Tuesday, 7th January 2025

Shashidhara Halady Column: ರೋಚಕತೆಯನ್ನೇ ಬಯಸುವ ಹೊಸ ದಿನಮಾನ !

ಶಶಾಂಕಣ

ಶಶಿಧರ ಹಾಲಾಡಿ

ಭಾರತದಲ್ಲಿ ಮತ್ತೊಮ್ಮೆ ಕ್ರಿಕೆಟ್ ಜ್ವರ ಹರಡುತ್ತಿದೆ. ಆದರೆ, ಅದೇಕೋ ನಮ್ಮ ತಂಡದ ಕೆಲವು ಪ್ರಮುಖ ಆಟಗಾರರು ನೀರಸ ಪ್ರದರ್ಶನ ನೀಡಿದ್ದರಿಂದ, ಈ ಕ್ರಿಕೆಟ್ ಜ್ವರದ ತಾಪವು ಏರಲಿಲ್ಲ; ಟೆಸ್ಟ್ ಕ್ರಿಕೆಟ್ ಆಗಿದ್ದರೂ ರೋಚಕವಾಗಿ ಆಟವಾಡುವ ಪದ್ಧತಿ ಇಂದು ಸಾಮಾನ್ಯ ಎನಿಸಿದೆ! ಆದರೆ, ಈ ಸರಣಿಯಲ್ಲಿ ಅಷ್ಟೊಂದು ರೋಚಕತೆ ಮೂಡಿಬಂದಿಲ್ಲ, ನಮ್ಮವರು ಸೋಲಿನ ಸುಳಿಯಲ್ಲೇ ಇದ್ದಾರೆ.

ಹಳೆ ಆಟಗಾರರು ಇನ್ನಾದರೂ ಒಂದಷ್ಟು ರನ್ ಚಚ್ಚಲಿ ಎಂದು ವೀಕ್ಷಕರು ಆಸೆಪಡುತ್ತಿದ್ದಾರೆ, ಆ ಮೂಲಕ ರೋಚಕ ಅನುಭವಕ್ಕಾಗಿ ಕಾಯುತ್ತಿದ್ದಾರೆ. ಕ್ರಿಕೆಟ್ ಆಟವು ನಮ್ಮಲ್ಲಿ ಸಾರ್ವತ್ರಿಕವಾಗಿ, ಅದನ್ನು ನೋಡುತ್ತಾ ಜನರು ಕಾಲಹರಣ ಮಾಡುತ್ತಿರುವುದರಿಂದಾಗಿ, ಇತರ ಕ್ರೀಡೆಗಳು ಸೊರಗಿಹೋಗಿವೆ ಎಂದು ಹಲವರು ಹಳಹಳಿಸುವುದುಂಟು, ಗೊಣಗುವುದೂ ಉಂಟು. ಆ ಗೊಣಗುವಿಕೆಯಲ್ಲಿ ಸತ್ಯವೂ ಇರಬಹುದು ಅಥವಾ ಕೇವಲ ಹತಾಶೆಯೂ ಇರಬಹುದು.

ಆದರೆ, ಕ್ರಿಕೆಟ್‌ನಷ್ಟು ಜನಪ್ರಿಯತೆ ಬೇರಾವ ಆಟಕ್ಕೂ ನಮ್ಮಲ್ಲಿ ಒದಗಿಬರಲಿಲ್ಲ ಎಂಬುದು ಐತಿಹಾಸಿಕ ಸತ್ಯ!

ಫುಟ್‌ಬಾಲ್, ಹಾಕಿ ಅಲ್ಲಲ್ಲಿ ಬದುಕಿವೆ. ಆದರೆ ಬೇರೆ ಆಟಗಳಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ತೀರಾ ಕಡಿಮೆ. ಉದಾಹರಣೆಗೆ, ಚೆಸ್ ಆಟದಲ್ಲಿ ವಿಶ್ವನಾಥನ್ ಆನಂದ್ ಮತ್ತು ಗುಕೇಶ್ ಡಿ. ಅವರು ವಿಶ್ವ ಚಾಂಪಿಯನ್ ಆಗಿ
ಹೊರಹೊಮ್ಮಿದರೂ, ಆ ಆಟವು ಪಡೆಯಬೇಕಾದಷ್ಟು ಜನಪ್ರಿಯತೆಯನ್ನು ಇನ್ನೂ ಪಡೆದಿಲ್ಲವೆಂದೇ ಹೇಳ ಬಹುದು.

