ಹಂಪಿ ಎಕ್ಸ್’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು
ಕನ್ನಡ ಚಲನಚಿತ್ರರಂಗದ ಇತಿಹಾಸದಲ್ಲಿ ಚಿತ್ರರಂಗದ ಚಟುವಟಿಕೆಗಳು ಸ್ತಬ್ಧವಾಗಿದ್ದು ಇಪ್ಪತ್ತು ವರ್ಷಗಳ ಹಿಂದೆ ೨೦೦೦ ರಲ್ಲಿ. ಭೀಮನ ಅಮಾವಸ್ಯೆ ರಾತ್ರಿ ಕಾಡುಗಳ್ಳ ವೀರಪ್ಪನ್ ಕನ್ನಡನಾಡಿನ ಶಕ್ತಿ ರಾಜಣ್ಣನವರನ್ನು ಅಪಹರಿಸಿದ್ದ. ಇದರಿಂದ ಆಘಾತಕ್ಕೊಳಗಾದ ನಾಡು ಮತ್ತು ಚಿತ್ರರಂಗ ಅವರ ಬಿಡುಗಡೆಗಾಗಿಯೇ ಜಪಿಸುವಂತಾಗಿತ್ತು.
ಕನ್ನಡ ಚಿತ್ರರಂಗಕ್ಕಂತೂ ಸೂತಕಛಾಯೆ ಆವರಿಸಿ ಯೂನಿಟ್ ಹುಡುಗರಿಂದ ಹಿಡಿದು ಬ್ಲಾಕ್ ಟಿಕೆಟ್ ಮಾರುವವರೆಗೂ ಎಲ್ಲಾ ಚಟುವಟಿಕೆಗಳು ನಿಷ್ಕ್ರೀಯಗೊಂಡಿತ್ತು. ಈ ಸಂದರ್ಭದಲ್ಲಿ ಚಿತ್ರರಂಗವನ್ನೇ ನಂಬಿಕೊಂಡಿದ್ದ ಸಹೋದ್ಯೋಗಿಗಳ ಕಾರ್ಮಿಕರ ಕಷ್ಟಕಾರ್ಪಣ್ಯಗಳನ್ನು ಮನಗಂಡ ರಾಜ್ ಕುಟುಂಬದವರ ಒತ್ತಾಯದಿಂದಾಗಿ ಹಲವು ವಾರಗಳ ನಂತರ ಚಿತ್ರರಂಗದ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳಿತು. ಆ ನಂತರ ರಾಜಣ್ಣನವರು ಬಿಡುಗಡೆಗೊಂಡು ತಮ್ಮಿಂದಾಗಿ ಚಲನಚಿತ್ರರಂಗ ಮತ್ತು ರಾಜ್ಯದ ಜನತೆ ಅನುಭವಿಸಿದ ಯಾತನೆಯನ್ನು ಕಂಡು ಮರುಗಿದ್ದರು.
ಆ ಒಂದು ಕೆಟ್ಟ ದಿನಗಳನ್ನು ಹೊರತುಪಡಿಸಿದರೆ ಬರೋಬ್ಬರಿ ಇಪ್ಪತ್ತು ವರ್ಷಗಳ ನಂತರ ಕರೋನಾದಿಂದಾಗಿ ಕಳೆದ ಎಂಟು ತಿಂಗಳುಗಳಿಂದ ಇಡೀ ಚಿತ್ರರಂಗವೇ ಮಲಗಿಬಿಟ್ಟಿತು. ಕಳೆದ ಎರಡು ದಶಕಗಳಿಂದ ವರ್ಷಕ್ಕೆ ಮೂರಂಕಿ ದಾಟುತ್ತಿದ್ದ ಕನ್ನಡ ಚಿತ್ರಗಳ ಬಿಡುಗಡೆಯ ಸಂಖ್ಯೆ ಈ ವರ್ಷ ಕೇವಲ ಅರವತ್ತರಿಂದ ಎಪ್ಪತ್ತರೊಳಗೆ ಸಮಾಪ್ತಿಯಾಗುತ್ತಿದೆ. ಕರೋನಾ ಕಂಟಕ ದಿಂದಾಗಿ ದೊಡ್ಡ ಸ್ಟಾರ್‌ಗಳೇ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಲು ಯೋಚಿಸುವಂತಾಗಿದೆ.
ಲಾಕ್‌ಡೌನ್ ಕಾಲದಲ್ಲಿ ಥಿಯೇಟರ್ ಇಲ್ಲದ ಕಾರಣ ಅಮೇಜಾನ್ ನೆಟ್‌ಫ್ಲಿಕ್ಸ್ ಗಳಂಥ ಮಾಧ್ಯಮಗಳಲ್ಲಿ ಕೆಲ ಚಿತ್ರಗಳು ಬಿಡುಗಡೆ
ಗೊಂಡವು. ಆದರೆ ಯಾವುದೋ ಮೂಲೆಯಲ್ಲಿ ಕೂತು ಮೊಬೈಲ್‌ನಲ್ಲಿ ಇಡೀ ಚಿತ್ರವನ್ನು ನೋಡುವುದಕ್ಕಿಂತ ಜನಸಮೂಹ ದಲ್ಲಿ ಕುಳಿತು ದೊಡ್ಡ ಪರದೆಯ ಮೇಲೆ ನೋಡುವ ಮಜವೇ ಬೇರೆಯಾಗಿರುತ್ತದೆ. ಮೊಬೈಲ್ ಸಿನಿಮಾ ಚಿತ್ರರಂಗದ ದೃಷ್ಟಿಯಲ್ಲಿ ಅಸಹಜವಾಗಿದ್ದು ಅದರ ಬೆಳವಣೆಗೆಗೂ ಮಾರಕವಾಗಿದೆ.
