Tuesday, 7th January 2025

Madras High Court: ಅಣ್ಣಾ ವಿವಿ ಅತ್ಯಾಚಾರ ಪ್ರಕರಣ ರಾಜಕೀಯಗೊಳಿಸಲಾಗುತ್ತಿದೆ: ಮದ್ರಾಸ್ ಹೈಕೋರ್ಟ್

Madras High Court

ಚೆನ್ನೈ: ಕಳೆದ ತಿಂಗಳು ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ (Anna University) ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದ ಲೈಂಗಿಕ ದೌರ್ಜನ್ಯ (Physical Abuse) ಪ್ರಕರಣವನ್ನು ರಾಜಕೀಯಗೊಳಿಸಲಾಗುತ್ತಿದೆ ಎಂದು ಮದ್ರಾಸ್ ಹೈಕೋರ್ಟ್ (Madras High Court) ಗುರುವಾರ ಹೇಳಿದೆ.

ಪ್ರಕರಣದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ಪಿ.ವೇಲ್ಮುರುಗನ್ ಅವರು ಇಡೀ ಸಮಾಜವು ಮಹಿಳೆಯರನ್ನು ಅಧೀನಗೊಳಿಸುವುದನ್ನು ಮತ್ತು ಅವರ ವಿರುದ್ಧ ದೌರ್ಜನ್ಯವನ್ನು ಏಕೆ ಮುಂದುವರಿಸಿದೆ ಎಂಬುದನ್ನು ಆತ್ಮಾವಲೋಕನ ಮಾಡಲು ಎಚ್ಚರಿಕೆಯ ಕರೆಯಾಗಿ ಕಾರ್ಯನಿರ್ವಹಿಸುವ ಬದಲು, ಘಟನೆಯನ್ನು ಯಾವುದೆ ಕಾಳಜಿಯಿಲ್ಲದೆ ರಾಜಕೀಯಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಡಿ. 23ರಂದು ನಡೆದ ಅತ್ಯಾಚಾರ ಪ್ರಕರಣದ ವಿರುದ್ಧ ಪಟ್ಟಾಲಿ ಮಕ್ಕಳ್ ಕರ್ಚಿ (PMK) ಪಕ್ಷದ ಮಹಿಳಾ ಘಟಕ ಪ್ರತಿಭಟನೆ ಮಾಡಲು ಸಿದ್ದತೆ ನಡೆಸಿತ್ತು. ಆದರೆ ಪ್ರತಿಭಟನೆಗೆ ಅವಕಾಶ ನಿರಾಕರಿಸಲಾಗಿದೆ. ಈ ವಿಷಯದ ಬಗ್ಗೆ ವಕೀಲ ಕೆ.ಬಾಲು ಪ್ರಸ್ತಾಪಿಸಿದಾಗ ನ್ಯಾಯಾಲಯವು ಅವರ ಮಾತನ್ನು ಖಂಡಿಸಿದೆ.

ಇಂತಹ ಪ್ರತಿಭಟನೆಗಳು ಪ್ರಕರಣಕ್ಕೆ ಸಹಾಯ ಮಾಡುವುದಿಲ್ಲ ಎಂದು ಟೀಕಿಸಿದ ನ್ಯಾಯಾಧೀಶರು, ರಾಜ್ಯದಲ್ಲಿ ರಾಜಕೀಯ ಪಕ್ಷಗಳು ಕೇವಲ ಮಾಧ್ಯಮ ಗಮನಕ್ಕಾಗಿ ಪ್ರತಿಭಟನೆಗಳನ್ನು ಆಯೋಜಿಸುತ್ತಿವೆ ಎಂದು ಹೇಳಿದರು. ಇಂತಹ ಪ್ರಕರಣವನ್ನು ರಾಜಕೀಯಗೊಳಿಸಲಾಗುತ್ತಿದೆ. ಮಹಿಳೆಯರ ಸುರಕ್ಷತೆಯ ಬಗ್ಗೆ ನಿಜವಾದ ಕಾಳಜಿ ಯಾರೊಬ್ಬರಿಗೂ ಇಲ್ಲ ಎಂದು ಹೈಕೋರ್ಟ್ ಟೀಕಿಸಿದೆ.

ಈಗಾಗಲೇ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸುವಂತೆ ನ್ಯಾಯಾಲಯ ಈಗಾಗಲೇ ಆದೇಶಿಸಿದೆ ಎಂದು ಹೇಳಿದ ನ್ಯಾಯಾಧೀಶರು, ತನಿಖೆಯನ್ನು ಸೂಕ್ತವಾಗಿ ನಡೆಸದಿದ್ದರೆ ನ್ಯಾಯಾಲಯವು ಮಧ್ಯಪ್ರವೇಶಿಸುತ್ತದೆ ಎಂದು ಹೇಳಿದರು.

ಈ ನಡುವೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ನಿವೃತ್ತ ಐಪಿಎಸ್ ಅಧಿಕಾರಿ ಪ್ರವೀಣ್ ದೀಕ್ಷಿತ್ ಸೇರಿದಂತೆ ಇಬ್ಬರು ಸದಸ್ಯರ ಸತ್ಯಶೋಧನಾ ಸಮಿತಿಯನ್ನು ರಚಿಸಿದೆ. ಎರಡು ದಿನಗಳ ತನಿಖೆಯಲ್ಲಿ, ಸಮಿತಿಯು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದ್ದು, ಸಂತ್ರಸ್ತೆಯ ಕುಟುಂಬಸ್ಥರನ್ನು, ಅಧಿಕಾರಿಗಳು ಮತ್ತು ಎನ್‌ಜಿಒಗಳನ್ನು ಭೇಟಿ ಮಾಡಿದ್ದು, ವಿಶ್ವವಿದ್ಯಾಲಯದ ಭದ್ರತೆಯನ್ನು ಪರಿಶೀಲಿಸಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಎನ್‌ಸಿಡಬ್ಲ್ಯು, ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ಭದ್ರತೆಯನ್ನು ಪರಿಶೀಲಿಸಲಾಗಿದೆ. ಎಸ್‌ಐಟಿಯನ್ನು ಭೇಟಿ ಮಾಡಿ, ವರದಿಗಳನ್ನು ಪರಿಶೀಲನೆ ನಡೆಸಲಾಗಿದೆ ಎಂದು ಹೇಳಿದೆ.

ಅತ್ಯಾಚಾರ ಆರೋಪಿಯನ್ನು ಬೀದಿ ಬದಿ ವ್ಯಾಪಾರಸ್ಥ ಜ್ಞಾನಶೇಖರನ್ ಎಂದು ಗುರುತಿಸಲಾಗಿದೆ. ಆರೋಪಿ ಜ್ಞಾನಶೇಖರನ್‌ ಈ ಹಿಂದೆ ಕೂಡಾ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗವಹಿಸಿದ್ದ ಆರೋಪಗಳಿವೆ.

ಈ ಸುದ್ದಿಯನ್ನೂ ಓದಿ : Physical Assault: ಇಂಜಿನಿಯರಿಂಗ್‌ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ; ಅಣ್ಣಾ ವಿವಿಯಲ್ಲಿ ಇದೆಂಥಾ ಪೈಶಾಚಿಕ ಕೃತ್ಯ!