ಕ್ರಿಕೆಟ್ ಆಡುವುದು ಎಂದರೆ ಆರಾಮಾಗಿ ಕಾಲ ಕಳೆಯುವುದು, ಈ ಆಟದಿಂದ ನಮಗೆ ದೈಹಿಕ ವ್ಯಾಯಾಮ
ಸಿಗುವುದಿಲ್ಲ ಎಂದು ವ್ಯಂಗ್ಯವಾಡುವ ಕಾಲವೊಂದಿತ್ತು. ನಮ್ಮ ದೇಶಕ್ಕೆ ಕ್ರಿಕೆಟ್ ಬಂದದ್ದು ವಸಾಹತುಶಾಹಿ ಆಡಳಿತದ ಮೂಲಕ ಎಂಬ ಮತ್ತೊಂದು ಟೀಕೆಯೂ ಇದೆ. ಬ್ರಿಟಿಷರು ಯಾವ ಯಾವ ದೇಶಗಳನ್ನು ಆಳಲು ಆರಂಭಿಸಿದರೋ, ಅಲ್ಲೆಲ್ಲಾ ಕ್ರಿಕೆಟ್ ಜ್ವರವನ್ನು ಹಬ್ಬಿಸಿದರು ಎಂಬ ಮಾತೂ ಇದೆ. ಆದರೆ ಈಗ ಅವರದೇ ಆಟದಲ್ಲಿ ಅವರ ಮಾಜಿ ವಸಾಹತುಗಳು ಅವರನ್ನು ಸೋಲಿಸುತ್ತಿರುವುದು ಒಂದು ವಾಸ್ತವ. ಆದರೆ ಏಕದಿನ
ಪಂದ್ಯ ಮತ್ತು ೨೦ ಓವರುಗಳ ಆಟ ರೂಪುಗೊಂಡ ನಂತರ, ಕ್ರಿಕೆಟ್ ಕುರಿತು ಹಳಹಳಿಕೆ ಕಡಿಮೆಯಾಯಿತು.

20 ಓವರ್‌ಗಳ ಆಟ ಜನಪ್ರಿಯತೆಯ ತುತ್ತತುದಿಗೆ ಏರಿದ ಮೇಲೆ, ಕ್ರಿಕೆಟ್ ಆಟದ ಸ್ವರೂಪವೇ ಬದಲಾಯಿತು; ಪ್ರತಿ ಪಂದ್ಯದಲ್ಲೂ ರೋಚಕತೆ ತುಂಬಿ ಬಂತು! ಐದು ದಿನದ ಮ್ಯಾಚ್ ಇರಲಿ, ಒಂದು ದಿನದ ಮ್ಯಾಚ್ ಇರಲಿ, ಅಥವಾ 20 ಓವರ್ ಮ್ಯಾಚ್ ಇರಲಿ, ನಮ್ಮ ದೇಶದಲ್ಲಿ ಕ್ರಿಕೆಟ್‌ನ ಜನಪ್ರಿಯತೆಯ ಖದರ್ ಬೇರೆಯದೇ ಮಜಲಿನದು. ಬೀದಿಗಳಲ್ಲಿ, ಗಲ್ಲಿಗಳಲ್ಲಿ, ಮನೆಯ ಒಳಗೆ, ಅಂಗಳದಲ್ಲಿ, ಗದ್ದೆಯಲ್ಲಿ ತೋಟದಲ್ಲಿ ಹೀಗೆ ಎಂದರಲ್ಲಿ ಕ್ರಿಕೆಟ್
ಆಡುವ ದೇಶ ನಮ್ಮದು. ಬ್ಯಾಟ್ ಸಿಗದಿದ್ದರೆ ತೆಂಗಿನ ಹೆಡೆಮಟ್ಟೆಯೇ ಬ್ಯಾಟ್.

