ಪ್ರಚಲಿತ
ವಿನಾಯಕ ಭಟ್ಟ
ಹೋರಾಟ… ಹೋರಾಟ… ಹೋರಾಟ .. ಬಂದ್ .. ಬಂದ್ .. ಬಂದ್..
ಕಳೆದ ಕೆಲವು ದಿನಗಳಿಂದ ದಿನ ನಿತ್ಯ ಕೇಳುವ ಶಬ್ದ ಆಗಿಬಿಟ್ಟಿದೆ. ಮನುಷ್ಯನ ಜೀವ ವಿಕಾಸ ಕಾಲದಿಂದಲೂ ಹೋರಾಟಗಳು ನಡೆದು ಬಂದಿದ್ದೇ. ಪುರಾತನ ಕಾಲದ ಹೋರಾಟಗಳು ಮನುಷ್ಯನ ಉಳಿವಿಗೆ ನಡೆದದ್ದೇ ಹೆಚ್ಚು. ತನ್ನ ಅಸ್ತಿತ್ವಕ್ಕಾಗಿ ಮನುಷ್ಯ ಕಾಡು ಪ್ರಾಣಿಗಳೊಂದಿಗೆ ಹೋರಾಟ ನಡೆಸಿದ, ಪ್ರಾಕೃತಿಕ ವಿಪತ್ತಿನ ಜತೆಗೆ ಹೋರಾಟ ನಡೆಸಿದ. ತನ್ನವರೊಂದಿಗೆ ಹೋರಾಟ ನಡೆಸಿದ.
ತನ್ನ ಬದುಕಿಗಾಗಿ ಹೋರಾಟ ನಡೆಸಿದ. ಇಂದು ಕಾಣುತ್ತಿರುವ ಅನೇಕ ಹೋರಾಟಗಳೂ ಕೂಡ ತಮ್ಮ ರಾಜಕೀಯ ಅಸ್ತಿತ್ವದ ಪ್ರಶ್ನೆಯ ಹೋರಾಟವೇ ಎಂದು ಅನ್ನಿಸಲು ಶುರುವಾಗಿದೆ. ಯಾವ ಸೈದ್ಧಾಂತಿಕ ವಿವೇಚನೆಯೂ, ನಿಲುವೂ, ಅಲೋಚನೆಯೂ
ಇಲ್ಲದ ಕೇವಲ ಆಡಳಿತ ವಿರೋಧಿ ಹೋರಾಟಗಳನ್ನು ನೋಡಿದಾಗ ಸ್ವಾರ್ಥಪರ ಚಿಂತನೆಯೇ ಢಾಳಾಗಿ ಎದ್ದು ಕಾಣುತ್ತಿದೆ. ಹೋರಾಟಕ್ಕಾಗಿ ಹೋರಾಟ ಅನ್ನುವ ಭಾವನೆ, ಜತೆಗೆ ಬಂದ್ ಮಾಡುವ ಉದ್ದೇಶವನ್ನೇ ಹೊಂದಿದ ಬಂದ್.
ಯಾವ ಪುರುಷಾರ್ಥ ಸಾಧನೆಗೆ ಎಂದು – ಕರೆಕೊಟ್ಟ ಜನ, ಸಾಮಾನ್ಯ ಜನಕ್ಕೆ ಉತ್ತರ ಹೇಳುವ ಮುಖವನ್ನೂ ಕೂಡ ಹೊತ್ತಿಲ್ಲ. ಈ ಹೋರಾಟ ಮತ್ತು ಬಂದ್ನ ಮೂಲ ಉದ್ದೇಶಗಳು ತಮ್ಮ ಇರುವಿಕೆಯನ್ನು ಪ್ರಸ್ತುತಪಡಿಸಲು ಹಾಗೂ ತಮ್ಮ ಪ್ರಭಾವದ ಪರೀಕ್ಷೆಗೆ ಒಂದು ಪ್ರಯತ್ನ ಅನ್ನುವುದಂತೂ ಖಂಡಿತ ಸುಳ್ಳಲ್ಲ. ಇತ್ತೀಚಿನ ಮೊದಲ ಹೋರಾಟ ಶುರು ಆಗಿದ್ದು ಈ
ಸರಕಾರದ ಮರಾಠ ಅಭಿವೃದ್ಧಿ ನಿಗಮದ ಕುರಿತಾಗಿ. ಸರಕಾರ ಎಲ್ಲರ ಹಿತ ದೃಷ್ಟಿಯಿಂದ ಕಾರ್ಯ ಕೈಗೊಳ್ಳಬೇಕೆ ಹೊರತು, ಒಂದಷ್ಟು ರಾಜಕೀಯ ಪ್ರೇರಿತ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು.