ಆಗೆಲ್ಲಾ ಚಿತ್ರಮಂದಿರಕ್ಕೆ ತೆರಳಿ ಸಾಲಿನಲ್ಲಿ ನಿಂತು ಟಿಕೆಟ್ ಕೌಂಟರ್‌ನ ಪುಟ್ಟ ಕಿಂಡಿಯ ಬಾಗಿಲು ತೆರೆಯುವುದನ್ನೇ ನೋಡುತ್ತಾ ಕಾಯುತ್ತಿದ್ದೆವು. ತಡವಾಗಿ ಬಂದವರು ಬ್ಲಾಕ್ ಟಿಕೆಟ್ ಮಾರುವವರು ಮುಖನೋಡಿ ಸನ್ನೆ ಮಾಡುವುದನ್ನೇ ನಿರೀಕ್ಷಿಸುತ್ತಿದ್ದೆವು. ರಾಜ್ ಅವರ ಚಿತ್ರವನ್ನು ಮೊದಲ ದಿನವೇ ನೋಡಿದರೆ ತಿರುಪತಿಯಲ್ಲಿ ದರ್ಶನ ಮಾಡಿ ಬಂದಷ್ಟು ಪುಳಕವಾಗುತ್ತಿತ್ತು. ಶಂಕರ್‌ನಾಗ್ ಅನಂತನಾಗ್ ಶ್ರೀನಾಥ್ ವಿಷ್ಣುವರ್ಧನ್ ಅಂಬರೀಶ್ ಚಿತ್ರಗಳಿಗೆ ಸರಕಾರಿ ಅಧಿಕಾರಿಗಳಿಂದ ಶಾಲಾ ಮಕ್ಕಳ ವರೆಗೂ ಕುಟುಂಬ ಸಮೇತ ಸಂಬಂಧಿಕರ ಸಮಾರಂಭಕ್ಕೆ ತೆರಳುವಷ್ಟು ಉತ್ಸಾಹದಿಂದ ಹೊರಡುತ್ತಿದ್ದರು.
ರಜಸ್ಸು , ರಾಶಿ, ಭರಣಿ, ವಜ್ರೇಶ್ವರಿ, ಪೂರ್ಣಿಮ, ಚೌಡೇಶ್ವರಿ, ಕೆಸಿಎನ್, ಈಶ್ವರಿ, ಅಬ್ಬಯ್ಯ ನಾಯ್ಡು, ದ್ವಾರಕೀಶ್ ಬ್ಯಾನರ್‌ಗಳ ಚಿತ್ರಗಳಂತೂ ಕೊಟ್ಟ ಕಾಸಿಗೆ ಎಂದೂ ಮೊಸವಾಗುತ್ತಿರಲಿಲ್ಲ. ಅಂದಿನ ಚಿತ್ರಗಳನ್ನು ನೋಡಿ ಬರುವ ಪ್ರೇಕ್ಷಕ ಕನ್ನಡ ಚಿತ್ರವನ್ನು ಕೊಂಡಾಡುತ್ತಿದ್ದ ಅಕ್ಕಪಕ್ಕದವರಿಗೆ ನೋಡಲು ಹೇಳುತ್ತಿದ್ದ. ಆದರೆ ‘ಕಚಡಾ ಪಿಚ್ಚರು ಡಬ್ಬಾ ಪಿಚ್ಚರು’ ಎಂದು ಶಪಿಸುತ್ತಿರಲಿಲ್ಲ.
ಅದೇನಿದ್ದರೂ ಇತ್ತೀಚಿನ ಒಂದು ದಶಕದಿಂದ ಮಾತ್ರ.
ನಂತರದಲ್ಲಿ ರವಿಚಂದ್ರನ್ ಚಿತ್ರಗಳ ಹಾಡುಗಳ ವೈಭವ ಕಾಶಿನಾಥರ ಸರಳಸೂತ್ರ ಶಿವಣ್ಣ ಜಗ್ಗೇಶ್ ಅವರ ಮೊನಚಾದ ಚಿತ್ರಗಳು, ನಾಗಾಭರಣ ಸುನೀಲ್‌ಕುಮಾರ್ ದೇಸಾಯಿ, ಉಪೇಂದ್ರ ಅವರ ಹೊಸತನದ ಕಥೆಗಳು ಹೊಸ ಅನುಭವವನ್ನು ನೀಡುತ್ತಿದ್ದವು. ಅಂಥ ಗತವೈಭವವನ್ನು ಇನ್ನು ಮುಂದೆ ಕನ್ನಡ ಚಿತ್ರರಂಗ ಕಾಣುವುದು ಅಸಾಧ್ಯವೆಂದೇ ಹೇಳಬೇಕಾಗುತ್ತದೆ.