ವಿಕೆಟ್‌ಗಳು ಇಲ್ಲದಿದ್ದರೆ ಒಲೆಗೆ ಹಾಕುವ ಸೌದೆಯೇ ವಿಕೆಟ್. ಬಾಲ್ ಇಲ್ಲದಿದ್ದರೆ ಬಟ್ಟೆಯ ಉಂಡೆಯೇ ಬಾಲ್! ಬೆಳಗ್ಗೆ ಕ್ರಿಕೆಟ್ ಆಡಿ, ಹಗಲಿಡೀ ಪಾಠ ಕೇಳಿ, ಸಂಜೆ ಪುನಃ ಕ್ರಿಕೆಟ್ ಆಡುತ್ತಿದ್ದ ಮಕ್ಕಳು ಅದೆಷ್ಟೋ!

ನಮ್ಮ ಬಾಲ್ಯದ ಕ್ರಿಕೆಟ್ ಹುಚ್ಚನ್ನು ನೆನಪಿಸಿಕೊಂಡರೆ, ಈಗಿನ ಮಕ್ಕಳು ಕ್ರಿಕೆಟ್ ಬಗ್ಗೆ ಅಷ್ಟೊಂದು ಆಸಕ್ತಿಯನ್ನು ತೋರುತ್ತಿಲ್ಲವೇನೋ ಎಂದು ನನ್ನ ಅನಿಸಿಕೆ. ನಮ್ಮ ಓರಗೆಯ ಹುಡುಗರಿಗೆ ಹೋಲಿಸಿದರೆ, ನಾನು ಕ್ರಿಕೆಟ್ ನೋಡಲು ಆರಂಭಿಸಿದ್ದು ತುಸು ತಡವಾಗಿ. ಹಾಲಾಡಿಯ ಸರಕಾರಿ ಶಾಲೆಯಲ್ಲಿ 7ನೇ ತರಗತಿಯಲ್ಲಿದ್ದಾಗ ಒಂದು ದಿನ ನಮ್ಮ ಸಹಪಾಠಿಗಳು ಕ್ರಿಕೆಟ್ ಆಡೋಣ ಎಂದು ಹೇಳಿದಾಗ ನಾನೂ ಸೇರಿಕೊಂಡೆ. ಟೆನ್ನಿಸ್ ಬಾಲ್, ಮರದ ಬ್ಯಾಟ್; ಆದರೆ ನಮಗ್ಯಾರಿಗೂ ಸರಿಯಾದ ಬೌಲಿಂಗ್ ಗೊತ್ತಿರಲಿಲ್ಲ; ನಾನು ಮೊದಲ ಆಟ ಆಡಿದ್ದು ಅಂಡರ್‌ ಹ್ಯಾಂಡ್ ಬೌಲಿಂಗ್‌ನಲ್ಲಿ!

ಅದರಲ್ಲಿ ನಾನು ಯಾವ ರೀತಿ ಕ್ರಿಕೆಟ್ ಕಲಿತೆ ಎಂದು ಈಗ ಸರಿಯಾಗಿ ನೆನಪಿಲ್ಲ. ಆದರೆ 8ನೇ ಕ್ಲಾಸ್ ಓದಲು ಶಂಕರನಾರಾಯಣ ಹೈಸ್ಕೂಲಿಗೆ ಹೋದಾಗ ನನ್ನ ಕ್ರಿಕೆಟ್ ‘ಪ್ರತಿಭೆ’ ಅರಳಿತು! 8ನೇ ತರಗತಿಗೆ ಸೇರಿದಾಗ ನಾನೂ ಕ್ರಿಕೆಟ್ ಆಡುತ್ತೇನೆಂದು ಸಹಪಾಠಿಗಳ ಜತೆ ಸೇರಿಕೊಂಡು, ಮೊದಲ ಓವರ್ ಬೌಲ್ ಮಾಡಲು ಹೊರಟಾಗ, ಎಲ್ಲರೂ
‘ಘೊಳ್’ ಎಂದು ನಕ್ಕರು. “ಏ, ನಿನ್ನ ಅಂಡರ್ ಹ್ಯಾಂಡ್ ಬೌಲಿಂಗ್ ಇಲ್ಲಿ ನಡೆಯುವುದಿಲ್ಲ” ಎಂದು ಕಪ್ತಾನನು ನನ್ನ ಕೈಯಿಂದ ಬಾಲ್ ಕಿತ್ತುಕೊಂಡ.