ಅದರಲ್ಲೂ ಸಾಂಕ್ರಾಮಿಕ ರೋಗ ಕಾಡುತ್ತಿರುವ ಇಂಥ ಸಮಯದಲ್ಲಿ ಅಂಥದ್ದೊಂದು ಕ್ರಮ ಬೇಕಿತ್ತಾ ಅನ್ನುವುದು ಪ್ರಶ್ನಾರ್ಹ ವಿಷಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಆ ವಿಷಯವನ್ನು ರಾಜಕೀಯಕ್ಕೆ ಬೆರೆಸಿ, ಭಾಷೆಯ ಬಗ್ಗೆ ಬೆರೆಸಿ, ಅನವಶ್ಯಕ ಗೊಂದಲ ಸೃಷ್ಟಿಸಿದ್ದು ಈ ಅಸ್ತಿತ್ವದ ಆತಂಕದಲ್ಲಿರುವ ಹೋರಾಟಗಾರರು. ವಿವಿಧ ರೀತಿಯ ಪ್ರದರ್ಶನಗಳು ನಡೆದು ಕೊನೆಯಲ್ಲಿ ಕರ್ನಾಟಕ ಬಂದ್ಗೆ ಕರೆಕೊಟ್ಟು, ಅದನ್ನು ಯಶಸ್ವಿ ಗೊಳಿಸುವ ಪ್ರಯತ್ನ ನಡೆದಿದ್ದು ನಾವು ನೋಡಿದೆವು. ಆದರೆ
ಅದರಿಂದ ಆದ ಪರಿಣಾಮ ಮಾತ್ರ ಶೂನ್ಯ.
ಜನ ಸಾಮಾನ್ಯರಿಗೆ ಒಂದಷ್ಟು ತೊಂದರೆಗಳು ಆದವು ವಿನಃ ಮತ್ಯಾವ ಪ್ರಯೋಜನವೂ ಆಗಲಿಲ್ಲ. ಸಾಂಕ್ರಾಮಿಕ ರೋಗದ ಲಾಕ್ ಡೌನ್ನಿಂದ ಜನಜೀವನ ಮತ್ತು ಆರ್ಥಿಕತೆ ಕ್ರಮೇಣ ಚೇತರಿಕೊಳ್ಳುತ್ತಿರುವ ಈ ಕಾಲದಲ್ಲಿ ಈ ಥರದ ಬಂದ್ಗಳು ಅಷ್ಟು ಉಚಿತವಲ್ಲ. ಜತೆಗೆ ಪ್ರದರ್ಶನಕ್ಕೆ, ಧರಣಿಗೆ ಜನ ಸೇರಿಸುವುದು ಖಂಡಿತ ಒಳ್ಳೆಯದಲ್ಲ. ಆ ಜನ ಸಂದಣಿಯಲ್ಲಿ ಒಂದೆರಡು ಜನಕ್ಕೆ ಕರೋನಾ ಇದ್ದರೂ, ಎಲ್ಲರಿಗೂ ಹರಡುವ ಅಪಾಯ ಈ ಹೋರಾಟಗಾರರಿಗೆ ಕಾಣಿಸಲೇ ಇಲ್ಲ. ಇಡೀ ಜಗತ್ತು ಕರೋನಾ ವಿರುದ್ಧ ಹೋರಾಡುತ್ತಿದ್ದರೆ, ಈ ಜನ ಕರೋನಾ ಮರೆತು ಹೋರಾಡಿದ್ದು ಒಂದಿನಿತೂ ಸಹ್ಯ ಅಲ್ಲ.
ವಿಷಯಾಧಾರಿತ ಹೋರಾಟ ಅನ್ನುವುದು ಪ್ರಜಾಪ್ರಭುತ್ವದಲ್ಲಿ ಒಂದು ಶಕ್ತಿ. ಎರಡು ಮಾತಿಲ್ಲ. ಆದರೆ, ಅದಕ್ಕೂ ಒಂದು ಸಮಯ ಸಂದರ್ಭ ಅಂತ ಬೇಡವಾ? ಮುಂದೆ ಬರಬಹುದಾದ ಅಪಾಯದ ಅರಿವಿದ್ದೂ ಕೂಡ ಜನರನ್ನು ಸೇರಿಸಿ ಪ್ರದರ್ಶನ
ಮಾಡುವಷ್ಟು ಅವಶ್ಯಕತೆ ಏನಿತ್ತು ಎಂಬುದನ್ನ ಹೋರಾಟಗಾರರು ಹೇಳಬೇಕಿದೆ. ಹೋರಾಟದಲ್ಲಿ ಪಾಲ್ಗೊಂಡ ಅನೇಕರಲ್ಲಿ ಕರೋನಾ ಹರಡಿದಲ್ಲಿ, ಇಡೀ ಜನ ಸರಕಾರ ಕ್ರಮ ಕೈಗೊಂಡಿಲ್ಲ ಎಂದು ಧಿಕ್ಕಾರ ಕೂಗುವವರೇ.