ಏಕೆಂದರೆ ಅಂದು ಚಿತ್ರಗಳು ಪ್ರೇಕ್ಷಕನ ಅಭಿರುಚಿಗೆ ತಕ್ಕಂತೆ ನಿರ್ಮಾಣ ವಾಗುತಿತ್ತು. ವಾರಕ್ಕೆ ಒಮ್ಮೆ ಪ್ರೇಕ್ಷಕರೇ ಚಿತ್ರಮಂದಿರಕ್ಕೆ ಧಾವಿಸಿಬರುತ್ತಿದ್ದರು. ಕನ್ನಡ ಚಿತ್ರವೆಂಬುದು ಕುಟುಂಬದ ಒಂದು ಆದ್ಯತೆಯಾಗಿತ್ತು.
ಆದರೆ ಈಗ ಚಿತ್ರಮಂದಿರಕ್ಕೆ ಬಂದು ನಮ್ಮ ಚಿತ್ರವನ್ನು ನೋಡಿ ಎಂದು ಅಂಗಲಾಚಿ ಬೇಡಿಕೊಳ್ಳುವಂತಾಗಿರುವುದು
ಚಿತ್ರರಂಗದ ದುರ್ದೈವ. ಇಷ್ಟಕ್ಕೂ ನಮ್ಮ ಕನ್ನಡ ಚಲನಚಿತ್ರ ಹುಟ್ಟಿ ಬೆಳೆದ ಉದ್ದೇಶವನ್ನು ಒಮ್ಮೆ ತಿ ರುಗಿ ನೋಡೋಣ.
ಜಾನಪದ ಮನರಂಜನೆಯಾಗಿ ಜನಮನ ಸೆಳೆದ ಬಯಲು ನಾಟಕ ಮುಂದೆ ರಂಗಭೂಮಿ ಸ್ಥಾನಗಳಿಸಿ ನಂತರ ಮೂಕಿಚಿತ್ರ, ವಾಕ್ಚಿತ್ರವಾಗಿ ಕೊನೆಗೆ ಸಮಾಜದ ಒಂದು ಪ್ರಮುಖ ಮನರಂಜನಾ ಮಾಧ್ಯಮವಾಗಿ ರೂಪುಗೊಂಡಿತು.
ಅದರಲ್ಲೂ ಕನ್ನಡ ಚಿತ್ರರಂಗ ವೆಂಬುದು ನಮ್ಮ ನಾಡಿನಲ್ಲಿ ಒಂದು ಮನರಂಜನೆ ಮಾತ್ರವಲ್ಲದೆ ಒಂದು ಸಾಂಸ್ಕೃತಿಕ ಕ್ಷೇತ್ರ ವೆಂದೇ ಸ್ವೀಕರಿಸಿದ ನಿರ್ಮಾಪಕರು ನಿರ್ದೇಶಕರು ಸಾಹಿತಿ ಗಳನೇಕರು ಕನ್ನಡಿಗರ ಸಂವೇದನೆಯಲ್ಲೇ ಬೆಳೆಸಿಕೊಂಡು ಬಂದರು. ಕನ್ನಡದ ಪ್ರಥಮ ವಾಕ್ಚಿತ್ರ ‘ಸತಿ ಸುಲೋಚನ’ ಎಂಬ ರಾಮಾಯಣದ ಆಧಾರಿತ ಪೌರಾಣಿಕ ಕಥೆಯನ್ನು ನಿರ್ದೇಶಿಸಿದವರು
ಯರಗುಡಿಪತಿ ವರದರಾವ್ ಅವರು. ಹೀಗೆಂದರೆ ಅವರ ಪರಿಯಚಯ ವಾಗುವುದಿಲ್ಲ. ಅಂದಿನ ಮದ್ರಾಸ್ ಪ್ರಾಂತ್ಯದ ನೆಲ್ಲೂರಿ ನವರಾದ ವೈ.ವಿ. ರಾವ್ (ಹಿರಿಯ ನಟಿ ಲಕ್ಷ್ಮೀ ಅವರ ತಂದೆ) ಅವರು ಕನ್ನಡಕ್ಕೆ ಚಲನಚಿತ್ರ ಪರಿಚಯಿಸುವ ಸಂದರ್ಭದಲ್ಲಿ ಶ್ರಮದಾಯಕವಾದ ಪೌರಾಣಿಕ ಕಥೆಯನ್ನು ಆರಿಸಿಕೊಳ್ಳುತ್ತಾರೆ.