ಹಾಲಾಡಿ ಶಾಲೆಯಲ್ಲಿ ನಾನು ಕಲಿತದ್ದುಅಂಡರ್‌ಹ್ಯಾಂಡ್ ಬೌಲಿಂಗ್. ಅದನ್ನು ಹೊರತುಪಡಿಸಿ, ಓವರ್‌ಹ್ಯಾಂಡ್ ಬೌಲಿಂಗ್ (ಅಂದರೆ ಈಗ ನಾವೆಲ್ಲ ಟಿವಿಯಲ್ಲಿ ನೋಡುವ ಬೌಲಿಂಗ್) ಇತ್ತು ಎಂದೇ ನನಗೆ ಗೊತ್ತಿರಲಿಲ್ಲ! ಆಗ
ಟಿವಿ ನಮ್ಮ ದೇಶಕ್ಕಿನ್ನೂ ಬಂದಿರಲಿಲ್ಲವಲ್ಲ! ಬೌಲಿಂಗ್ ಗೊತ್ತಿಲ್ಲದಿದ್ದರೇನು, ಬ್ಯಾಟಿಂಗ್‌ನಲ್ಲಿ ನನ್ನ ಕೌಶಲ ತೋರಿಸಿದಾಗ, ಹೈಸ್ಕೂಲಿನ ಹುಡುಗರೆಲ್ಲ ಬೆರಗಾದರು. ೧೦ನೇ ತರಗತಿಯ ಹುಡುಗರಿಗೆ ಸರಿಸಮನಾಗಿ, 8ನೇ ತರಗತಿ ಯಲ್ಲಿದ್ದ ನಾನು ಬ್ಯಾಟ್ ಬೀಸುತ್ತಿದ್ದೆ. ಅದೇ ಮೈದಾನದಲ್ಲಿ ಪಿಯುಸಿಯಲ್ಲಿರುವಾಗ ನಾನು ಉತ್ತಮ ಕ್ರಿಕೆಟ್
ಆಡಿದರೂ, ಬೌಲಿಂಗ್ ಕಲಿತಿರಲಿಲ್ಲ.

ಇಷ್ಟು ದಿನ ನಾವೆಲ್ಲ ಆಡುತ್ತಿದ್ದುದು ಟೆನಿಸ್ ಬಾಲ್ ಕ್ರಿಕೆಟ್. ಮುಂದೆ ಕಾಲೇಜಿಗೆ ಬಂದಾಗ, ಲೆದರ್ ಬಾಲ್
ಕ್ರಿಕೆಟ್ ನೋಡುವ ಅವಕಾಶವಾಯಿತು. ಕಾಲೇಜಿನ ತಂಡಕ್ಕೆ ಸೇರಲು ನಾನು ಆಸೆ ಪಟ್ಟರೂ, ಪ್ಯಾಡ್ ಕಟ್ಟಿ, ಸೆಂಟರ್ ಪ್ಯಾಡ್ ಸಿಕ್ಕಿಸಿಕೊಂಡು, ಗ್ಲೌಸ್ ಧರಿಸಿ ಆಡಲು ಅದೇಕೋ ಹಿಂಜರಿಕೆ. ಪಕ್ಕಾ ಹಳ್ಳಿಯಿಂದ ಬಂದ ನಾನು, ಅಲ್ಲಿನ ಪೇಟೆ ಹುಡುಗರ ಜತೆ ಬೆರೆತು ಆಡಲು ಹಿಂದೆ ಬಿದ್ದೆ! ನನ್ನ ದೇಹದ ಗಾತ್ರಕ್ಕೆ ಹೋಲಿಸಿದಾಗ ಕ್ರಿಕೆಟ್ ಪ್ಯಾಡುಗಳ ತೂಕವೇ ಅಧಿಕ,

