್ವ ಚಾಂಪಿಯನ್‌ಶಿಪ್‌ ಟೆಸ್ಟ್‌ ಫೈನಲ್‌ ಪ್ರವೇಶದ ಅವಕಾಶಗಳು ಕ್ಷೀಣಿಸಿದೆ. ಆದರೂ ಸಣ್ಣ ಅವಕಾಶವೊಂದು ಜೀವಂತವಾಗಿದೆ. ಹೌದು ಡಬ್ಲ್ಯೂಟಿಸಿ ಫೈನಲ್‌ ಗೆ ಅರ್ಹತೆ ಪಡೆಯಲು, ಭಾರತವು ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಪಂದ್ಯವನ್ನು ಗೆಲ್ಲಬೇಕು. ಮತ್ತೊಂದೆಡೆ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವಿನ ಎರಡು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 2-0 ಅಂತರದಿಂದ ಸೋಲಬೇಕು ಹಾಗಾದರೆ ಭಾರತ ಫೈನಲ್‌ ಪ್ರವೇಶಿಸುವ ಅವಕಾಶವಿದೆ. ಸದ್ಯ ಭಾರತ 55.89 ಪಿಸಿಟಿಯೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 58.89 ರೊಂದಿಗೆ ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಈಗಾಗಲೇ ಫೈನಲ್‌ ಪ್ರವೇಶಿಸಿದೆ.