ಆ ಮೂಲಕ ಚಲನಚಿತ್ರವೆಂಬುದು ಒಂದು ಭಕ್ತಿಪೂರ್ವಕ ಸಾಂಸ್ಕೃತಿಕ ಮನರಂಜನಾ ವೇದಿಕೆ ಎಂಬ ಸಂದೇಶವನ್ನು ನೀಡಿದ್ದರು. ನಾಯಕನ ಪಾತ್ರ ವಹಿಸಿದ್ದವರು ಸುಬ್ಬಯ್ಯನಾಯ್ಡು ಮತ್ತು ನಾಯಕಿ ತ್ರಿಪುರಾಂಭ. ಇಂಥ ಪ್ರಥಮ ಕನ್ನಡ
ಚಲನಚಿತ್ರವನ್ನು ನಿರ್ಮಿಸಿದ ನಿರ್ಮಾಪಕರು ಮಾರವಾಡಿಗಳಾದ ಚಮನ್‌ಲಾಲಜೀ ಹಿಂದಿವಾಲ ಸಹೋದರರು. ಅಲ್ಲಿಂದ ಆರಂಭವಾದ ಕನ್ನಡ ಚಲನಚಿತ್ರದ ಪರ್ವದಲ್ಲಿ ಚಿತ್ರಕಥೆ ಬರೆದ ಬೆಳ್ಳಾವೆ ನರಸಿಂಹಶಾಸ್ತ್ರಿ ಆರ್.ನಾಗೇಂದ್ರರಾವ್ ಕುಟುಂಬ, ಜಿ.ವಿ. ಅಯ್ಯರ್, ಎಚ್.ಎಲ್.ಎನ್ ಸಿಂಹ, ಕಣಗಾಲ್ ಪ್ರಭಾಕರಶಾಸ್ತ್ರಿ, ಕು.ರ. ಸೀತಾರಾಮ ಶಾಸ್ತ್ರಿ, ಹೊನ್ನಪ್ಪ ಭಾಗವತರ್,
ಹುಣಸೂರು ಕೃಷ್ಣಮೂರ್ತಿ, ವೈ.ಆರ್. ಸ್ವಾಮಿ, ಎಂ.ಆರ್. ವಿಠಲ್, ಬಿ.ಆರ್. ಪಂತಲು, ಬಿ.ಎಸ್. ರಂಗ, ಎಲ್.ಎಸ್. ಶೇಷಗಿರಿ ರಾವ್, ಚಿ.ಸದಾಶಿವಯ್ಯ, ಚಿ.ಉದಯಶಂಕರ್, ಜಯನರಸಿಂಹ, ಎಸ್.ಕೆ.ಕರೀಂಖಾನ್, ದೊರೈ- ಭಗವಾನ್, ಡಾ.ರಾಜಕುಮಾರ್ ಪಂಡರಿಬಾಯಿ, ಬಿ.ಸರೋಜಾ ದೇವಿ, ಬಾಲಕೃಷ್ಣ, ನರಸಿಂಹರಾಜು, ಅಶ್ವಥ್, ಕಲ್ಯಾಣ ಕುಮಾರ್, ಉದಯ ಕುಮಾರ್, ಹೀಗೆ ತಮಿಳರು – ತೆಲುಗರು ಹಿಂದಿವಾಲಗಳು ಭಾಷೆ ಜಾತಿಭೇದವಿಲ್ಲದೆ ಕನ್ನಡ ಚಲನಚಿತ್ರರಂಗವನ್ನು ಪವಿತ್ರವಾದ ಮನರಂಜನೆ ಆ ನಂತರ ಸಂಪಾದನೆಯ ಮಾಧ್ಯಮವಾಗಿ ಪೋಷಿಸುತ್ತಾ ಬಂದಿದ್ದಾರೆ.
ಅದರಲ್ಲೂ ವರನಟ ರಾಜಣ್ಣನವರು ಚಲನಚಿತ್ರ ವನ್ನು ಒಂದು ನೈತಿಕ ಶೈಕ್ಷಣಿಕ ಮಾಧ್ಯಮವನ್ನಾಗಿಸಿ ಕನ್ನಡದ ಶಕ್ತಿಯನ್ನಾಗಿ ಬೆಳೆಸಿ ತಾನೂ ಬೆಳೆದ ಮಹಾನ್ ಪುರುಷ. ಇಂಥ ಪವಿತ್ರವಾದ ಕನ್ನಡ ಚಿತ್ರೋದ್ಯಮವನ್ನು ಇಂದು ಅಡ್ಡಕಸುಬಿಗಳು ಅವಿವೇಕಿ ಗಳು ತಿಕ್ಕಲು ತೆವಲು ವೈಯಕ್ತಿಕ ವಾಂಛೆಗಳುಳ್ಳವರು ತಮ್ಮ ತೀಟೆ ತೆವಲು ಹುಚ್ಚಾಟಕ್ಕೆ ಬಳಸಿಕೊಂಡು ಕುಲಗೆಡಿಸು ತ್ತಿರುವುದು ದುರಂತ. ದುಡ್ಡು ಹೆಚ್ಚಾಗಿದೆಯಾ? ಹಾಗಾದರೆ ನಿರ್ಮಾಪಕನಾಗು, ಹುಚ್ಚು ಹೆಚ್ಚಾಗಿದೆಯಾ ನಾಯಕನಾಗು, ಇನ್ನೂ ಹೆಚ್ಚಾಗಿದೆಯಾ ತಗೋ, ಕಥೆ ಚಿತ್ರಕಥೆ ಸಾಹಸ ನೃತ್ಯ ಛಾಯಾಗ್ರಹಣ ಸಾಹಿತ್ಯ ಸಂಭಾಷಣೆ ಕೊನೆಗೆ ನಾಯಕಿಯೂ ತಾನೇ
ಆಗಿಬಿಡುವ ವಿಕೃತರಿಂದ ಚಲನಚಿತ್ರವನ್ನು ಉಳಿಸಬೇಕಿದೆ.