ಬ್ಯಾಟ್ ಇನ್ನಷ್ಟು ತೂಕ. ಕುಂದಾಪುರ ಕಾಲೇಜಿನ ಕ್ರಿಕೆಟ್ ತಂಡ ಅಭ್ಯಾಸ ಮಾಡುತ್ತಿದ್ದಾಗ, ನಾನೂ ಸೇರಿ ಕೊಳ್ಳುತ್ತೇನೆಂದು ನಾಲ್ಕಾರು ದಿನ ಆಡಿದೆ. ಆ ನಂತರ ಸುಮ್ಮನಾದೆ. ಡಿಗ್ರಿ ಮುಗಿಸಿ ಒಂದು ವರ್ಷ ನಿರುದ್ಯೋಗಿ
ಯಾಗಿ ಮನೆಯಲ್ಲಿzಗ, ನಮ್ಮ ಹಳ್ಳಿಯಲ್ಲೇ ಕ್ರಿಕೆಟ್ ಆಡುವ ಅವಕಾಶ. ಹಾಡಿ, ಹಕ್ಕಲು, ಗುಡ್ಡ, ಗದ್ದೆಗಳ ನಡುವೆ ಇದ್ದ ನಮ್ಮ ಮನೆಯಿಂದ, ಗುಡ್ಡದ ದಾರಿಯಲ್ಲಿ 2 ಕಿ.ಮೀ. ನಡೆದರೆ ಬಸ್ ರಸ್ತೆ ಸಿಗುತ್ತದೆ. ಅದು ಹೈಕಾಡಿ ಎಂಬ ಸಣ್ಣ ಪೇಟೆ.

ನಮ್ಮ ಮನೆಯ ಸುತ್ತಲಿನ ಗೆಳೆಯರು ಮತ್ತು ಹೈಕಾಡಿ ಹುಡುಗರ ನಡುವೆ ಕ್ರಿಕೆಟ್ ಮ್ಯಾಚ್! ಈ ನಡುವೆ, ನಮ್ಮ ಮನೆ ಎದುರಿನ ಹಾಳುಮನೆ ಜಡ್ಡಿನ ಹತ್ತಿರ ಕಲ್ಲುಗಳನ್ನು ಎಸೆದು ಎಸೆದು, ಬಿರುಸಾಗಿ ಓವರ್ ಹ್ಯಾಂಡ್ ಬೌಲಿಂಗ್ ಅಭ್ಯಾಸ ಮಾಡಿದೆ. ಸಣ್ಣ ಸಣ್ಣ ಕಲ್ಲುಗಳನ್ನು ಪ್ರತಿದಿನ ಸಂಜೆ ಎಸೆಯುತ್ತಾ, ಬೌಲಿಂಗ್ ಕಲಿತೇಬಿಟ್ಟೆ!

‘ಕ್ರಿಕೆಟ್ ಆಡಲು ಮಳೆ ಕಾಟ ಮಾರಾಯರೇ. ವರ್ಷದಲ್ಲಿ ನಾಲ್ಕು ತಿಂಗಳು ಮಳೆ’ ಎಂದು ಟೀಕಿಸುತ್ತಾ, ಮಳೆ ಜಾಸ್ತಿ
ಬೀಳುವ ಪ್ರದೇಶದಲ್ಲಿ ಕ್ರಿಕೆಟ್ ಕಲಿಯುವುದು ಕಷ್ಟ ಎಂದು ನಾವು ಗೆಳೆಯರು ಗೊಣಗುತ್ತಿದ್ದೆವು. ಅದನ್ನು ಕೇಳಿಸಿ ಕೊಂಡನೋ ಏನೋ ಆ ದೇವರು, ನನ್ನನ್ನು ದೂರದ ಕಣಕಟ್ಟೆ ಎಂಬ ಹಳ್ಳಿಗೆ ವರ್ಗಾಯಿಸಿದ. ವರ್ಷದಲ್ಲಿ ಕೇವಲ ನಾಲ್ಕಾರು ದಿನ ಮಾತ್ರ ಮಳೆ ಬೀಳುವ, ಬಯಲುಸೀಮೆಯ ಹೃದಯಭಾಗ ದಲ್ಲಿದ್ದ ಕಣಕಟ್ಟೆಯಲ್ಲಿ ಕೆಲಸಕ್ಕೆ ಸೇರಿಕೊಂಡ ನಾನು, ಪ್ರತಿದಿನ ಸಂಜೆ ಕ್ರಿಕೆಟ್ ಆಡಲು ಹೋಗುತ್ತಿದ್ದೆ. ಆ ಊರಿನಲ್ಲಿ ಮಳೆಯೇ ಕಡಿಮೆ ಯಾದ್ದರಿಂದ ಅಲ್ಲಿ ವರ್ಷವಿಡೀ ಯಾವುದೇ ಹೊರಾಂಗಣ ಆಟ ಆಡಬಹುದಿತ್ತು! ಆ ಹಳ್ಳಿಯಲ್ಲಿ ಕೆಲವು ವರ್ಷ ಇದ್ದ ನಾನು, ಸ್ಥಳೀಯ ಹುಡುಗರ ಜತೆ ಸೇರಿ ಅದೆಷ್ಟು ಕ್ರಿಕೆಟ್ ಆಡಿದೆನೋ ಲೆಕ್ಕವಿಲ್ಲ.

