Sunday, 5th January 2025

Ayush Mhatre: 181 ರನ್‌ ಸಿಡಿಸಿ ಯಶಸ್ವಿ ಜೈಸ್ವಾಲ್‌ರ ವಿಶ್ವ ದಾಖಲೆ ಮುರಿದ ಆಯುಷ್‌ ಮ್ಹಾತ್ರೆ!

Vijay Hazare Trophy: Ayush Mhatre Creates HISTORY, Breaks Yashasvi Jaiswal's World Record

ನವದೆಹಲಿ: ಕಳೆದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್‌ ಆಗಿದ್ದ ಮುಂಬೈ ಯುವ ಬ್ಯಾಟ್ಸ್‌ಮನ್‌ ಆಯುಷ್‌ ಮ್ಹಾತ್ರೆ (Ayush Mhatre) ಅವರು ಪ್ರಸ್ತುತ ನಡೆಯುತ್ತಿರುವ ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಮಿಂಚಿನ ಬ್ಯಾಟಿಂಗ್‌ ಮೂಲಕ ಐಪಿಎಲ್‌ ಫ್ರಾಂಚೈಸಿಗಳಿಗೆ ತಿರುಗೇಟು ನೀಡಿದ್ದಾರೆ. ನಾಗಾಲ್ಯಾಂಡ್‌ ವಿರುದ್ದದ ಪಂದ್ಯದಲ್ಲಿ ಅವರು ಸ್ಪೋಟಕ ಶತಕದ ಮೂಲಕ ಟೀಮ್‌ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ ಅವರ ಐದು ವರ್ಷಗಳ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.

ನಾಗಾಲ್ಯಾಂಡ್‌ ವಿರುದ್ದದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಮುಂಬೈ ತಂಡದ ಪರ ಇನಿಂಗ್ಸ್‌ ಆರಂಭಿಸಿದ ಆಯುಷ್‌ ಮ್ಹಾತ್ರೆ ಅವರು ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಎಲ್ಲರ ಎದುರಾಳಿ ತಂಡದ ಬೌಲರ್‌ಗಳಿಗೆ ಬೆವರಿಳಿಸಿದರು. ಎದುರಿಸಿದ ಮೊದಲನೇ ಎಸೆತದಿಂದಲೂ ಸ್ಪೋಟಕ ಬ್ಯಾಟ್‌ ಮಾಡಿದ ಮ್ಹಾತ್ರೆ, ಬೌಂಡರಿ ಹಾಗೂ ಸಿಕ್ಸರ್‌ಗಳ ಮೂಲಕ ರನ್‌ ಹೊಳೆ ಹರಿಸಿದರು. ಅವರು ಆಡಿದ ಕೇವಲ 117 ಎಸೆತಗಳಲ್ಲಿ 181 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಲಿಸ್ಟ್‌ ಎ ಕ್ರಿಕೆಟ್‌ನ ಇನಿಂಗ್ಸ್‌ನಲ್ಲಿ 150ಕ್ಕೂ ಅಧಿಕ ರನ್‌ ಗಳಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಅವರಿಗೆ ಇದೀಗ 17 ವರ್ಷ ಹಾಗೂ 191 ದಿನಗಳ ವಯಸ್ಸಾಗಿದೆ.

ಯಶಸ್ವಿ ಜೈಸ್ವಾಲ್‌ರ ವಿಶ್ವ ದಾಖಲೆ ಮುರಿದ ಆಯುಷ್‌

ಮುಂಬೈ ತಂಡದ ಬ್ಯಾಟ್ಸ್‌ಮನ್‌ ಆಯುಷ್‌ ಮ್ಹಾತ್ರೆ ಅವರು ಯಾಶಸ್ವಿ ಜೈಸ್ವಾಲ್‌ ಅವರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಯಶಸ್ವಿ ಜೈಸ್ವಾಲ್‌ ಅವರು 2019ರ ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯ ಜಾರ್ಖಂಡ್‌ ವಿರುದ್ಧದ ಪಂದ್ಯದಲ್ಲಿ 150ಕ್ಕೂ ಅಧಿಕ ರನ್‌ ಸಿಡಿಸಿದ್ದರು. ಈ ವೇಳೆ ಜೈಸ್ವಾಲ್‌ಗೆ 17 ವರ್ಷ ಹಾಗೂ 291 ದಿನಗಳ ವಯಸ್ಸಾಗಿತ್ತು.

ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ 150ಕ್ಕೂ ಅಧಿಕ ರನ್‌ ಗಳಿಸಿದ ಅತ್ಯಂತ ಕಿರಿಯ ಬ್ಯಾಟರ್ಸ್‌

17 ವರ್ಷ 168 ದಿನಗಳು – ಆಯುಷ್ ಮ್ಹಾತ್ರೆ (ಮುಂಬೈ)
17 ವರ್ಷ 291 ದಿನಗಳು – ಯಶಸ್ವಿ ಜೈಸ್ವಾಲ್ (ಮುಂಬೈ)
19 ವರ್ಷ 63 ದಿನಗಳು – ರಾಬಿನ್ ಉತ್ತಪ್ಪ (ಕರ್ನಾಟಕ)
19 ವರ್ಷ 136 ದಿನಗಳು – ಟಾಮ್ ಪರ್ಸ್ಟ್ (ಹ್ಯಾಂಪ್‌ಶೈರ್)

ನಾಗಾಲ್ಯಾಂಡ್‌ ವಿರುದ್ಧ ಬೃಹತ್‌ ಮೊತ್ತ ಕಲೆ ಹಾಕಿದ ಮುಂಬೈ

ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಮುಂಬೈ ತಂಡದ ಪರ ಆಯುಷ್‌ ಮ್ಹಾತ್ರೆ ಸ್ಪೋಟಕ ಬ್ಯಾಟ್‌ ಮಾಡಿದರು. ಅವರು ಆಡಿದ್ದ 117 ಎಸೆತಗಳಲ್ಲಿ 11 ಭರ್ಜಸಿ ಸಿಕ್ಸರ್‌ ಹಾಗೂ 15 ಬೌಂಡರಿಗಳೊಂದಿಗೆ 181 ರನ್‌ಗಳನ್ನು ಸಿಡಿಸಿದ್ದಾರೆ. ಅಲ್ಲದೆ ಕೆಕೆಆರ್‌ ಬ್ಯಾಟ್ಸ್‌ಮನ್‌ ಅಂಗ್‌ಕ್ರಿಶ್‌ ರಘುವಂಶಿ ಅವರ ಜೊತೆ ಮುರಿಯದ ಮೊದಲನೇ ವಿಕೆಟ್‌ಗೆ 156 ರನ್‌ಗಳ ಜೊತೆಯಾಟವನ್ನು ಆಡಿದರು. ರಘುವಂಶಿ ಅವರು ಕೂಡ 66 ಎಸೆತಗಳಲ್ಲಿ 56 ರನ್‌ಗಳನ್ನು ಸಿಡಿಸಿದರು. ಇವರು ವಿಕೆಟ್‌ ಒಪ್ಪಿಸಿದ ಬಳಿಕ ಮ್ಹಾತ್ರೆ ಅವರು ಸಿದ್ದೇಶ್‌ ಲಾಡ್‌ ಅವರ ಜೊತೆಗೆ 96 ರನ್‌ ಜೊತೆಯಾಟವನ್ನು ಆಡಿದ್ದರು. ಸಿದ್ದೇಶ್‌ ಲಾಡ್‌ ಅವರು 39 ರನ್‌ಗಳನ್ನು ಸಿಡಿಸಿದ್ದರು.

ಅಂತಿಮ ಹಂತದಲ್ಲಿ ಶಾರ್ದುಲ್‌ ಠಾಕೂರ್‌ ಅವರು ಕೇವಲ 28 ಎಸೆತಗಳಲ್ಲಿ 73 ರನ್‌ಗಳನ್ನು ಸಿಡಿಸುವ ಮೂಲಕ ಮುಂಬೈ ತಂಡದ ಮೊತ್ತವನ್ನು 400ರ ಗಡಿ ದಾಟಿಸುವಲ್ಲಿ ನೆರವು ನೀಡಿದ್ದರು. ಒಟ್ಟಾರೆ ಮುಂಬೈ ತಂಡ ತನ್ನ ಪಾಲಿನ 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 403 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ನಾಗಾಲ್ಯಾಂಡ್‌ಗೆ 404 ರನ್‌ಗಳ ಗುರಿಯನ್ನು ನೀಡಿತ್ತು.

ಈ ಸುದ್ದಿಯನ್ನು ಓದಿ: Prithvi Shaw: ವಿಜಯ್‌ ಹಝಾರೆ ಟ್ರೋಫಿ ಮುಂಬೈ ತಂಡದಿಂದಲೂ ಪೃಥ್ವಿ ಶಾ ಔಟ್‌!