‘ಏನುಬೇಕಾದರೂ ಆಗಬಹುದು’ ಎಂಬ ಕುಮಾರಸ್ವಾಮಿಯವರ ‘ಮುತ್ತಿನಂಥ ಮಾತು’ ಕನ್ನಡ ಚಿತ್ರರಂಗದಲ್ಲೂ
ಜಾರಿಯಾಗುತ್ತಿರುವುದು ಶೋಚನೀಯ. ಇತ್ತೀಚಿನ ಬೆಳವಣಿಗೆಗಳ ಬಗ್ಗೆಯೇ ಹೇಳಬೇಕೆಂದರೆ ಉಪೇಂದ್ರ, ಪ್ರಶಾಂತ್ ನೀಲ್, ಸಂತೋಷ್ ಆನಂದ್‌ರಾಮ್‌ರಂಥ ನಿರ್ದೇಶಕರು ವರ್ಷಗಳ ಕಾಲ ವ್ರತದಂತೆ ಚಿತ್ರಕಥೆ ಸಿದ್ಧಪಡಿಸಿಕೊಂಡು ದಶಕಗಳ ಕಾಲ ಹವಾ ಇರುವಂಥ ಚಿತ್ರಗಳನ್ನು ನೀಡಿ ಚಿತ್ರಗಳಿಂದಲೇ ಹೆಸರುಗಳಿಸಿದ್ದಾರೆ.
ಆದರೆ ಇಂಥವರ ತದ್ವಿರುದ್ಧವಾಗಿ ಆರೋಗ್ಯಕರ ಹೋಟೆಲ್ ಮುಂದಿನ ರಸ್ತೆಬದಿ ಸತ್ತಕೋಳಿ ಕಬಾಬ್ ತಿನ್ನಿಸಿ ವಂಚಿಸುವಂತೆ ಕನ್ನಡ ಪ್ರೇಕ್ಷಕರ ಅಭಿರುಚಿಯನ್ನೇ ಹಾಳುಮಾಡುವ ದರಿದ್ರ ಚಿತ್ರಗಳನ್ನು ಮಾಡುವವರೂ ಹೆಚ್ಚಾಗಿರುವುದು ಕನ್ನಡ ಚಲನಚಿತ್ರದ ಕಳಂಕ. ಇಂದು ಜಾಹೀರಾತು ಮಾಧ್ಯಮದಲ್ಲಿ ಉತ್ಪ್ರೇಕ್ಷೆಯಾದ ಅನಗತ್ಯ ವೈಭವೀಕರಣ ಅತಿರಂಚಿತ ಅತಿವರ್ಣಿತವಾಗಿ ಬಿಂಬಿಸಿ ಸಮಾಜವನ್ನು ವಂಚಿಸುತ್ತಿದೆ.
ಚೂಯ್ಯಿಂಗಂ ಒಂದನ್ನು ಬಾಯಲ್ಲಿಟ್ಟ ಕೂಡಲೇ ಬಾಯಿಂದ ಟಾರ್ಚ್ ಮಾದರಿಯ ಬೆಳಕು ಹೊರಗೆ ಬರುವಂತೆ ತೋರಿಸುವ
ಜಾಹೀರಾತಿನಂತೆ ಸಿಕ್ಕಾಪಟ್ಟೆ ಬಿಲ್ಡಪ್ ನೀಡುವ ಚಿತ್ರಗಳು ಬಿಡುಗಡೆಗೊಂಡು ಅದನ್ನು ನೋಡಿ ಹೊರಬರುವ ಪ್ರೇಕ್ಷಕ ತಲೆಚಚ್ಚಿ ಕೊಂಡು ಶಪಿಸುವಂತೆ ಮಾಡುವುದೂ ಒಂದು ಸಾಮಾಜಿಕ ವಂಚನೆಯಲ್ಲವೇ?. ನಂಬಿಸಿ ಮೋಸ ಮಾಡಿದಂತಲ್ಲವೇ?. ಚಿತ್ರೀಕರಣದ ಕಷ್ಟವೇನೆಂಬುದು ಕ್ರಿಯಾಶೀಲ ನಿರ್ದೇಶಕನಿಗೆ ಛಾಯಾಗ್ರಾಹಕನಿಗೆ ಗೊತ್ತು.
ಒಂದೆರಡು ಸೆಕೆಂಡಿನ ದೃಶ್ಯಕ್ಕಾಗಿ ದಿನಗಟ್ಟಲೆ ನೂರಾರು ಕಾರ್ಮಿಕರನ್ನು ಕಟ್ಟಿಕೊಂಡು ತಾಳ್ಮೆ ಸಹನೆ ಯಿಂದ ಹತ್ತಾರು
ಟೇಕ್ ಗಳನ್ನು ಮಾಡಿ ತನ್ನ ಕಲ್ಪನೆಗೆ ತಕ್ಕಂತೆ ತೆರೆಯ ಮೇಲೆ ತೋರಿಸುವ ಛಲಹೊಂದಿರುತ್ತಾನೆ. ಆದರೆ ಇಂಥವರ ಮಧ್ಯೆ ಕೆಲವರು ಕೇವಲ ತಮಗಿಲ್ಲದ ಯೋಗ್ಯತೆಯನ್ನು ತೋರಿಸಲು ಯಾರನ್ನೋ ಮೆಚ್ಚಿಸಲು ಮತ್ತ್ಯಾರನ್ನೋ ಹುಚ್ಚರನ್ನಾಗಿ ಸುವುದಕ್ಕಾಗಿ ತಾನೊಬ್ಬ ನಟ ನಿರ್ದೇಶಕ ನಿರ್ಮಾಪಕ ಎಂಬ ದಿಢೀರ್ ಖ್ಯಾತಿಗಾಗಿ ಕನ್ನಡ ಚಲನಚಿತ್ರವನ್ನು ಮನಸೋಇಚ್ಚೆ ಬಳಸಿಕೊಳ್ಳುತ್ತಾರೆ.