‘ಕಾರ್ಕ್‌ಬಾಲ್’ ಕ್ರಿಕೆಟ್ ನಿಮಗೆ ಗೊತ್ತೇ? ಅದರ ಪರಿಚಯ ನನಗಾಗಿದ್ದು ಇಲ್ಲೇ! ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಗಳಲ್ಲಿ ಇಂದು ಬಳಕೆಯಲ್ಲಿರುವ ಲೆದರ್ ಬಾಲನ್ನು ಸುಮಾರಾಗಿ ಹೋಲುವ ಕಾರ್ಕ್‌ಬಾಲ್ ಉಪಯೋಗಿಸಿ, ಕ್ರಿಕೆಟ್ ಆಡುವ ಅಭ್ಯಾಸ ಆ ಪ್ರದೇಶದಲ್ಲಿತ್ತು. ಮೊದಲ ಬಾರಿ ಕಾರ್ಕ್‌ಬಾಲ್ ಎದುರಿಸಿ ಬ್ಯಾಟ್ ಬೀಸಿದಾಗ, ‘ಟಕ್’ ಎಂಬ ಶಬ್ದದೊಂದಿಗೆ ಬಾಲು ಬೌಂಡರಿ ಗೆರೆ ದಾಟಿದ್ದೇ ಗೊತ್ತಾಗಲಿಲ್ಲ! ಅಷ್ಟು ದೂರದಿಂದ ಓಡೋಡಿ ಬಂದು ಬಾಲ್ ಎಸೆದಾಗ, ಅದು ಚಲಿಸುವ ವೇಗ ಕಂಡೇ ಅಚ್ಚರಿ. ಟೆನ್ನಿಸ್ ಬಾಲ್‌ಗೆ ಹೋಲಿಸಿದರೆ, ಕಾರ್ಕ್‌ಬಾಲ್‌ ನಿಂದ ಬೌಂಡರಿ ಬಾರಿಸುವುದು ಸುಲಭ!

ಆದರೆ ಕೈಗೋ ಕಾಲಿಗೋ ಕಾರ್ಕ್‌ಬಾಲ್ ತಗುಲಿದರೆ, ‘ಅಯ್ಯಯ್ಯಪ್ಪೋ’ ಎನ್ನುವಷ್ಟು ನೋವು! ಶರವೇಗದಿಂದ ಬರುವ ಕಾರ್ಕ್‌ಬಾಲ್ ಬೌಲಿಂಗ್‌ಗೆ, ಲೆದರ್ ಬಾಲಿಗೆ ನೀಡುವಷ್ಟೇ ಗೌರವ ಕೊಡಬೇಕು. ಇಲ್ಲವಾದರೆ ಹಲ್ಲು ಮುರಿದುಕೊಳ್ಳುವುದು ಖಚಿತ. ನನ್ನ ಮುಖಕ್ಕೆ ಒಮ್ಮೆ ಆ ಬಾಲು ತಾಗಿ, ಮಂಗನ ಮೂತಿ ಆಗಿತ್ತು! ಮತ್ತೊಮ್ಮೆ ಗಲ್ಲಕ್ಕೆ ತಾಗಿ ಗಾಯ, ರಕ್ತದಾನ. ಕಾಲು, ಕೈಗಳಿಗೆ ತಾಗಿದ್ದೆಷ್ಟು ಬಾರಿಯೋ ಲೆಕ್ಕವೇ ಇಲ್ಲ. ಸೆಂಟರ್ ಪ್ಯಾಡ್ ಧರಿಸದೆ ಇzಗ, ಕಲ್ಲಿನ ರೀತಿಯ ಆ ಕಾಕ್ ಬಾಲ್ ಸ್ವಲ್ಪ ತಗುಲಿದರೂ ಪ್ರಾಣ ಹೋಗುವಂಥ ನೋವು. ತಲೆಗೆ ಬಾಲ್ ತಗುಲಿ ನಮ್ಮ ಜತೆಗಾರರು ಬಿದ್ದುಬಿಟ್ಟದ್ದುಂಟು. ಒಬ್ಬರ ಮುಂಗೈಗೆ ಬಾಲ್ ತಗುಲಿ ಫ್ಯಾಕ್ಚರ್ ಆಗಿತ್ತು!

