Sunday, 5th January 2025

Modi Govt: ಹೊಸ ವರ್ಷಕ್ಕೆ ಬಡವರಿಗೆ ಮೋದಿ ಸರ್ಕಾರದಿಂದ ಗುಡ್‌ನ್ಯೂಸ್‌; ಹೆಚ್ಚುವರಿ 2 ಕೋಟಿ ಮನೆ ಒದಗಿಸಲು ಚಿಂತನೆ

Modi Govt

ಹೊಸದಿಲ್ಲಿ: ಬಡವರಿಗೆ ಮನೆ ಒದಗಿಸುವುದಾಗಿ ಲೋಕಸಭೆ ಚುನಾವಣೆ ವೇಳೆ ಭರವಸೆ ನೀಡಿದ್ದ ಬಿಜೆಪಿ (BJP) ಆ ನಿಟ್ಟಿನತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಹೌದು, ಹೊಸ ವರ್ಷದ ಹೊಸ್ತಿಲಿನಲ್ಲಿ ನರೇಂದ್ರ ಮೋದಿ (Narendra Modi) ನೇತೃತ್ವದ ಎನ್‌ಡಿಎ ಸರ್ಕಾರ ಬಡವರಿಗೆ ಗುಡ್‌ನ್ಯೂಸ್‌ ನೀಡಿದೆ (Modi Govt). ಸುಮಾರು 2 ಕೋಟಿ ಹೆಚ್ಚುವರಿ ಮನೆ ಒದಗಿಸಲು ಮುಂದಾಗಿದ್ದು, ಮನೆಮನೆ ಸಮೀಕ್ಷೆ ನಡೆಸಲು ನಿರ್ಧರಿಸಿದೆ. 3 ತಿಂಗಳಲ್ಲಿ ಅಂದರೆ 2025ರ ಮಾರ್ಚ್‌ 31ರ ವೇಳೆಗೆ ಸಮೀಕ್ಷೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಈ ಬಗ್ಗೆ ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದೆ ಎಂದು ಸಿಎನ್‌ಎಸ್‌-ನ್ಯೂಸ್‌ (CNN-News18) ವರದಿ ಮಾಡಿದೆ. ʼʼಅರ್ಹ ಕುಟುಂಬಗಳನ್ನು ಗುರುತಿಸಲು ಆವಾಸ್ + 2024 ಅಪ್ಲಿಕೇಶನ್ (Awaas+ 2024 App) ಬಳಸಿಕೊಂಡು ಸಮೀಕ್ಷೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಆದ್ದರಿಂದ ನಿಮ್ಮ ರಾಜ್ಯ/ ಕೇಂದ್ರಾಡಳಿತ ಪ್ರದೇಶದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಆದ್ಯತೆಯ ಮೇರೆಗೆ ಮನೆ ಸಮೀಕ್ಷೆಯನ್ನು ಪ್ರಾರಂಭಿಸಲು ಮತ್ತು ಮುಂದಿನ 3 ತಿಂಗಳೊಳಗೆ ಅಂದರೆ 2025ರ ಮಾರ್ಚ್ 31ರೊಳಗೆ ಪೂರ್ಣಗೊಳಿಸಲು ಸೂಚಿಸಬೇಕು. ಯಾವುದೇ ಅರ್ಹ ಕುಟುಂಬಗಳನ್ನು ಯೋಜನೆಯಿಂದ ಹೊರಗಿಡಬಾರದು,” ಎಂದು ಕೇಂದ್ರದ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಸಮೀಕ್ಷೆ ಆರಂಭ