ಇಂಥವರ ಚಿತ್ರಗಳು ಸಂಪೂರ್ಣವಾದರೂ ಬಿಡುಗಡೆಗೊಳಿಸುವುದೇ ಒಂದು ಕರ್ಮಕಾಂಡ. ಹಾಗೂ ಹೀಗೂ ಬಿಡುಗಡೆ ಗೊಂಡರೂ ಕೇವಲ ಒಂದೆರಡು ದಿನಗಳಲ್ಲೇ ಚಿತ್ರಮಂದಿರದಿಂದಲೇ ‘ಬಿಡುಗಡೆ’ಗೊಂಡು ‘ಓಡುತ್ತದಷ್ಟೆ’. ನೋಡಿ, ರಾಜ್‌ರಂಥ ಮೇರು ನಟರ ಮಕ್ಕಳಾದ ಶಿವಣ್ಣ ರಾಘಣ್ಣ ಪುನೀತ್ ಅವರೂ ಸಹ ಅಭಿನಯ – ನೃತ್ಯ- ಸಾಹಸವನ್ನು ತರಬೇತಿ ಕೇಂದ್ರಗಳಲ್ಲಿ
ಕಲಿತು ನಂತರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಶ್ರೀಮಂತ ಈಶ್ವರಿ ಪ್ರೊಡಕ್ಷನ್ಸ್‌ನ ರವಿಚಂದ್ರನ್ ಅಂಥವರೇ ಖಳನಾಯಕನಾಗಿ ಬಂದು ತನ್ನದೇ ಆದ ಪ್ರೇಮಲೋಕವನ್ನು ಸೃಷ್ಟಿಸಿಕೊಂಡು ಬಂದರು. ಜಗ್ಗೇಶ್, ದೇವರಾಜ್, ಶಶಿಕುಮಾರ್, ದಶಕಗಳ ಕಾಲ ಖಳನಾಯಕರಾಗಿ ಹೀರೋಗಳಾದರು. ಉಪೇಂದ್ರ ಅವರು ತಮ್ಮದೇ ಆದ ಪ್ರತಿಭೆಯನ್ನು ತುಂಬಿಕೊಂಡು ಪೂರ್ಣ ಸಿದ್ಧತೆಯೊಂದಿಗೆ ಬಂದರು. ತರಕಾರಿಯನ್ನು ಯಾರು ಬೇಕಾದರೂ ಬೆಳೆಯುತ್ತಾರೆ ಆದರೆ ಉಪೇಂದ್ರರಂಥ ನಿರ್ದೇಶಕರು ಸಿನಿಮಾ ಬೆಳೆ ಬೆಳೆಯದಿದ್ದರೆ ಚಿತ್ರರಂಗಕ್ಕೇ ನಷ್ಟ. ದರ್ಶನ್
ಸಹಾಯಕನಾಗಿ ಯೂನಿಟ್ ಹುಡುಗನಾಗಿ ಬೆಳೆದು ಮೆಜೆಸ್ಟಿಕ್’ಗೆ ಇಳಿದರು. ಇನ್ನು ಸುದೀಪ್ ಅವರೇನು ಏಕಾಏಕಿ ನಾಯಕನಾಗ ಲಿಲ್ಲ.
ತನ್ನ ಸರೋವರ ಹೋಟೆಲ್‌ಗೆ ಪ್ರತಿನಿತ್ಯ ಬರುತ್ತಿದ್ದ ಚಿತ್ರರಂಗದ ಕಲಾವಿದರನ್ನು ಚಿತ್ರೀಕರಣವನ್ನು ಹತ್ತಿರದಿಂದ ನೋಡಿಯೇ ಬೆಳೆದು ಇಂದು ರಾಷ್ಟ್ರೀಯ ಮಟ್ಟದ ಕಲಾವಿದರಾಗಿದ್ದಾರೆ. ಚಿತ್ರರಂಗ ನಿಂತ ನೀರಲ್ಲ. ಇಲ್ಲಿ ನಿಜವಾದ ಪ್ರತಿಭೆ, ಹೊಸತನ, ಆರೋಗ್ಯಕರ ಐಡಿಯಾಲಾಜಿಗಳು ಎಂದಿಗೂ ಕೈಬಿಡುವುದಿಲ್ಲ. ಕೇವಲ ಮೂರನೇ ತರಗತಿ ಓದಿ ಹೊಟ್ಟೆಪಾಡಿಗಾಗಿ ಬಂದು ಚಿತ್ರರಂಗವನ್ನು ಪವಿತ್ರವಾಗಿ ಬೆಳೆಸಿದ ರಾಜಣ್ಣನವರಿಂದ ನಾಡಿನ ನೆಲ – ಜಲ – ಗಡಿ ಬಗ್ಗೆ ಅನೇಕ ಹೋರಾಟಗಳು ನಡೆದಿವೆ.