ಆದರೂ ಕ್ರಿಕೆಟ್ ಹುಚ್ಚು ಹತ್ತಿದವರಿಗೆ, ಪ್ರತಿದಿನ ಸಂಜೆ ಆಟ ಆಡದೇ ಇರಲು ಅಸಾಧ್ಯ! ಆಗಾಗ ಅಕ್ಕಪಕ್ಕದ ಹಳ್ಳಿಯವರ ಜತೆ ‘ಫ್ರೆಂಡ್ಲಿ ಮ್ಯಾಚ್’. ಪಂಚನಹಳ್ಳಿ, ಜಾವಗಲ್, ಬಾಣಾವರ, ದೇವನೂರು, ಶ್ರೀರಾಂಪುರ, ದೊಡ್ಡ
ಮೇಟಿಕುರ್ಕೆ, ಕೆ.ಬಿದರೆ ಈ ರೀತಿ ಹಲವು ಹಳ್ಳಿಗಳೊಂದಿಗೆ ಕ್ರಿಕೆಟ್ ಆಡಿದ ನೆನಪು ಮಧುರ. ಕ್ರಮೇಣ ಕಾರ್ಕ್‌ಬಾಲ್ ಹೋಗಿ, ಅಲ್ಲೂ ಟೆನಿಸ್ ಬಾಲ್ ಕ್ರಿಕೆಟ್ ಆರಂಭವಾಯಿತು.

ಎರಡು ಇನ್ನಿಂಗ್ಸ್‌ನ ದಿನವಿಡೀ ನಡೆಯುವ ಆಟ ಮರೆಯಾಗಿ, ಹತ್ತು ಓವರ್ ಮ್ಯಾಚ್ ಆರಂಭವಾಯಿತು.
ಇಷ್ಟು ಹೊತ್ತಿಗೆ ಊರಿಗೆ ಕಲರ್ ಟಿವಿ ಬಂದಿತ್ತು, ಕ್ರಿಕೆಟ್‌ನ ಗಂಧ-ಗಾಳಿ ಗೊತ್ತಿಲ್ಲದೇ ಇದ್ದವರು ಮನೆಯಲ್ಲಿ ಕುಳಿತು ಮ್ಯಾಚ್ ನೋಡಿ, ಆ ಆಟದ ನಿಯಮಗಳನ್ನು, ಪಟ್ಟುಗಳನ್ನು ಕಲಿತರು. ಎಷ್ಟರಮಟ್ಟಿಗೆ ಎಂದರೆ, ಜೀವಮಾನ ದುದ್ದಕ್ಕೂ ಒಂದೇ ಒಂದು ಕ್ರಿಕೆಟ್ ಮ್ಯಾಚ್ ಆಡದೇ ಇದ್ದವರು ಸಹ, ಕಪಿಲನ ಸಿಕ್ಸರಿಗೆ ವ್ಯಾಖ್ಯಾನ ನೀಡುವಂತಾ ದರು. 1983ರಲ್ಲಿ ಕಪಿಲ್ ದೇವ್ ನೇತೃತ್ವದ ನಮ್ಮ ದೇಶದ ತಂಡ, ವಿಶ್ವ ಕಪ್ ಕ್ರಿಕೆಟ್ ಗೆದ್ದ ಯಶಸ್ಸಿನಿಂದಾಗಿ, ಹಳ್ಳಿ ಹಳ್ಳಿಗಳಲ್ಲೂ ಕ್ರಿಕೆಟ್ ಗಾಳಿ ಬಲವಾಗಿ ಬೀಸತೊಡಗಿತು.