ಎಲ್ಲವನ್ನೂ ಸರಕಾರವೇ ಮಾಡಬೇಕು ಎಂದೇನೂ ಇಲ್ಲವಲ್ಲ. ತಮ್ಮ ಜವಾಬ್ದಾರಿಯನ್ನು ಸರಿಯಾಗಿ ಅರಿತು ಆಚರಿಸುವ
ಯಾರೇ ಆದರೂ ಅಂಥ ಜನ ಜಂಗುಳಿಯನ್ನು ಸಮರ್ಥನೆ ಮಾಡಲು ಆಗುವುದಿಲ್ಲ. ಇಂಥದ್ದೇ ಒಂದು ಸಂದಿಗ್ಧ ಪರಿಸ್ಥಿತಿ ಕೇಂದ್ರ ಸರಕಾರದ ವಿರುದ್ಧ ನಡೆಯುತ್ತಿರುವ ಕೃಷಿ ಮಸೂದೆಯ ವಿರುದ್ಧದ ಹೋರಾಟ. ಈ ಎಲ್ಲ ಹೋರಾಟಗಾರರು, ಕರೋನಾ
ಮತ್ತೊಂದು ಅಲೆ ಎದ್ದರೆ ಜವಾಬ್ದಾರಿ ತೆಗೆದುಕೊಳ್ಳುವರೆ? ಆ ಮುಷ್ಕರ ಇನ್ನೇನು ಮುಗಿಯಿತು ಅನ್ನುವ ಹೊತ್ತಿಗೆ ನಮ್ಮ ಸಾರಿಗೆ ನೌಕರರ ಮುಷ್ಕರ ಶುರುವಾಯಿತು.
ಇಲ್ಲೂ ಅಷ್ಟೇ. ಜನಸಾಮಾನ್ಯರ ಬದುಕಿನ ಮೂಲ ಅವಶ್ಯಕತೆಯಾದ ಆದ ಸಾರಿಗೆ ನೌಕರರ ಮುಷ್ಕರ. ಈ ಸಾರಿಗೆ ಸಿಬ್ಬಂದಿ ಕೂಡ ಅತ್ಯಂತ ಗೌರವದ ಕೆಲಸವನ್ನು ಕ್ಲಿಷ್ಟ ಸಂದರ್ಭದಲ್ಲೂ ಮಾಡಿದ್ದಾರೆ. ಅವರಿಗೆ ತಕ್ಕ ಪ್ರತಿಫಲವನ್ನು ಕೊಡುವುದು ಕೂಡ ಸರಕಾರದ ಜವಾಬ್ದಾರಿ. ಅದರಲ್ಲಿ ಯಾವ ರಾಜಿ ಕೂಡ ಆಗಬಾರದು. ಆದರೆ, ಸಾಮಾನ್ಯ ಜನರ ಬದುಕು ಮತ್ತೆ ಹಳಿಗೆ ಬರುತ್ತಿದ್ದ ಈ ಕಾಲದಲ್ಲಿ 3-4 ದಿನಗಳ ಮುಷ್ಕರ ಎಷ್ಟರ ಮಟ್ಟಿಗೆ ಸರಿ ಅನ್ನುವುದು ಅರ್ಥ ಆಗುವುದಿಲ್ಲ. ಈ ಸಾರಿಗೆ ಮುಷ್ಕರಕ್ಕೆ ಸಾತ್ ಕೊಡುತ್ತ, ಕೊನೆಗೆ ನೇತೃತ್ವ ವಹಿಸಿದ್ದ ವ್ಯಕ್ತಿ ರಾತ್ರೋ ರಾತ್ರಿ ದೊಡ್ಡ ಮುಖಂಡನಾಗಿ ಹೊರ ಹೊಮ್ಮುವುದರ ಹಿಂದೆ ಖಂಡಿತ ರಾಜಕೀಯ ಇದ್ದೇ ಇದೆ.