ಆದರೆ ಇದೀಗ ಚಿತ್ರರಂಗಕ್ಕೆ ಯಾರು ಎಂಥವರು ಬರುತ್ತಿದ್ದಾರೆ ಎಂಬುದೇ ಇಲ್ಲಿ ನಗಣ್ಯವಾಗಿದೆ.
ಒಬ್ಬ ನಿರ್ದೇಶಕ ಅಥವಾ ನಾಯಕನಟ ಆಗುತ್ತಾನೆಂದರೆ ಅದಕ್ಕಾಗಿ ಆತನ ಸಿದ್ಧತೆ ಏನು? ಆತನ ಅನುಭವವೇನು? ಅಭಿರುಚಿ ಯೇನು? ಆತನ ಸಾಮಾಜಿಕ ಕಾಳಜಿ ಎಂಥದ್ದು, ಆತನಿಗೆ ದೇಶದ ನಾಡಿನ ಇತಿಹಾಸ ಸಂಸ್ಕೃತಿ ಸಾಮಾಜಿಕ ಬದ್ಧತೆಗಳಿವೆಯೇ? ಕನಿಷ್ಠ ಚಿತ್ರರಂಗದ ಇತಿಹಾಸವನ್ನಾದರೂ ತಿಳಿದು ಕೊಂಡಿದ್ದಾನೆಯೇ? ಆತನ ಚಿತ್ರದ ಉದ್ದೇಶವೇನು ಅದರ ಸಂದೇಶವೇನು ಇವುಗಳ ಕುರಿತು ಕನಿಷ್ಠ ಒಂದು ಮಾನದಂಡ ಮಾರ್ಗಸೂಚಿಯನ್ನು ರೂಪಿಸಬೇಕಾದ ಅಗತ್ಯವಿದೆ.
ಅದಕ್ಕಾಗಿ ಒಂದು ಹಿರಿಯರ ಸಮಿತಿ ರಚಿಸಿ, ಅದರಿಂದ ನಿರ್ಮಾಪಕ – ನಿರ್ದೇಶಕನಿಗೆ ಅನುಮತಿ ದೊರಕುವಂತಾದರೆ ಯೋಗ್ಯರು ಚಿತ್ರರಂಗಕ್ಕೆ ಕಾಲಿಡುತ್ತಾರೆ. ನುರಿತ ಚಾಲಕನಾದರೂ ಕಾನೂನು ಆತನಿಗೊಂದು ಪರೀಕ್ಷೆ ಸಾಮರ್ಥ್ಯವನ್ನು ಅಳೆಯುವ ಸಾರಿಗೆ ಪರವಾನಗಿ ವ್ಯವಸ್ಥೆ ಇದೆ. ಏಕೆಂದರೆ ಆತ ಸಾರ್ವಜನಿಕರ ನಡುವೆ ವಾಹನ ಚಲಾಯಿಸುತ್ತಾನೆ.
ಹಾಗೆಯೇ ಚಲನಚಿತ್ರ ವೆಂಬುದೂ ಒಂದು ಸಾರ್ವಜನಿಕ ಮಾಧ್ಯಮ. ವ್ಯಕ್ತಿಯೊಬ್ಬ ತನ್ನ ಬೇಸರ ಕಳೆಯಲು ಕುಟುಂಬ ದೊಂದಿಗೆ ಚಿತ್ರಮಂದಿರಕ್ಕೆ ಹಣನೀಡಿ ಟಿಕೆಟ್ ಪಡೆದು ಕೂರುತ್ತಾನೆ.
ಆದರೆ ಆತನ ಮಾನಸಿಕ ನೆಮ್ಮದಿಯನ್ನು ಇನ್ನಷ್ಟು ಹಾಳುಮಾಡುವಂಥ ಮಾನಸಿಕ ಹಲ್ಲೆ ಮಾಡುವಂಥ ಚಿತ್ರಗಳನ್ನು ತೋರಿಸುವುದು ಎಷ್ಟು ಸರಿ?. ಸೆನ್ಸಾರ್ ಮಂಡಳಿಯಲ್ಲಿ ಪ್ರಮಾಣಪತ್ರ ನೀಡಬಹುದಷ್ಟೆ. ಆದರೆ ತಲೆಬಾಲವಿಲ್ಲದ ಅಸಹಜ
ಅಸಂಬದ್ಧ ದೃಶ್ಯಾವಳಿಗಳನ್ನು ಪೋಣಿಸಿ ಅದನ್ನು ಚಿತ್ರಮಂದಿರದಲ್ಲಿ ತೋರಿಸುವುದಕ್ಕೆ ನಿಯಂತ್ರಣ ಬೇಡವೇ? ಸಾರ್ವಜನಿಕ ರಲ್ಲಿ ಹುಚ್ಚನಂತೆ ವರ್ತಿಸಿದರೆ ಜನ ನಾಲ್ಕು ಬಾರಿಸಿ ಪೊಲೀಸರಿಗೆ ಒಪ್ಪಿಸುತ್ತಾರೆ. ಅಂಥದ್ದನ್ನೆ ದುಡ್ಡುಕೊಟ್ಟು ನೋಡುವ ಕರ್ಮಕ್ಕೆ ಒಳಪಡಿಸುವುದು ಅಪರಾಧವಲ್ಲವೇ?. ಕನ್ನಡ ಚಿತ್ರರಂಗವನ್ನು ಒಂಟಿ ಸಿಕ್ಕ ಯುವತಿಯ ಮೇಲೆ ಎರಗುವ ಅತ್ಯಾಚಾರಿ ಗಳಂತೆ ವಿಕೃತಗೊಳಿಸುವ ಅಯೋಗ್ಯರಿಂದ ಮುಕ್ತಿನೀಡಬೇಕಿದೆ.