ಈಚಿನ ದಶಕಗಳಲ್ಲಿ ಕ್ರಿಕೆಟ್ ಆಟಕ್ಕೆ ರೊಕ್ಕದ ಸೊಕ್ಕು ಅಂಟಿಕೊಂಡಿದೆ; ಐಪಿಎಲ್, ಟಿ-20 ಮೊದಲಾದ ಪಂದ್ಯಗಳು, ಕ್ರಿಕೆಟ್ ಆಟದ ಸ್ವರೂಪವನ್ನೇ ಬದಲಿಸಿಬಿಟ್ಟಿವೆ. ಜೂಜು ತರುವ ಮೋಜು ಇಂದು ಕ್ರಿಕೆಟ್‌ಗೂ ಅಂಟಿಕೊಂಡಿದೆ. ಆಟಗಾರರು ಹರಾಜಾಗುವುದು, ಯಾವುದೋ ಪ್ರಾಂತ್ಯದವರು ಇನ್ನೊಂದು ಪ್ರಾಂತ್ಯದ ಆಟಗಾರರಾಗುವುದು ಮಾಮೂಲು ಎನಿಸಿದೆ. ಬೇರೆ ಬೇರೆ ದೇಶದವರು, ಹಣದ ಹರಾಜಿನಲ್ಲಿ ನಮ್ಮ ದೇಶದಲ್ಲಿ ಆಟವಾಡುವ ಕಟ್ಟು ಪಾಡಿಗೆ ಬಿದ್ದು, ತಮಗೆ ಸಿಕ್ಕಿದ ನಾಲ್ಕಾರು ಓವರುಗಳಲ್ಲಿ ಹತ್ತಾರು ಸಿಕ್ಸರ್ ಚಚ್ಚಿ, ಪ್ರೇಕ್ಷಕರಿಗ ರೋಚಕ ಅನುಭವ ನೀಡುತ್ತಿದ್ದಾರೆ!

ಅದೆಲ್ಲೋ ಗುಟ್ಟಾಗಿ ಬೆಟ್ ಮಾಡಿದವರ ಬಿಪಿ ಏರಿಸಿ, ಜೂಜಿನ ಮತ್ತಿಗೆ ಕ್ರಿಕೆಟ್ ಆಟವನ್ನು ಪಣವೊಡ್ಡಿದ್ದಾರೆ.
ಇದರಲ್ಲಿ ಯಾರನ್ನೂ ಟೀಕಿಸುವಂತಿಲ್ಲ! ಏಕೆಂದರೆ, ಅದೆಷ್ಟೋ ದೇಶಗಳಲ್ಲಿ ಈ ರೀತಿ ಜೂಜಾಡುವುದು ಅಧಿಕೃತ ವೆಂಬಂಥ ವಾತಾವರಣವಿದೆ. ಕ್ರಿಕೆಟ್ ಮಾತ್ರವಲ್ಲ, ಎಲ್ಲಾ ವಲಯಗಳಲ್ಲೂ ಇಂದು ಜೂಜಿನ, ರೋಚಕತೆಯ, ಕ್ಷಣಿಕ ಸಂತಸದ, ಹುಚ್ಚು ಉನ್ಮಾದದ ಛಾಯೆ ಇದೆ. ಮಿದುಳಿನ ಆಟ ಎನಿಸಿದ್ದ ಚೆಸ್‌ನಲ್ಲೂ, ಬ್ಲಿಜ್, ರ‍್ಯಾಪಿಡ್ ಎಂಬ ಪ್ರಕಾರ ಗಳನ್ನು ಹುಟ್ಟುಹಾಕಿ, ಅಲ್ಲೂ ರೋಚಕತೆಯ ಮತ್ತು ಸಮಯಮಿತಿಯ ಉನ್ಮಾದವನ್ನು ತಂದು ಹಾಕಿರುವುದನ್ನು ಗಮನಿಸಿದರೆ, ಇಂಥ ರೋಚಕತೆಯು ಇಂದು ನಮ್ಮ ಬದುಕಿನ ಭಾಗವಾಗಿಬಿಟ್ಟಿದೆ ಎನಿಸುತ್ತದೆ! ಬೇಕಿದ್ದರೂ, ಬೇಡವಾದರೂ, ರೋಚಕತೆಯೇ ಬದುಕು ಎನ್ನುವಂತಾಗಿದೆ. ಇದು 21ನೇ ಶತಮಾನದ ಜಾಯಮಾನ ಇರಬಹುದೇನೋ ಎಂದು ವಿಸ್ಮಯಪಡುವಂತಾಗಿದೆ.

ಇದನ್ನೂ ಓದಿ: Shashidhara Halady Column: ಗುಕೇಶ್‌ ವಿಶ್ವ ಚೆಸ್‌ ಚಾಂಪಿಯನ್‌ !