Tuesday, 7th January 2025

Ravi Sajangadde Column: ಬಾನಿನಲ್ಲೊಂದು ಉಪಗ್ರಹ ನಿರ್ವಹಣೆ ಅಂಗಡಿ !

ವಿಶ್ಲೇಷಣೆ

ರವೀ ಸಜಂಗದ್ದೆ

ಇಸ್ರೋ ಎಂದೇ ಜನಜನಿತವಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ನಮ್ಮ ದೇಶದ ಹೆಮ್ಮೆಯ ಅಸ್ತಿತ್ವಗಳಲ್ಲೊಂದು. ಭಾರತ ಸರಕಾರದ ಅಧೀನದಲ್ಲಿರುವ ಬಾಹ್ಯಾಕಾಶ ಇಲಾಖೆಯ ಪ್ರಧಾನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗವಾಗಿ ಕಾರ್ಯನಿರ್ವಹಿಸುವ ‘ಇಸ್ರೋ’ ತನ್ನ ವಿಭಿನ್ನ ಚಟುವಟಿಕೆ ಗಳಿಂದಾಗಿ ಎಲ್ಲರ ಮನವನ್ನು ಗೆದ್ದಿದೆ.

ಬಾಹ್ಯಾಕಾಶ ಆಧರಿತ ಕಾರ್ಯಯೋಜನೆಗಳು, ಸಂಶೋಧನೆ ಮತ್ತು ಪರಿಶೋಧನೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಾಹ್ಯಾಕಾಶ ವಿಭಾಗದಲ್ಲಿ ಪರಸ್ಪರ ಸಹಾಯ-ಸಹಕಾರ-ತಂತ್ರಜ್ಞಾನ ಅಭಿವೃದ್ಧಿಗಳಲ್ಲಿ ಇಸ್ರೋ ಸಕ್ರಿಯವಾಗಿದ್ದು ಕೊಂಡು ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅಗ್ರಮಾನ್ಯವೆನಿಸಿಕೊಂಡಿದೆ. ವಿವಿಧ ಉದ್ದೇಶಗಳಿಗಾಗಿ ಉಡಾವಣೆಗೊಂಡ ಉಪಗ್ರಹಗಳ ನಿಯಂತ್ರಣ, ನಿರ್ವಹಣೆ, ಸಂವಹನ, ಮಾಹಿತಿ ಸಂಗ್ರಹಣೆ ಮತ್ತು ವಿಶ್ಲೇಷಣೆ ಯಲ್ಲಿ ಇಸ್ರೋ ತೊಡಗಿಸಿಕೊಂಡಿದೆ. 1962ರಲ್ಲಿ ‘ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಮಿತಿ’ ಹೆಸರಲ್ಲಿ ಸ್ಥಾಪನೆ ಯಾದ ಈ ಸಂಸ್ಥೆ 1969ರಲ್ಲಿ ‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ’ (ಇಸ್ರೋ) ಎಂದು ಮರುನಾಮ ಕರಣಗೊಂಡಿತು.

ಖಗೋಳಶಾಸ್ತ್ರ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದ ಇತರ ಹಲವು ಸಹ-ಸಂಸ್ಥೆಗಳು ಇಸ್ರೋ ವ್ಯಾಪ್ತಿಗೆ ಒಳಪಟ್ಟಿವೆ. ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಇಸ್ರೋ ಮಾಡುತ್ತ ಬಂದಿರುವ ಸಾಧನೆ, ದೇಶದ ಸರ್ವತೋಮುಖ ಅಭಿವೃದ್ಧಿಗೆ ನೀಡಿದ ಮತ್ತು ನೀಡುತ್ತಿರುವ ಕೊಡುಗೆ ಅಪಾರ. 1975ರಲ್ಲಿ ಆರ್ಯಭಟ, 1979ರಲ್ಲಿ ಭಾಸ್ಕರ-1, 1980ರಲ್ಲಿ ರೋಹಿಣಿ, 1982ರಿಂದ ತೊಡಗಿ ‘ಇನ್ಸಾಟ್’ ಸರಣಿಯ ಹಲವು ಯಶಸ್ವಿ ಉಪಗ್ರಹಗಳ ಮತ್ತು 1993 ರಿಂದ ಹಲವು ಪಿಎಸ್ ಎಲ್‌ವಿ ರಾಕೆಟ್ಟುಗಳ ಯಶಸ್ವಿ ಉಡಾವಣೆಯ ಮೂಲಕ, 2004ರಲ್ಲಿ ‘ಎಡ್ಯುಸ್ಯಾಟ್’ ಉಪಗ್ರಹದ ಉಡಾವಣೆಯೊಂದಿಗೆ ಇಸ್ರೋ ತನ್ನ ಸಾಮರ್ಥ್ಯವನ್ನು ಜಗತ್ತಿಗೇ ಸಾರಿದೆ.