ಪಿಎಂ ಆವಾಸ್‌ (ನಗರ) (PM Awas (Urban) ಯೋಜನೆಯಡಿ ಈಗಾಗಲೇ 1 ಕೋಟಿಗಿಂತ ಅಧಿಕ ಮನೆಗಳ ಸಮೀಕ್ಷೆ ನಡೆಸಲಾಗಿದೆ. ಪಿಎಂ ಆವಾಸ್‌ ಯೋಜನೆ ಮೂಲಕ ಬಡವರಿಗೆ 3 ಕೋಟಿಗಿಂತ ಅಧಿಕ ಮನೆಗಳನ್ನು ಒದಗಿಸಲಾಗುವುದು. ಈ ಪೈಕಿ ಗ್ರಾಮೀಣ ಪ್ರದೇಶದಲ್ಲಿ ಸುಮಾರು 2 ಕೋಟಿ ಮನೆಗಳನ್ನು ಮತ್ತು ನಗರ ಪ್ರದೇಶದಲ್ಲಿ ಸುಮಾರು 1 ಕೋಟಿ ಮನೆಗಳನ್ನು ನಿರ್ಮಿಸಲಾಗುವುದು ಎಂದು 2024ರ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಬಿಜೆಪಿ ಭರವಸೆ ನೀಡಿತ್ತು. ತಮ್ಮ ಆಡಳಿತದ 2 ಅವಧಿಯಲ್ಲಿ ಈಗಾಗಲೇ ಸುಮಾರು 4 ಕೋಟಿ ಮನೆಗಳನ್ನು ಒದಗಿಸಲಾಗಿದೆ ಎಂದು ಮೋದಿ ಸರ್ಕಾರ ತಿಳಿಸಿದೆ. 2016ರಲ್ಲಿ ಆರಂಭವಾದ ಪಿಎಂ ಆವಾಸ್‌ ಯೋಜನೆ ಬಿಜೆಪಿ ಪಾಲಿಗೆ ಗೇಮ್‌ ಚೇಂಜರ್‌ ಆಗಿ ಬದಲಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. 2029ರ ಮಾರ್ಚ್‌ 31ರ ವೇಳೆಗೆ ಹೆಚ್ಚುವರಿ 3 ಕೋಟಿ ಮನೆಗಳನ್ನು ಪೂರ್ಣಗೊಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

ಸಮೀಕ್ಷೆ ನಡೆಸುವುದು ಹೇಗೆ?

ಆವಾಸ್ + 2024 ಮೊಬೈಲ್‌ ಆ್ಯಪ್‌ ಸಹಾಯದಿಂದ ಅಧಿಕಾರಿಗಳು ಮಾತ್ರವಲ್ಲದೆ ಫೇಸ್ ದೃಢೀಕರಣವನ್ನು ಬಳಸಿಕೊಂಡು ಫಲಾನುಭವಿಗಳು ಸ್ವಯಂ ಸಮೀಕ್ಷೆ ನಡೆಸಬಹುದಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ ಸಮೀಕ್ಷೆ ನಡೆಸಲು ಅಧಿಕಾರಿಗಳನ್ನು ನೇಮಿಸಿದೆ. ʼʼಹೆಚ್ಚುವರಿಯಾಗಿ ಎಲ್ಲ ಅರ್ಹ ಫಲಾನುಭವಿಗಳ ಸಮಗ್ರ ವ್ಯಾಪ್ತಿ ಮತ್ತು ಸೇರ್ಪಡೆಯನ್ನು ಖಚಿತಪಡಿಸಿಕೊಳ್ಳಲು ಅಪ್ಲಿಕೇಶನ್ ಮುಖಾಧಾರಿತ ದೃಢೀಕರಣವನ್ನು ಬಳಸಿಕೊಂಡು ಸ್ವಯಂ ಸಮೀಕ್ಷೆಯನ್ನು ಮಾಡಲು ಸಾರ್ವಜನಿಕರಿಗೆ ಅನುವು ಮಾಡಿಕೊಡಲಾಗಿದೆʼ’ ಎಂದು ಕೇಂದ್ರ ತಿಳಿಸಿದೆ.

2024ರ ಸೆಪ್ಟೆಂಬರ್‌ 17ರಂದು ಪ್ರಧಾನಿ ಮೋದಿ ಅವರು ಒಡಿಶಾದ ಭುವನೇಶ್ವರದಲ್ಲಿ ಆವಾಸ್ + 2024 ಮೊಬೈಲ್‌ ಆ್ಯಪ್‌ ಬಿಡುಗಡೆಗೊಳಿಸಿದ್ದರು. ಈ ಅಪ್ಲಿಕೇಶನ್ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮಾರ್ಗಸೂಚಿಗಳ ಆಧಾರದ ಮೇಲೆ ಅರ್ಹರಾಗಿರುವ ಹೆಚ್ಚುವರಿ ಗ್ರಾಮೀಣ ಕುಟುಂಬಗಳನ್ನು ಗುರುತಿಸುವ ಗುರಿಯನ್ನು ಹೊಂದಿದೆ.

ಈ ಸುದ್ದಿಯನ್ನೂ ಓದಿ: PMAY 2.O: 2029ರ ತನಕ ಹೊಸ ಮನೆಗೆ ಪಡೆಯಿರಿ 2.50 ಲಕ್ಷ ರೂ. ಸಬ್ಸಿಡಿ!