ಇಂಥವ ರಿಂದ ಪ್ರೇಕ್ಷಕ ಸಿನಿಮಾ ಮೇಲಿನ ವಿಶ್ವಾಸ, ನಂಬಿಕೆ ಕಳೆದುಕೊಂಡು ದೂರವಾಗುತ್ತಿರುವುದು ಸುಳ್ಳಲ್ಲ. ಇಂದು ಕನ್ನಡ ಪ್ರೇಕ್ಷಕ ಬದಲಾಗಿದ್ದಾನೆ. ಮೊಬೈಲ್ ಗಳಲ್ಲೇ ಹಾಲಿವುಡ್‌ನ ಚಿತ್ರಗಳನ್ನು ಹುಡುಕಿ ನೋಡುವಂತಾಗಿದ್ದಾನೆ. ಕಾಲ ಬದಲಾದಂತೆ ಅತ್ಯಾಧುನಿಕ ತಂತ್ರಜ್ಞಾನ ಗ್ರಾಫಿಕ್ ಎಫೆಕ್ಟ್‌ಗಳನ್ನು ಗ್ರಹಿಸಿ ಅದರತ್ತ ಕಣ್ಣಾಯಿಸುತ್ತಾನೆ. ಇನ್ನು ಮನೆಯ ಹೆಣ್ಣು ಮಕ್ಕಳಂತೂ
ಧಾರವಾಹಿಗಳು ರಿಯಾಲಿಟಿ ಶೋಗಳಲ್ಲೇ ಎಲ್ಲಾ ಮನರಂಜನೆಯನ್ನು ಕಾಣುತ್ತಿದ್ದಾರೆ.
ಚಿತ್ರರಂಗದ ಏಳಿಗೆಗಾಗಿ ಸರಕಾರ ಉತ್ತಮ ಚಿತ್ರಗಳಿಗೆ ಕೋಟ್ಯಂತರ ರುಪಾಯಿಗಳ ಸಬ್ಸಿಡಿಗಳು ಸ್ಟುಡಿಯೋಗಳು ಚಿತ್ರನಗರಿ ಯಂಥ ಯೋಜನೆಗೆ ಹಣವನ್ನು ವ್ಯಯಿಸುತ್ತದೆ. ಇದೆಲ್ಲ ಸಾರ್ವಜನಿಕರ ಹಣವೇ ಅಲ್ಲವೇ? ಆದ್ದರಿಂದ ಸರಕಾರ ವರ್ಷಕ್ಕಿಷ್ಟು
ಐತಿಹಾಸಿಕ ಪೌರಾಣಿಕ ಮಕ್ಕಳ ಮತ್ತು ಕಾದಂಬರಿ ಆಧಾರಿತ ಸಾಮಾಜದ ಪರಿರ್ವನೆಗೆ ಪೂರಕವಾದ ಚಿತ್ರಗಳು ನಿರ್ಮಾಣ ವಾಗಲೇಬೇಕೆಂಬ ನಿಯಮ ರೂಪಿಸಲಿ. ಅಂಥ ಚಿತ್ರಗಳಿಗೆ ಹೆಚ್ಚು ಸಬ್ಸಿಡಿ ನೀಡಿ ಪ್ರೋತ್ಸಾಹಿಸಲಿ.
ರಾಜ್ ಅವರಂತೆ ಸಾಮಾಜಿಕ ಕೌಟುಂಬಿಕ ಸಂಬಂಧಗಳ ಮನಮುಟ್ಟುವ ಚಿತ್ರಗಳು ನಿರ್ಮಾಣವಾಗುವಂತಾಗಲಿ. ಶಿವಣ್ಣ, ರವಿಚಂದ್ರನ್, ಜಗ್ಗೇಶ್, ಸುದೀಪ್, ದರ್ಶನ್‌ರಂಥ ಹಿರಿಯ ಕಿರಿಯ ಕಲಾವಿದರು ಇಂಥ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ
ಚಿತ್ರರಂಗಕ್ಕೆ ಹೊಸ ದಿಕ್ಕನ್ನು ನೀಡಲಿ. ಎಲ್ಲರೂ ಒಗ್ಗೂಡಿ ಚಿತ್ರರಂಗಕ್ಕೆ ಬಡಿದಿರುವ ಕರೋನಾ ಸೂತಕವನ್ನು ಕಳೆದು ಕನ್ನಡ ಚಿತ್ರರಂಗ ಪುಟಿದೇಳುವಂತೆ ಮಾಡಿ ಅಭಿಮಾನಿ ದೇವರುಗಳು ಚಿತ್ರಮಂದಿರದ ಗರ್ಭಗುಡಿಯೊಳಗೆ ಪ್ರವೇಶಿಸುವಂಥ ಪಾವಿತ್ರ್ಯವನ್ನು ಉಳಿಸಿಕೊಳ್ಳಬೇಕಿದೆ. ಪುಟಿದೇಳಲಿ ಕನ್ನಡ ಚಿತ್ರರಂಗ !