೨೦೧೩ರಲ್ಲಿ ಮಹತ್ವಾಕಾಂಕ್ಷೆಯ ಮಂಗಳ ಕಕ್ಷಾ ಯಾನದ ನೌಕೆಯನ್ನು ಶ್ರೀಹರಿಕೋಟಾದಿಂದ ಯಶಸ್ವಿ
ಯಾಗಿ ಅಂತರಿಕ್ಷಕ್ಕೆ ಕಳುಹಿಸಿದ ಇಸ್ರೋ, ‘ಚಂದ್ರ ಯಾನ-3’ ಯೋಜನೆಯ ಮೂಲಕ ಚಂದ್ರನ ದಕ್ಷಿಣದ ಅಂಗಳದಲ್ಲಿಳಿದ ಪ್ರಪಂಚದ ಮೊಟ್ಟಮೊದಲ ದೇಶ ಎಂಬ ಹೆಗ್ಗಳಿಕೆಯು ಭಾರತಕ್ಕೆ ದಕ್ಕುವುದಕ್ಕೆ ಕಾರಣ
ವಾಯಿತು. ನಂತರದಲ್ಲಿ, ಸೂರ್ಯನ ಕುರಿತಾದ ಅಧ್ಯಯನದ ಉದ್ದೇಶದಿಂದ ‘ಆದಿತ್ಯ ಎಲ್-1’ ನೌಕೆಯನ್ನು
ಅದು ಉಡಾವಣೆ ಮಾಡಿತು. ಇವಿಷ್ಟು ಮಹತ್ತರ ಯೋಜನೆಗಳ ನಂತರ ಇಸ್ರೋ ಈಗ ಸ್ಥಾಪಿಸಿರುವ
ಮತ್ತೊಂದು ಮೈಲುಗಲ್ಲಿನ ವಿವರಗಳನ್ನು ಅವಲೋಕಿಸೋಣ.

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ಸೇರಿದಂತೆ ವಿವಿಧ ರಾಷ್ಟ್ರಗಳು ಸೇರಿಕೊಂಡು ನಿರ್ಮಿಸಿ ರುವ ‘ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ’ (ಇಂಟರ್ ನ್ಯಾಷನಲ್ ಸ್ಪೇಸ್ ಸ್ಟೇಷನ್- ಐಎಸ್‌ಎಸ್) ಮಾದರಿ ಯಲ್ಲಿ ‘ಭಾರತೀಯ ಬಾಹ್ಯಾಕಾಶ ನಿಲ್ದಾಣ’ದ ನಿರ್ಮಾಣಕ್ಕೆ ಇಸ್ರೋ ಮುಂದಾಗಿದ್ದು ಕಾರ್ಯಯೋಜನೆ ಪ್ರಗತಿ ಯಲ್ಲಿದೆ. ‘ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್’ ಯಾನೆ ‘ಸ್ಪಾಡೆಕ್ಸ್’ ಹೆಸರಿನ ಯೋಜನೆಯಿದು. ಸ್ಪಾಡೆಕ್ಸ್ ನಿರ್ಮಾಣ ಕ್ಷೇತ್ರದಲ್ಲಿ ಅಮೆರಿಕ, ರಷ್ಯಾ ಮತ್ತು ಚೀನಾ ಮಾತ್ರ ಇದ್ದು, ಭಾರತವು ಇಂಥ ಸಾಧನೆ ಮಾಡಿದ ನಾಲ್ಕನೆಯ ರಾಷ್ಟ್ರವೆನಿಸಿದೆ.

