Tuesday, 7th January 2025

IND vs AUS: ಸಿಡ್ನಿ ಟೆಸ್ಟ್‌ನಲ್ಲಿ ಗಾಯಾಳು ಮಿಚೆಲ್‌ ಸ್ಟಾರ್ಕ್‌ ಆಡ್ತಾರಾ? ಅಲೆಕ್ಸ್‌ ಕೇರಿ ಹೇಳಿದ್ದಿದು!

IND vs AUS: Alex Carey Confident Mitchell Starc “Will Be Ready” For Sydney Test Against India

ಸಿಡ್ನಿ: ಗಾಯದ ಹೊರತಾಗಿಯೂ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಶುಕ್ರವಾರ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಭಾರತದ ವಿರುದ್ದ ಆರಂಭವಾಗಲಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್‌ ಸರಣಿಯ ಐದನೇ ಮತ್ತು ಅಂತಿಮ ಪಂದ್ಯದಲ್ಲಿ (IND vs AUS) ಆಡಲಿದ್ದಾರೆ ಎಂದು ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅಲೆಕ್ಸ್ ಕೇರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

34ನೇ ವರ್ಷದ ವಯಸ್ಸಿನ ಎಡಗೈ ವೇಗದ ಬೌಲರ್‌ನ ಫಿಟ್‌ನೆಸ್ ಆಸ್ಟ್ರೇಲಿಯನ್ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಅವರು ಬಾಕ್ಸಿಂಗ್ ಡೇ ಟೆಸ್ಟ್‌ನ ಮೂರನೇ ದಿನದಿಂದಲೂ ಪಕ್ಕೆಲುಬಿನ ನೋವಿನಿಂದ ಬಳಲುತ್ತಿದ್ದರು, ಆದರೆ ತಂಡದ ಫಿಸಿಯೋ ಸಹಾಯದಿಂದ ಬೌಲಿಂಗ್‌ನಲ್ಲಿ ಮುಂದುವರಿದಿದ್ದರು.

ಮಿಚೆಲ್‌ ಸ್ಟಾರ್ಕ್‌ ಗಾಯದ ಬಗ್ಗೆ ಕೇರಿ ಹೇಳಿದ್ದೇನು?

ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಆಸ್ಟ್ರೇಲಿಯಾ ತಂಡದ ವಿಕೆಟ್‌ ಕೀಪರ್‌ ಅಲೆಕ್ಸ್‌ ಕೇರಿ, “ಮಿಚೆಲ್‌ ಸ್ಟಾರ್ಕ್‌ ಚೆನ್ನಾಗಿದ್ದಾರೆ ಹಾಗೂ ಅವರು ಐದನೇ ಟೆಸ್ಟ್‌ ಆಡಲಿದ್ದಾರೆಂಬ ನಿರೀಕ್ಷೆ ಇದೆ. ಆಸ್ಟ್ರೇಲಿಯನ್ ಆಯ್ಕೆಗಾರರು ಬಹುಶಃ ಟೆಸ್ಟ್ ಪಂದ್ಯ ಸಮೀಪಿಸುತ್ತಿದ್ದಂತೆ ಸ್ಟಾರ್ಕ್ ಅವರ ಫಿಟ್ನೆಸ್ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ತಮ್ಮ ಸಹ ಆಟಗಾರನ ಫಿಟ್ನೆಸ್ ಬಗ್ಗೆ ನಾನು ಹೆಚ್ಚು ಚಿಂತಿಸುವುದಿಲ್ಲ,” ಎಂದು ಹೇಳಿದ್ದಾರೆ.

‘ನಾನು ಅವರೊಂದಿಗೆ (ಸ್ಟಾರ್ಕ್) ಬಹಳ ಸಮಯದಿಂದ ಆಡುತ್ತಿದ್ದೇನೆ. ಅವರೊಬ್ಬ ಬಲಿಷ್ಠ ಆಟಗಾರ. ಸಹಜವಾಗಿ, ಅವರ ಪಕ್ಕೆಲುಬಿನಲ್ಲಿ ನೋವಿದೆ ಮತ್ತು ಅದು ಕೆಲವೊಮ್ಮೆ ಅವರನ್ನು ಕಾಡುತ್ತದೆ. ಆದರೆ ಮುಂದಿನ ಪಂದ್ಯದ ವೇಳೆಗೆ ಅವರು ಆಡಲು ಸಿದ್ಧರಾಗುತ್ತಾರೆ ಎಂಬ ವಿಶ್ವಾಸವಿದೆ,” ಎಂದು ಆಸೀಸ್‌ ವಿಕೆಟ್‌ ಕೀಪರ್‌ ತಿಳಿಸಿದ್ದಾರೆ.

2014-15ರ ಬಳಿಕ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆಲ್ಲಲು ಆಸ್ಟ್ರೇಲಿಯಾ ತಂಡ ಎದುರು ನೋಡುತ್ತಿದೆ. ಇದೀಗ ಟೆಸ್ಟ್‌ ಸರಣಿಯಲ್ಲಿ 2-1 ಮುನ್ನಡೆಯನ್ನು ಹೊಂದಿರುವ ಆತಿಥೇಯ ಆಸ್ಟ್ರೇಲಿಯಾ, ಐದನೇ ಟೆಸ್ಟ್ ಪಂದ್ಯವನ್ನು ಗೆಲ್ಲಬೇಕು ಅಥವಾ ಡ್ರಾ ಮಾಡಿಕೊಳ್ಳಬೇಕು. ಈ ಪಂದ್ಯವನ್ನು ಗೆಲ್ಲುವಲ್ಲಿ ಭಾರತ ಯಶಸ್ವಿಯಾದರೆ, ಸತತ ಐದನೇ ಬಾರಿ ಈ ಟ್ರೋಫಿಯನ್ನು ತನ್ನಲ್ಲಿಯೇ ಉಳಿಸಿಕೊಳ್ಳಲಿದೆ.

ಮಿಚೆಲ್‌ ಸ್ಟಾರ್ಕ್‌ ಅಲಭ್ಯರಾದರೆ ಜೇ ರಿಚರ್ಡ್‌ಸನ್‌ಗೆ ಅವಕಾಶ

ಮಿಚೆಲ್‌ ಸ್ಟಾರ್ಕ್‌ಗೆ ವಿಶ್ರಾಂತಿ ನೀಡಿದರೆ, 2021ರ ಡಿಸೆಂಬರ್‌ನಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದ ವೇಗದ ಬೌಲರ್ ಜೇ ರಿಚರ್ಡ್‌ಸನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು. ತಂಡದಲ್ಲಿ ಆಯ್ಕೆಯಾಗುವ ಸಾಧ್ಯತೆಯ ಬಗ್ಗೆ ಮಾತನಾಡಿದ ರಿಚರ್ಡ್‌ಸನ್, “ನಾನು ಅವಕಾಶದ ಬಗ್ಗೆ ಯೋಚಿಸುತ್ತಿಲ್ಲ ಆದರೆ ನನಗೆ ಅವಕಾಶ ಸಿಕ್ಕರೆ, ಅದರ ಲಾಭವನ್ನು ಪಡೆಯಲು ಪ್ರಯತ್ನಿಸುತ್ತೇನೆ,” ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿ: IND vs AUS: ʻವೈಫಲ್ಯದ ಬಗ್ಗೆ ಮಾತ್ರ ಟೀಕಿಸಿʼ-ರಿಷಭ್‌ ಪಂತ್‌ಗೆ ಸಂಜಯ್‌ ಮಾಂಜ್ರೇಕರ್‌ ಬೆಂಬಲ!