Tuesday, 7th January 2025

Game Changer Trailer: ಮತ್ತೊಂದು ಪವರ್‌ಫುಲ್‌ ಪಾತ್ರದಲ್ಲಿ ರಾಮ್‌ ಚರಣ್‌; ಬಹು ನಿರೀಕ್ಷಿತ ‘ಗೇಮ್‌ ಚೇಂಜರ್‌ʼ ಟ್ರೈಲರ್‌ ಔಟ್‌

Game Changer Trailer

ಹೈದರಾಬಾದ್‌: ʼಗೇಮ್‌ ಚೇಂಜರ್‌ʼ (Game Changer)- ಇಡೀ ಭಾರತೀಯ ಚಿತ್ರರಂಗವನ್ನೇ ಟಾಲಿವುಡ್‌ನತ್ತ ತಿರುಗಿ ನೋಡುವಂತೆ ಮಾಡಿದ ಮತ್ತೊಂದು ಚಿತ್ರ. ಗ್ಲೋಬಲ್‌ ಸ್ಟಾರ್‌ ರಾಮ್‌ ಚರಣ್‌ (Ram Charan) ಅಭಿನಯದ ಈ ಸಿನಿಮಾ ವಿಶ್ವಾದ್ಯಂತ ವಿವಿಧ ಭಾಷೆಗಳಲ್ಲಿ ಜ. 10ರಂದು ರಿಲೀಸ್‌ ಆಗಲಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರಮೋಶನ್‌ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಇದರ ಭಾಗವಾಗಿ ಟ್ರೈಲರ್‌ ರಿಲೀಸ್‌ ಆಗಿದೆ. ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕ ಎಸ್‌.ಶಂಕರ್‌ (S.Shankar) ಆ್ಯಕ್ಷನ್‌ ಕಟ್‌ ಹೇಳಿರುವ ಈ ಪೊಲಿಟಿಕಲ್‌ ಆ್ಯಕ್ಷನ್‌ ಡ್ರಾಮಾ ಈಗಾಗಲೇ ಕುತೂಹಲ ಕೆರಳಿಸಿದೆ (Game Changer Trailer).

ಈ ಚಿತ್ರ ರಾಜಕೀಯ ಹಿನ್ನೆಲೆಯಲ್ಲಿ, ನ್ಯಾಯಯುತ ಚುನಾವಣೆಗಾಗಿ ಐಎಎಸ್ ಅಧಿಕಾರಿ ನಡೆಸುವ ಹೋರಾಟದ ಕಥೆಯನ್ನು ಒಳಗೊಂಡಿದೆ. ಇದರ ಸೂಚನೆ ಟ್ರೈಲರ್‌ನಲ್ಲೇ ಸಿಕ್ಕಿದೆ. ರಾಮ್‌ ಚರಣ್‌ ವಿವಿಧ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಭರ್ಜರಿ ಆ್ಯಕ್ಷನ್‌ ದೃಶ್ಯಗಳಲ್ಲಿ ಮೋಡಿ ಮಾಡಿದ್ದಾರೆ. ಈ ಮೂಲಕ ಗ್ಲೋಬಲ್‌ ಸ್ಟಾರ್‌ ಖಾತೆಗೆ ಮತ್ತೊಂದು ಹಿಟ್‌ ಚಿತ್ರ ಇದಾಗಲಿದೆ ಎಂದು ಫ್ಯಾನ್ಸ್‌ ಭವಿಷ್ಯ ನುಡಿದಿದ್ದಾರೆ.

ʼಆರ್‌ಆರ್‌ಆರ್‌ʼ ಬಳಿಕ ಮತ್ತೊಂದು ಪವರ್‌ಫುಲ್‌ ಪಾತ್ರ

2022ರಲ್ಲಿ ತೆರೆಕಂಡ ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ʼಆರ್‌ಆರ್‌ಆರ್‌ʼ ಚಿತ್ರದ ಬಳಿಕ ರಾಮ್‌ ಚರಣ್‌ ನಾಯಕನಾಗಿ ನಟಿಸುತ್ತಿರುವ ಚಿತ್ರ ʼಗೇಮ್‌ ಚೇಂಜರ್‌ʼ. ʼಆಚಾರ್ಯʼ, ʼಕಿಸಿ ಕ ಭಾಯಿ ಕಿಸಿ ಕಿ ಜಾನ್‌ʼ ಚಿತ್ರಗಳಲ್ಲಿ ರಾಮ್‌ ಚರಣ್‌ ನಟಿಸಿದ್ದರೂ ಅದು ಅತಿಥಿ ಪಾತ್ರವಾಗಿತ್ತು. ಅವರ ಚಿತ್ರಕ್ಕಾಗಿ ಸುಮಾರು 3 ವರ್ಷಗಳಿಂದ ಕಾದು ಕುಳಿತಿರುವ ಅಭಿಮಾನಿಗಳಿಗೆ ಕೊನೆಗೂ ಗುಡ್‌ನ್ಯೂಸ್‌ ಸಿಕ್ಕಿದೆ. ಇದು ಅವರ ಸಿನಿ ಕರಿಯರ್‌ಗೆ ಗೇಮ್‌ ಚೇಂಜರ್‌ ಆಗಲಿದೆ ಎನ್ನುವ ಲೆಕ್ಕಾಚಾರ ಟ್ರೈಲರ್‌ ರಿಲೀಸ್‌ ಬಳಿಕ ಆರಂಭವಾಗಿದೆ.