ಭಾರತದ ಈ ‘ಸ್ಪಾಡೆಕ್ಸ್’ ಯೋಜನೆಯಲ್ಲಿ ತಲಾ 220 ಕೆ.ಜಿ. ತೂಕದ ‘ಚೇಸರ್’ (ಎಸ್‌ಡಿಎಕ್ಸ್-01) ಮತ್ತು ‘ಟಾರ್ಗೆಟ್’ (ಎಸ್‌ಡಿಎಕ್ಸ್-02) ಎಂಬ ಎರಡು ಗಗನನೌಕೆಗಳಿವೆ. ಈ ನೌಕೆಗಳನ್ನು ‘ಪಿಎಸ್‌ಎಲ್‌ವಿ- ಸಿ 60’ ಹೆಸರಿನ ಬಲು ಶಕ್ತಿಶಾಲಿ ರಾಕೆಟ್ ಹೊತ್ತೊಯ್ದು, ಬಳಿಕ ಭೂಮಿಯಿಂದ 470 ಕಿ.ಮೀ. ದೂರದಲ್ಲಿನ ವೃತ್ತಾಕಾರದ ಕಕ್ಷೆಗೆ ಪ್ರತ್ಯೇಕ ವಾಗಿರುವ 55 ಡಿಗ್ರಿಯ ಕಕ್ಷೆಯಲ್ಲಿ ಯಶಸ್ವಿಯಾಗಿ ಬಿಡುವುದು ಈ ಯೋಜನೆಯ ಹೂರಣ. ಇದು ‘ಭಾರತೀಯ ಬಾಹ್ಯಾಕಾಶ ನಿಲ್ದಾಣ’ದ ನಿರ್ಮಾಣ ಯೋಜನೆಯ ಮೊದಲ-ಮಹತ್ವದ ಹೆಜ್ಜೆ. ಅಂತರಿಕ್ಷ ನಿಲ್ದಾಣಕ್ಕೆ ಅಗತ್ಯವಾದ ಉಪಕರಣಗಳನ್ನು ಈ ಗಗನನೌಕೆಗಳು, ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಡಿಸೆಂಬರ್ 30ರಂದು, ಭಾರತೀಯ ಕಾಲಮಾನ ರಾತ್ರಿ 9.58ಕ್ಕೆ ಹೊತ್ತು ಸಾಗಿದವು.

ಸ್ಪಾಡೆಕ್ಸ್ ಯೋಜನೆಯಲ್ಲಿ, ಭಾರತದ ಸ್ವಂತ ಮತ್ತು ಸ್ವತಂತ್ರ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಿ, ವಿವಿಧ ಉಪಗ್ರಹಗಳ ಜತೆ ಸಂಪರ್ಕ ಸಾಽಸುವ ಮಹದೋದ್ದೇಶ ಇಸ್ರೋ ಸಂಸ್ಥೆಯದ್ದು. ಆ ನಿಟ್ಟಿನಲ್ಲಿ ಈ ಮೊದಲ ಯಶಸ್ವಿ ಉಡ್ಡಯನ ಪ್ರಮುಖ ಪ್ರಗತಿ ಸಾಧಿಸಿದೆ.

‘ಡಾಕಿಂಗ್’ ಎಂದರೆ ತಂಗುದಾಣ ಅಥವಾ ನಿಲ್ಲುವ ಜಾಗ ಎಂದರ್ಥ. ಉಡಾವಣೆಯಾದ ಐದನೆಯ ದಿನದಿಂದ
ಎರಡೂ ಗಗನನೌಕೆಗಳನ್ನು ಹತ್ತಿರಕ್ಕೆ ತರಲಾಗುತ್ತದೆ. ಅವುಗಳ ಸ್ಥಿತಿಗತಿ ಅವಲೋಕಿಸಿ ನಿಗದಿತ ದಿನದಂದು ಡಾಕಿಂಗ್ ಮಾಡಲಾಗುತ್ತದೆ. ತಮ್ಮ ನಡುವಿನ ಅಂತರ ಕಡಿಮೆಯಾಗಿ, ಗಂಟೆಗೆ 28000 ಕಿ.ಮೀ. ವೇಗದಲ್ಲಿ ಚಲಿಸುವ ಈ ಎರಡು ಉಪಗ್ರಹಗಳು ಪರಸ್ಪರ ಸಂವಹನ ನಡೆಸಿ, ಸಮನ್ವಯದಿಂದ ಕಾರ್ಯನಿರ್ವಹಿಸಲಿವೆ. ಇವುಗಳ ನಡುವಿನ ಅಂತರವು ಹಂತಹಂತವಾಗಿ 5 ಕಿ.ಮೀ.ಗಿಂತ ಕಡಿಮೆಯಾಗುವ ಹಂತದ ಹೆಸರು ‘ಹೋಲ್ಡಿಂಗ್ ಪಾಯಿಂಟ್’. ಕ್ರಮೇಣ ಹತ್ತಿರ ಬಂದು, ಒಂದು ಉಪಗ್ರಹದ ಯಾಂತ್ರಿಕ ತೋಳುಗಳು ಎರಡನೆಯ ಉಪಗ್ರಹವನ್ನು ಆವರಿಸಿ, ಅವುಗಳ ಬಂಧ ಬಿಗಿಯಾಗುತ್ತದೆ. ಅಲ್ಲಿಗೆ ಡಾಕಿಂಗ್ ಪ್ರಕ್ರಿಯೆ ಸಂಪನ್ನ!

