Sunday, 5th January 2025

New Year 2025: ಬೆಂಗಳೂರಲ್ಲಿ 2025ಕ್ಕೆ ಭರ್ಜರಿ ಸ್ವಾಗತ; ಮುಗಿಲು ಮುಟ್ಟಿದ ಹೊಸ ವರ್ಷಾಚರಣೆ ಸಂಭ್ರಮ!

New Year 2025

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರು ಸೇರಿ ರಾಜ್ಯದ ಜನರು 2025 ವರ್ಷವನ್ನು (New Year 2025) ಮಂಗಳವಾರ ರಾತ್ರಿ ಅದ್ಧೂರಿಯಾಗಿ ಸ್ವಾಗತಿಸಿದರು. ಕೇಕ್‌ ಕತ್ತರಿಸಿ, ಸಿಹಿ ವಿನಿಮಯದ ಜತೆಗೆ ಭರ್ಜರಿ ಪಾರ್ಟಿ ಮೂಲಕ ಸಂಭ್ರಮಿಸಿದರು. ರಾಜಧಾನಿಯ ಎಂ.ಜಿ. ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್‌ ಸ್ಟ್ರೀಟ್‌ ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ ಪಟಾಕಿ ಸಿಡಿಸಿ, ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸುವ ಮೂಲಕ ಯುವ ಜನರು ಸಂಭ್ರಮದಿಂದ ಹೊಸ ವರ್ಷವನ್ನು ಬರಮಾಡಿಕೊಂಡರು.

ಕರ್ನಾಟಕದ ವಿವಿಧೆಡೆಯಿಂದ ಹೊಸ ವರ್ಷದ ಸಂಭ್ರಮಾಚರಣೆಗೆ (New Year Celebration) ಜನ ಸಾಗರವೇ ಉದ್ಯಾನ ನಗರಿಗೆ ಹರಿದುಬಂದಿತ್ತು. ಹೀಗಾಗಿ ಎಂ.ಜಿ. ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್‌ ಸ್ಟ್ರೀಟ್‌ನ ಪಬ್‌ಗಳು, ಬಾರ್‌ ಮತ್ತು ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ತುಂಬಿ ತುಳುಕಿದವು. ಅಲ್ಲದೇ ಕೋರಮಂಗಲ, ಇಂದಿರಾನಗರ ಸೇರಿ ಪ್ರಮುಖ ರಸ್ತೆಗಳು ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದವು. ರಾತ್ರಿ 12 ಗಂಟೆ ಆಗುತ್ತಿದ್ದಂತೆ ಹ್ಯಾಪಿ ನ್ಯೂ ಇಯರ್ ಎಂದು ಕೂಗುತ್ತಾ ಯುವಕ-ಯುವತಿಯರು ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಾಚರಣೆ ನಡೆಸಿದರು.

ಜನಸಂದಣಿ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ, ಪಾರ್ಕಿಂಗ್‌ ನಿಷೇಧ ಮಾಡಲಾಗಿತ್ತು. ಬ್ರಿಗೇಡ್ ರಸ್ತೆಯಲ್ಲಿ ತಳ್ಳಾಟ ನೂಕಾಟ ಹೆಚ್ಚಾಗಿದ್ದರಿಂದ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

ಯುವತಿಗೆ ಚುಡಾಯಿಸಿದವನಿಗೆ ಬಿತ್ತು ಗೂಸಾ
ಒಪೆರಾ ಜಂಕ್ಷನ್‌ ಬಳಿ ಯುವತಿಯನ್ನು ಚುಡಾಯಿಸಿದ ಪುಂಡನಿಗೆ ಧರ್ಮದೇಟು ಬಿದ್ದಿರುವ ಘಟನೆ ನಡೆದಿದೆ.

ಈ ಸುದ್ದಿಯನ್ನೂ ಓದಿ | New year Celebration: ಹೊಸ ವರ್ಷಾಚರಣೆ: ಈ ತಾಣಗಳು ಸೈಲೆಂಟ್‌, ನೋ ಎಂಟ್ರಿ!

ಬೆಂಗಳೂರು ಮಾತ್ರವಲ್ಲದೆ ರಾಜ್ಯದೆಲ್ಲೆಡೆ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲಾಗಿದೆ. ಮಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ ಸೇರಿ ಪ್ರಮುಖ ನಗರಗಳಲ್ಲಿ ಸಂಭ್ರಮಾಚರಣೆ ಜೋರಾಗಿತ್ತು. ಕೇಕ್‌ ಕತ್ತರಿಸಿ, ಸಿಹಿ ವಿನಿಮಯ ಮಾಡುವ ಜತೆಗೆ ನೃತ್ಯ, ಗಾಯನ ಕಾರ್ಯಕ್ರಮಗಳ ಮೂಲಕ ಜನರು ಸಂಭ್ರಮಾಚರಣೆ ನಡೆಸಿದರು.