ಮುಂದಿನ ತನ್ನ ಇತರ ಹೋರಾಟಗಳಲ್ಲಿ ಸಾರಿಗೆ ಸಿಬ್ಬಂದಿಗಳ ಪೂರ್ಣ ಸಹಕಾರ ಬೇಕಾಗುತ್ತದೆ ಎಂಬ ದೂರದೃಷ್ಟಿ ಇಲ್ಲಿ
ಕಾಣಿಸಿತು. ಸರಕಾರ ಕೂಡ ಈ ನೌಕರ ಬಂಧುಗಳ ಹಿತಾಸಕ್ತಿಗೆ ಕಿವಿ ಕೊಡಲೇ ಬೇಕಿತ್ತು. ಆದರೆ ಇವೆಲ್ಲವುಗಳ ಮಧ್ಯೆ ವಿರಾಜ ಮಾನ ಆದ ವ್ಯಕ್ತಿಗೆ ಬೇಕಿದ್ದುದು, ಆ ಹೋರಾಟದ ಮೂಲ ಉದ್ದೇಶ. ಮತ್ತದೇ ಅಸ್ತಿತ್ವದ ಚಿಂತೆ. ರಾಜಕೀಯ ಮಹತ್ವಾಕಾಂಕ್ಷೆ ಅನ್ನಿಸುತ್ತದೆ. ಹೀಗೆ, ತಮ್ಮ ಅಸ್ತಿತ್ವದ ಹೋರಾಟಕ್ಕೆ ಇತರ ಜನಗಳನ್ನು ಬಳಸಿಕೊಂಡು ಅವರನ್ನೂ ಅಪಾಯಕ್ಕೆ ಮುಂದೂಡಿ ದ್ದು ಸಮರ್ಥನೀಯ ಅಲ್ಲ.
ಇದೊಂಥರದಲ್ಲಿ .. ಬೆರೆಯವನ ತೊಡೆಯ ಮೇಲೆ ಕತ್ತ ಹೊಸೆದರು ಅನ್ನುವ ಗಾದೆಯಂತೆ. ಕತ್ತ ಅಂದರೆ ತೆಂಗಿನ ನಾರು. ಅದರ ಹಗ್ಗ ಮಾಡುವಾಗ ಅದನ್ನ ಹೊಸೆಯಬೇಕಾಗುತ್ತದೆ. ಒಂದು ವೇಳೆ ಬೇರೆಯವನ ತೊಡೆಯ ಮೇಲೆ ಅದನ್ನ ಹೊಸೆದರೆ ಉರಿ
ಆಗುವುದು ಕತ್ತ ಹೊಸೆದವನಿಗಲ್ಲ. ತೊಡೆ ಯಾರದ್ದೇ ಅವನಿಗೆ. ಸರಕಾರ ಬೊಬ್ಬೆ ಹೊಡೆಯುತ್ತಿದೆ. ಜನ ಜಂಗುಳಿ ಬೇಡ. ಸಾಮಾಜಿಕ ಅಂತರ ಇರಲಿ. ಮಾಸ್ಕ್ ಇರಲಿ, ಮುಂತಾದ ತಿಳಿವಳಿಕೆ ನೀಡಲಾಗಿತ್ತು. ಆದರೆ ಈ ಹೋರಾಟಗಾರರಿಗೆ ಮಾತ್ರ ಅವೆಲ್ಲ ಕ್ಯಾರೆ ಇಲ್ಲ. ತಮ್ಮ ಸ್ವಾರ್ಥ ಸಾಧನೆಗೆ, ಪ್ರತಿಷ್ಠೆಗೆ ಬೇಕಾಗಿ ಬಂದ್, ಹೋರಾಟ ನಡೆಯುತ್ತಿದೆ. ಇದು ಕೊನೆಗಾಣಬೇಕು. ಕನಿಷ್ಠ ಪಕ್ಷ
ಈ ಕರೋನಾಕ್ಕೆ ಒಂದು ಉತ್ತಮ ಲಸಿಕೆ ಸಿಗಬೇಕು.
ಅಲ್ಲಿಯವರೆಗೆ ಈ ಜನ ಸೇರಿಸಿ ಮಾಡುವ ಹೋರಾಟಗಳು ನಿಲ್ಲಲಿ. ಹೋರಾಟಗಳ ಹೆಸರಿನಲ್ಲಿ, ಬಂದ್ ಹೆಸರಿನಲ್ಲಿ ಈಗಷ್ಟೇ ಮತ್ತೆ ಚೇತರಿಸಿಕೊಳ್ಳುತ್ತಿರುವ ಜನಕ್ಕೆ ದೇಶದ ಆರ್ಥಿಕತೆಗೆ ತೊಂದರೆ ಆಗದಿರಲಿ. ಅಂಥ ಒಳ್ಳೆಯ ಬುದ್ಧಿ ಈ ಹೋರಾಟಗಾರರಿಗೆ ಬರಲಿ ಎಂಬುದು ಸದ್ಯದ ಆಗ್ರಹ ಪೂರ್ವಕ ವಿನಂತಿ.