ಹುಬ್ಬಳ್ಳಿ: ಅಖಿಲ ಭಾರತ ಆಡಳಿತ ಸೇವೆಯಲ್ಲಿ ದಿವ್ಯಾಂಗರಿಗೆ ಪ್ರಾತಿನಿಧ್ಯ ಒದಗಿಸಲಾಗಿದೆ. ಪ್ರತಿ ವರ್ಷವೂ ಉನ್ನತ ಮಟ್ಟದ ಅಧಿಕಾರಿಗಳಾಗಿ ದಿವ್ಯಾಂಗರು ಹೊರ ಬರುತ್ತಿದ್ದಾರೆ. ವಿಕಲಚೇತನರು ಆತ್ಮವಿಶ್ವಾಸದಿಂದ ಜೀವನ ನಡೆಸಬೇಕು ಎಂದು ಜಿಲ್ಲಾಧಿ ಕಾರಿ ನಿತೇಶ ಕೆ.ಪಾಟೀಲ್ ಹೇಳಿದರು.
ಜ್ಯೋತಿರ್ಗಮಯ ದೃಷ್ಟಿ ವಿಕಲಚೇತನರ ಬೋಧಕರ ಸಂಘದಿಂದ ಹುಬ್ಬಳ್ಳಿಯ ಆನಂದ ನಗರದ ಅಂಧಮಕ್ಕಳ ಸರ್ಕಾರಿ ಪಾಠಶಾಲೆಯಲ್ಲಿ ಆಯೋಜಿಸಲಾದ ದಂತ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಹಲ್ಲು ಹಾಗೂ ಬಾಯಿಯ ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಕನ್ನಡ ಭಾಷೆಯಲ್ಲಿ ಮುದ್ರಿಸಲಾದ ಹಲ್ಲಿನ ಶಿಕ್ಷಕರು ಬ್ರೈಲ್ ಪುಸ್ತಕ, ದೃಷ್ಟಿ ವಿಕಲಚೇತನರಿಗೆ ಸಹಕಾರಿಯಾಗಿದೆ. ಇಂದಿನ ದಂತ ಕಾರ್ಯಾಗಾರದಲ್ಲಿ 21 ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಇವರು ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ. ಜ್ಯೋತಿರ್ಗಮಯ ದಂತ ಸಂರಕ್ಷಣಾ ಸಂಸ್ಥೆ ದಂತ ಆರೋಗ್ಯದ ಕುರಿತು ಕನ್ನಡದಲ್ಲಿ ಬ್ರೈಲ್ ಪುಸ್ತಕ ಹೊರತಂದಿದ್ದು ಶ್ಲಾಘನೀಯವಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಶೆಟ್ಟರ್ ಸ್ವಾಗತಿಸಿದರು. ಜ್ಯೋತಿರ್ಗಮಯ ದಂತ ಸಂರಕ್ಷಣಾ ಸಂಸ್ಥೆ ಅಧ್ಯಕ್ಷ ಡಾ. ವಾಯ್. ಸ್ಯಾಮ್ಯೂಯಲ್ ವಿಶಾಲ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕಿ ಡಾ. ಬಿಂದು ಪಾಟೀಲ್, ಡಾ.ಸ್ಮಿತಾ ಪಾಟೀಲ, ಡಾ.ಸವಿತಾ ಶೆಟ್ಟರ್, ಡಾ.ಲಕ್ಷ್ಮೀ ಲಖಾಡೆ, ಡಾ.ಗೋಬಲೆ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಡಿ.ಎನ್.ಮೂಲಿಮನಿ, ಅಂದ ಮಕ್ಕಳ ಸರ್ಕಾರಿ ಪಾಠಾಶಾಲೆ ಅಧೀಕ್ಷಕ ಅಣ್ಣಪ್ಪ ಲ ಕೋಳಿ ಸೇರಿದಂತೆ ವಿವಿಧ ವಿಕಲಚೇತರ ಶ್ರೇಯೋಭುವೃದ್ಧಿ ಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದರು.