ಶಂಕರ್‌ಗೆ ಗೆಲ್ಲಲೇ ಬೇಕು

ಕಾಲಿವುಡ್‌ನ ಜನಪ್ರಿಯ ನಿರ್ದೇಶಕ ಎಸ್‌.ಶಂಕರ್‌ಗೆ ತುರ್ತಾಗಿ ದೊಡ್ಡ ಮಟ್ಟದ ಗೆಲುವು ಬೇಕಾಗಿದೆ. ಇತ್ತೀಚೆಗೆ ತೆರೆಕಂಡ ಬಹು ನಿರೀಕ್ಷಿತ, ಕಮಲ್‌ ಹಾಸನ್‌ ನಟನೆಯ ಎಸ್‌.ಶಂಕರ್‌ ನಿರ್ದೇಶನದ ʼಇಂಡಿಯನ್‌ 2ʼ ಬಾಕ್ಸ್‌ ಆಫೀಸ್‌ನಲ್ಲಿ ಮಕಾಡೆ ಮಲಗಿದೆ. ಕಳೆದ ವರ್ಷದ ಅತೀ ದೊಟ್ಟ ಫ್ಲಾಪ್‌ ಚಿತ್ರಗಳಲ್ಲಿ ʼಇಂಡಿಯನ್‌ 2ʼ ಕೂಡ ಇದೆ. ಅಲ್ಲದೆ 2018ರಲ್ಲಿ ರಿಲೀಸ್‌ ಆದ ʼ2.0ʼ ಸಿನಿಮಾ ಕೂಡ ಅಂದುಕೊಂಡಷ್ಟು ಕಮಾಲ್‌ ಮಾಡಿರಲಿಲ್ಲ. ಹೀಗಾಗಿ ʼಗೇಮ್‌ ಚೇಂಜರ್‌ʼ ಹಿಟ್‌ ಆಗಲೇಬೇಕಾದ ಒತ್ತಡಕ್ಕೆ ಅವರು ಸಿಲುಕಿದ್ದಾರೆ. ಹೀಗಾಗಿಯೇ ಸೆಟ್ಟೇರಿದಾಗಿನಿಂದಲೇ ಈ ಸಿನಿಮಾ ಕುತೂಹಲ ಮೂಡಿಸಿದೆ. ಈಗಾಗಲೇ ರಿಲೀಸ್‌ ಆಗಿರುವ ಟೀಸರ್‌, ಹಾಡುಗಳು ಗಮನ ಸೆಳೆದಿವೆ.

ಅಂಜಲಿ, ಕಿಯಾರಾ ಜತೆ ರಾಮ್‌ ಚರಣ್‌ ರೊಮ್ಯಾನ್ಸ್‌

ಮನೋಜ್ಞ ಅಬಿನಯದಿಂದಲೇ ಗಮನ ಸೆಳೆದಿರುವ ಬಹು ಭಾಷಾ ನಟಿ ಅಂಜಲಿ ಮತ್ತು ಬಾಲಿವಿಡ್‌ ತಾರೆ ಕಿಯಾರಾ ಅಡ್ವಾನಿ ಈ ಚಿತ್ರದಲ್ಲಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ರಾಮ್‌ ಚರಣ್‌ ಜತೆ ಅಂಜಲಿ ತೆರೆ ಹಂಚಿಕೊಳ್ಳುತ್ತಿರುವುದು ಇದು ಮೊದಲ ಸಲವಾದರೆ, ʼವಿನಯ ವಿದೇಯ ರಾಮʼ ಸಿನಿಮಾದಲ್ಲಿ ರಾಮ್‌ ಚರಣ್‌ ಜತೆ ನಟಿಸಿದ್ದ ಕಿಯಾರಾ 2ನೇ ಬಾರಿ ಜೋಡಿಯಾಗಿದ್ದಾರೆ. ಕಿಯಾರಾ ಗ್ಲ್ಯಾಮರ್‌ ಪಾತ್ರದಲ್ಲಿ ಕಾಣಿಸಿಕೊಂಡರೆ ಅಂಜಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು ಎಸ್‌.ಜೆ. ಸೂರ್ಯ, ನಾಸರ್, ಸುನಿಲ್, ಪ್ರಕಾಶ್ ರಾಜ್ ಮತ್ತು ಜಯರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: KVN Productions: ʼಮಂಜುಮ್ಮೆಲ್ ಬಾಯ್ಸ್ʼ ಸಿನಿಮಾದ ನಿರ್ದೇಶಕರ ಜತೆ ಕೈಜೋಡಿಸಿದ ಕೆವಿಎನ್ ಪ್ರೊಡಕ್ಷನ್ಸ್