ಈ ಹಂತದಲ್ಲಿ ಎರಡೂ ಉಪಗ್ರಹಗಳು ಒಂದೇ ವ್ಯವಸ್ಥೆಯಡಿ ಬಂದು, ಎರಡರದ್ದೂ ನಿಯಂತ್ರಣವನ್ನು ಒಂದೇ ಉಪಗ್ರಹ ಮಾಡುತ್ತದೆ. ಹೀಗೆ, ಎರಡು ಪ್ರತ್ಯೇಕ ಬಾಹ್ಯಾಕಾಶ ನೌಕೆಗಳನ್ನು ಅಂತರಿಕ್ಷದಲ್ಲಿ ಜೋಡಿಸುವ ಪ್ರಕ್ರಿಯೆಗೆ ‘ಡಾಕಿಂಗ್’ ಎಂದೂ, ಜೋಡಿಸಿರುವ ನೌಕೆಗಳನ್ನು ಬೇರ್ಪಡಿಸುವ ಪ್ರಕ್ರಿಯೆಗೆ ‘ಅನ್‌ಡಾಕಿಂಗ್’ ಎಂದೂ ಕರೆಯ ಲಾಗುತ್ತದೆ. ಇದು ತಾಂತ್ರಿಕವಾಗಿ ತುಂಬಾ ಸವಾಲಿನ ಕೆಲಸ. ಮಾನವನ ಸೀಮಿತ ಹಸ್ತಕ್ಷೇಪದಿಂದ ಇದನ್ನು ನಿಯಂತ್ರಿಸಿ, ನಿರ್ವಹಿಸಬೇಕು. ಡಾಕಿಂಗ್ ಯೋಜನೆಯಲ್ಲಿ, ಸಾವಿರಾರು ಕಿ.ಮೀ. ವೇಗದಲ್ಲಿ ಓಡುತ್ತಿರುವ ಎರಡು ಅಂತರಿಕ್ಷ ನೌಕೆಗಳ ವೇಗವನ್ನು ವಿಶ್ಲೇಷಿಸಿ ನಿಯಂತ್ರಣಕ್ಕೆ ತರಲಾಗುತ್ತದೆ.

ಎರಡೂ ನೌಕೆಗಳು ಪರಸ್ಪರ ಸಮೀಪಿಸಿದಾಗ, ಸರಾಗ ಸಂವಹನ ಮತ್ತು ನಿರ್ದೇಶನಗಳ ಮೂಲಕ ಎರಡನ್ನೂ ಜೋಡಿಸಬೇಕು. ಒಂದಿಷ್ಟು ವ್ಯತ್ಯಾಸವಾದರೂ ಪರಸ್ಪರ ಡಿಕ್ಕಿಯಾಗಿ ಎರಡೂ ನೌಕೆಗಳು ನಾಶವಾಗುವ ಸಾಧ್ಯತೆ ಹೆಚ್ಚು. ಇಂಥ ಕೆಲಸವನ್ನು ಸುಸೂತ್ರವಾಗಿ ಮಾಡಲು ಆಗಸದಲ್ಲಿ ಇರಬೇಕಾದ ವ್ಯವಸ್ಥೆಯೇ ‘ಬಾಹ್ಯಾಕಾಶ ನಿಲ್ದಾಣ’. ಭಾರತವು ಇಂಥ ನಿಲ್ದಾಣವೊಂದನ್ನು ಸ್ಥಾಪಿಸಿ, ಅದರ ಮಾಲೀಕತ್ವ ಹೊಂದುವತ್ತ ಸಾಗುತ್ತಿದೆ.
ಬಾಹ್ಯಾಕಾಶ ನಿಲ್ದಾಣದಂಥ ದೊಡ್ಡ ರಚನೆಗಳಿಗೆ ಅಗತ್ಯವಿರುವ ವಿವಿಧ ಆಕಾರ ಮತ್ತು ಗಾತ್ರದ ಪರಿಕರಗಳನ್ನು ಒಂದೇ ಉಪಗ್ರಹದಲ್ಲಿ ಸಾಗಿಸುವುದು ಕಷ್ಟ, ಅನೇಕ ರಾಕೆಟ್‌ಗಳ ಮೂಲಕ ಕಕ್ಷೆಗೆ ಸಂಯೋಜಿಸಬೇಕು. ಹಾಗಾದಾಗ ಮಾತ್ರವೇ ಬಾಹ್ಯಾಕಾಶ ನಿಲ್ದಾಣದ ನಿರ್ಮಾಣ ಕೈಗೂಡುತ್ತದೆ.