ಕೋವಿಡ್ ಲಸಿಕೆ ಕುರಿತು ಸಾರ್ವಜನಿಕ ಪ್ರಶ್ನೆ ಉತ್ತರಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಜಿಲ್ಲೆಯ ಸುಮಾರು 7 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು ಕೋವಿಡ್ ರೋಗಿಗಳ ಸಂಖ್ಯೆ ನೂರರ ಒಳಗಿದೆ. ಪ್ರತಿ ದಿನ ಮೂರು ಸಾವಿರ ಕೋವಿಡ್ ಪರೀಕ್ಷೆ ನೆಡೆಸಲಾಗುತ್ತಿದೆ. ಕೋವಿಡ್ ಸೊಂಕಿತರ ಪ್ರಮಾಣ ಇಳಿಕೆಯಾಗುತ್ತಿದೆ. ವಿದೇಶ ಗಳಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮಗಳನ್ನು ಆರಂಭಿಸಲಾಗಿದೆ. ಭಾರತದಲ್ಲಿ ಲಸಿಕೆಗಳ ಮೂರನೇ ಹಂತ ಪ್ರಯೋಗ ನಡೆಯುತ್ತಿದೆ. ಶೀಘ್ರವಾಗಿ ಲಸಿಕೆ ದೊರಕಬಹುದು.
ಧಾರವಾಡ ಜಿಲ್ಲೆಯಲ್ಲಿ 20 ಸಾವಿರ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುವುದು. ಎರಡನೇ ಹಂತದಲ್ಲಿ ಕೋವಿಡ್ ವಾರಿಯರ್ಸ್ ಗಳಾದ ಪೌರ ಕಾರ್ಮಿಕರು, ಪೊಲೀಸ್ ಸಿಬ್ಬಂದಿಗೆ ನೀಡಲಾಗುವುದು. ತದನಂತರ 50 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತದೆ. ಪಲ್ಸ್ ಪೊಲಿಯೋ ಲಸಿಕಾ ಅಭಿಯಾನದಂತೆ ಕೋವಿಡ್ ಲಸಿಕೆಯನ್ನು ನೀಡಲಾಗುವುದು. ಪ್ರಾಥಮಿಕ ಚಿಕಿತ್ಸೆ ಕೇಂದ್ರಗಳಿಂದ ಹಿಡಿದು, ತಾಲೂಕು ಹಾಗೂ ಜಿಲ್ಲಾ ಮಟ್ಟದ ಕೇಂದ್ರಗಳಲ್ಲಿ ಲಸಿಕೆ ಸಂಗ್ರಹಿಸಲಾಗುತ್ತಿದೆ.
ಚುನಾವಣೆ ಮಾದರಿಯ ಬೂತ್ ಗಳನ್ನು ನಿರ್ಮಿಸಿ, ಬೂತ್ ಒಂದರಲ್ಲಿ ದಿನ ಒಂದಕ್ಕೆ 100 ಜನರಿಗೆ ಲಸಿಕೆ ನೀಡಲಾಗುವುದು.
4 ವಾರಗಳ ಅಂತರದಲ್ಲಿ ಎರೆಡು ಬಾರಿ ಲಸಿಕೆ ತೆಗೆದುಕೊಳ್ಳಬೇಕು. ಲಸಿಕೆ ಪಡಿದವರನ್ನು ಅರ್ಧ ಗಂಟೆಗಳ ಕಾಲ ವೀಕ್ಷಣೆಯಲ್ಲಿ ಇಡಲಾಗುವುದು. ತುರ್ತು ಸಂದರ್ಭ ಎದುರಿಸಲು ಹತ್ತಿರದ ಆಸ್ಪತ್ರೆಗಳಲ್ಲಿ ಬೆಡ್ ಗಳನ್ನು ಕಾಯ್ದಿರಿಸಲಾಗುವುದು. ಕೋವಿಡ್ ಎರಡನೇ ಅಲೆ ಬಾರದಂತೆ ತಡೆಯುವುದು ಅವಶ್ಯವಾಗಿದೆ ಎಂದರು.