‘ಸ್ಪಾಡೆಕ್ಸ್’ ಯೋಜನೆ ಈ ದಿಕ್ಕಿನಲ್ಲಿ ಭಾರತದ ಮೊದಲ ಹೆಜ್ಜೆ. ವಿವಿಧ ಅಂತರಿಕ್ಷ ನೌಕೆಗಳ ಮೂಲಕ ಗಗನಯಾತ್ರಿ ಗಳು ಮತ್ತು ಸರಕುಗಳನ್ನು ಸಾಗಿಸಲು ಡಾಕಿಂಗ್ ತಂತ್ರಜ್ಞಾನವು ಸಹಕರಿಸುತ್ತದೆ. ಇದು ‘ಗಗನಯಾನ’ ಹೆಸರಿನ ಭಾರತದ ಮಾನವಸಹಿತ ಗಗನಯಾತ್ರೆಯ ಯೋಜನೆಗೆ ಸಹಕಾರಿಯಾಗಲಿದೆ. ಚಂದ್ರನ ಮೇಲ್ಮೈಯಿಂದ ಮಣ್ಣು, ಅದಿರು ಮತ್ತು ಇತರ ಮಾದರಿಗಳನ್ನು ಭೂಮಿಗೆ ತರಲು ‘ಚಂದ್ರಯಾನ-4’ ಯೋಜನೆಯನ್ನು ಇಸ್ರೋ ಹಾಕಿ ಕೊಂಡಿದ್ದು, ಈ ಉದ್ದೇಶಕ್ಕಾಗಿ ಎರಡು ರಾಕೆಟ್‌ಗಳ ಉಡಾವಣೆ ಮಾಡಲಾಗುತ್ತದೆ.

ಹೊಸದಾಗಿ ನಿರ್ಮಾಣವಾಗಲಿರುವ ‘ಭಾರತೀಯ ಬಾಹ್ಯಾಕಾಶ ನಿಲ್ದಾಣ’ದ ಸಹಕಾರದಿಂದ ಇವುಗಳನ್ನು
ಹಂತಹಂತವಾಗಿ ಭೂಮಿ ಮತ್ತು ಚಂದ್ರನ ಕಕ್ಷೆಗೆ ಡಾಕಿಂಗ್ ಮಾಡಲಾಗುತ್ತದೆ. ಉಡಾವಣೆಗೊಂಡು ಈಗಾಗಲೇ
ಕಕ್ಷೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪಗ್ರಹಗಳ ದುರಸ್ತಿ, ಇಂಧನ ಸರಬರಾಜು ಮತ್ತು ಆಧುನೀಕರಣವೂ ಈ
ನಿಲ್ದಾಣದ ಮೂಲಕ ನೆರವೇರಲಿದೆ. ತನ್ಮೂಲಕ, ಈಗಿರುವ ಉಪಗ್ರಹಗಳ ಜೀವಿತಾವಽಯೂ ಹೆಚ್ಚಾಗಲಿದೆ. ಒಟ್ಟಿನಲ್ಲಿ ಈ ನಿಲ್ದಾಣವು ಉಪಗ್ರಹಗಳ ಸರ್ವೀಸ್ ಸೆಂಟರ್, ಇಂಧನ ಪೂರೈಕೆ ಮತ್ತು ದುರಸ್ತಿ/ನಿರ್ವಹಣೆಯ ಅಂಗಡಿಯಾಗಿ ಅಂತರಿಕ್ಷದಲ್ಲಿ ಕಾರ್ಯನಿರ್ವಹಿಸಲಿದೆ. ಎಂಥ ಅದ್ಭುತ ಯೋಚನೆ-ಯೋಜನೆ!

ಇದನ್ನೂ ಓದಿ: Ravi Sajangadde Column: ಸಿರಿಯಾ ಸಂಕಷ್ಟ ಇನ್ನಾದರೂ ಕೊನೆಯಾಗಲಿ